ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಜೆಸ್ಟಿಕ್ ಎಂಬ ಮಾಯೆಯೊಳಗೆ...

Last Updated 21 ಫೆಬ್ರುವರಿ 2012, 12:35 IST
ಅಕ್ಷರ ಗಾತ್ರ

ಈ ಮೆಜೆಸ್ಟಿಕ್ ಬದಲಾಗುವುದಿಲ್ಲವೇನೊ...?

ಇಲ್ಲಿ ಹಗಲು, ರಾತ್ರಿಗಳಿಗೆ ವ್ಯತ್ಯಾಸವೇ ಇಲ್ಲ. ಇಲ್ಲಿಗೆ ಬಂದವರೆಲ್ಲಾ ಬ್ಯುಸಿ. ಎಲ್ಲರಿಗೂ ಗೊತ್ತಿದೆ ಇಲ್ಲಿ ಮೋಸ ಮಾಡುವವರೇ ಹೆಚ್ಚು ಎಂದು. ಆದರೂ ಇಲ್ಲಿಗೆ ಬಂದು ಯಾಮಾರಿ ಬಿಕ್ಕಳಿಸುತ್ತಾರೆ. ಲಕ್ಷ ಮಂದಿ ಬರುತ್ತಾರೆ, ಲಕ್ಷ ಮಂದಿ ಹೋಗುತ್ತಾರೆ. ಎಲ್ಲರದ್ದೂ ಅಪರಿಚಿತ ಮುಖಗಳು. ದಿಢೀರನೆ ಪರಿಚಿತ ಮುಖ ಕಂಡರೆ ಹಿಗ್ಗುವವರೂ ಇದ್ದಾರೆ. ಒಬ್ಬೊಬ್ಬರ ಮುಖದಲ್ಲೂ ಒಂದೊಂದು ದುಗುಡ. ನಡುವೆ ಸಣ್ಣದೊಂದು ನಗು. ಇಲ್ಲಿ ಓಡಾಡುತ್ತಿದ್ದರೆ ನಿಮ್ಮೂರಿನ ಜಾತ್ರೆ ತಪ್ಪಿಸಿಕೊಂಡ ನೋವು ಮರುಕಳಿಸುವುದೇ ಇಲ್ಲ!

ಎಂದೂ ಮಲಗದ ಈ ಪ್ರದೇಶ ಎಲ್ಲಾ ರೀತಿಯ ವ್ಯವಹಾರಗಳ ಕೇಂದ್ರ. ಅದಕ್ಕಾಗಿಯೇ ಮೆಜೆಸ್ಟಿಕ್ ಒಂಥರಾ ಬೆಂಗಳೂರಿನ ಅನಧಿಕೃತ ರಾಜಧಾನಿ. ಹೆಜ್ಜೆಗೊಂದು ಬಾರು, ಸಾಲು ಸಾಲು ಟ್ರಾವೆಲ್ ಏಜೆನ್ಸಿಗಳು, ದೊಡ್ಡ ದೊಡ್ಡ ಬೋರ್ಡ್ ಹೊತ್ತ ಲಾಡ್ಜ್‌ಗಳು, ಎಲ್ಲಿ ನೋಡಿದರಲ್ಲಿ ಬಿಎಂಟಿಸಿ ಬಸ್ಸುಗಳು, ಪಕ್ಕದಲ್ಲೇ ಕೆಎಸ್ಸಾರ್ಟಿಸಿ ನಿಲ್ದಾಣ, ಪ್ರಯಾಣಿಕರು ಬಸ್ಸಿಳಿದ ಕೂಡಲೇ ಓಡಿ ಬರುವ ಆಟೋ ಡ್ರೈವರ್‌ಗಳು. ಎದುರುಗಡೆ ಸಿಟಿ ರೈಲ್ವೆ ಸ್ಟೇಷನ್, ರಸ್ತೆ ಬದಿ ವ್ಯಾಪಾರ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವವರು, ಅನತಿ ದೂರದಲ್ಲಿಯೇ ಸ್ಯಾಂಡಲ್‌ವುಡ್ ರಾಜಧಾನಿ ಗಾಂಧಿನಗರ, ಸಾಲು ಸಾಲು ಥಿಯೇಟರುಗಳು, ರಸ್ತೆ ಉದ್ದಕ್ಕೂ ದೇವಸ್ಥಾನಗಳು, ಅದರ ಎದುರು ಭಿಕ್ಷುಕರು. ಪಕ್ಕದಲ್ಲಿ ಉಪ್ಪಾರಪೇಟೆ ಪೊಲೀಸ್ ಠಾಣೆ.

ಕೆಲಸ ಹುಡುಕಿ ಬಂದವರು, ಯಾರಿಗಾಗಿಯೋ ಕಾಯುತ್ತಿರುವವರು, ಪ್ರವಾಸಕ್ಕೆಂದು ಹೊರಟವರು, ಮತ್ತೊಂದು ಬಸ್ ಹಿಡಿಯಲು ನಿಂತವರು, ಕಾಲ ದೂಡಲು ಬಂದವರು, ಕಡಿಮೆ ದರದಲ್ಲಿ ಸಿಗಬಹುದೆಂದು ಏನನ್ನೋ ಖರೀದಿಸಲು ಬಂದವರು, ಜೇಬುಗಳ್ಳರು, ಕುಡಿದು ಬಿದ್ದವರು, ಕಳ್ಳರಂತೆ ಕಾಣುವ ಭಿಕ್ಷುಕರು, `ಹಣ ಕಳೆದುಕೊಂಡಿದ್ದೇವೆ ಊರಿಗೆ ಹೋಗಲು ದುಡ್ಡಿಲ್ಲ~ ಎಂದು ಹಿಂದೆ ಬೀಳುವವರು, ಯಾಮಾರಿಸಲೆಂದೇ ಕುಂಟುವಂತೆ ನಟಿಸುವವರು, ತಲೆಹಿಡುಕರು, ಅಲ್ಲೊಬ್ಬ ಇಲ್ಲೊಬ್ಬ ಪೊಲೀಸ್, ಮೇಲ್ಸೇತುವೆ ಮೇಲೆ ಕೈ ಅಡ್ಡ ಹಾಕುವ ವೇಶ್ಯೆಯರು. ಅವರೆಲ್ಲಾ ಏನು ಮಾಡುತ್ತಾರೆ ಎಂದು ನೋಡಲೆಂದೇ ಬಂದವರು.

ಯಾವುದೋ ಊರಿನಿಂದ ಒಬ್ಬಂಟಿಯಾಗಿ ಮೆಜೆಸ್ಟಿಕ್‌ಗೆ ಬಂದಿಳಿಯುವ ಅದೆಷ್ಟೋ ಹುಡುಗ- ಹುಡುಗಿಯರು, ಹೆಂಗಸರು, ಮುದುಕ- ಮುದುಕಿಯರು ಮೋಸಹೋದ ಉದಾಹರಣೆಗಳಿವೆ. ಹಣ ಕಳೆದುಕೊಂಡು ಬಿಕ್ಕಿಬಿಕ್ಕಿ ಅತ್ತಿದ್ದಿದೆ. ಆಟೊ ಏರಲು ಭಯ, ಮತ್ತೊಬ್ಬರನ್ನು ಮಾತನಾಡಿಸಲು ಹೆದರಿಕೆ. ರಾತ್ರಿ ವೇಳೆ ಮೇಲ್ಸೇತುವೆಯಲ್ಲಿ ನಡೆದಾಡುವುದು ಸುಲಭವಲ್ಲ. ಸುರಂಗ ಮಾರ್ಗದಲ್ಲಿ ನಡೆಯುವುದು ಮತ್ತಷ್ಟು ಅಪಾಯಕಾರಿ.

ಬಸ್ಸಿನಿಂದ ಇಳಿಯುತ್ತಿದ್ದಂತೆ ಇಲ್ಲಿ ಮೋಸ ಶುರುವಾಗುತ್ತದೆ. ಅಜ್ಜಿಯ ಕೈಯಿಂದ ಲಗೇಜ್ ಕಿತ್ತುಕೊಂಡು ನಮ್ಮ ಆಟೊಕ್ಕೆ ಬನ್ನಿ ಎನ್ನುವ ಡ್ರೈವರ್‌ಗಳು ಪಕ್ಕದಲ್ಲೇ ಇರುವ ಶೇಷಾದ್ರಿಪುರಕ್ಕೆ 100 ರೂಪಾಯಿ ಕೀಳುತ್ತಾರೆ! ಯಾವುದೋ ಊರಿಗೆ ಹೋಗಲು ಕೆಎಸ್ಸಾರ್ಟಿಸಿ ಬಸ್ಸು ಕಾಯುತ್ತಾ ನಿಂತವರನ್ನು ಸುತ್ತುವರಿಯುವ ಖಾಸಗಿ ಟ್ರಾವೆಲ್ ಏಜೆನ್ಸಿ ಸಿಬ್ಬಂದಿ. ಮಾತಿಗೆ ಮರಳಾಗಿ ಅವರು ತೋರಿಸುವ ಬಸ್ಸು ಹತ್ತಿದರೆ ರಾತ್ರಿ ಇಡೀ ತಿಗಣೆ ಕಾಟ.

ಅಕ್ಕ-ತಂಗಿಯ ಜೊತೆಗೋ, ಅಮ್ಮನ ಜೊತೆಗೋ ಹೊರಟ ಸಭ್ಯರು ಧುತ್ತನೆ ಎದುರಾಗಿ ಬೆಲೆ ಕೇಳಲು ಮುಂದಾಗುವ ವೇಶ್ಯೆಯರನ್ನು ಕಂಡು ದಂಗಾಗುವುದೂ ಉಂಟು. ಅವರನ್ನು ಜೊತೆ ಮಾಡಿಕೊಡಲು ಅಡ್ಡಾಡುವ ತಲೆಹಿಡುಕರದ್ದು ಇನ್ನೊಂದು ಕಾಟ. ಮೇಲ್ಸೇತುವೆ ತುದಿಯಲ್ಲಿ ಆಟೊವೊಂದು ಸದಾ ಸಿದ್ಧವಾಗಿ ನಿಂತಿರುತ್ತದೆ; `ಹೂಂ~ ಅನ್ನುವುದನ್ನೇ ಕಾಯುವಂತೆ. ಅನತಿ ದೂರದಲ್ಲಿ ದಿನಕ್ಕೆ ನೂರು ರೂಪಾಯಿಯಿಂದ ಹಿಡಿದು ಐದು ಸಾವಿರದವರೆಗೆ ಬಾಡಿಗೆ ವಸೂಲು ಮಾಡುವ ಲಾಡ್ಜ್‌ಗಳು. 24 ಗಂಟೆ ಸರ್ವೀಸ್ ಎಂಬ ಬೋರ್ಡ್ ಕೂಡ ಲಭ್ಯ.

ಬೆಂಗಳೂರಿಗೆ ಮೊದಲ ಬಾರಿ ಬಂದಾಗ ನಡೆದ ಘಟನೆಯೊಂದನ್ನು ಹಂಚಿಕೊಳ್ಳಲೇಬೇಕು. ಮಾಯಾನಗರಿಗೆ ಕಾಲಿಡುವ ಮೊದಲೇ ಕೆಲವರು ಭಯ ಹುಟ್ಟಿಸಿದ್ದರು. ಅದನ್ನು ಈ ಮೆಜೆಸ್ಟಿಕ್ ಆರಂಭದಲ್ಲೇ ನಿಜ ಮಾಡಿ ತೋರಿಸಿತ್ತು. ರೈಲಿನಿಂದ ಇಳಿದು ಸುರಂಗ ಮಾರ್ಗದಲ್ಲಿ ಬಿಎಂಟಿಸಿ ಬಸ್ಸು ಹಿಡಿಯಲು ಬರುವಾಗ ರಾತ್ರಿ ಒಂಬತ್ತಾಗಿತ್ತು. ಅಷ್ಟರಲ್ಲಿ ನನ್ನನ್ನೇ ದುರುಗುಟ್ಟಿ ನೋಡಿಕೊಂಡು ಸನಿಹಕ್ಕೆ ಬಂದ ಒಬ್ಬ ವ್ಯಕ್ತಿ `ಸರ್ ಬರ್ತಿರಾ? ಎಲ್ಲಾ ಕೇರಳ ಮಾಲುಗಳು, 16-20 ವರ್ಷ ಅಷ್ಟೆ~ ಎಂದ. ನನಗೆ ಸರಿಯಾಗಿ ಅರ್ಥವಾಗಲಿಲ್ಲ. `ಆಟೊ ರೆಡಿ ಇದೆ. ಪಕ್ಕದಲ್ಲೇ ಲಾಡ್ಜ್. ಐನೂರು ರೂಪಾಯಿ ಅಷ್ಟೆ~ ಎಂದು ಮಾತು ಮುಂದುವರಿಸಿದ.

ಅರ್ಥವಾಗಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಮತ್ತೆ ಆ ತಲೆಹಿಡುಕನ ಮುಖ ನೋಡದೇ ಓಡಲು ಶುರು ಮಾಡಿದೆ. ಅಷ್ಟರಲ್ಲಿ ಮೈಬೆವೆತು ಹೋಗಿತ್ತು. ಸಿಲಿಕಾನ್ ಸಿಟಿ ನೀಡಿದ ಮೊದಲ ಶಾಕ್ ಅದು. ಮೆಜೆಸ್ಟಿಕ್‌ಗೆ ಹೋದಾಗಲೆಲ್ಲಾ ಇವತ್ತಿಗೂ ಆ ಘಟನೆ ನೆನಪಾಗುತ್ತಿರುತ್ತದೆ. ಒಂಥರಾ ಭಯ ಕಾಡುತ್ತಲೇ ಇರುತ್ತದೆ. ಆದರೆ ಅನಿವಾರ್ಯ ಹೋಗಲೇಬೇಕು. ಆದರೆ ಆ ತಲೆಹಿಡುಕನಿಗೆ ನಿರಾಕರಿಸುವವರು ಒಬ್ಬರಾದರೆ, ಸಿಗುವವರು ಇನ್ನಷ್ಟು ಮಂದಿ ಇರುತ್ತಾರೆ. ಅವನ ಹೊಟ್ಟೆ ತುಂಬುವುದಾದರೂ ಹೇಗೆ ಹೇಳಿ? ಆದರೆ ಬಂದ ಹಣವನ್ನೆಲ್ಲಾ ಆ ಮಧ್ಯವರ್ತಿಗಳಿಗೆ ನೀಡಿ ಮೈ ಮಾರಿಕೊಳ್ಳುವ ಅಮಾಯಕ ಹುಡುಗಿಯರ ಊಟಕ್ಕೆ ದುಡ್ಡು ಉಳಿಯುತ್ತದೆಯೇ? ಸಿಕ್ಕಷ್ಟು ಸಿಗಲಿ, ಹೊಟ್ಟೆ ಪಾಡಿಗೆ ನಾಚಿಕೆ ಏಕೆ ಎಂಬಂಥ ಭಂಡ ಧೈರ್ಯ ಕೆಲವರದ್ದು.

ಒಮ್ಮೆ ಚಿಕ್ಕಮಗಳೂರಿನಿಂದ ಬರುವಾಗ ಬಸ್ಸಿನಲ್ಲಿ ಒಬ್ಬ ಹುಡುಗನ ಪರಿಚಯವಾಗಿತ್ತು. ಆತ ಬೆಂಗಳೂರಿಗೆ ಬಂದು ಮೂರೂವರೆ ವರ್ಷಗಳಾಗಿದೆ ಅಷ್ಟೆ. ಆದರೆ ಅವನಿಗೆ ಮೆಜೆಸ್ಟಿಕ್‌ನಲ್ಲಿ ಹಗಲು-ರಾತ್ರಿ ನಡೆಯುವ ಗೊತ್ತಿಲ್ಲದ ವಿಷಯಗಳಿಲ್ಲ. ವೇಶ್ಯೆಯರು, ಹಿಜಡಾಗಳ ಸಂಖ್ಯೆಯನ್ನೂ ಅವನು ಅನುಮಾನವಿಲ್ಲದೆ ಹೇಳಬಲ್ಲ. ಆ ಪ್ರದೇಶದಲ್ಲಿ ಅವನಿಗೆ ಪರಿಚಯವಿಲ್ಲದ ಅಂಗಡಿಗಳಿಲ್ಲ. ಕೆಲ ಸಮಯ ಅಲ್ಲಿನ ಹೋಟೆಲ್‌ವೊಂದರಲ್ಲಿ ರೂಮ್ ಬಾಯ್ ಆಗಿದ್ದನಂತೆ. ಈಗ ಅಲ್ಲಿನ ಟ್ರಾವೆಲ್ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಬೆಂಗಳೂರಿಗೆ ಬಂದು ಏಳು ವರ್ಷವಾದರೂ ಮೆಜೆಸ್ಟಿಕ್‌ನಲ್ಲಿ ಒಬ್ಬರೇ ಒಬ್ಬರು ಪರಿಚಯ ಇಲ್ಲವಲ್ಲ ಎಂದು ನನಗೆ ಮುಜುಗರವಾಯಿತು. ಆದರೆ ಆತ ಹೇಳುವ ಕೆಲ ವಿಷಯಗಳು ಭಯ ಹುಟ್ಟಿಸುತ್ತವೆ. ಕೆಲ ರೂಮ್ ಬಾಯ್‌ಗಳೇ ಇಲ್ಲಿ ತಲೆಹಿಡುಕರಂತೆ!

ಕೆಲ ವ್ಯಾಪಾರಿಗಳು ಕೂಡ ಇಲ್ಲಿ ನಾಮ ಹಾಕುವವರೇ. ಬೆಲ್ಟ್‌ಗೆ 300 ರೂಪಾಯಿ ಹೇಳುತ್ತಾರೆ ಎಂದಿಟ್ಟುಕೊಳ್ಳಿ. ಮನಸ್ಸಿನಲ್ಲಿ ಬೇಡ ಎಂದುಕೊಂಡೇ ನೂರು ರೂ.ಗೆ ಕೊಡುತ್ತೀರಾ ಎಂದು ಕೇಳಿದರೆ ಮುಗಿಯಿತು. ಅಷ್ಟಕ್ಕೇ ತೆಗೆದುಕೊಳ್ಳಿ ಎಂದು ಮೈಮೇಲೆ ಬೀಳುತ್ತಾರೆ. ಅಷ್ಟು ದುಡ್ಡಿಗೆ ತೆಗೆದುಕೊಳ್ಳುವವರೆಗೆ ಬಿಡುವುದಿಲ್ಲ.

ಅಕ್ಕಪಕ್ಕದ ವ್ಯಾಪಾರಿಗಳಲ್ಲಿ ಕೆಲವರು ಮುತ್ತಿಕೊಂಡು ಕೊರಳುಪಟ್ಟಿಗೆ ಕೈಹಾಕುತ್ತಾರೆ. ತೆಗೆದುಕೊಳ್ಳದೆ ವಿಧಿಯಿಲ್ಲ. ಆದರೆ ಅದರ ಅಸಲಿ ಬೆಲೆ 50 ರೂಪಾಯಿ ಕೂಡ ಇರುವುದಿಲ್ಲ. ಮನೆಗೆ ತಂದು ಒಂದು ವಾರದಲ್ಲಿ ಕೊಂಡಿ ಕಿತ್ತು ಹೋಗಿರುವ ಉದಾಹರಣೆಗಳೂ ಉಂಟು.

ನಾವು ಮಾತನಾಡುವ ಶೈಲಿ ಕಂಡು ಹಳ್ಳಿ ಗುಗ್ಗು ಎಂದುಕೊಂಡು ಯಾಮಾರಿಸುವವರೂ ಇಲ್ಲಿದ್ದಾರೆ. ಮೂರು ದಿನಕ್ಕೆ ಕೆಟ್ಟು ಹೋಗುವ 50 ರೂ ವಾಚ್‌ಗೆ ಇಲ್ಲಿನ ವ್ಯಾಪಾರಿಗಳು ಆರಂಭದಲ್ಲಿ ಹೇಳುವ ಬೆಲೆ 500 ರೂಪಾಯಿ. ಒಮ್ಮೆ ತೊಳೆದರೆ ಬಣ್ಣ ಹೋಗುವ 200 ರೂಪಾಯಿ ಜೀನ್ಸ್‌ಗೆ 800 ರೂಪಾಯಿ. ಮೋಸ ಹೋಗುವವರು ಇದ್ದರೆ ಮೋಸ ಮಾಡುವವರೂ ಇರುತ್ತಾರೆ ಎಂಬುದಕ್ಕೆ ಸಾಕ್ಷಿಯಂತೆ ಕಾಣುವ ಮೆಜೆಸ್ಟಿಕ್ ಕನಸುಗಳನ್ನು ಬಿತ್ತುವ ಕೇಂದ್ರವೂ ಹೌದು. ನಾಮಹಾಕುವವರು ಎಲ್ಲಾ ಕಡೆ ಇರುತ್ತಾರೆ. ಆದರೆ ಮೆಜೆಸ್ಟಿಕ್‌ನಲ್ಲಿ ಯಾವುದು ಅಸಲಿ, ಯಾವುದು ನಕಲಿ ಎಂಬುದೇ ಅರ್ಥವಾಗುವುದಿಲ್ಲ.

ಆದರೂ ಈ ಮೆಜೆಸ್ಟಿಕ್‌ಗೆ ಏನೋ ಒಂಥರಾ ಚುಂಬಕ ಶಕ್ತಿ ಇದೆ. ಏನೋ ಆಕರ್ಷಣೆ ಇದೆ. ಈ ನಗರಿಯನ್ನು ಕಟ್ಟಿದ ಕೆಂಪೇಗೌಡನಿಗೆ ಇದೆಲ್ಲಾ ಗೊತ್ತಿತ್ತಾ? 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT