ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ವಿವಿ ಜಾಲತಾಣ: ಭವಿಷ್ಯದ ಮಾಹಿತಿ ಕಣಜ

Last Updated 15 ಜನವರಿ 2012, 19:30 IST
ಅಕ್ಷರ ಗಾತ್ರ

ವಿಶ್ವವಿದ್ಯಾಲಯಗಳು ಪದವಿ, ಉನ್ನತ ಶಿಕ್ಷಣ  ಹಾಗೂ ಸಂಶೋಧನೆಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ರಾಜ್ಯದ ಮೊದಲ ವಿವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೈಸೂರು ವಿಶ್ವವಿದ್ಯಾಲಯ ಸಾಬೀತು ಪಡಿಸಿದೆ.

ಉನ್ನತ ಶಿಕ್ಷಣದ ಆಯ್ಕೆ, ಶೈಕ್ಷಣಿಕ ಸಾಲ, ಸ್ಪರ್ಧಾತ್ಮಕ ಪರೀಕ್ಷೆಗಳು, ದೇಶ-ವಿದೇಶಗಳಲ್ಲಿರುವ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು-ವಿಶ್ವವಿದ್ಯಾಲಯಗಳು, ಆನ್‌ಲೈನ್ ಶಿಕ್ಷಣ, ದೂರ ಶಿಕ್ಷಣ, ಸಾಮಾನ್ಯ ಜ್ಞಾನ - ಹೀಗೆ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಹತ್ತು-ಹಲವು ವಿಷಯಗಳನ್ನು ಮೈಸೂರು ವಿವಿ ತನ್ನ ವೆಬ್‌ಸೈಟ್‌ನಲ್ಲಿ ಅಳವಡಿಸುವ ಮೂಲಕ ವಿದ್ಯಾರ್ಥಿಗಳ ಭವಿತವ್ಯದ ಬೆಳಕಿಗೆ ಬುನಾದಿ ಹಾಕುವ ಕೆಲಸ ಮಾಡಿದೆ.

ಮೈಸೂರು ವಿವಿ ವೆಬ್‌ಸೈಟ್ www.uni-mysore.ac.in  ಗೆ ಭೇಟಿ ನೀಡಿದರೆ ಮುಖಪುಟದಲ್ಲಿ `ಭವಿಷ್ಯದ ಮಾಹಿತಿ ಸೇವಾ ಪೋರ್ಟಲ್~ (Career Information Service Portal)  ಎಂಬ ಲಿಂಕ್ ಸಿಗುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಬೆರಳ ತುದಿಯಲ್ಲಿ ಎಲ್ಲ ಮಾಹಿತಿ ಲಭ್ಯವಾಗುತ್ತದೆ.

ಪೋರ್ಟ್‌ಲ್‌ನಲ್ಲಿ ಏನಿದೆ: ಮಾಹಿತಿ ಸೇವಾ ಪೋರ್ಟಲ್‌ಗೆ ಹೋದರೆ ಭವಿಷ್ಯದ ಮಾಹಿತಿ, ಸ್ಪರ್ಧಾತ್ಮಕ ಪರೀಕ್ಷೆಗಳು, ಭವಿಷ್ಯದ ಹುಡುಕಾಟ (Career Search), ಗ್ರಂಥಾಲಯ, ಯಾವ ವೆಬ್‌ಸೈಟ್‌ನಿಂದ ಏನನ್ನು ಪಡೆಯಬಹುದು ಎಂಬ ವಿವರಗಳನ್ನು ಒಳಗೊಂಡ ಐದು ವಿಭಾಗಗಳು ನಿಮ್ಮನ್ನು ಸ್ವಾಗತಿಸುತ್ತವೆ.

ಆಯ್ಕೆ ಕ್ಷೇತ್ರ: ಕಾನೂನು, ವೈದ್ಯಕೀಯ, ನರ್ಸಿಂಗ್, ಎಂಜಿನಿಯರಿಂಗ್, ಜಾಹಿರಾತು, ನೃತ್ಯ, ಜೈವಿಕ ತಂತ್ರಜ್ಞಾನ, ಚಲನಚಿತ್ರ ನಿರ್ಮಾಣ, ಪ್ರವಾಸೋದ್ಯಮ ಸೇರಿದಂತೆ 44 ವಿವಿಧ ಕ್ಷೇತ್ರಗಳ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿಗಳು ತಾವು ಸೇರಬಯಸುವ ಕೋರ್ಸ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು.

ಉದಾಹರಣೆಗೆ ನರ್ಸಿಂಗ್ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಅದರ ಮೇಲೆ ಕ್ಲಿಕ್ ಮಾಡಿದರೆ, ಸಂಬಂಧಿಸಿದ ವಿಶ್ವವಿದ್ಯಾನಿಲಯ, ಕಾಲೇಜು, ಶಿಕ್ಷಣ ಸಂಸ್ಥೆಗಳ ವಿವರವಾದ ಮಾಹಿತಿ ಪರದೆಯ ಮೇಲೆ ಅನಾವರಣಗೊಳ್ಳುತ್ತದೆ. ಅದೇ ರೀತಿ ವಿವಿಧ ಕ್ಷೇತ್ರ ಹಾಗೂ ವಿದೇಶಗಳಲ್ಲಿ ಲಭ್ಯವಿರುವ ಉದ್ಯೋಗಾವಕಾಶ, ಕೌನ್ಸೆಲಿಂಗ್‌ಗೆ ಸಂಬಂಧಿಸಿದ ವಿವರಗಳೂ ಲಭ್ಯ ಇವೆ.

ಸ್ವ-ವಿವರ (ಬಯೋಡಾಟ): ಯಾವುದೇ ಕಂಪೆನಿಯಲ್ಲಿ ಉದ್ಯೋಗ ಪಡೆಯಲು ವೃತ್ತಿಪರ ಕೋರ್ಸ್ ಅಥವಾ ನಿಗದಿಗೊಳಿಸಿದ ವಿದ್ಯಾರ್ಹತೆ ಎಷ್ಟು ಮುಖ್ಯವೋ ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸಲು ಸ್ವ-ವಿವರ ಸಲ್ಲಿಸುವುದು ಅಷ್ಟೇ ಮುಖ್ಯ.

ಆದರೆ, ನೋಡಿದ ತಕ್ಷಣವೇ ಗಮನ ಸೆಳೆಯುವಂತಹ ಸ್ವ-ವಿವರ ಬರೆಯುವುದು ಒಂದು ಕಲೆ. ಹಲವಾರು ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಈ ಬಗ್ಗೆ ಗೊತ್ತಿರುವುದಿಲ್ಲ. ಆದರೆ, ಮೈಸೂರು ವಿವಿ ಉತ್ತಮ ಸ್ವ-ವಿವರಗಳ ಬಗ್ಗೆ ಮಾಹಿತಿ ನೀಡುವ ವೆಬ್‌ಸೈಟ್‌ಗಳನ್ನು ಪರಿಚಯಿಸಿದೆ.

ಶಿಕ್ಷಣ ಸಾಲ: ಉನ್ನತ ಶಿಕ್ಷಣ ದುಬಾರಿ ಎಂಬ ಮಾತು ಇಂದು ನಿನ್ನೆಯದಲ್ಲ. ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ನೆರವಾಗಲು ಇಂದು ಹಲವಾರು ಬ್ಯಾಂಕುಗಳು ಶಿಕ್ಷಣ ಸಾಲ ನೀಡುತ್ತಿವೆ.
 
ಆದರೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಯಾವ ಬ್ಯಾಂಕುಗಳು ಸಾಲ ನೀಡುತ್ತವೆ? ಬಡ್ಡಿ ದರ ಎಷ್ಟು? ಯಾವೆಲ್ಲ ಕೋರ್ಸ್‌ಗಳಿಗೆ ಸಾಲ ನೀಡುತ್ತವೆ ಎಂಬ ತಿಳಿವಳಿಕೆ ಅಷ್ಟಾಗಿ ಇರುವುದಿಲ್ಲ. ಇದಕ್ಕೆಂದೇ ಸ್ಟೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಸೇರಿದಂತೆ 25 ಪ್ರಮುಖ ಬ್ಯಾಂಕುಗಳ ವೆಬ್ ವಿಳಾಸ ನೀಡಲಾಗಿದೆ.
ಆನ್‌ಲೈನ್ ಶಿಕ್ಷಣ: ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯೊಂದಿಗೆ ಇಂದು ಆನ್‌ಲೈನ್ ಶಿಕ್ಷಣ ಪದ್ಧತಿಯೂ ಹೆಚ್ಚು ಪ್ರಚಲಿತದಲ್ಲಿದೆ. ಕಂಪ್ಯೂಟರ್, ಕಲೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜ ವಿಜ್ಞಾನ, ಶಿಕ್ಷಣ, ಬಿಸಿನೆಸ್ ಮ್ಯಾನೇಜ್‌ಮೆಂಟ್, ಹೆಲ್ತ್ ಕೇರ್ ಸರ್ವಿಸ್ ಸೇರಿದಂತೆ ಹಲವಾರು ವಿಷಯಗಳಲ್ಲಿ ಆನ್‌ಲೈನ್ ಶಿಕ್ಷಣ ಪಡೆಯಬಹುದು.

ದೂರ ಶಿಕ್ಷಣ: ದೂರ ಶಿಕ್ಷಣವೂ ಇಂದು ಮನೆ ಮಾತಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಕುವೆಂಪು ವಿವಿ, ಧಾರವಾಡ ವಿವಿ, ಇಂದಿರಾಗಾಂಧಿ ಮುಕ್ತ ವಿವಿ ಸೇರಿದಂತೆ ದೇಶದ ಹಲವಾರು ವಿಶ್ವವಿದ್ಯಾನಿಲಯಗಳು ದೂರ ಶಿಕ್ಷಣ ನೀಡುತ್ತಿವೆ.

ಈ ನಿಟ್ಟಿನಲ್ಲೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ಮೈಸೂರು ವಿವಿ, ಕಂಪ್ಯೂಟರ್, ವಾಣಿಜ್ಯ, ವಿಜ್ಞಾನ, ಕಲೆ, ಪತ್ರಿಕೋದ್ಯಮ, ಶಿಕ್ಷಣ, ಎಂಜಿನಿಯರಿಂಗ್, ವ್ಯವಹಾರ ಅಧ್ಯಯನ, ಸರ್ಟಿಫಿಕೇಟ್ ಕೋರ್ಸ್ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪದವಿ ನೀಡುವ ಶಿಕ್ಷಣ ಸಂಸ್ಥೆ, ವಿವಿಗಳ ಬಗ್ಗೆ ಸವಿವರ ಮಾಹಿತಿ ನೀಡಿದೆ.

ಭಾರತದ ಬಗ್ಗೆ ಒಂದಿಷ್ಟು: ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶದ ಬಗ್ಗೆ ಹತ್ತು ಹಲವು ಮಾಹಿತಿಗಳೊಂದಿಗೆ ಭಾರತದ ಬಗ್ಗೆಯೂ (ಓ್ಞಟಡಿ ಐ್ಞಜಿ) ಅರಿತುಕೊಳ್ಳಲು ಸಾಕಷ್ಟು ಮಾಹಿತಿ ಒದಗಿಸಲಾಗಿದೆ.

ವಿವಿಧ ರಾಜ್ಯ, ಜಿಲ್ಲೆಗಳು, ರಾಷ್ಟ್ರೀಯ ಚಿಹ್ನೆಗಳು, ಸಂಸ್ಕೃತಿ ಮತ್ತು ಪರಂಪರೆ, ಸರ್ಕಾರ, ಭಾರತದ ಸಂವಿಧಾನ, ವ್ಯಕ್ತಿ-ವಿಶೇಷ, ಸಂಸತ್ತು, ಕಾಯ್ದೆ, ಕಾನೂನು, ಅಧಿನಿಯಮಗಳು, ವ್ಯವಹಾರ, ವಿವಿಧ ವೆಬ್‌ಸೈಟ್‌ಗಳು, ನಕಾಶೆ ಹೀಗೆ ಭವ್ಯ ಭಾರತದ ಬಗ್ಗೆ ಮಾಹಿತಿ ನೀಡುವ ಅನೇಕ ವೆಬ್‌ಸೈಟ್‌ಗಳ ಲಿಂಕ್‌ಗಳನ್ನು ಈ ಪೋರ್ಟಲ್ ಒಳಗೊಂಡಿದೆ.

ಇವುಗಳ ಜೊತೆಗೆ ರಾಜ್ಯ, ದೇಶ-ವಿದೇಶಗಳ ವೃತ್ತಪತ್ರಿಕೆ, ನಿಯತಕಾಲಿಕೆ, ಜರ್ನಲ್ಸ್, ಉಚಿತ ಆನ್‌ಲೈನ್ ಗ್ರಂಥಾಲಯಗಳ ವೆಬ್ ಲಿಂಕ್‌ಗಳನ್ನೂ ಅಳವಡಿಸಲಾಗಿದೆ. ಜನನ, ಮರಣ, ರಹವಾಸಿ, ಜಾತಿ ಪ್ರಮಾಣಪತ್ರಗಳನ್ನು ಹೇಗೆ ಪಡೆದುಕೊಳ್ಳಬೇಕು ಎಂಬ ಮಾಹಿತಿಯನ್ನೂ ತಿಳಿದುಕೊಳ್ಳಬಹುದು. ರೈಲು, ವಿಮಾನ ಪ್ರಯಾಣಕ್ಕೆ ಮೈಸೂರು ವಿವಿ ವೆಬ್‌ಸೈಟ್‌ನಿಂದಲೇ ಸೀಟು ಕಾಯ್ದಿರಿಸಬಹುದು! ಹಾಗೆಯೇ ಆದಾಯ ತೆರಿಗೆಯನ್ನೂ ಪಾವತಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT