ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಸದಾಟದ ದುರ್ವಾಸನೆ

Last Updated 16 ಮೇ 2012, 19:30 IST
ಅಕ್ಷರ ಗಾತ್ರ

ಭಾರತ ಕ್ರಿಕೆಟ್‌ನಲ್ಲಿಯ ಮೋಸದಾಟ ಮತ್ತೊಮ್ಮೆ ನಾರುತ್ತಿದೆ. ದೇಶೀಯ ಪಂದ್ಯಗಳಲ್ಲದೇ ಜನರ ಹುಚ್ಚನ್ನು ಕೆರಳಿಸಿರುವ ಐಪಿಎಲ್‌ನಲ್ಲೂ ಹಣಕ್ಕಾಗಿ ಮೋಸ (ಸ್ಪಾಟ್ ಮತ್ತು ಮ್ಯಾಚ್ ಫಿಕ್ಸಿಂಗ್) ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
 
ಖಾಸಗಿ ವಾಹಿನಿಯೊಂದು ಮಾರುವೇಷದ ಕಾರ್ಯಾಚರಣೆಯಲ್ಲಿ ಇದನ್ನು ಬಹಿರಂಗಪಡಿಸಿದಕೂಡಲೇ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮರ್ಯಾದೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ, ಅಷ್ಟೇನೂ ಹೆಸರು ಮಾಡದ ಐವರು ಆಟಗಾರರನ್ನು ಅಮಾನತುಗೊಳಿಸಿದೆ.
 
ಹಿಂದೆಯೂ ಮೋಸದಾಟದ ಆರೋಪಗಳು ಬಂದಾಗ ಯಾವುದೇ ನಿರ್ದಿಷ್ಟ ಕ್ರಮ ತೆಗೆದುಕೊಳ್ಳದ ಮಂಡಳಿ ಈಗ ದಿಢೀರನೆ ಐವರು ಆಟಗಾರರನ್ನು ಆಡದಂತೆ ನಿಷೇಧಿಸಿದ್ದು, ಭಾರತ ಕ್ರಿಕೆಟ್‌ನಲ್ಲಿ ಹಣಕ್ಕಾಗಿ ಅವ್ಯವಹಾರಗಳು ನಡೆಯುತ್ತವೆ ಎಂಬ ನಂಬಿಕೆಯನ್ನು ದೃಢಪಡಿಸುತ್ತದೆ.

ನಾಲ್ಕು ವರ್ಷಗಳ ಹಿಂದೆ ಐಪಿಎಲ್ ಎಂಬ ದೊಡ್ಡ ಸರ್ಕಸ್ ಆರಂಭವಾದಾಗ ಹಾಗೂ ನಂತರ ಅದು ನಡೆಯುತ್ತಿದ್ದ ರೀತಿ ನೋಡಿದಾಗ ಹಲವು ಅನುಮಾನಗಳು ಮೂಡಿದ್ದವು. ಇದನ್ನು ಆರಂಭಿಸಿದ ಲಲಿತ್ ಮೋದಿ ಹಣದ ಲೂಟಿಯ ಹೊಸ ವಿಧಾನವನ್ನು ಯಶಸ್ವಿಯಾಗಿಯೇ ರೂಪಿಸಿದ್ದರು.

ಆದರೆ ಅವರೇ ಅದರಲ್ಲಿ ಸಿಕ್ಕಿಬಿದ್ದು ದೇಶ ಬಿಟ್ಟು ಹೋಗುವಂತಾಯಿತು. ಅವರ ವಿರುದ್ಧದ ಪ್ರಕರಣಗಳು ಇನ್ನೂ ನಡೆಯುತ್ತಿವೆ. ದುಡ್ಡಿನ ಹೊಳೆಯನ್ನೇ ಹರಿಸುತ್ತಿದ್ದ ಐಪಿಎಲ್ ನಿಲ್ಲಿಸುವ ಅಥವಾ ಸುಧಾರಣೆ ತರುವ ಬದಲು ಇನ್ನಷ್ಟು ಉತ್ತೇಜನ ನೀಡಿದ ಕ್ರಿಕೆಟ್ ಮಂಡಳಿ ತನ್ನ ಬೊಕ್ಕಸ ತುಂಬಿಸುವ ಭರದಲ್ಲಿ ಮೋಸದಾಟದ ಅಂಶಗಳತ್ತ ಗಮನ ಹರಿಸಲೇ ಇಲ್ಲ.

ಐಸಿಸಿ ಸೂಚನೆಯಂತೆ ಮಂಡಳಿ ರಚಿಸಿರುವ ಭ್ರಷ್ಟಾಚಾರ ನಿಯಂತ್ರಣ ಸಮಿತಿ ಹೆಚ್ಚು ಚುರುಕಾಗಿಲ್ಲ. ಒಂದೆರಡು ನೋಬಾಲ್ ಅಥವಾ ವೈಡ್ ಹಾಕಲು ಲಕ್ಷಾಂತರ ರೂಪಾಯಿ ನೀಡಲಾಗುತ್ತದೆಯೆಂದರೆ ಮೋಸದಾಟದಲ್ಲಿ ಎಷ್ಟೊಂದು ಹಣ ತುಂಬಿದೆಯೆಂಬುದನ್ನು ಅಂದಾಜಿಸಬಹುದು.

ದಶಕದ ಹಿಂದೆ ಕ್ರಿಕೆಟ್‌ನಲ್ಲಿ ಆರಂಭವಾದ ಮೋಸದಾಟದಲ್ಲಿ ಕೆಲವು ಪ್ರಮುಖ ಆಟಗಾರರು ಸಿಕ್ಕಿಬಿದ್ದು ಕೋಲಾಹಲವೇ ಆಗಿತ್ತು. ಆದರೆ ಮೋಸದಾಟ ನಿಲ್ಲುವಂಥ ಕಠಿಣ ಶಿಕ್ಷೆ ಯಾರಿಗೂ ಆಗಲಿಲ್ಲ.
 
ಆದರೆ ಇಂಗ್ಲೆಂಡ್‌ನಲ್ಲಿ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನದ ಮೂವರು ಆಟಗಾರರು ಜೈಲು ಶಿಕ್ಷೆ ಅನುಭವಿಸಿದರು. ಇದು ಎಚ್ಚರಿಕೆಯ ಗಂಟೆಯಾಗಿತ್ತಾದರೂ ಹಣದ ಆಮಿಷದಲ್ಲಿ ಕ್ರಿಕೆಟ್ ಅಧಿಕಾರಿಗಳು ಹಾಗೂ ಆಟಗಾರರು ಇದನ್ನು ಲೆಕ್ಕಿಸುತ್ತಿಲ್ಲ ಎಂದು ತೋರುತ್ತಿದೆ.
 
ಕ್ರಿಕೆಟ್ ಮಂಡಳಿಯ ವ್ಯವಹಾರಗಳ ವಿರುದ್ಧ ಹಲವು ವರ್ಷಗಳಿಂದ ದೂರುಗಳಿವೆ. ಆದರೆ ಮಂಡಳಿಯನ್ನು ಮಣಿಸುವ ಧೈರ್ಯವನ್ನು ಸರ್ಕಾರವೂ ತೋರಿಲ್ಲ. ಮಂಡಳಿ ಪದಾಧಿಕಾರಿಗಳು ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಅಷ್ಟೊಂದು ಪ್ರಭಾವಿಗಳಾಗಿದ್ದಾರೆ. ಮಂಡಳಿಯ ನಿರಂಕುಶ ಆಡಳಿತ ಹಾಗೆಯೇ ಮುಂದುವರಿದಿದೆ.

ಮಂಡಳಿಯ ಲೆಕ್ಕಪತ್ರಗಳ ತಪಾಸಣೆಯಾಗಬೇಕು ಎಂದು ಮಾಜಿ ಆಟಗಾರ ಹಾಗೂ ಸಂಸದ ಕೀರ್ತಿ ಆಜಾದ್ ಒತ್ತಾಯಿಸಿದರೂ ಅದಕ್ಕೆ ಯಾರಿಂದಲೂ ಹೆಚ್ಚಿನ ಬೆಂಬಲ ಸಿಕ್ಕಿಲ್ಲ. ಈಗ ಮಂಡಳಿ ಮೇಲೆ ಮತ್ತೆ ಕೆಸರು ಅಂಟಿಕೊಂಡಿದೆ. ಈಗಲಾದರೂ ಮಂಡಳಿಯ ಅವ್ಯವಹಾರಗಳಿಗೆ ಕಡಿವಾಣ ಬಿದ್ದರೆ ಕ್ರಿಕೆಟ್ ಶುದ್ಧವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT