ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳುಗಿದ್ದ ನೌಕೆ ಮತ್ತೆ ಮೇಲಕ್ಕೆ

ಸುದ್ದಿ ಹಿನ್ನೆಲೆ
Last Updated 22 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಇಟಲಿ ಸಮುದ್ರದಲ್ಲಿ 2012ರ ಜನವರಿ 13ರಂದು ಬಂಡೆಗೆ ಅಪ್ಪಳಿಸಿ ದುರಂತಕ್ಕೀಡಾಗಿ ಭಾಗಶಃ ಮುಳುಗಿದ್ದ ಐಷಾರಾಮಿ ಪ್ರಯಾಣಿಕರ ಹಡಗು ಕೋಸ್ಟಾ ಕಾನ್ ಕಾರ್ಡಿಯಾವನ್ನು ಕಳೆದ ವಾರ ಯಶಸ್ವಿಯಾಗಿ ಮೇಲೆತ್ತಿ ನೇರವಾಗಿ ನಿಲ್ಲಿಸಲಾಯಿತು. ಇಟಲಿ­ಯಲ್ಲಿ 2004ರಲ್ಲಿ ಇದರ ನಿರ್ಮಾಣ ಕಾರ್ಯ ಪೂರ್ಣಗೊಂಡು, 2005ರಲ್ಲಿ ಬಳಕೆ ಆರಂಭಗೊಂಡಿತ್ತು

230 ಮೀಟರ್ ಉದ್ದ, (952 ಅಡಿ) 1,14,000 ಟನ್ ಭಾರದ ಬೃಹತ್ ಐಷಾರಾಮಿ ಪ್ರಯಾಣಿಕರ ನೌಕೆಯು 13 ಅಂತಸ್ರುಗಳನ್ನು, 1,500 ಕ್ಯಾಬಿನ್ ಗಳನ್ನು ಹೊಂದಿತ್ತು. 505 ಕ್ಯಾಬಿನ್ ಗಳು ಖಾಸಗಿ ಬಾಲ್ಕನಿಗಳನ್ನೂ ಹೊಂದಿದ್ದವು. ನಾಲ್ಕು ಈಜುಗೊಳ, 5 ರೆಸ್ಟೊರೆಂಟ್ಸ್, ಕ್ಯಾಸಿನೊ, ಸಿನಿಮಾ ಮಂದಿರ ಮುಂತಾದವು ಇದರ ಇತರ ಆಕರ್ಷಣೆಗಳಾಗಿದ್ದವು. ಈ ನೌಕೆಯು ಒಂದರ್ಥದಲ್ಲಿ ತೇಲುವ  ಐಷಾರಾಮಿ ಹೋಟೆಲ್ ಆಗಿತ್ತು.

2012ರ ಜನವರಿಯಲ್ಲಿ ಈ ನೌಕೆ ಬಂಡೆಗೆ ಅಪ್ಪಳಿಸಿ ಸಮುದ್ರದಲ್ಲಿ ಅರ್ಧ­ದಷ್ಟು ಮುಳುಗಿತ್ತು. ಈ ದುರಂತದಲ್ಲಿ 32 ಜನರು ಮೃತಪಟ್ಟಿದ್ದರು. ಇಟಲಿಯ ಗಿಗ್ಲಿಯೊ ಬಂದರಿನಿಂದ ಹೊರಟ ನಂತರ ಈ ಅವಘಡ ಸಂಭವಿಸಿತ್ತು. ದುರಂತ­ದಲ್ಲಿ ಮಡಿದ 32 ಜನರ ಪೈಕಿ ಪರಿಚಾರಕನಾಗಿದ್ದ ಭಾರತದ ರಸೆಲ್ ರೆಬೆಲ್ಲೊ ಸೇರಿದಂತೆ ಇಬ್ಬರ ಮೃತದೇ­ಹಗಳು ಕೊನೆಗೂ ಪತ್ತೆಯಾಗಲಿಲ್ಲ.  ದುರಂತ ಘಟಿಸಿದಾಗ ನೌಕೆಯಲ್ಲಿ ಭಾರತೀಯರೂ ಸೇರಿದಂತೆ 3,229 ಪ್ರಯಾಣಿಕರು ಮತ್ತು 1,023 ಸಿಬ್ಬಂದಿ ಸೇರಿದಂತೆ 4200 ಜನರು ಪ್ರಯಾಣಿಸು­ತ್ತಿದ್ದರು.

ಬೃಹತ್ ನೌಕೆಯನ್ನು ಮರಳಿ ಅದರ ಸ್ವಸ್ಥಾನಕ್ಕೆ ತರುವ ಕಾರ್ಯಾಚರಣೆ ವಿಶ್ವದಾದ್ಯಂತ ಗಮನ ಸೆಳೆದಿತ್ತು.
ಅರ್ಧದಷ್ಟು ಮುಳುಗಿದ್ದ ನೌಕೆಯು ಎರಡು ವರ್ಷಗಳ ಕಾಲ ಸಮುದ್ರದಲ್ಲಿ ಅದೇ ಸ್ಥಿತಿಯಲ್ಲಿ ಇತ್ತು. ಗಿಗ್ಲಿಯೊದ ಟುಸ್ಕಾನ್ ದ್ವೀಪದ ಬಳಿ ಈ ದುರ್ಘಟನೆ ಸಂಭವಿಸಿತ್ತು.

ಅತಿದೊಡ್ಡ ಕಾರ್ಯಾಚರಣೆ
ನೀರಿನಲ್ಲಿ ಅರ್ಧದಷ್ಟು ಮುಳುಗಿದ್ದ ಬೃಹತ್ ನೌಕೆಯನ್ನು ಮೇಲಕ್ಕೆತ್ತಿ ನಿಲ್ಲಿಸುವ ವಿಶ್ವದ ಅತಿದೊಡ್ಡ ಕಾರ್ಯಾ­ಚರಣೆ ಇದಾಗಿತ್ತು. ಅತ್ಯಾಧುನಿಕ ಎಂಜಿನಿ­ಯರಿಂಗ್ ಕೌಶಲಕ್ಕೂ ಇದೊಂದು ಸವಾಲಾಗಿತ್ತು. ಈ ಕಾರ್ಯಾಚರಣೆಯು ಸತತ 19 ಗಂಟೆಗಳ ಕಾಲ ನಡೆಯಿತು.

ಕಾರ್ಯಾಚರಣೆ
ನೀರಿನಲ್ಲಿ ಒಂದೆಡೆ ವಾಲಿದ್ದ ನೌಕೆಯನ್ನು ನೇರಗೊಳಿಸಲು ಡಜನ್ ಗಟ್ಟಲೆ ಬೃಹತ್ ಸರಪಳಿ, ವಿಶೇಷ ಟ್ಯಾಂಕ್ ಗಳ ನೆರವು ಪಡೆಯಲಾಗಿತ್ತು. ವಾಲಿಕೊಂಡಿದ್ದ ನೌಕೆಯ ಭಾಗವನ್ನು ಗುರುತ್ವಾಕರ್ಷಣೆ ಮೂಲಕ  ನೇರಗೊ­ಳಿಸಲಾಗಿತ್ತು. ನೌಕೆಯ ರಕ್ಷಣೆಗೆ ಬಳಸಿದ ವಿಧಾನವು ಸಾಮಾನ್ಯವಾಗಿದ್ದರೂ, ನೌಕೆಗಾಗಿ ದೊಡ್ಡ ಪ್ರಮಾಣದಲ್ಲಿ ಬಳಸಿದ್ದು ಇದೇ ಮೊದಲಬಾರಿ­ಯಾಗಿತ್ತು.

ನೌಕೆಯ ಕೆಳಭಾಗದಲ್ಲಿ ನೀರಿನ ಆಳದಲ್ಲಿ  ಕೃತಕ ಫ್ಲಾಟ್ ಫಾರ್ಮ್ ನಿರ್ಮಿಸಲಾಗಿತ್ತು.  ಉಕ್ಕು ಹಾಗೂ ಸಿಮೆಂಟ್ ನಿಂದ ತಯಾರಿಸಲಾದ ಪ್ಲಾಟ್ ಫಾರ್ಮ್ ನಿರ್ಮಾಣಕ್ಕೆ 30 ಸಾವಿರ ಟನ್ ಉಕ್ಕು ಬಳಸಲಾಗಿತ್ತು.

150 ಕಂಪನಿಗಳು ಹಾಗೂ 25 ದೇಶಗಳ 500 ಎಂಜಿನಿಯರ್ ಗಳು ಈ ಕಾರ್ಯಾಚರಣೆಯಲ್ಲಿ ತೊಡಗಿ­ಕೊಂಡಿದ್ದರು. ನೌಕೆ ಮುಳುಗಿದಾಗ  1,012 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಚಿನ್ನಾಭರಣ, ನಗದು, ಅಪರೂಪದ ಕಲಾಕೃತಿಗಳು ಮುಳು­ಗಿದ್ದವು. ಅವುಗಳನ್ನು  ಪತ್ತೆ ಹಚ್ಚುವ ಕಾರ್ಯವೂ ಈಗ ಆರಂಭವಾಗಿದೆ.

ನೌಕೆಯ ಭವಿಷ್ಯ
ಈ ನೌಕೆಯನ್ನು ಮುಂದಿನ ವರ್ಷ (2014ರಲ್ಲಿ) ಒಡೆದು ಹಾಕಲು ನಿರ್ಧರಿಸಲಾಗಿದೆ. ದುರಸ್ತಿ ಮಾಡಲು ಸಾಧ್ಯವಿಲ್ಲದಷ್ಟು ಹಾನಿಗೆ ಒಳಗಾಗಿರುವುದರಿಂದ ಅದನ್ನು ಒಡೆದು ಹಾಕುವ ನಿರ್ಧಾರಕ್ಕೆ ಬರಲಾಗಿದೆ.

ವೆಚ್ಚ
ಸಮುದ್ರದಲ್ಲಿ  ಅರ್ಧದಷ್ಟು ಮುಳು­ಗಿದ್ದ ನೌಕೆಯನ್ನು ಮೇಲಕ್ಕೆತ್ತುವ ಕಾರ್ಯಾಚರಣೆಗೆ 500 ದಶಲಕ್ಷ ಪೌಂಡ್ (ಅಂದಾಜು ₨5,000 ಕೋಟಿ) ವೆಚ್ಚವಾ­ಗಿದೆ. ಹೀಗಾಗಿ ಇದು ಇದುವರೆಗಿನ ಅತಿದೊಡ್ಡ ಮತ್ತು ದುಬಾರಿ ಹಡಗು ರಕ್ಷಣೆ ಕಾರ್ಯಾ­ಚರಣೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT