ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಗಾಲಯ ವೀಕ್ಷಿಸಿದ 30 ಲಕ್ಷ ಪ್ರವಾಸಿಗರು

Last Updated 5 ಏಪ್ರಿಲ್ 2013, 7:42 IST
ಅಕ್ಷರ ಗಾತ್ರ

ಮೈಸೂರು: ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ 2012-13ನೇ ಸಾಲಿನಲ್ಲಿ ನಗರದ ಶ್ರೀಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ 30.35 ಲಕ್ಷ!

33 ಲಕ್ಷ ಪ್ರವಾಸಿಗರನ್ನು ನೀರಿಕ್ಷಿಸಿದ್ದ ಮೃಗಾಲಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾವೇರಿ ಚಳವಳಿ, ಮುಷ್ಕರದ ಕಾರಣಕ್ಕೆ ನೀರಿಕ್ಷಿತ ಮಟ್ಟ ತಲುಪದಿದ್ದರೂ, 2011-12ನೇ ಆರ್ಥಿಕ ವರ್ಷಕ್ಕಿಂತ 1,984 ಹೆಚ್ಚವರಿ ಪ್ರವಾಸಿಗರು ಮೃಗಾಲಯವನ್ನು ವೀಕ್ಷಿಸಿದ್ದಾರೆ.

ಕಳೆದ ಎರಡು ವರ್ಷದಲ್ಲಿ ಪ್ರವಾಸಿಗರ ಸಂಖ್ಯೆ ಮೂರು ಮೀಲಿಯನ್ ದಾಟಿರುವುದು ಸಿಬ್ಬಂದಿಗಳ ಹುಮ್ಮಸ್ಸನ್ನು ಹೆಚ್ಚಿಸಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆದಾಯದಲ್ಲೂ ಏರಿಕೆ ಕಾಣುತ್ತಿದೆ. ಪ್ರವೇಶ ಶುಲ್ಕ ರೂ. 12.03 ಕೋಟಿ ಸಂಗ್ರಹವಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ರೂ. 15.30 ಕೋಟಿ ಆದಾಯ ಬಂದಿದ್ದು, 14.21 ಕೋಟಿ ವೆಚ್ಚವಾಗಿದೆ.

ಅಭಿವೃದ್ಧಿ ಪರ್ವ: ವೀಕ್ಷಕರ ಸಂಖ್ಯೆಯಲ್ಲಿ ಆಗುತ್ತಿರುವ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಮೃಗಾಲಯ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದೆ. ಪ್ರವಾಸಿಗರಿಗೆ ಸುರಕ್ಷಿತ ಕುಡಿಯುವ ನೀರು ಸರಬರಾಜು ಮಾಡುತ್ತಿದೆ. 3 ಕಿ.ಮೀ ಸುತ್ತಿ ಪ್ರಾಣಿಗಳನ್ನು ವೀಕ್ಷಿಸಲು ಪ್ರವಾಸಿಗರಿಗೆ ತೊಂದರೆಯಾಗದಂತೆ ಅಲ್ಲಲ್ಲಿ ವಿಶ್ರಾಂತಿ ತಾಣ, ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಒಳಚರಂಡಿ ವ್ಯವಸ್ಥೆಯ ಅಭಿವೃದ್ಧಿ, ಪ್ರಾಣಿ ಮನೆಗಳ ಸಮೃದ್ಧೀಕರಣ, ಬಯೋಗ್ಯಾಸ್ ಘಟಕವನ್ನು ನಿರ್ಮಾಣ ಮಾಡಲಾಗಿದೆ.

ಭದ್ರತಾ ಸಂಸ್ಥೆಯ ಸಲಹೆ ಮೇರೆಗೆ ಮೃಗಾಲಯಕ್ಕೆ ಮತ್ತೊಂದು ಪ್ರವೇಶ ದ್ವಾರವನ್ನು ನಿರ್ಮಿಸಲಾಗಿದೆ. ತುರ್ತು ಸಂದರ್ಭದಲ್ಲಿ ಇದನ್ನು ಬಳಲು ಉದ್ದೇಶಿಸಲಾಗಿದೆ. ಹುಲಿಗಳಿಗೆ ಅನುಕೂಲವಾಗುವಂತೆ ಡೇಕ್ರಾಲ್ ವ್ಯವಸ್ಥೆ ಮಾಡಲಾಗಿದೆ. ದೈಹಿಕ ಚಟುವಟಿಕೆಗಾಗಿ ಪ್ರಾಣಿಗಳಿಗೆ ನೂತನ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಒಂದೇ ಸ್ಥಳದಲ್ಲಿ 3ರಿಂದ 4 ಹುಲಿಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ. ಸ್ವಚ್ಛತೆ, ಶೈಕ್ಷಣಿಕ ಕಾರ್ಯಕ್ರಮಗಳು ಪ್ರವಾಸಿಗರನ್ನು ಆಕರ್ಷಿಸಿವೆ.

24 ಪ್ರಾಣಿಗಳ ಆಗಮನ: ಈ ಅವಧಿಯಲ್ಲಿ ಮೃಗಾಲಯವನ್ನು 24 ಪ್ರಾಣಿಗಳು ಪ್ರವೇಶಿಸಿವೆ. ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆಯಿಂದ ಪ್ರಾಣಿಗಳನ್ನು ಸ್ವೀಕರಿಸಲಾಗಿದೆ. ಅಲ್ಲದೇ, ಹೈದರಾಬಾದ್ ಮೃಗಾಲಯದಿಂದ ಗಂಡು ಜಾಗ್ವಾರ್, ಗೋವಾ ಮೃಗಾಲಯದಿಂದ ಕರಡಿ, ನಾಗರಹೊಳೆ ಅರಣ್ಯದಲ್ಲಿ ರಕ್ಷಿಸಿದ ಗಂಡು ಹುಲಿ ಮಾದೇಶ ಮತ್ತು ಹೆಣ್ಣು ಹುಲಿ ಅಮೃತ ಕೂಡ ಸೇರಿವೆ.

298 ಪ್ರಾಣಿ-ಪಕ್ಷಿ ಜನನ: ಒಂದು ವರ್ಷದ ಅವಧಿಯಲ್ಲಿ ವಿವಿಧ ಜಾತಿಗೆ ಸೇರಿದ 298 ಪ್ರಾಣಿ- ಪಕ್ಷಿಗಳು ಜನಿಸಿವೆ. ಪಟ್ಟೆಗಳಿರುವ ಕತ್ತೆಕಿರುಬ, ಕೆಸರು ಜಿಂಕೆ, ಕಪುಚಿನ್ ಕೋತಿ, ಸಿಂಹ, ಕಪ್ಪು ಹಂಸ, ಸಾರಸ್ ಕ್ರೇನ್, ಜಿಂಕೆ, ತೋಳ, ಭಾರತದ ತೋಳ ಸೇರಿದಂತೆ ಮತ್ತಿತರ ಪಕ್ಷಿಗಳು ಜನಿಸಿವೆ.

65 ಸಾವು:ವಿವಿಧ ಜಾತಿಗೆ ಸೇರಿದ 65 ಪ್ರಾಣಿಗಳು ಮೃತಪಟ್ಟಿವೆ. ಅವುಗಳಲ್ಲಿ ಕಾಡೆಮ್ಮೆ, ಸಾಟಿರ್ ಟ್ರಾಗೋಪನ್, ಚೀತಾ, ಕಪುಚಿನ್ ಕೋತಿ, ಬಿಳಿ ಹುಲಿ, ಕಾಳಿಂಗ ಸರ್ಪ, ವಲ್ಲಭಿ, ಸಿಂಗಳೀಕ, ಕಾಮನ್ ಲಂಗೂರ್, ಹಸಿರು ಅನಕೊಂಡ, ಸಿಂಹದ ಮರಿ, ಮಾರ‌್ಮೋಸೆಟ್ ಮತ್ತು ಹಲವಾರು ಪಕ್ಷಿ ಜಾತಿಗಳು ಮೃತಪಟ್ಟಿವೆ. ಮೃತಪಟ್ಟ ಪ್ರಾಣಿಗಳ ಶವ ಸಂಸ್ಕಾರಕ್ಕಾಗಿ ಶವಾಗಾರವನ್ನು ನಿರ್ಮಿಸಲಾಗಿದೆ ಎಂದು ಮೃಗಾ ಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ರವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT