ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊರ್ಸಿ ಪದಚ್ಯುತಿ ಹಿನ್ನೆಲೆಯಲ್ಲಿ ಅಮೆರಿಕ ಕೈವಾಡ

ಈಜಿಪ್ಟ್‌ನಲ್ಲಿ ಪ್ರಜಾತಂತ್ರದ ಮೂಲಕ ಆಯ್ಕೆಯಾದ ಮೊದಲ ಸರ್ಕಾರದ ಅಧ್ಯಾಯವೊಂದು ಅಂತ್ಯ ಕಂಡಿದೆ. ಇಲ್ಲಿ ಪ್ರಜಾಸತ್ತೆ ಸ್ಥಾಪನೆಗೆ ನಡೆದ ಮೊದಲ ಯತ್ನ ಒಂದೇ ವರ್ಷದಲ್ಲಿ ವಿಫಲವಾಗಿದೆ. ಹೋಸ್ನಿ ಮುಬಾರಕ್ ಪದಚ್ಯುತಿ ನಂತರ ಪ್ರಜಾತಂತ್ರ ಮಾರ್ಗದಲ್ಲಿ ಆಯ್ಕೆಯಾದ ಮೊದಲ ಅಧ್ಯಕ್ಷ ಮೊಹಮದ್ ಮೊರ್ಸಿ ಹೊಸ ಶಕೆ ಆರಂಭಿಸಬಹುದೆಂದು ನಿರೀಕ್ಷಿಸಲಾಗಿತ್ತು. ಸರ್ವಾಧಿಕಾರಿ ಆಳ್ವಿಕೆಯ ನೋವುಂಡ ಜನತೆಗೆ ಹೊಸ ಆಡಳಿತ ನೆಮ್ಮದಿ ನೀಡಬಲ್ಲದು ಎಂಬ ಆಸೆಗಳು ಗರಿಗೆದರಿದ್ದವು. ಆ ನಿರೀಕ್ಷೆಗಳೆಲ್ಲ ಒಂದೇ ವರ್ಷದಲ್ಲಿಯೇ ಹುಸಿಯಾದವು.

ಅವರನ್ನು ಕ್ಷಿಪ್ರ ಸೇನಾ ಕ್ರಾಂತಿಯಲ್ಲಿ ಪದಚ್ಯುತಗೊಳಿಸಿ, ಗೃಹ ಬಂಧನದಲ್ಲಿ ಇಡಲಾಗಿದೆ. ಈ ಮೊದಲು 2011ರಲ್ಲಿ ಹೋಸ್ನಿ ಕಿತ್ತೊಗೆಯಲು ಮೊರ್ಸಿ ಹುಟ್ಟು ಹಾಕಿದ್ದ ಪ್ರಜಾಕ್ರಾಂತಿಗೆ ಈಗ ಅವರೇ ಬಲಿಯಾಗಿದ್ದಾರೆ. ವರ್ಷ ತುಂಬುವ ಮೊದಲೇ ಮೊರ್ಸಿ ಸರ್ಕಾರ ಪತನವಾಗಲು ಹಲವು ಕಾರಣಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ `ಬದಲಾವಣೆಯ ಸಂತ' ಎಂದು ಬಿಂಬಿಸಿಕೊಂಡಿದ್ದ ಅವರಿಂದ ಜನರು ಬಹಳಷ್ಟು ನಿರೀಕ್ಷಿಸಿದ್ದರು. ಆದರೆ, ನಿರೀಕ್ಷೆಗಳೆಲ್ಲವೂ ಹುಸಿಯಾದವು.

ಹದಗೆಟ್ಟ ದೇಶದ ಆರ್ಥಿಕ ವ್ಯವಸ್ಥೆ ಸುಧಾರಣೆ ಹೊಸ ಆಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಪರಿಹಾರ ಹುಡುಕಲು ಮುಂದಾಗದ ಕಾರಣ ಪರಿಸ್ಥಿತಿ ಹದಗೆಟ್ಟು ಕೈಮೀರಿತು. ಸರ್ಕಾರ ಒತ್ತಡಕ್ಕೆ ಸಿಲುಕಿತು. ಜನರಿಗೆ ಇದು ಅರ್ಥವಾಗಲು ಬಹಳ ಸಮಯ ಬೇಕಾಗಲಿಲ್ಲ. ಅವರು ಸರ್ಕಾರದ ವಿರುದ್ಧ ತಿರುಗಿ ಬಿದ್ದರು. ದಂಗೆಗೆ ಬಹಳ ಸಮಯ ಬೇಕಾಗಲಿಲ್ಲ. ಇದೇ ಅವಕಾಶಕ್ಕಾಗಿ ಕಾದು ಕುಳಿತಿದ್ದ ಸೇನೆ ಜನರೊಂದಿಗೆ ಕೈಜೋಡಿಸಿತು. ಈ ಹೋರಾಟಕ್ಕೆ ಅಮೆರಿಕ ಪರೋಕ್ಷ ಬೆಂಬಲ ನೀಡಿತು. ಎಲ್ಲಕ್ಕಿಂತ ಹೆಚ್ಚಾಗಿ ಮೊರ್ಸಿ ಅಮೆರಿಕಕ್ಕೆ ಸಹ್ಯವಾಗಲಿಲ್ಲ.

ಸಿಸ್ಸಿ ಎಂಬ ಸಮಯ ಸಾಧಕ
ಮೊದ ಮೊದಲು ಸೇನೆಯನ್ನು ಸಂಶಯದಿಂದ ನೋಡುತ್ತಿದ್ದ ಬ್ರದರ್‌ಹುಡ್ ಸಂಘಟನೆ ಹಾಗೂ ಮೊರ್ಸಿ ನಂತರದ ದಿನಗಳಲ್ಲಿ ಅದನ್ನು ನಂಬತೊಡಗಿದರು. ಅದು ಅನಿವಾರ್ಯವೂ ಆಗಿತ್ತು. ಸೇನಾ ಮುಖ್ಯಸ್ಥ ಜನರಲ್ ಅಬೆಲ್ ಫತೇಹ್ ಅಲ್ ಸಿಸ್ಸಿ ಅವರನ್ನು ಅಗತ್ಯಕ್ಕಿಂತ ಹೆಚ್ಚು ನಂಬಿದರು. ಹೊಸ ಅಧ್ಯಕ್ಷರ ವಿಶ್ವಾಸ ಗಿಟ್ಟಿಸಿದ್ದ ಸಿಸ್ಸಿ ರಕ್ಷಣಾ ಸಚಿವರಾಗಿ ಬಡ್ತಿ ಪಡೆದರು. ಸರ್ಕಾರವನ್ನು ದಾರಿ ತಪ್ಪಿಸುತ್ತಲೇ ಬಂದರು. ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಮೊದಲು ಸಲಹೆಗಾರರು ಮತ್ತು ಆಪ್ತರ ಹಿತವಚನಗಳನ್ನು ಅವರು ಕಿವಿಗೆ ಹಾಕಿಕೊಳ್ಳಲಿಲ್ಲ. 

60 ವರ್ಷದ ಮೊರ್ಸಿ ಅಧಿಕಾರ ಸಿಗುತ್ತಲೇ ಸರ್ವಾಧಿಕಾರಿಯಂತೆ ವರ್ತಿಸತೊಡಗಿದರು. ಅವರೆಂದಿಗೂ ಪ್ರಜಾತಂತ್ರವಾದಿಯಾಗಿ ವರ್ತಿಸಲಿಲ್ಲ. ಬದಲಾಗಿ ಇಸ್ಲಾಂ ಆಡಳಿತ ಹೇರಲು ಮುಂದಾದರು.

ಮುಸ್ಲಿಂ ಸಂಘಟನೆ ಬ್ರದರ್ ಹುಡ್ ಕೈಗೊಂಬೆಯಂತೆ ವರ್ತಿಸತೊಡಗಿದ ಅವರು, ಸ್ವತಂತ್ರವಾಗಿ ಒಂದು ಹೆಜ್ಜೆಯನ್ನೂ ಮುಂದಿಡಲಿಲ್ಲ. ತಮ್ಮ 35ವರ್ಷಗಳ ರಾಜಕೀಯ ಜೀವನದಲ್ಲಿ ತಮ್ಮನ್ನು ಬೆಂಬಲಿಸಿದ್ದ ದೊಡ್ಡ ಜನಸಮೂಹವನ್ನು ಕೂಡಾ ಅವರು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಇದೆಲ್ಲ ಸಿಸ್ಸಿ ಮಾರ್ಗದರ್ಶನದ ಫಲ. ಮೇಲ್ನೋಟಕ್ಕೆ ಆಪ್ತರಂತೆ ಕಾಣುತ್ತಿದ್ದ ಸಿಸ್ಸಿ ಒಳಗಿನಿಂದಲೇ ಕತ್ತಿ ಮಸೆಯುತ್ತಿದ್ದರು. ಸರ್ಕಾರವನ್ನು ಉರುಳಿಸುವ ಸಂಚು ಹೆಣೆದಿದ್ದರು. ಅದಕ್ಕೆ ಬೇಕಾದ ವೇದಿಕೆಯನ್ನು ಮೊರ್ಸಿ ಜೊತೆಯಲ್ಲಿ ಇದ್ದುಕೊಂಡೇ ತಯಾರಿ ಮಾಡಿಕೊಂಡು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು. ಆ ಸಂದರ್ಭ ಇಷ್ಟು ಬೇಗ ಬರುತ್ತದೆ ಎಂದು ಸಿಸ್ಸಿ ಭಾವಿಸಿರಲಿಲ್ಲ. ಒಳಗಿದ್ದು ಕೊಂಡೇ ಅವರು ಹೂಡಿದ್ದ ವ್ಯವಸ್ಥಿತ ಸಂಚು ಫಲ ನೀಡಿತು.

ದಂಗೆ ಹಿಂದೆ `ಮದರ್' ನೆರಳು!
ಕ್ಷಿಪ್ರ ದಂಗೆಯ ಹಿಂದೆ ಸಿಸ್ಸಿ ನೆರಳು ಕಾಣುತ್ತಿದೆಯಾದರೂ, ಇದು ಶ್ವೇತಭವನ ಪ್ರಾಯೋಜಿತ ದಂಗೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಮೊರ್ಸಿ ಪದಚ್ಯುತಿ ಕ್ಷಣಗಣನೆ ಆರಂಭವಾಗಿತ್ತು. ಅಧ್ಯಕ್ಷರ ಭವನದಲ್ಲಿ ಆಪ್ತರೊಂದಿಗೆ ಸಮಾಲೋಚನೆಯಲ್ಲಿದ್ದ ಮೊರ್ಸಿ ಅವರಿಗೆ ಬಂದ ದೂರವಾಣಿ ಕರೆ, ಸೇನಾ ಆಡಳಿತದೊಂದಿಗಿನ ಸಂಘರ್ಷ ಬಿಟ್ಟು ಸಂಧಾನಕ್ಕೆ ಮುಂದಾಗುವಂತೆ ಸಲಹೆ ನೀಡಿತು. ಅಮೆರಿಕ ಅಣತಿಯಂತೆ ಸಂಧಾನಕ್ಕೆ ಮುಂದಾಗಿದ್ದ ಅರಬ್ ವಿದೇಶಾಂಗ ಸಚಿವ ಈ ದೂರವಾಣಿ ಕರೆ ಮಾಡಿದ್ದರು. ಹೊಸ ಪ್ರಧಾನಿ ಮತ್ತು ಸಚಿವ ಸಂಪುಟ ನೇಮಕ ಮಾಡುವ ಸಂಧಾನ ಸೂತ್ರ ಮುಂದಿಟ್ಟರು. ಒಬಾಮ ಆಡಳಿತ ಮೊರ್ಸಿ ಅವರಿಗೆ ನೀಡಿದ ಕೊನೆಯ ಸಂಧಾನದ ಅವಕಾಶ ಇದಾಗಿತ್ತು.

ಇದಕ್ಕೂ ಮೊದಲು ವಿರೋಧ ಪಕ್ಷಗಳ ಜತೆ ಸಂಧಾನ ಮಾತುಕತೆ ನಡೆಸುವಂತೆ ಮತ್ತು ಅವರನ್ನು ಸರ್ಕಾರದ ಒಳಗೆ ಸೇರಿಸಿಕೊಳ್ಳುವಂತೆ ಅಮೆರಿಕ ಪದೇ ಪದೇ ಸಲಹೆ ನೀಡುತ್ತಲೇ ಬಂದಿತ್ತು. ಆದರೆ, ಹೊಸ ಅಧ್ಯಕ್ಷರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ತಮಗೆ ದೊರೆತ ಕೊನೆಯ ಅವಕಾಶವನ್ನೂ ಅವರು ನಿರೀಕ್ಷೆಯಂತೆ ಕೈಚೆಲ್ಲಿದರು. ಮೊರ್ಸಿ ತಮ್ಮ ಪಟ್ಟು ಸಡಿಸಲಿಲ್ಲ.

ಬೇರೆ ಯಾವ ದಾರಿ ಕಾಣದೆ ಅವರ ಆಪ್ತ ಹಾಗೂ ವಿದೇಶಾಂಗ ನೀತಿ ಸಲಹೆಗಾರ ಎಸ್ಸಾಮ್ ಅಲ್ ಹದ್ದದ್, ವಾಷಿಂಗ್ಟನ್‌ಗೆ ತಮ್ಮ ನಿಲುವು ಸ್ಪಷ್ಟಪಡಿಸಿದರು. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಜೊತೆ ದೂರವಾಣಿಯಲ್ಲಿ ಮಾತನಾಡಿ ಮರಳಿ ಬಂದ ಅವರು, `ಇನ್ನೂ ಒಂದು ಗಂಟೆಯಲ್ಲಿ ನಿಮ್ಮ ಪದಚ್ಯುತಿ ಆಗಲಿದೆ ಎಂದು `ಮದರ್' ತಿಳಿಸಿದ್ದಾರೆ' ಎಂದು ಅಧ್ಯಕ್ಷರ ಕಿವಿಯಲ್ಲಿ ಪಿಸುಗುಟ್ಟಿದರು.

ಯಾರು ಈ `ಮದರ್'?
ಯಾರು ಈ ಮದರ್? ಇಲ್ಲಿ `ಮದರ್' ಎಂದರೆ ಅಮೆರಿಕ. ಮಧ್ಯಪ್ರಾಚ್ಯ ರಾಷ್ಟ್ರಗಳು ಅಮೆರಿಕವನ್ನು ಸಂಬೋಧಿಸುವುದು ಇದೇ ಹೆಸರಿನಲ್ಲಿ. ಅತ್ತ ವಾಷಿಂಗ್ಟನ್ ಕೂಡಾ ಇದೇ ಉತ್ತರದ ನಿರೀಕ್ಷೆಯಲ್ಲಿತ್ತು. ಅದಾದ ಕೆಲ ಹೊತ್ತಿಗೆ ಕ್ಷಿಪ್ರ ಸೇನಾ ಕ್ರಾಂತಿ ನಡೆದು ಹೋಯಿತು. ಅಲ್ಲಿಗೆ ಈಜಿಪ್ಟ್‌ನ ಮೊದಲ ಚುನಾಯಿತ ಸರ್ಕಾರ ದುರಂತ ಅಂತ್ಯ ಕಂಡಿತು.

ಒಂದು ವೇಳೆ ಮೊರ್ಸಿ ಸಂಧಾನಕ್ಕೆ ಒಪ್ಪಿದ್ದರೆ ಅವರನ್ನು ಯಾವುದೇ ಅಧಿಕಾರ ಇಲ್ಲದ ಉತ್ಸವ ಮೂರ್ತಿಯಂತೆ ಆ ಸ್ಥಾನದಲ್ಲಿ ಮುಂದುವರಿಸುವ ಉದ್ದೇಶವನ್ನು ಅಮೆರಿಕ ಹೊಂದಿತ್ತು. ಹೆಸರಿಗಷ್ಟೇ ಅಧ್ಯಕ್ಷರಾಗಿ ಮುಂದುವರಿಯಲಿದ್ದ ಅವರನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ಗೊಂಬೆಯಂತೆ ಆಡಿಸಲು ಶ್ವೇತಭವನ ಬಯಸಿತ್ತು.

ಜೂನ್ ಎರಡನೇ ವಾರದಲ್ಲಿಯೇ ಮೊರ್ಸಿ ಪದಚ್ಯುತಿಗೆ ವಾಷಿಂಗ್ಟನ್ ಸಿದ್ಧತೆ ನಡೆಸಿತ್ತು. ಇದಕ್ಕೆ ಪೂರಕವೆಂಬಂತೆ ಸಿಸ್ಸಿ ಬಹಿರಂಗ ಹೇಳಿಕೆ ಮೂಲಕ ನೀಡಿದ್ದ ದಂಗೆಯ ಸುಳಿವನ್ನು ಗ್ರಹಿಸಲು ಸರ್ಕಾರ ವಿಫಲವಾಗಿತ್ತು. ಪ್ರಕ್ಷುಬ್ಧ ಸಂದರ್ಭದಲ್ಲಿ ಮುಂಜಾಗ್ರತೆ ಕೈಗೊಳ್ಳುವ ಬದಲು ಗೂಗಲ್ ಅರ್ಥ್ ಮತ್ತು ಮೊಬೈಲ್ ಟವರ್ ಮೂಲಕ ದಂಗೆಯಲ್ಲಿದ್ದ ಜನರನ್ನು ಲೆಕ್ಕ ಹಾಕುವ ನಿರ್ಧಾರಕ್ಕೆ ಮುಂದಾಗಿತ್ತು. ಭಾರಿ ಹೋರಾಟದ ನಂತರ ಚುನಾವಣೆ ಮಾರ್ಗದಲ್ಲಿ ಅಧಿಕಾರ ಗಳಿಸಿದರೂ ಮೊರ್ಸಿ ಅದನ್ನು ಉಳಿಸಿಕೊಳ್ಳಲು ವಿಫಲರಾದರು.

ಏನಿದು 'ಮುಸ್ಲಿಂ ಬ್ರದರ್‌ಹುಡ್'?
ಈಜಿಪ್ಟ್‌ನ 2011ರ ಕ್ರಾಂತಿಯ ನಂತರ ಏಕಾಏಕಿ ವಿಶ್ವದ ಗಮನ ಸೆಳೆದ `ಮುಸ್ಲಿಂ ಬ್ರದರ್‌ಹುಡ್' ಮೂಲಭೂತವಾಗಿ ಮಧ್ಯಪ್ರಾಚ್ಯ ಮತ್ತು ಅರಬ್ ಜಗತ್ತಿನ ಪ್ರಭಾವಿ ಮತ್ತು ಅತಿ ದೊಡ್ಡ ಇಸ್ಲಾಮಿಕ್ ಸಂಘಟನೆ. `ಸೊಸೈಟಿ ಆಫ್ ದಿ ಮುಸ್ಲಿಂ ಬ್ರದರ್ಸ್' ಎಂಬ ಧಾರ್ಮಿಕ ಮತ್ತು ರಾಜಕೀಯ ಸಂಘಟನೆಯ ಸಂಕ್ಷಿಪ್ತ ರೂಪ. ಹೊಸದಾಗಿ ಹುಟ್ಟಿದ್ದಲ್ಲ. ಇದಕ್ಕೆ ಹತ್ತಾರು ದಶಕಗಳ ಇತಿಹಾಸವಿದೆ. ಬಹುತೇಕ ಅರಬ್ ದೇಶಗಳಲ್ಲಿ ಇದು ಪ್ರಮುಖ ಪ್ರತಿಪಕ್ಷ. 

`ಇಸ್ಲಾಂ ಒಂದು ಧರ್ಮವಲ್ಲ, ಅದೊಂದು ಮಾದರಿ ಜೀವನಕ್ರಮ' ಎಂದು ನಂಬಿರುವ ಸಂಸ್ಥೆ. ಕುರಾನ್ ಈ ಸಂಘಟನೆಯ ಸಂವಿಧಾನ. ಕುರಾನ್ ಆಧಾರದ ಮೇಲೆ ಸಮಾಜ ಮತ್ತು ಸರ್ಕಾರ ನಡೆಯಬೇಕು ಎನ್ನುವುದು ಸಂಘಟನೆಯ ಸ್ಪಷ್ಟ ನಿಲುವು. ಜಿಹಾದ್ ಅವರ ಮಾರ್ಗ. ಬಹುಪಾಲು ಮುಸ್ಲಿಂ ದೇಶಗಳಲ್ಲಿ ಅನೇಕ ಧಾರ್ಮಿಕ, ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಇದು, ಅನೇಕ ಚಾನೆಲ್‌ಗಳ ಒಡೆತನ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT