ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುತ್ತು ಕೊಟ್ಟ ಬಾಲಕ ಅಮಾನತು

ವಿದೇಶಿ ಸಂಕ್ಷಿಪ್ತ ಸುದ್ದಿಗಳು
Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಡೆನ್ವೆರ್‌ (ಎಪಿ): ಸಹಪಾಠಿಯೊಬ್ಬಳಿಗೆ  ಮುತ್ತು ನೀಡಿದ ಕಾರಣಕ್ಕಾಗಿ  ಅಮೆರಿಕದ ಆರು ವರ್ಷದ ಶಾಲಾ ಬಾಲಕನನ್ನು ಶಾಲೆಯಿಂದ ಅಮಾನತುಗೊಳಿ­ಸಲಾಗಿದೆ.

ಮುತ್ತನ್ನು ಲೈಂಗಿಕ ಕಿರುಕುಳ ಎಂದು ಪರಿಗಣಿಸಬಹುದಾದ ಸಾಧ್ಯತೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಚಿಂತಿಸುತ್ತಿದೆ.

ಆದರೆ ಈ ಸಂಬಂಧ ಪ್ರತಿಕ್ರಿಯಿಸಿರುವ ಬಾಲಕನ ತಾಯಿ ‘ಲಿಂಕನ್‌ ವಿಜ್ಞಾನ ಮತ್ತು ತಂತ್ರಜ್ಞಾನ ಶಾಲೆ ಈ ಪ್ರಕರಣವನ್ನು ದೊಡ್ಡದು ಮಾಡುತ್ತಿದೆ.  ಒತ್ತಾಯಪೂರ್ವಕವಾಗಿ ಮಗನನ್ನು ಅಮಾನತು ಮಾಡಲಾಗಿದೆ. ನನ್ನ ಆರು ವರ್ಷದ ಮಗ ‘‘ಮಮ್ಮಿ ವಾಟ್‌ ಈಸ್‌ ಸೆಕ್ಸ್‌ (ಲೈಂಗಿಕತೆ ಎಂದರೇನು)’’ ಎಂದು ಕೇಳುತ್ತಿದ್ದಾನೆ ಇದಕ್ಕೆ ನಾನು ಏನು ಉತ್ತರ ಹೇಳಲಿ’ ಎಂದು ಪ್ರಶ್ನಿಸಿದ್ದಾರೆ. ಶಾಲೆಯಲ್ಲಿ ಓದುವ ಚಟುವಟಿಕೆ­­ಯಲ್ಲಿ ತೊಡಗಿಕೊಂಡಿದ್ದಾಗ ಆಕೆಯ ಕೈಗೆ ಮುತ್ತು ಕೊಟ್ಟಿದ್ದೆ ಎಂದು ಬಾಲಕ ಹೇಳಿದ್ದಾನೆ.

ಗುಡುಗಿದ ಅಮೆರಿಕ ಸಂಸದರು
ವಾಷಿಂಗ್ಟನ್‌ (ಪಿಟಿಐ): 
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅಮೆರಿಕದ ಪ್ರಯತ್ನಗಳಿಗೆ ಕೈಜೋಡಿಸಬೇಕಾದ ಪಾಕಿಸ್ತಾನವು ಭಯೋತ್ಪಾದನಾ ಸಂಘಟನೆಗಳಿಗೆ ನೆರವು ನೀಡುವ ಮೂಲಕ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಅಮೆರಿಕದ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಹಾಗೂ ಸಂಸದ ಎಡ್‌ ರಾಯ್ಸಿ ಆರೋಪಿಸಿದ್ದಾರೆ.

  ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಅಮೆರಿಕಕ್ಕೆ ಸಹಕಾರ ನೀಡುವುದಾಗಿ ಪಾಕಿಸ್ತಾನ  ಕೇವಲ   ಬಾಯಿ ಮಾತಿನ ಭರವಸೆ ನೀಡುತ್ತಿದೆ.   ಅದೇ ವೇಳೆ ಮತ್ತೊಂದೆಡೆ  ಪಾಕಿಸ್ತಾನದ ಸೇನೆ ಮತ್ತು ಭದ್ರತಾ ಸಂಸ್ಥೆ­ಗಳು ತಾಲಿಬಾನ್‌ನಂತಹ ಭಯೋತ್ಪಾದನಾ ಸಂಘ­ಟನೆಗಳಿಗೆ ನಿರಂತರ ನೆರವು ನೀಡುವ ಮೂಲಕ ಪರಿಸ್ಥಿತಿ­ಯನ್ನು ಮತ್ತಷ್ಟು ಜಟೀಲಗೊಳಿಸಿವೆ ಎಂದು ಅವರು ಹರಿ ಹಾಯ್ದಿದ್ದಾರೆ. ಭಯೋತ್ಪಾದನಾ ಸಂಘ­ಟನೆ­ಗಳಿಗೆ ನೆರವು ನಿಲ್ಲಿಸದ ಹೊರತಾಗಿಯೂ ಪಾಕಿಸ್ತಾನಕ್ಕೆ ಪುನಃ ಸೇನಾ ನೆರವು ನೀಡಲು ಮುಂದಾದ ಒಬಾಮ ಆಡಳಿತದ ನಿರ್ಧಾರಕ್ಕೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆಫ್ಘಾನಿಸ್ತಾನದಲ್ಲಿ  ಪ್ರಜಾಪ್ರಭುತ್ವ ಮರುಸ್ಥಾಪನೆ ಮತ್ತು  ಅಲ್ಲಿಂದ ಸೇನಾ ಪಡೆಗಳನ್ನು ಮರಳಿ ಕರೆಸಿಕೊಳ್ಳುವ ಪ್ರಕ್ರಿಯೆಗೂ ಇದರಿಂದಾಗಿ ಹಿನ್ನಡೆಯುಂಟಾಗಿದೆ ಎಂದು ರಾಯ್ಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತನ್ನ ನೆರೆಯ ದೇಶವಾದ  ಭಾರತದ ವಿರುದ್ಧ ಪ್ರಬಲ ಅಸ್ತ್ರವನ್ನಾಗಿ ಉಪಯೋಗಿಸುತ್ತಿರುವ ತಾಲಿಬಾನ್‌ ಒಂದು ದಿನ ತಮಗೆ ತಿರುಗುಬಾಣವಾಗಲಿದೆ ಎಂಬ ಸತ್ಯ ಪಾಕಿಸ್ತಾನಿಯರಿಗೆ ಇದೀಗ ಅರಿವಾಗತೊಡಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನದ ವಿರುದ್ಧದ  ವಾಗ್ದಾಳಿಯನ್ನು ಮುಂದುವರಿಸಿರುವ ಮತ್ತೊಬ್ಬ ಸಂಸದ ಡಾನಾ ರೋಹ್ರಾಬಚರ್‌, ‘ಪಾಕ್‌ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ನಿರಂತರವಾಗಿ ಭಯೋತ್ಪಾದನಾ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುತ್ತಿದೆ. ನಮ್ಮಿಂದ ಪಡೆದ ಆರ್ಥಿಕ ನೆರವನ್ನು ನಮ್ಮ ಯೋಧರ ಹತ್ಯೆಗೆ ಬಳಸಲಾಗುತ್ತಿದೆ. ಇದು ಎಂತಹ ವಿಪರ್ಯಾಸ’ ಎಂದು ಗುಡುಗಿದ್ದಾರೆ.

‘ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಗೆ ಆಫ್ಘಾನಿಸ್ತಾನದಲ್ಲಿ ಸಾಕಷ್ಟು ಯೋಧರನ್ನು ಬಲಿ ಕೊಟ್ಟಿದ್ದೇವೆ.  ಆಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಮರು ಸ್ಥಾಪನೆಗಾಗಿ ಸಾಕಷ್ಟು ಬೆಲೆ ತೆತ್ತಿದ್ದೇವೆ.  ಇನ್ನಾದರೂ  ಯೋಧರನ್ನು ಬಲಿಪಶು ಮಾಡುವ ಬದಲು ಅವರನ್ನು ವಾಪಸ್‌ ಕರೆಸಿಕೊಳ್ಳುವ ಬಗ್ಗೆ ಚಿಂತಿಸೋಣ’ ಎಂದು ಡಾನಾ ಸಲಹೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT