ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷರಫ್ ಜಾಮೀನು ಅರ್ಜಿ ತಿರಸ್ಕಾರ

Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಬೆನಜೀರ್ ಭುಟ್ಟೊ ಹತ್ಯೆ ಪ್ರಕರಣ ಸಂಬಂಧ ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರು ಮಧ್ಯಂತರ ಜಾಮೀನು ವಿಸ್ತರಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಲಾಹೋರ್ ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ.

ಮುಷರಫ್ ಪರ ವಕೀಲ ಸಲ್ಮಾನ್ ಸಫ್ದರ್ ಮಧ್ಯಂತರ  ಜಾಮೀನು ವಿಸ್ತರಣೆಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ನ್ಯಾಯಾಲಯದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಇದೇ ವೇಳೆ ತಿರಸ್ಕರಿಸಿದೆ.

ನ್ಯಾಯಾಲಯವು ಏಪ್ರಿಲ್ 17ರಂದು ಒಂದು ವಾರದ ಮಟ್ಟಿಗೆ ಮುಷರಫ್‌ಗೆ ಮಧ್ಯಂತರ ಜಾಮೀನು ನೀಡಿತ್ತು. ಲಾಹೋರ್ ಹೈಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಬೆನಜೀರ್ ಹತ್ಯೆ ಪ್ರಕರಣದಲ್ಲಿ ಮುಷರಫ್ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಕಾನೂನು ಪರಿಣತರು ಅಭಿಪ್ರಾಯಪಟ್ಟಿದ್ದರು.

2007ರ ಡಿಸೆಂಬರ್‌ನಲ್ಲಿ ರಾವಲ್ಪಿಂಡಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಅವರು ಆತ್ಮಾಹುತಿ ದಳದ ದಾಳಿಗೆ ಬಲಿಯಾಗಿದ್ದರು. ಬೆನಜೀರ್‌ಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ಮುಷರಫ್ ವಿಫಲರಾಗಿದ್ದರು ಎನ್ನುವ ಆರೋಪ ಅವರ ಮೇಲಿದೆ.

ಬೆನಜೀರ್ ಹತ್ಯೆ ಪ್ರಕರಣದಲ್ಲಿ ಮುಷರಫ್ ಪಾತ್ರದ ಕುರಿತು ಎಫ್‌ಐಎ ತನಿಖೆ ನಡೆಸಬೇಕು. ತನಿಖಾಧಿಕಾರಿಗಳಿಗೆ ಸಹಕಾರ ನೀಡುವಂತೆ ಮಂಗಳವಾರ ಭಯೋತ್ಪಾದಕ ನಿಗ್ರಹ ನ್ಯಾಯಾಲಯ ಮುಷರಫ್‌ಗೆ ನಿರ್ದೇಶನ ನೀಡಿತ್ತು.

2007ರಲ್ಲಿ ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಹೇರಿ 60 ನ್ಯಾಯಮೂರ್ತಿಗಳನ್ನು ಬಂಧಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಷರಫ್ ಅವರನ್ನು ಬಂಧಿಸುವಂತೆ ಇಸ್ಲಾಮಾಬಾದ್ ಹೈಕೋರ್ಟ್ ಕಳೆದ ವಾರ ಆದೇಶ ನೀಡಿತ್ತು. ಮುಷರಫ್ ಅವರನ್ನು ಅವರ ತೋಟದ ಮನೆಯಲ್ಲೇ ಬಂಧಿಸಿಡಲಾಗಿದೆ. ತಾಲಿಬಾನ್ ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ಮುಷರಫ್‌ಗೆ ಭದ್ರತೆ ಕಲ್ಪಿಸಲಾಗಿದೆ.

ದೇಶಾಂತರ ಹೋಗಿದ್ದ ಮುಷರಫ್ ಸುಮಾರು ನಾಲ್ಕು ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಮರಳಿದ್ದಾರೆ. ಆರ್ಥಿಕ ದುಃಸ್ಥಿತಿಯಿಂದ ದೇಶವನ್ನು ಹೊರತರುವುದು ಮತ್ತು ಉಗ್ರರ ಉಪಟಳಕ್ಕೆ ಅಂತ್ಯ ಹಾಡುವ ದೃಷ್ಟಿಯಿಂದ ಮೇ 11ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಮುಷರಫ್ ಹೇಳಿಕೊಂಡಿದ್ದರು.

2006ರಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಬಲೂಚಿಸ್ತಾನದ ಮುಖಂಡ ಅಕ್ಬರ್ ಬುಗ್ತಿ ಹತ್ಯೆ ಪ್ರಕರಣದಲ್ಲೂ ಮುಷರಫ್ ಹೆಸರು ತಳಕು ಹಾಕಿಕೊಂಡಿದೆ.

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ರಾಜದ್ರೋಹ ಎಸಗಿದ ಮುಷರಫ್ ಅವರನ್ನು ವಿಚಾರಣೆಗೆ ಒಳಪಡಿಸಬೇಕೆಂದು ಹಲವು ವಕೀಲರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

`ಚೌಧರಿ ಸೇವಾ ಅವಧಿ ವಿಸ್ತರಿಸಿ'

ಲಾಹೋರ್ (ಪಿಟಿಐ): ಪಾಕಿಸ್ತಾನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ಅವರ ಅಧಿಕಾರ ಅವಧಿಯನ್ನು ಎರಡು ವರ್ಷ ವಿಸ್ತರಿಸಬೇಕೆಂದು ಕೋರಿ ದೇಶದ ಸರ್ವೋಚ್ಚ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಇಫ್ತಿಕಾರ್ ಚೌಧರಿ ಅವರನ್ನು ಪದಚ್ಯುತಿ ಗೊಳಿಸಿದ್ದರಿಂದ ಅವರು 22 ತಿಂಗಳು ಕಾರ್ಯನಿರ್ವಹಿಸಲು ಸಾಧ್ಯವಾಗಿರಲಿಲ್ಲ. ಆದಕಾರಣ ಆ 22 ತಿಂಗಳ ಅವಧಿಯ ಕರ್ತವ್ಯವನ್ನು ನಿಭಾಯಿಸಲು ಈಗ ಅವಕಾಶ ಕಲ್ಪಿಸಿಕೊಡಬೇಕೆಂದು ಕೋರಿ `ನ್ಯಾಯಾಂಗ ವ್ಯವಸ್ಥೆ ರಕ್ಷಿಸಿ' ಸಮಿತಿಯ ಇಮ್ತಿಯಾಜ್ ರಶೀದ್ ಖುರೇಶಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇಫ್ತಿಕಾರ್ ಚೌಧರಿ ಬರುವ ಡಿಸೆಂಬರ್ 12ರಂದು ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT