ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಲಾರ ಜಾತ್ರೆ: 25ರೊಳಗೆ ಸಿದ್ಧತೆ ಪೂರ್ಣಗೊಳಿಸಿ

Last Updated 19 ಜನವರಿ 2012, 5:50 IST
ಅಕ್ಷರ ಗಾತ್ರ

ಹೂವಿನಹಡಗಲಿ: ಸುಪ್ರಸಿದ್ಧ  ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವಕ್ಕೆ  ಬರುವ ಭಕ್ತಾದಿಗಳಿಗೆ ಅನುಕೂಲತೆಗಾಗಿ ಕಲ್ಪಿಸುವ ಮೂಲ ಸೌಕರ್ಯಗಳನ್ನು ಇದೇ 25ರೊಳಗೆ ಸಿದ್ಧಗೊಳಿಸುವಂತೆ ಜಿಲ್ಲಾಧಿಕಾರಿ ಆದಿತ್ಯ ಅಮ್ಲಾನ್ ಬಿಸ್ವಾಸ್ ಅಧಿಕಾರಿಗಳಿಗೆ ಆದೇಶಿಸಿದರು.

ಮೈಲಾರ ಗ್ರಾಮದಲ್ಲಿ ಇತ್ತೀಚೆಗೆ ಜರುಗಿದ ಜಾತ್ರಾ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ವರ್ಷ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ  ಆಗಮಿಸುವ ನಿರೀಕ್ಷೆ ಇರುವುದರಿಂದ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ, ಭದ್ರತೆ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಲ್ಪಿಸಬೇಕಾಗಿದೆ. ರಸ್ತೆ, ಜನಾರೋಗ್ಯ, ನೈರ್ಮಲ್ಯ , ವಿದ್ಯುತ್ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳ ಸಿದ್ಧತಾ ಕಾರ್ಯಗಳನ್ನು ಇದೇ 25ರೊಳಗೆ ಪೂರ್ಣಗೊಳಿಸಬೇಕು ಈ ಕುರಿತು ಮರುಪರಿಶೀಲನಾ ಸಭೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಲಕ್ಷೋಪಲಕ್ಷ ಜನ
ಸೇರುವ ಈ  ಜಾತೆಯ ನಂತರ  ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಉಂಟಾಗುತ್ತದೆ ಮತ್ತು ಸೊಳ್ಳೆಗಳ ಕಾಟ ವಿಪರೀತವಾಗಿರುತ್ತದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಾಗ ಅದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಜಾತ್ರೆಯ ನಂತರವೂ ತಾತ್ಕಾಲಿಕ ಆಸ್ಪತ್ರೆಯನ್ನು ಮುಂದುವರಿಸಿ ಮತ್ತು ಗ್ರಾಮದಲ್ಲಿ ಶುಚಿತ್ವ ಕಾಪಾಡಲು ಅಗತ್ಯವಾದ ಬ್ಲೀಚಿಂಗ್ ಪೌಡರ್, ಫಿನಾಯಿಲ್ ಹೆಚ್ಚಿನ ಪ್ರಮಾಣದಲ್ಲಿ ಸಿಂಪಡಿಸುವಂತೆ ಸೂಚಿಸಿದರು.

ಜಾತ್ರೆಯ ನಂತರ ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತೆ ವಹಿಸಿ ಸೊಳ್ಳೆಗಳ ನಿಯಂತ್ರಣಕ್ಕೆ ಜಾತ್ರೆಯ ನಂತರವೂ ಫಾಗಿಂಗ್ ಮುಂದುವರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು ತಾತ್ಕಾಲಿಕ ಕಿರು ನೀರು ಯೋಜನೆಗಳನ್ನು ಪ್ರತಿ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ  ಆರಂಭಿಸುವಂತೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದರು.

ಜಾತ್ರಾ ನಡೆಯುವ ವೇಳೆ ಹೊಳಲು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ಮೈಲಾರದಲ್ಲಿ ಕರ್ತವ್ಯ ನಿರತರಿದ್ದಾಗ ಹೊಳಲು ಆಸ್ಪತ್ರೆಗೆ ಬರುವ ಹೆರಿಗೆ ಹಾಗೂ ತುರ್ತು ಚಿಕಿತ್ಸಾ ಸೇವೆ ಲಭ್ಯವಿರುವುದಿಲ್ಲ ಎಂದು ಜಿ.ಪಂ. ಸದಸ್ಯೆ ಶೋಭಾ ಬೆಂಡಿಗೇರಿ ಸಭೆಯ ಗಮನಕ್ಕೆ ತಂದರು.

ಮೈಲಾರ ಜಾತ್ರೆಗೆ ಅಗತ್ಯವಿರುವ ತಜ್ಞವೈದ್ಯರನ್ನು ಬಳ್ಳಾರಿಯ ವಿಮ್ಸನಿಂದಲೂ ನಿಯೋಜನೆ ಮಾಡಲಾಗು ವುದು. ಹೊಳಲು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯನ್ನು ಜಾತ್ರೆಗೆ ಬಳಸಿಕೊಳ್ಳದೇ ಎಂದಿನಂತೆ ತಮ್ಮ ಆಸ್ಪತ್ರೆಯಲ್ಲಿಯೇ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.

ಜಾತ್ರಾ ಸಂದರ್ಭದಲ್ಲಿ  ಉಂಟಾಗುವ ಅಗ್ನಿ ಅನಾಹುತ ತಪ್ಪಿಸಲು ಪೂರ್ವಭಾವಿಯಾಗಿ 4 ಅಗ್ನಿಶಾಮಕ ವಾಹನಗಳನ್ನು 7 ದಿನಗಳ ಕಾಲ ಗ್ರಾಮದಲ್ಲಿ  ನಿಲ್ಲಿಸುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಗ್ನಿಶಾಮಕ ಸಿಬ್ಬಂದಿಗೆ ತಿಳಿಸಿದರು.

ಜಾತೆಯ ದಿನಗಳಲ್ಲಿ  ನೈರ್ಮಲ್ಯ ಕಾಪಾಡಲು ಅಗತ್ಯ ರಾಸಾಯನಿಕ ಪೂರೈಕೆಯ ಜೊತೆಗೆ ಮೂಲಸೌಕರ್ಯಗಳ ಅಭಿವೃದ್ಧಿ ಪಡಿಸಲು 2 ಲಕ್ಷ ರೂಪಾಯಿಗಳನ್ನು ಕಡ್ಡಾಯ ವಾಗಿ ನೀಡುವಂತೆ  ಹರಿಹರ ಪಾಲಿಫೈಬರ್ಸ್‌ನ ಅಧಿಕಾರಿಗಳಿಗೆ ಸೂಚಿಸಿದರು.

ನಿರಂತರ ವಿದ್ಯುತ್ ಪೂರೈಕೆ: ಜಾತ್ರೆಯ ಮೂರು ದಿನಗಳಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಹೆಚ್ಚುವರಿ ವಿದ್ಯುತ್ ಪರಿವರ್ತಕ  ಹಾಗೂ ಅವಶ್ಯವಿದ್ದರೆ ವಿದ್ಯುತ್ ಲೈನ್ ದುರಸ್ತಿಪಡಿಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸಲಾಯಿತು.

ಜಾತ್ರೆಗೆ ಆಗಮಿಸುವ ಭಕ್ತರಿಗೆ ಅನುಕೂಲವಾಗುವಂತೆ ದಾವಣಗೆರೆ, ಹಾವೇರಿ, ಗದಗ, ಹೊಸಪೇಟೆ ವಿಭಾಗಗಳಿಂದ ಹೆಚ್ಚುವರಿಯಾಗಿ ಜಾತ್ರಾ ವಿಶೇಷ ಬಸ್ ವ್ಯವಸ್ಥೆ ಮಾಡುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಗ್ರಾಮದಲ್ಲಿ ಜಾತ್ರೆಯಿಂದ ಉಂಟಾಗುವ ಸಂಚಾರ ದಟ್ಟಣೆ ತಪ್ಪಿಸಲು ತಾತ್ಕಾಲಿಕ ಬೈಪಾಸ್ ರಸ್ತೆಯನ್ನು ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.

ಹೂವಿನ ಹಡಗಲಿ ಶಾಸಕ ಚಂದ್ರಾ ನಾಯ್ಕ ಮಾತನಾಡಿ ಮೈಲಾರ- ಕುರುವತ್ತಿ ಜಾತ್ರೆಗೆ ಬರುವ ಭಕ್ತಾದಿಗಳ ಅನುಕೂಲತೆಗಾಗಿ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಬಿಡಿಸಲು ಜಲಸಂಪನ್ಮೂಲ ಸಚಿವರೊಂದಿಗೆ ಮಾತನಾಡಿದ್ದೆೀನೆ ಜಾತ್ರೆಯ ಪೂರ್ವದಲ್ಲಿ ನದಿಯಲ್ಲಿ ನೀರು ಹರಿಸಲು ಕ್ರಮ ಕೈಗೊಂಡಿರುವುದಾಗಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರ ಗುಪ್ತ,  ಸಹಾಯಕ ಆಯುಕ್ತ ಅಶೋಕ, ತಹಶೀಲ್ದಾರ್ ಬಸವರಾಜ ಸೋಮಣ್ಣನವರ, ಧರ್ಮಕರ್ತರಾದ ವೆಂಕಪ್ಪಯ್ಯ ಒಡೆಯರ್, ತಾ.ಪಂ.ಅಧ್ಯಕ್ಷ ಬಿ.ಹುಲುಗಪ್ಪ , ಮಾಜಿ ಶಾಸಕ ಶಂಕರಗೌಡ ಪಾಟೀಲ, ಜಿ.ಪಂ. ಸದಸ್ಯ ವಸಂತ,  ಡಿ.ವೈ.ಎಸ್.ಪಿ. ಡಿ.ನಾಗರಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚೋರನೂರು ಕೊಟ್ರಪ್ಪ, ಸಿ.ಪಿ.ಐ. ಶ್ರೀಕಾಂತ ಕಟ್ಟಿಮನಿ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಸ್.ಆರ್.ಚವ್ಹಾಣ್,  ಕಾರ್ಯ ನಿರ್ವಾಹಕ ಅಧಿಕಾರಿ ಅರವಿಂದ ಸುತಗುಂಡಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಿ. ಮೇಘನಾಯ್ಕ ಉಪಸ್ಥಿತರಿದ್ದರು.

ಸಹಾಯಕ ಆಯುಕ್ತ ಅಶೋಕ ಸ್ವಾಗತಿಸಿದರು. ತಹಸೀಲ್ದಾರ ಬಸವರಾಜ ಸೋಮಣ್ಣನವರ ಕಾರ್ಯಕ್ರಮ ನಿರ್ವಹಿಸಿದರು.

ಸುಗ್ಗೇನಹಳ್ಳಿ: ಪಡಿತರ ವಿತರಣೆ ಬಂದ್

ಕಂಪ್ಲಿ: ಕಡು ಬಡವರಿಗೆ, ಕೃಷಿ ಕೂಲಿ ಕಾರ್ಮಿಕರಿಗೆ ಬಿಪಿಎಲ್ ಪಡಿತರ ಕಾರ್ಡ್ ನೀಡದೆ ಇರುವುದನ್ನು ವಿರೋಧಿಸಿ ಮತ್ತು ಗ್ರಾಮದ ಸ್ಥಿತಿವಂತರಿಗೆ ಬಿಪಿಎಲ್ ಕಾರ್ಡ್ ವಿತರಿಸಿರುವುದನ್ನು ಖಂಡಿಸಿ ಮಂಗಳವಾರದಿಂದ ಪಡಿತರ ವಿತರಣೆ ಮಾಡದಂತೆ ಗ್ರಾಮಸ್ಥರೇ ತಡೆ ಹಿಡಿದಿರುವ ಘಟನೆ ಸುಗ್ಗೇನಹಳ್ಳಿಯಲ್ಲಿ ಜರುಗಿದೆ.

ಕೆಲ ತಿಂಗಳ ಹಿಂದೆ ಗ್ರಾಮದಲ್ಲಿ ಜರುಗಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಉಳ್ಳವರಿಗೆ, ಭೂಮಿ ಇದ್ದವರಿಗೆ ಬಿಪಿಎಲ್ ಕಾರ್ಡ್ ನೀಡಿರುವುದನ್ನು ರದ್ದುಗೊಳಿಸು ವಂತೆ ತಹಸೀಲ್ದಾರರನ್ನು ಒತ್ತಾಯಿಸಿದ್ದರು.

ಇತ್ತೀಚಿಗೆ ಗ್ರಾಮ ಲೆಕ್ಕಿಗರು ಮತ್ತು ಆಹಾರ ನಿರೀಕ್ಷಕರು ಗ್ರಾಮದ ಕಡುಬಡವರನ್ನು, ಕೃಷಿ ಕೂಲಿ ಕಾರ್ಮಿಕರ ಸಮೀಕ್ಷೆ ನಡೆಸಿದ್ದರೂ ಬಿಪಿಎಲ್ ಕಾರ್ಡ್ ಲಭ್ಯವಾಗಿಲ್ಲ.

ಇದರಿಂದ ಅಂಗಡಿಗಳಲ್ಲಿ ದುಪ್ಪಟ್ಟು ಹಣ ನೀಡಿ ಅಕ್ಕಿ ಕೊಂಡುಕೊಳ್ಳಬೇಕಾಗಿದೆ. ಈ ಅನ್ಯಾಯವನ್ನು ಸರಿಪಡಿಸಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪಡಿತರ ವಿತರಣೆ ಮಾಡುವುದು ಬೇಡ ಎಂದು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗ್ರಾ.ಪಂ ಸದಸ್ಯ ಬಿ. ಕರಿಯಪ್ಪ ಬುಧವಾರ `ಪ್ರಜಾವಾಣಿ~ಗೆ ತಿಳಿಸಿದರು.

ಈ ಅನ್ಯಾಯ ಸರಿಪಡಿಸದಿದ್ದಲ್ಲಿ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು. ನಮ್ಮ ಹೋರಾಟ ಸ್ಥಿತಿವಂತರ ಬಳಿ ಇರುವ ಬಿಪಿಎಲ್ ಕಾರ್ಡ್ ರದ್ದುಗೊಳಿಸಿ ಕಡುಬಡವರಿಗೆ, ಕೃಷಿಕೂಲಿ ಕಾರ್ಮಿಕರಿಗೆ ನೀಡಲಿ ಎನ್ನುವುದು ಬಿಟ್ಟರೆ ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT