ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಟ್ಟ ಮೊದಲ ಕನ್ನಡ ಜಾತ್ರೆಗೆ ಕ್ಷಣಗಣನೆ

Last Updated 17 ಸೆಪ್ಟೆಂಬರ್ 2011, 8:25 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ತಾಲ್ಲೂಕು ಐತಿಹಾಸಿಕ ಹಿನ್ನೆಲೆ ಹೊಂದಿದ್ದರೂ ಇದೇ ಪ್ರಥಮ ಬಾರಿಗೆ ಪಟ್ಟಣದಲ್ಲಿ `ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೆಳನ~ ಆಯೋಜಿಸಲಾಗಿದೆ.

1943ರಲ್ಲಿ ಕರ್ನಾಟಕ ಸಂಘ ಸ್ಥಾಪಿಸಿದ ಶ್ರೀನಿವಾಸ ಅಯ್ಯಂಗಾರ್ ಸಾಹಿತ್ಯಾತ್ಮಕ್ಕೆ ಕೆಲಸಕ್ಕೆ ಚಾಲನೆ ನೀಡಿದರು. ತಾಲ್ಲೂಕು ಸಾಹಿತ್ಯ ಪರಿಷತ್ತು ಪ್ರಥಮ ಅಧ್ಯಕ್ಷರಾಗಿ ಕೆಲಸ ಮಾಡಿದರು. 

ನಂತರ ಸಿ.ಆರ್. ನಂಜುಂಡಯ್ಯ, ಎ.ಆರ್. ಪುಟ್ಟರಾಜು, ಎಚ್. ಎಂ. ಗೌಡಯ್ಯ, ಎಸ್.ಎನ್. ಅಶೋಕಕುಮಾರ್, ಮಾದಿಹಳ್ಳಿ ವೆಂಕಟೇಶ್, ಎಂ. ಬ್ರಹ್ಮಪಾಲ್ ಜೈನ್, ಪ್ರಸ್ತುತ ಪ್ರೊ. ಎಚ್.           ಸಿದ್ದೇಗೌಡ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸಕ್ಕೆ ಚಾಲನೆ ನೀಡಲಾಯಿತಾದರೂ ಇದುವರೆಗೆ ತಾ.ಸಾಹಿತ್ಯ ಸಮ್ಮೇಳನ ಆಯೋಜಿಸಿರಲಿಲ್ಲ.

1966ರಲ್ಲಿ ಶ್ರವಣಬೆಳಗೊಳದಲ್ಲಿ `ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ~ ಆಯೋಜಿಸಲಾಗಿತ್ತು. ಆ.ನೆ. ಉಪಾದೆ ಸಮ್ಮೇಳನಾಧ್ಯಕ್ಷರಾಗಿದ್ದರು. 1971ರಲ್ಲಿ ಪಟ್ಟಣದಲ್ಲಿ `ಜಿಲ್ಲಾ ಸಾಹಿತ್ಯ ಸಮ್ಮೇಳನ~ ನಡೆಯಿತು. `ಗೊರೂರು ರಾಮಸ್ವಾಮಿ ಅಯ್ಯಂಗಾರ್~ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದರು. ಅದೇ ರೀತಿ 2002ರಲ್ಲಿ ಶ್ರವಣಬೆಳಗೊಳದಲ್ಲಿ `ಜಿಲ್ಲಾ ಸಮ್ಮೇಳನ~ ನಡೆಯಿತು. ಮಂಗಳಾಸತ್ಯನ್ ಆಯ್ಕೆಯಾಗಿದ್ದರು.

ಅಖಿಲ ಭಾರತ ಸಮ್ಮೇಳನ, ಎರಡು ಜಿಲ್ಲಾ ಸಮ್ಮೇಳನ ನಡೆದಿದ್ದರೂ ತಾಲ್ಲೂಕು ಸಮ್ಮೇಳನ ಮಾತ್ರ ನಡೆದಿರಲಿಲ್ಲ.  ಈಗ ಕಾಲ ಕೂಡಿಬಂದಿದೆ. ಪ್ರಥಮ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸಲು ಸಿದ್ಧತೆ ನಡೆದಿದೆ ಎನ್ನುತ್ತಾರೆ ಹಾಲಿ ಅಧ್ಯಕ್ಷ ಪ್ರೊ. ಎಚ್. ಸಿದ್ದೇಗೌಡ ಮತ್ತು ನಿಕಟಪೂರ್ವ ಅಧ್ಯಕ್ಷ ಎಚ್.ಎಂ. ಗೌಡಯ್ಯ.
ತವರೂರಿನ ಡಾ. ಆರ್.ಕೆ. ನಲ್ಲೂರು ಪ್ರಸಾದ್ ಅವರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಈಚೆಗೆ ಶ್ರವಣಬೆಳಗೊಳದಲ್ಲಿ `ಪ್ರಾಚ್ಯ ಸಾಹಿತ್ಯ ಸಮ್ಮೇಳನ~ ನಡೆಸಲಾಯಿತು. ಅಂದಿನಿಂದಲೂ ಪಟ್ಟಣದಲ್ಲಿ ~ತಾಲ್ಲೂಕು ಪ್ರಥಮ ಸಮ್ಮೇಳನ~ದ ಬಗ್ಗೆ ಪ್ರಸ್ತಾಪವಾಗಿತ್ತು. ನಂತರ ದಿನಾಂಕ ನಿಗದಿಪಡಿಸಿ ಸಮ್ಮೇಳನ ಆಯೋಜಿಸುವ ತೀರ್ಮಾನ ಕೈಗೊಳ್ಳಲಾಯಿತು.

ಪ್ರಥಮ ಸಮ್ಮೇಳನ ಐತಿಹಾಸಿಕವಾಗಿರಬೇಕು  ಎಂಬ ದೃಷ್ಟಿಯಿಂದ ಒಂದು ತಿಂಗಳಿಂದ ಸಾಹಿತ್ಯ ಸಮ್ಮೇಳನಕ್ಕೆ ತಾಲ್ಲೂಕು ಆಡಳಿತ ಸಾಕಷ್ಟು ಸಿದ್ಧತೆ ಮಾಡಿಕೊಂಡು ಸಮ್ಮೇಳನದ ಯಶಸಿಗೆ ದುಡಿಯುತ್ತಿದೆ. ಸಮ್ಮೇಳನದಲ್ಲಿ ನಿಕಟ ಪೂರ್ವ ಅಧ್ಯಕ್ಷರನ್ನು ಅಭಿನಂದಿಸಲಾಗುವುದು ಎಂದು ಕಸಾಪ ಅಧ್ಯಕ್ಷ ಪ್ರೊ. ಎಚ್. ಸಿದ್ದೇಗೌಡ ತಿಳಿಸಿದರು.

ಪುನರೂರು ಆಗಮನ
ಸೆ. 29, 30 ರಂದು ಉಡುಪಿಯಲ್ಲಿ ~ಕನ್ನಡ ಸಾಹಿತ್ಯ ಪರಿಷತ್ತಿನ ಸಾಮಾನ್ಯ ಸಭೆ~ ಏರ್ಪಡಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್ ಶುಕ್ರವಾರ ಇಲ್ಲಿ ತಿಳಿಸಿದರು. ಮಾಧ್ಯಮ ಕೇಂದ್ರ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸೆ. 29 ರಂದು ಇದೇ ಪ್ರಥಮ ಬಾರಿಗೆ ರಾಜ್ಯದ ಎಲ್ಲಾ 176 ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಿಗೆ ಮತ್ತು ಬೆಂಗಳೂರಿನ 28 ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸಾಹಿತ್ಯ ಘಟಕದ ಅಧ್ಯಕ್ಷರಿಗಾಗಿ ಉಪನ್ಯಾಸ ಏರ್ಪಡಿಸಲಾಗಿದೆ. ಸಾಹಿತ್ಯ ಸಮ್ಮೇಳನವನ್ನು ಹೇಗೆ ಆಯೋಜಿಸಬೇಕು, ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಯಾವ ರೀತಿ ಕಾರ್ಯ ನಿರ್ವಹಿಸಬೇಕು. ಇವೇ ಮೊದಲಾದ ಅಂಶದ ಬಗ್ಗೆ ತಿಳಿಸಿಕೊಡಲಾಗುವುದು. ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಲಿದ್ದಾರೆ ಎಂದರು.

ತಾಲ್ಲೂಕು ಸಮ್ಮೇಳನದ ಸಿದ್ಧತೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ತಾಲ್ಲೂಕಿನ ಜನತೆ, ಸಂಘ, ಸಂಸ್ಥೆಗಳು ಒಂದಾಗಿ ಕನ್ನಡದ ನುಡಿ ಹಬ್ಬವನ್ನು  ತಾಲ್ಲೂಕು ಮಟ್ಟದಲ್ಲಿ ಅದ್ದೂರಿಯಾಗಿ ಆಚರಿಸಲು ಮುಂದಾಗಿದ್ದಾರೆ. ಇಂದೊಂದು ಐತಿಹಾಸಿಕ ಸಮ್ಮೇಳನವಾಗಲಿದೆ. ಸಮ್ಮೇಳನ ಅಚ್ಚುಕಟ್ಟಾಗಿ ನಡೆಯುತ್ತಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ, ಜಿ.ಪಂ. ಸದಸ್ಯೆ ಕುಸುಮ ಬಾಲಕೃಷ್ಣ, ತಹಶೀಲ್ದಾರ್ ಬಿ.ಎನ್. ವರಪ್ರಸಾದರೆಡ್ಡಿ, ಕಸಾಪ ಅಧ್ಯಕ್ಷ ಪ್ರೊ. ಎ್. ಸಿದ್ದೇಗೌಡ, ಸ್ವಾಗತ ಸಮಿತಿ ಸದಸ್ಯ ಪಟೇಲ್ ಮಂಜುನಾಥ್, ಕೋಶಾಧ್ಯಕ್ಷ ಎಂ.ಆರ್. ಅನಿಲ್‌ಕುಮಾರ್ ಹಾಜರಿದ್ದರು.

ದೇಣಿಗೆ: ಸಮ್ಮೇಳನಕ್ಕೆ ಎಚ್‌ಡಿಸಿಸಿ ಬ್ಯಾಂಕ್, ಸಹಕಾರ ಸಂಸ್ಥೆಗಳು ಮತ್ತು ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ವತಿಯಿಂದ 1 ಲಕ್ಷ ರೂ. ದೇಣಿಗೆಯನ್ನು ಕಾರ್ಖಾನೆಯ  ನಿರ್ದೇಶಕ ಸಿ.ಎನ್. ಬಾಲಕೃಷ್ಣ, ಲೆಕ್ಕಾಧಿಕಾರಿ ಕಾಳೇಗೌಡ ಅವರು ರಾಜ್ಯಾಧ್ಯಕ್ಷ ಡಾ. ಆರ್.ಕೆ. ನಲ್ಲೂರು ಪ್ರಸಾದ್ ಅವರಿಗೆ ಶುಕ್ರವಾರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT