ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದು ಮರಿ ಶಾಲೆಗೆ ತಯಾರಿ

Last Updated 18 ಮೇ 2012, 19:30 IST
ಅಕ್ಷರ ಗಾತ್ರ

ಮಗುವನ್ನು ಶಾಲೆಯಲ್ಲಿ ಬಿಟ್ಟು ಬರುವಾಗ ಅಪ್ಪಿಕೊಳ್ಳುವುದು, ಮುದ್ದಿಡುವುದು, ಅಳುವುದು, ಸಿಹಿ ತಿಂಡಿ ನೀಡುವುದು, ಮತ್ತೆ ಮತ್ತೆ ಹಿಂದಿರುಗಿ ನೋಡುವುದು ಮಾಡಬೇಡಿ...

ಮಗುವೊಂದರ ಸಂಪೂರ್ಣ ವ್ಯಕ್ತಿತ್ವ ವಿಕಸನಗೊಳ್ಳಲು ಶಿಕ್ಷಣ ಅತ್ಯಗತ್ಯ. ಆ ಶಿಕ್ಷಣವನ್ನು ನೀಡುವ ದೇಗುಲ, ಶಾಲೆಗಳು. ಮಗು ಬೌದ್ಧಿಕವಾಗಿ. ಮಾನಸಿಕವಾಗಿ, ಸಾಮಾಜಿಕವಾಗಿ, ದೈಹಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು, ಆ ಮೂಲಕ ಜವಾಬ್ದಾರಿಯುತ ನಾಗರಿಕನಾಗಲು ಶಾಲೆ ಪ್ರಮುಖ ಪಾತ್ರ ವಹಿಸುತ್ತದೆ.

ನಿಜ. ಆದರೆ ಮೊದಲ ಬಾರಿ ಶಾಲೆಗೆ ಹೋಗುವ ಮಗುವಿಗೆ ಇದೆಲ್ಲಾ ಅರ್ಥವಾದೀತೇ? ಮನೆಯ ಸುರಕ್ಷಿತ ವಾತಾವರಣದಲ್ಲಿ, ಅಮ್ಮನ ಬೆಚ್ಚನೆ ಮಡಿಲಲ್ಲಿ, ತನ್ನಿಷ್ಟದಂತೆ ಸಮಯ ಕಳೆಯುತ್ತಿರುವ ಮಗುವಿಗೆ ಏಕಾಏಕಿ ಶಾಲೆ ಅಂದರೆ? ತಾಯಿಯಿಂದ ದೂರ ಇರುವ, ಶಿಸ್ತು ಪಾಲಿಸಬೇಕಾದ, ಅಪರಿಚಿತ ವ್ಯಕ್ತಿಗಳೊಡನೆ ದಿನವಿಡೀ ಇರಬೇಕಾದ ಅನಿವಾರ್ಯತೆ ಒತ್ತಡ ಅನಿಸುತ್ತದೆ.. ಮನಸ್ಸಿನಲ್ಲಿ ಭಯ, ಸಂದೇಹ, ಗಾಬರಿ ಎಲ್ಲವೂ ಮೂಡುತ್ತದೆ.

ಇದರ ಜತೆ ತಂದೆ-ತಾಯಿಯರ ವರ್ತನೆ, ಇತರ ಮಕ್ಕಳ ಮಾತು ಕೂಡಾ ಎಳೆಯ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ `ಶಾಲೆಗೆ ಹೋಗು, ಸರೀ ಬುದ್ಧಿ ಕಲಿಸ್ತಾರೆ~, `ಮನೇಲಿದ್ದು ಮಜಾ ಮಾಡಿದ ಹಾಗಲ್ಲ, ಶಾಲೇಲಿ ಗೊತ್ತಾ?~ ಎಂಬಂಥ ಮಾತುಗಳು ಮಗುವಿನ ಮನಸ್ಸಿನಲ್ಲಿ ಭಯ ಹುಟ್ಟಿಸುತ್ತದೆ.

ಈ ಭಯದ ಜತೆ ಬದಲಾವಣೆ ಅಪರಿಚಿತವಾದದ್ದರ ಬಗ್ಗೆ ಆತಂಕವೂ ಸೇರಿ ಶಾಲೆಗೆ ಹೋಗುವುದು ಅಂದೊಡನೆ ಹಠ-ಅಳು-ಕಿರುಚಾಟ ಎಲ್ಲಾ ಕಾಣಬಹುದು. ಹೀಗಾಗದಿರಲು ಶಾಲೆಯ ಬಗ್ಗೆ ಮೊದಲಿನಿಂದಲೇ ಮಕ್ಕಳಿಗೆ ಹೆದರಿಸಬಾರದು. ಸಕಾರಾತ್ಮಕ ಭಾವನೆ ಮೂಡಿಸುವುದರ ಜತೆ ಶಾಲೆಗೆ ಕಳಿಸುವ ಮುನ್ನ ಪೋಷಕರು ಪಾಲಿಸಬಹುದಾದ ಸಲಹೆಗಳು.

ಪೂರ್ವಭಾವಿ ತಯಾರಿ
*  ಶಾಲೆಗೆ ಆರಂಭದ ಮುನ್ನವೇ ಮಗುವನ್ನು ಕರೆದುಕೊಂಡು ಶಾಲೆಗೆ ಎರಡು-ಮೂರು ಬಾರಿ ಭೇಟಿ ನೀಡುವುದು. ಅಲ್ಲಿನ ಪಾರ್ಕ್, ಪುಟ್ಟ ಕುರ್ಚಿಗಳು, ಚೆಂದದ ಚಿತ್ರಗಳು ಹೀಗೆ ಖುಷಿ ನೀಡುವ ವಸ್ತು ತೋರಿಸುವುದು. ಇದರಿಂದ ಮಕ್ಕಳಿಗೆ ಶಾಲೆ ಎಂದರೆ ಪರಿಚಿತ ಅನ್ನಿಸುತ್ತದೆ.

*  ಮನೆಯಲ್ಲಿ ಬಿಡುವಿದ್ದಾಗ ಶಾಲೆಯ ಆಟ ಆಡುವುದು. ತಂದೆ-ತಾಯಿ ಶಿಕ್ಷಕರಾದರೆ ಮಗು ವಿದ್ಯಾರ್ಥಿಯಂತೆ ನಟಿಸುವುದು. ಒಂದೇ ಕಡೆ ಸ್ವಲ್ಪ ಹೊತ್ತು ಕುಳಿತು ಆಟ ಆಡುವುದು, ಅಪ್ಪಣೆ ಪಡೆದು ನೀರು ಕುಡಿಯುವುದು, ಬ್ಯಾಗಿನಿಂದ ಪುಸ್ತಕ ಹೊರತೆಗೆಯುವುದು, ಅರ್ಥವಾಗದೇ ಇದ್ದಲ್ಲಿ ಕೈಯೆತ್ತಿ ಪ್ರಶ್ನೆ ಕೇಳುವುದು... ಹೀಗೆ. ಇದರಿಂದ ಮಗುವಿಗೆ ಶಾಲೆ ಹೇಗಿರಬಹುದೆಂಬ ಸ್ಪಷ್ಟ ಚಿತ್ರಣ ಸಿಗುತ್ತದೆ.

*   ಮಗುವಿಗೆ ಬ್ಯಾಗ್ ಹಾಕಿಕೊಳ್ಳುವುದು, ಊಟದ ಡಬ್ಬಿ ತೆಗೆಯುವ, ಮುಚ್ಚುವ ರೀತಿ. ಶೌಚಾಲಯಕ್ಕೆ ಸ್ವತಂತ್ರವಾಗಿ ಹೋಗಿಬರುವುದು, ಕಾಲು ಚೀಲ-ಚಪ್ಪಲಿ ಹಾಕಿಕೊಳ್ಳುವ ವಿಧಾನ ಇವೆಲ್ಲವನ್ನು ಶಾಲೆಯ ಆರಂಭಕ್ಕೆ ಮುಂದಾಗಿಯೇ ಅಭ್ಯಾಸ ಮಾಡಿಸುವುದು. 

*   ಶಾಲಾ ಸಮಯವನ್ನು ತಿಳಿದುಕೊಂಡು ಅದಕ್ಕೆ ಸರಿಯಾಗಿ ಮೊದಲಿನಿಂದಲೇ ಮಗು ಬೆಳಿಗ್ಗೆ ಬೇಗ ಏಳುವಂತೆ, ತಿಂಡಿ-ಊಟ ಸರಿಯಾದ ಹೊತ್ತಿಗೆ ಮಾಡುವಂತೆ ರೂಢಿ ಮಾಡಿಸುವುದು. 

*   ತಂದೆ-ತಾಯಿಯರ ಹೆಸರು, ಮನೆಯ ವಿಳಾಸ, ದೂರವಾಣಿ ಸಂಖ್ಯೆ ಇವೆಲ್ಲವನ್ನೂ ಮಗುವಿಗೆ ಬಾಯಿಪಾಠ ಮಾಡಿಸುವುದು.

*  ಶಾಲೆಗೆ ತೆಗೆದುಕೊಂಡು ಹೋಗುವ ಎಲ್ಲಾ ವಸ್ತುಗಳನ್ನು (ಬ್ಯಾಗ್, ಡಬ್ಬಿ, ಪೆನ್ಸಿಲ್ ಬಾಕ್ಸ್) ಮಗುವಿನ ಜತೆ ಕುಳಿತು ಹೆಸರಿರುವ ಚೀಟಿ ಅಂಟಿಸುವುದು. ಇದರಿಂದ ಮಗುವಿಗೆ ತನ್ನ ವಸ್ತು ಯಾವುದು ಎಂದು ತಿಳಿಯುತ್ತದೆ.

 *  ಸಮಯವಿದ್ದಾಗ ಪೋಷಕರು ತಮ್ಮ ಶಾಲಾ ದಿನಗಳ ಸ್ವಾರಸ್ಯಕರ ಘಟನೆಗಳನ್ನು ಗೆಳೆಯರ ಸ್ನೇಹವನ್ನು ಮಗುವಿನೊಡನೆ ಹಂಚಿಕೊಳ್ಳುವುದು. ಹಾಗೆಯೇ ಮಗುವಿಗೆ `ಶಾಲೆಯ ಬಗ್ಗೆ ನಿನಗೆ ಏನಾದರೂ ಹೆದರಿಕೆ ಇದೆಯೇ?~ ಎಂದು ಕೇಳಿ ಅದನ್ನು ಪರಿಹರಿಸುವುದು.

*  ಮಗುವಿನ ಆರೋಗ್ಯ ತಪಾಸಣೆ ಮಾಡಿಸುವುದು (ದೃಷ್ಟಿ, ಶ್ರವ್ಯ). ಅನೇಕ ಬಾರಿ ಸರಿಯಾಗಿ ಕಾಣಿಸದೇ, ಕೇಳಿಸದೇ ಇದ್ದಾಗ ಶಾಲೆಯಲ್ಲಿ ಮೊದಲ ದಿನದಂದೇ ಮಗುವಿಗೆ ತೊಂದರೆಯಾಗುವ ಸಾಧ್ಯತೆ ಇದೆ. ವಯಸ್ಸಿಗೆ ತಕ್ಕ ಹಾಗೆ ಮಗುವಿಗೆ ಸೂಕ್ತ ಲಸಿಕೆಯನ್ನು ಹಾಕಿಸಬೇಕು.

ಮೊದಲ ದಿನದಂದು...
*  ಮೊದಲ ದಿನ ಮಗುವನ್ನು ಎಬ್ಬಿಸಿ ತಯಾರು ಮಾಡುವುದು, ಡಬ್ಬಿ ತುಂಬುವುದು, ಶಾಲೆಗೆ ಬಿಡುವುದು ಹೀಗೆ ಸಾಕಷ್ಟು ಹೆಚ್ಚಿಗೆ ಕೆಲಸವಿರುವುದರಿಂದ ಹಿಂದಿನ ರಾತ್ರಿ ಬೇಗ ಮಲಗಿ ಆ ದಿನ ಬೆಳಿಗ್ಗೆ ಬೇಗ ಏಳುವುದು ಒಳ್ಳೆಯದು.

*  ಮಗುವನ್ನು ಶಾಲೆಗೆ ಕಳಿಸುವುದು ತಂದೆ-ತಾಯಿಯರಿಗೂ ಆತಂಕ ಹುಟ್ಟಿಸುವ ವಿಷಯವೇ. ಆದರೆ ಮಗುವಿನ ಎದುರು ಪದೇ ಪದೇ ಈ ಆತಂಕ ವ್ಯಕ್ತಪಡಿಸಿದರೆ ಮಗುವೂ ಶಾಲೆಯನ್ನು ವಿರೋಧಿಸುತ್ತದೆ. ಹಾಗಾಗಿ ಮನಸ್ಸಿನೊಳಗೆ ಹೇಗೇ ಇರಲಿ ಹೊರಗೆ ಸಮಾಧಾನವಿರಲಿ. ಶಾಲೆಗೆ ಹೋಗುವುದು ಅತ್ಯಗತ್ಯ ಮತ್ತು ಉತ್ತಮ ಭವಿಷ್ಯಕ್ಕಾಗಿ ಎಂಬ ದೃಢ ಮನೋಭಾವವಿರಲಿ.

*  ಮಗುವನ್ನು ಶಾಲೆಯಲ್ಲಿ ಬಿಟ್ಟು ಬರುವಾಗ ತುಂಬಾ ಸಮಯ ಕಳೆಯಬೇಡಿ. ಅಪ್ಪಿಕೊಳ್ಳುವುದು, ಮುದ್ದಿಡುವುದು, ಅಳುವುದು, ಸಿಹಿ ತಿಂಡಿ ನೀಡುವುದು, ಮತ್ತೆ ಮತ್ತೆ ಹಿಂದಿರುಗಿ ನೋಡುವುದು, ಈ ರೀತಿ ಭಾವನೆ-ಉದ್ವೇಗ ಹೆಚ್ಚೆಚ್ಚು ವ್ಯಕ್ತಪಡಿಸಿದಲ್ಲಿ ಮಗು ಶಾಲೆಯಲ್ಲಿ ಇರುವುದಕ್ಕೆ ಹೆದರುತ್ತದೆ.

*  ಶಾಲೆಯ ಮೊದಲ ದಿನದಂದು ಪೋಷಕರು ಬಿಡುವಾಗ ಮಗು ಅಳುವುದು ಮಾಮೂಲು. ಅದಕ್ಕೆ ತೀರಾ ಗಾಬರಿ ಬೇಡ. ಲಕ್ಷ್ಯ ನೀಡಿದಷ್ಟೂ ಅಳು ಹೆಚ್ಚುತ್ತದೆ. `ಮಗು, ಏನಾದರೂ ತೊಂದರೆ ಆದಲ್ಲಿ ಟೀಚರ್ ಬಳಿ ಹೇಳು, ನಾನು ಸ್ವಲ್ಪ ಸಮಯದ ನಂತರ ಇಲ್ಲಿಗೇ ಬಂದು ಕರೆದೊಯ್ಯುತ್ತೇನೆ~ ಎಂಬ ಧೈರ್ಯ -ಸಾಂತ್ವನ ಹೇಳಿ ಬಿಟ್ಟು ಬರುವುದು ಒಳ್ಳೆಯದು.

*  ಹಾಗೆಯೇ ಶಾಲೆ ಬಿಡುವ ಸಮಯವನ್ನು ಸರಿಯಾಗಿ ತಿಳಿದುಕೊಂಡು ಸ್ವಲ್ಪ ಮುಂಚೆಯೇ ಮಗುವಿಗಾಗಿ ಕಾಯಬೇಕು. ಬಿಡುವ ಸಮಯದಲ್ಲಿ ಯಾರೂ ಇಲ್ಲದೇ ಇದ್ದಲ್ಲಿ ಮಗು ಖಂಡಿತವಾಗಿ ಹೆದರುತ್ತದೆ. ಸಮಯ ಪಾಲನೆ ಬೇಕೇ ಬೇಕು.

*  ಮಗುವಿನ ಶಿಕ್ಷಕರ ಜತೆ ಒಳ್ಳೆಯ ಸಂಬಂಧವಿರಲಿ. ಮಗುವಿನ ನಿರ್ದಿಷ್ಟ ಬೇಕು-ಬೇಡಗಳನ್ನು ಅವರಿಗೆ ತಿಳಿಸಿ. ಹಾಗೇ ಅವರ ಸಲಹೆ ಪಡೆಯಿರಿ. ಮಗುವಿಗೆ ಎಂದೂ ಶಿಕ್ಷಕರು `ಹೊಡಿತಾರೆ-ಬೈತಾರೆ~ ಎಂದು ಹೆದರಿಸಿ ನಕಾರಾತ್ಮಕ ಭಾವನೆ ಮೂಡಿಸಬಾರದು.

*  ಮೊದಲ ದಿನ ಶಾಲೆ ಮುಗಿಸಿ ಬಂದಾಗ ಮಗುವಿನ ಅನುಭವ ಕೇಳುವುದು. ಗೆಳೆಯರು, ಕಲಿತಿದ್ದು, ತಿಂದಿದ್ದು, ಕುಳಿತ ಸ್ಥಳ, ಆಡಿದ ಆಟ.... ಹೀಗೆ ಶಾಲೆಯಲ್ಲಿ ಇಷ್ಟವಾದ, ಇಷ್ಟವಾಗದ ವಿಷಯಗಳ ಬಗ್ಗೆ ವಿಚಾರಿಸಿ ಹೆಚ್ಚಿನ ಮಾಹಿತಿ ಪಡೆಯುವುದು. ಅಗತ್ಯವಿದ್ದಲ್ಲಿ ಮಗುವಿಗೆ ಸಲಹೆ ನೀಡುವುದರ ಜತೆ ಶಿಕ್ಷಕರ ಬಳಿಯೂ ಚರ್ಚಿಸಬಹುದು.

ಶಾಲೆಯ ಮೊದಲ ದಿನ ಮಗುವಿನ ಮಾತ್ರವಲ್ಲ, ಪೋಷಕರ ಬಾಳಿನಲ್ಲೂ ಮಹತ್ವದ ದಿನವೇ. ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಈ ಸುದಿನ ಸುಂದರವಾಗಿರಲು ಮೊದಲೇ ಸಿದ್ಧರಾಗಿರುವುದು ಒಳ್ಳೆಯದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT