ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾಮಠದಲ್ಲಿ 15 ಜೋಡಿ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವ

Last Updated 6 ಅಕ್ಟೋಬರ್ 2012, 6:10 IST
ಅಕ್ಷರ ಗಾತ್ರ

ಚಿತ್ರದುರ್ಗ: ಅವೈಜ್ಞಾನಿಕ ವಿಚಾರಗಳಿಗೆ ಕಡಿವಾಣ ಹಾಕಿ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಬೇಕು ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಕರೆ ನೀಡಿದರು.

ನಗರದ ಮುರುಘಾಮಠದಲ್ಲಿ ಶುಕ್ರವಾರ ಆಯೋಜಿಸಿದ್ದ 15 ಜೋಡಿ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಅವರು ಮಾತನಾಡಿದರು.

ಮಳೆಗಾಗಿ ಕಪ್ಪೆ, ಕತ್ತೆ, ಮಾಡಿದ ಜನ ಈಗ ಅಪ್ರಾಪ್ತ ಮಕ್ಕಳನ್ನು ಮದುವೆ ಮಾಡುತ್ತಿದ್ದಾರೆ. ಪರಿಸರ ಸಂರಕ್ಷಣೆಗೆ ಮರ-ಗಿಡಗಳ ಪೋಷಣೆಯಾಗದ ಹೊರತು ಮಳೆ ಬರುವುದಿಲ್ಲ. ಆದ್ದರಿಂದ ವೈಜ್ಞಾನಿಕ ಚಿಂತನೆ ಮುಖ್ಯವಾಗಬೇಕು ಎಂದು ಪ್ರತಿಪಾದಿಸಿದರು.

ಬಾಲ್ಯವಿವಾಹ ಮಾಡಬಾರದು. ಅದಕ್ಕೆ ಪ್ರೋತ್ಸಾಹವೂ ನೀಡಬಾರದು. ಮುರುಘಾಮಠ  ಬಾಲ್ಯವಿವಾಹವನ್ನು ಎಂದಿಗೂ ಪೋಷಿಸಿಲ್ಲ ಎಂದರು.

`ಪ್ರಜಾವಾಣಿ~ ಸಹಾಯಕ ಸಂಪಾದಕ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಮೊದಲಿಯಾರ್ ಮಾತನಾಡಿ, ಸಾಮೂಹಿಕ ವಿವಾಹ ವಿಶಿಷ್ಟ ಕಾರ್ಯಕ್ರಮ. ಸಾಮೂಹಿಕ ವಿವಾಹದ ಮೂಲಕ ಸಮಾಜ ಕಟ್ಟುವ ಕಾರ್ಯ ಇಲ್ಲಿ ನಡೆಯುತ್ತಿದೆ. ವಿಶ್ವಮಾನವ ಕಲ್ಪನೆಯಲ್ಲಿ ಶಿವಮೂರ್ತಿ ಮುರುಘಾ ಶರಣರು ಕಾರ್ಯ ಕೈಗೊಂಡಿದ್ದಾರೆ ಎಂದು ನುಡಿದರು.

ಜನಸಾಮಾನ್ಯರ ಜತೆ ಇದ್ದು, ಜನಸಾಮಾನ್ಯರ ಜತೆ ಬೆರೆತು ಜನರನ್ನು ಕೂಡಿಸುವ ಕೆಲಸವನ್ನು ಶರಣರು ಕೈಗೊಂಡಿದ್ದಾರೆ. ಮುರುಘಾ ಶರಣರು ಹಲವಾರು ದಿಟ್ಟ ಹೆಜ್ಜೆಗಳನ್ನು ಕೈಗೊಂಡಿದ್ದಾರೆ. ಅವರ ಕಾರ್ಯಕ್ರಮಗಳು ಎಲ್ಲವೂ ಅರ್ಥಪೂರ್ಣ, ವಿಶಿಷ್ಟವಾಗಿವೆ. `ಬಸವಶ್ರೀ~ ಪ್ರಶಸ್ತಿಗೆ ಆಯ್ಕೆ ಮಾಡುವ ಮಹನೀಯರೇ ಶ್ರೇಷ್ಠ ಉದಾಹರಣೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ರಾಜು ಮಾತನಾಡಿ, ಸಾಮೂಹಿಕ ಮದುವೆ ಮೂಲಕ ಪ್ರತಿ ತಿಂಗಳು ಎಲ್ಲ ವರ್ಗದವರನ್ನು ಒಂದು ವೇದಿಕೆ ಅಡಿ ತರುವ ಮೂಲಕ ಸಮಾನತೆಯತ್ತ ಕೊಂಡೊಯ್ಯುವ ಪ್ರಯತ್ನ ಇದಾಗಿದೆ. ಅನೇಕ ಜಾತಿ ಮಠಗಳು ಒಂದು ಜಾತಿಗೆ ಸೀಮಿತ. ಕೆಲಮಠಗಳಲ್ಲಿ ಮಡಿವಂತಿಕೆಯೇ ಜಾಸ್ತಿ ಇದೆ. ಅವೆಲ್ಲವನ್ನು ದೂರ ಮಾಡಿ ಪ್ರಜ್ಞಾವಂತ ಸಮಾಜಕ್ಕೆ ಶರಣರು ಶ್ರಮಿಸುತ್ತಿದ್ದಾರೆ ಎಂದರು.

ನಗರಸಭೆ ಪೌರಾಯುಕ್ತರಾದ ಎಸ್. ಭಾರತಿ ಮಾತನಾಡಿದರು. ಜಿಲ್ಲೆಯ ಪ್ರಗತಿಪರ ರೈತರಾದ ಮಾಡನಾಯಕನಹಳ್ಳಿ ಜಿ.ಟಿ.ಸತೀಶ್ ಶೇರ್ವೆಗಾರ ಹಾಗೂ ಬಂಜಗೊಂಡನ ಹಳ್ಳಿಯ ಎಸ್. ಗುರುಮೂರ್ತಿ ಅವರನ್ನು ಶರಣರು ಸನ್ಮಾನಿಸಿದರು.ದಾಸೋಹ ಸೇವಾರ್ಥಿಗಳಾದ ಬಿ.ಎಸ್. ರಾಜಣ್ಣ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT