ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಸದಾಟದಲ್ಲಿ ಅಂಪೈರ್‌ಗಳು : ಐಪಿಎಲ್ ಆರಂಭದಲ್ಲೇ ವದಂತಿ ಶುರುವಾಗಿತ್ತು

Last Updated 9 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸಿಡ್ನಿ/ನವದೆಹಲಿ (ಪಿಟಿಐ/  ಐಎಎನ್‌ಎಸ್): ಮೋಸದಾಟದಲ್ಲಿ ಪಾಲ್ಗೊಳ್ಳಲು ಅಂತರರಾಷ್ಟ್ರೀಯ ಅಂಪೈರ್‌ಗಳು ಮುಂದಾಗಿರುವ ಬಗ್ಗೆ ತಮಗೇನು ಭಾರಿ ಅಚ್ಚರಿಯಾಗಿಲ್ಲ ಎಂದು ಮಾಜಿ ಅಂಪೈರ್ ಡರೆಲ್ ಹೇರ್ ನುಡಿದಿದ್ದಾರೆ.
`ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಶುರುವಿನಲ್ಲೇ ಕೆಲ ಅಂಪೈರ್‌ಗಳು ಮೋಸದಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂಬ ವದಂತಿ ಶುರುವಾಗಿತ್ತು. ಯಾವ ಅಂಪೈರ್ ಇಂತಹ ಹೀನಾ ಕೃತ್ಯ ಎಸಗಬಹುದು ಹಾಗೂ ಅದಕ್ಕೆ ಎಷ್ಟು ದಿನ ಬೇಕಾಗಬಹುದು ಎಂಬ ವಿಷಯ ಆಗಲೇ ನನ್ನ ಮನಸ್ಸಿನಲ್ಲಿ ಹಾದು ಹೋಗಿತ್ತು~ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಎಲೈಟ್ ಅಂಪೈರ್‌ಗಳ ಸಮಿತಿಯಲ್ಲಿದ್ದ ಮಾಜಿ ಅಂಪೈರ್ ಆಸ್ಟ್ರೇಲಿಯಾದ ಹೇರ್ ತಿಳಿಸಿದ್ದಾರೆ.

`ಅವಕಾಶ ಹಾಗೂ ದುರಾಸೆ ಎಂಬ ಎರಡು ವಿಷಯದ ಮೇಲೆ ಇದು ಅವಲಂಬಿಸಿದೆ. ದುರಾಸೆಯ ವ್ಯಕ್ತಿಗೆ ಅವಕಾಶ ದೊರೆತರೆ ಆಗ ದುರಾಸೆಯೇ ಹೆಚ್ಚು ಕೆಲಸ ಮಾಡುತ್ತದೆ~ ಎಂದು ಅವರು `ಸಿಡ್ನಿ ಮಾರ್ನಿಂಗ್ ಹೆರಾಲ್ಡ್~ಗೆ ತಿಳಿಸಿದ್ದಾರೆ. 

ಹೇರ್ 139 ಏಕದಿನ ಪಂದ್ಯಗಳು ಹಾಗೂ 78 ಟೆಸ್ಟ್ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. 16 ವರ್ಷಗಳ ಅಂತರರಾಷ್ಟ್ರೀಯ ಅಂಪೈರಿಂಗ್ ಜೀವನದ ಬಳಿಕ  2008ರಲ್ಲಿ ವಿದಾಯ ಹೇಳಿದ್ದರು.

ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದ ಆರು ಅಂಪೈರ್‌ಗಳು ಮೋಸದಾಟದಲ್ಲಿ ಪಾಲ್ಗೊಳ್ಳಲು ಮುಂದಾಗಿರುವುದು `ಇಂಡಿಯಾ ಟಿ.ವಿ~ ನಡೆಸಿದ ಮಾರುವೇಷದ ಕಾರ್ಯಾಚರಣೆಯಲ್ಲಿ ಬಹಿರಂಗಗೊಂಡಿರುವ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಶ್ರೀಲಂಕಾದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಹಾಗೂ ಇದಕ್ಕೂ ಮುನ್ನ ಆಗಸ್ಟ್‌ನಲ್ಲಿ ನಡೆದ ಶ್ರೀಲಂಕಾ ಪ್ರೀಮಿಯರ್ ಲೀಗ್‌ನಲ್ಲಿ (ಎಸ್‌ಪಿಎಲ್) ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. 

 ಬಾಂಗ್ಲಾದೇಶದ ನದೀರ್ ಷಾ, ಪಾಕಿಸ್ತಾನದ ನದೀಮ್ ಘೋರಿ, ಅನೀಸ್ ಸಿದ್ದಿಕಿ, ಶ್ರೀಲಂಕಾದ ಗಾಮಿನಿ ದಿಸ್ಸಾನಾಯಕೆ, ಮೌರಿಸ್ ವಿನ್‌ಸ್ಟನ್ ಹಾಗೂ ಸಾಗರ ಗಳಾಗೆ ಆ ಅಂಪೈರ್‌ಗಳು ಎಂಬುದು ತಿಳಿದುಬಂದಿದೆ. ಇವರಲ್ಲಿ ಕೆಲವರು ಐಸಿಸಿ ಅಂಪೈರ್‌ಗಳ ಎಲೈಟ್ ಸಮಿತಿಯಲ್ಲಿ ಹಿಂದೆ ಇದ್ದವರು ಎಂಬುದು ಗೊತ್ತಾಗಿದೆ.

`ಅಂಪೈರ್‌ಗಳು ಮೋಸದಾಟದಲ್ಲಿ ಪಾಲ್ಗೊತ್ತಿರುವುದು ಹೊಸ ವಿಷಯವೂ ಅಲ್ಲ. ನಾನು ಅಂಪೈರ್ ಆಗಿದ್ದ ಅವಧಿಯಲ್ಲಿ ಈ ರೀತಿಯ ಗುಸು ಗುಸು ವಿಷಯ ನನ್ನ ಕಿವಿಗೆ ಬಿದ್ದಿತ್ತು. ಕೆಲ ಅಂಪೈರ್‌ಗಳು ಮೋಸ ಮಾಡುತ್ತಿದ್ದಾರೆ ಎಂಬ ಅಂಶ ಗೊತ್ತಾಗಿತ್ತು~ ಎಂದೂ ಡರೆಲ್ ಹೇರ್ ನುಡಿದಿದ್ದಾರೆ. ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಐಸಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದೂ ಅವರು ದೂರಿದ್ದಾರೆ.

ಐಸಿಸಿ ಕ್ರಮದ ಬಳಿಕ ನಮ್ಮ ನಡೆ-ಬಿಸಿಸಿಐ: ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಕ್ರಮದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದೆ.

`ಭಾರತದ ಯಾವುದೇ ಅಂಪೈರ್ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಹಾಗಾಗಿ ಮೊದಲು ಐಸಿಸಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ನಮಗೆ ಸಂಬಂಧಿಸಿದ ವಿಷಯವಿದ್ದರೆ ಆ ಬಗ್ಗೆ ಪರಿಶೀಲನೆ ನಡೆಸುತ್ತೇವೆ~ ಎಂದು ಬಿಸಿಸಿಐ ಹಿರಿಯ ಅಧಿಕಾರಿ ರಾಜೀವ್ ಶುಕ್ಲಾ ನುಡಿದಿದ್ದಾರೆ.

ತನಿಖೆಗೆ ನೆರವಾಗಲು ಐಸಿಸಿಗೆ ವಿಡಿಯೋ ಟೇಪ್ ನೀಡಲು ಇಂಡಿಯಾ ಟಿ.ವಿ ಮುಂದಾಗಿದೆ. ಈ ಸುದ್ದಿ ವಾಹಿನಿಯ ವರದಿಗಾರರು ಅಂಪೈರ್‌ಗಳ ಹೇಳಿಕೆಯನ್ನು ಮಾರುವೇಷದಲ್ಲಿ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ಪ್ರಕರಣದ ಬಗ್ಗೆ ಲಂಕಾ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳು ತನಿಖೆ ಆರಂಭಿಸಿವೆ.

ಆದರೆ ಲಂಕಾದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಪಂದ್ಯಗಳಲ್ಲಿ ಯಾವುದೇ ಮೋಸದಾಟ ನಡೆದಿಲ್ಲ ಎಂದು ಐಸಿಸಿ ಹೇಳಿದೆ. ಈಗ ಆರೋಪಕ್ಕೆ ಒಳಗಾಗಿರುವ ಯಾವುದೇ ಅಂಪೈರ್ ಐಸಿಸಿ ಎಲೈಟ್ ಸಮಿತಿಯಲ್ಲಿ ಇಲ್ಲ ಎಂದೂ ಅದು ತಿಳಿಸಿದೆ.

ತಮ್ಮ ಮೇಲಿನ ಆರೋಪಗಳನ್ನು ಲಂಕಾದ ಅಂಪೈರ್ ದಿಸ್ಸಾನಾಯಕೆ ಅಲ್ಲಗಳೆದಿದ್ದಾರೆ. `ಈ ಆರೋಪಗಳನ್ನು ನಾನು ನಿರಾಕರಿಸುತ್ತೇನೆ. ಇದು ಲಂಕಾದ ಎಲ್ಲಾ ಅಂಪೈರ್‌ಗಳ ಮೇಲೆ ನಡೆದಿರುವ ದಾಳಿ~ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT