ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ, ಅಶೋಕ್ ವಿರುದ್ಧ ಪ್ರಕರಣ: ಲೋಕಾಯುಕ್ತ ತನಿಖೆಗೆ ಕೋರ್ಟ್ ಆದೇಶ

Last Updated 24 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರ ಕುಟುಂಬ ವರ್ಗ, ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಹಾಗೂ ಸಚಿವ ಆರ್.ಅಶೋಕ ಅವರ ವಿರುದ್ಧ ಇರುವ ಭೂಹಗರಣದ ಆರೋಪಗಳ ಕುರಿತಾಗಿ ಮುಂದಿನ ತನಿಖೆ ನಡೆಸುವಂತೆ ಲೋಕಾಯುಕ್ತ ಎಸ್ಪಿ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಗುರುವಾರ ಆದೇಶಿಸಿದೆ. 

ಆಪಾದಿತರ ವಿರುದ್ಧ ಇರುವ ಆರೋಪಗಳನ್ನು ಕೋರ್ಟ್ ಈಗಾಗಲೇ ವಿಚಾರಣೆಗೆ ಅಂಗೀಕರಿಸಿರುವ ಹಿನ್ನೆಲೆಯಲ್ಲಿ, ಹಗರಣಗಳ ಹಿಂದಿರುವ ಇನ್ನಷ್ಟು ಸತ್ಯಗಳನ್ನು ಕೋರ್ಟ್ ತಿಳಿಯಬಯಸಿದೆ. ಈ ವರದಿ ಆಧಾರದ ಮೇಲೆ ಪ್ರಕರಣವನ್ನು ಮುಂದುವರಿಸಬಹುದೇ ಬೇಡವೇ ಎಂಬ ಬಗ್ಗೆ ನ್ಯಾಯಾಧೀಶರು ತೀರ್ಮಾನಿಸಲಿದ್ದಾರೆ.

ಪ್ರಾಥಮಿಕ ತನಿಖೆಯನ್ನು ಪೂರ್ಣಗೊಳಿಸಲು ಆರು ವಾರಗಳ ಕಾಲಾವಕಾಶ ನೀಡಿರುವ ನ್ಯಾಯಾಧೀಶ ಸಿ.ಬಿ. ಹಿಪ್ಪರಗಿ ಅವರು, ವರದಿ ನೀಡಿಕೆಗೆ ಮೇ 4ರ ಗಡುವು ನೀಡಿದ್ದಾರೆ. ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ 202 (1) ಕಲಮಿನ ಅಡಿ ಇರುವ ಅಧಿಕಾರವನ್ನು ಬಳಸಿಕೊಂಡು ನ್ಯಾಯಾಲಯವು ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸಿದೆ.

ನಗರದ ರಾಚೇನಹಳ್ಳಿ ಬಳಿಯ ಎರಡು ಹಾಗೂ ವೈಯಾಲಿಕಾವಲ್ ಬಳಿಯ ಒಂದು ಭೂಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪನವರ ವಿರುದ್ಧ ವಕೀಲ ಸಿರಾಜಿನ್ ಬಾಷಾ ಹಾಗೂ ನಗರದ ಆರ್‌ಎಂವಿ ಬಡಾವಣೆಯ ವಿವಾದಕ್ಕೆ ಸಂಬಂಧಿಸಿದಂತೆ ಅಶೋಕ ಅವರ ವಿರುದ್ಧ ಮಂಜುನಾಥ ಎನ್ನುವವರು ಸಲ್ಲಿಸಿರುವ ದೂರುಗಳಿಗೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಗಿದೆ.

ತನಿಖೆ ಹೇಗೆ?:  ಬಾಷಾ ಹಾಗೂ ಮಂಜುನಾಥ ಅವರು ಕೋರ್ಟ್‌ಗೆ ಸಲ್ಲಿಸಿರುವ ದಾಖಲೆ ಹಾಗೂ ಕೋರ್ಟ್‌ನಿಂದ ಹೊರಟ ಆದೇಶದ ಪ್ರತಿ ದೊರೆತ ತಕ್ಷಣ ಲೋಕಾಯುಕ್ತ ಎಸ್ಪಿ ತನಿಖೆ ಆರಂಭಿಸುತ್ತಾರೆ. ತನಿಖೆ ಮುಂದುವರಿಸುವ ಪೂರ್ವದಲ್ಲಿ ಆರೋಪಿಗಳಾದ ಯಡಿಯೂರಪ್ಪ, ಅವರ ಪುತ್ರರಾದ ಬಿ.ವೈ.ವಿಜಯೇಂದ್ರ, ಬಿ.ವೈ.ರಾಘವೇಂದ್ರ, ಅಳಿಯ ಸೋಹನ್‌ಕುಮಾರ್, ಕೃಷ್ಣಯ್ಯ ಶೆಟ್ಟಿ ಹಾಗೂ ಅಶೋಕ ಅವರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲು ಮಾಡಿಕೊಳ್ಳುವ ಅಥವಾ ಬಿಡುವ ಅಧಿಕಾರವನ್ನು ಎಸ್ಪಿ ಅವರಿಗೆ ಕಾನೂನು ನೀಡಿದೆ.
ಖಾಸಗಿ ವ್ಯಕ್ತಿಗಳು ನೇರವಾಗಿ ಲೋಕಾಯುಕ್ತರಲ್ಲಿ ದೂರು ದಾಖಲು ಮಾಡಿದರೆ ಆಗ ಎಫ್‌ಐಆರ್ ದಾಖಲು ಮಾಡಿಕೊಳ್ಳುವುದು ಅಗತ್ಯ. ಆದರೆ ಈ ಪ್ರಕರಣವು ನ್ಯಾಯಾಲಯದಿಂದ ಲೋಕಾಯುಕ್ತಕ್ಕೆ ಹೋಗಿರುವ ಕಾರಣ ಅದರ ಅವಶ್ಯಕತೆ ಇಲ್ಲ. ಅಗತ್ಯ ಕಂಡುಬಂದಲ್ಲಿ ಮಾತ್ರ ಎಫ್‌ಐಆರ್ ದಾಖಲು ಮಾಡಿಕೊಂಡು ತನಿಖೆ ಮುಂದುವರಿಸಬಹುದು.

ತನಿಖೆ ನಂತರ ಮುಂದೇನು?:  ‘ತನಿಖಾ ವರದಿಯನ್ನು ಕೋರ್ಟ್‌ಗೆ ಲೋಕಾಯುಕ್ತ ಪೊಲೀಸರು ನೀಡಿದ ಮೇಲೆ, ಅದರ ಆಧಾರದ ಮೇಲೆ ನ್ಯಾಯಾಧೀಶರು, ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಬಹುದೇ, ಬೇಡವೇ ಎಂಬ ಬಗ್ಗೆ ತೀರ್ಮಾನಿಸಲಿದ್ದಾರೆ.

‘ಆರೋಪಿಗಳ ವಿರುದ್ಧ ಇರುವ ಆಪಾದನೆಗಳು ಸಾಬೀತಾಗಿವೆ ಎಂದು ತನಿಖಾ ವರದಿಯಲ್ಲಿ ಕಂಡು ಬಂದರೆ ನ್ಯಾಯಾಲಯವು ಎಲ್ಲರಿಗೂ ಸಮನ್ಸ್ ಜಾರಿ ಮಾಡಿ, ವಿಚಾರಣೆಯನ್ನು ಮುಂದುವರಿಸುತ್ತದೆ. ಆರೋಪಗಳಲ್ಲಿ ಹುರುಳಿಲ್ಲ ಎಂದು ವರದಿ ಹೇಳಿದರೆ, ಆರೋಪಿಗಳ ವಿರುದ್ಧ ಕ್ರಮಕ್ಕೆ ಕೋರಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡುತ್ತದೆ’ ಎಂದು ಕ್ರಿಮಿನಲ್ ಪ್ರಕರಣಗಳ ಖ್ಯಾತ ವಕೀಲ ರವಿ ಬಿ.ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬಾಷಾ ಅವರ ಪರ ವಕೀಲ ಸಿ.ಎಚ್.ಹನುಮಂತರಾಯರು, ‘ಖಾಸಗಿ ವ್ಯಕ್ತಿಯೊಬ್ಬರು ಉನ್ನತ ಮಟ್ಟದ ಅಧಿಕಾರಿಗಳ ವಿರುದ್ಧದ ಹಗರಣವನ್ನು ಪೂರ್ಣಪ್ರಮಾಣದಲ್ಲಿ ತನಿಖೆ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಹಗರಣದ ಹಿಂದಿರುವ ಕಾಣದ ಕೈಗಳ ಬಗ್ಗೆ ತನಿಖೆ ನಡೆಸಲು ಯಾವುದಾದರೂ ತನಿಖಾ ವಲಯಕ್ಕೆ ಮಾತ್ರ ಸಾಧ್ಯವಿದೆ. ಹಗರಣದಲ್ಲಿ ಶಾಮೀಲು ಆಗಿರುವ ಎಲ್ಲರ ಬಗ್ಗೆ ಲೋಕಾಯುಕ್ತರು ಕೋರ್ಟ್‌ಗೆ ವರದಿ ನೀಡಲಿದ್ದಾರೆ’ ಎಂದರು. 

ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ನೀಡಿರುವ ಮಾತ್ರಕ್ಕೆ ಯಡಿಯೂರಪ್ಪ ಅಥವಾ ಅಶೋಕ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ ಎನ್ನುವುದು ಕಾನೂನು ತಜ್ಞರ ಅಭಿಮತ.

ತನಿಖೆಗೆ ಸಿಎಂ ಸ್ವಾಗತ
ಬೆಂಗಳೂರು:  ‘ನ್ಯಾಯಾಲಯ ಮತ್ತು ಲೋಕಾಯುಕ್ತ ವ್ಯವಸ್ಥೆಯ ಬಗ್ಗೆ ನನಗೆ ವಿಶ್ವಾಸ ಇದೆ. ಭೂಹಗರಣಗಳ ಕುರಿತು ತನಿಖೆ ನಡೆಸಲು ನ್ಯಾಯಾಲಯ ಲೋಕಾಯುಕ್ತಕ್ಕೆ ನೀಡಿರುವ ಆದೇಶವನ್ನು ಸ್ವಾಗತಿಸುತ್ತೇನೆ.’

- ಅಕ್ರಮ ಡಿನೋಟಿಫಿಕೇಷನ್ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತು ಲೋಕಾಯುಕ್ತ ತನಿಖೆ ನಡೆಸಿ ಆರು ವಾರಗಳಲ್ಲಿ ವರದಿ ನೀಡುವಂತೆ ವಿಶೇಷ ನ್ಯಾಯಾಲಯ ನೀಡಿರುವ ಆದೇಶಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿದ್ದು ಹೀಗೆ.

ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕರಿಗೆ ಬೆಂಗಳೂರಿನಲ್ಲಿ ಗುರುವಾರ ‘ಮುಖ್ಯಮಂತ್ರಿಗಳ ಸ್ವರ್ಣ ಪದಕ’ ನೀಡಿ ಪುರಸ್ಕರಿಸುವ ಕಾರ್ಯಕ್ರಮದ ನಂತರ ಯಡಿಯೂರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ನ್ಯಾಯಾಲಯದ ಆದೇಶದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಲೋಕಾಯುಕ್ತ ತನಿಖೆ ನಡೆದು ಸತ್ಯ ಸಂಗತಿ ಹೊರಬರುತ್ತದೆ ಎಂಬುದಾಗಿ ಆಶಿಸುತ್ತೇನೆ’ ಎಂದು ಹೇಳಿದರು.

 ಸಿ.ಎಂ, ಕುಟುಂಬದ ವಿರುದ್ಧದ ಆರೋಪ
ಬೆಂಗಳೂರಿನ ಕೆ.ಆರ್.ಪುರ ಹೋಬಳಿಯ ರಾಚೇನಹಳ್ಳಿ ಗ್ರಾಮದ ಸರ್ವೇ ನಂ. 56ರಲ್ಲಿ 16 ಗುಂಟೆ ಜಮೀನನ್ನು ಅವರ ಪುತ್ರರು ಮತ್ತು ಅಳಿಯ ಶೇ 75ರಷ್ಟು ಪಾಲು ಹೊಂದಿದ ಧವಳಗಿರಿ ಪ್ರಾಪರ್ಟೀಸ್‌ಗಾಗಿ 2008ರ ನವೆಂಬರ್‌ನಲ್ಲಿ ಮುಖ್ಯಮಂತ್ರಿಗಳ ಶಿಫಾರಸಿನ ಅನ್ವಯ ಡಿನೋಟಿಫಿಕೇಷನ್ ಮಾಡಿರುವುದು.

ರಾಚೇನಹಳ್ಳಿ ಗ್ರಾಮದ ಸರ್ವೇ ನಂ. 55/2ರಲ್ಲಿ 2008ರ ನವೆಂಬರ್ ತಿಂಗಳಿನಲ್ಲಿ ಸುಮಾರು 1.12 ಎಕರೆ ಜಮೀನನ್ನು ಯಡಿಯೂರಪ್ಪನವರ ಶಿಫಾರಸಿನ ಮೇರೆಗೆ ಡಿನೋಟಿಫೈ ಮಾಡಿರುವುದು.

ಬೆಂಗಳೂರಿನ ನಾಗವಾರದ ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ನೀಡಿದ್ದ ಬಡಾವಣೆಯಲ್ಲಿ ರಸ್ತೆಗೆ ಮೀಸಲು ಇಟ್ಟಿದ್ದ 47,972 ಚದರ ಅಡಿ ಜಾಗವನ್ನು ಧವಳಗಿರಿ ಪ್ರಾಪರ್ಟೀಸ್‌ಗೆ ಮಾರಾಟ ಮಾಡಿರುವುದು.

ಅಶೋಕ ವಿರುದ್ಧದ ಆರೋಪ
ಅಶೋಕ ಅವರ ವಿರುದ್ಧ ವಿಜಯನಗರದ ನಿವಾಸಿ ಎಂ.ಮಂಜುನಾಥ ಎನ್ನುವವರು ದೂರು ದಾಖಲು ಮಾಡಿದ್ದಾರೆ. ನಗರದ ಆರ್‌ಎಂವಿ ಬಡಾವಣೆಯ ಡಿನೋಟಿಫಿಕೇಷನ್ ವಿವಾದ ಇದು. ಇಲ್ಲಿಯ 23 ಗುಂಟೆ ಜಾಗವನ್ನು 1978ರಲ್ಲಿ ಬಿಡಿಎ ಸ್ವಾಧೀನ ಪಡಿಸಿಕೊಂಡಿತ್ತು. ಆದರೆ ಈ ಜಾಗದ ಪೈಕಿ 14 ಗುಂಟೆಯನ್ನು 2003ರಲ್ಲಿ ಹಾಗೂ ಉಳಿದ 9 ಗುಂಟೆ ಜಾಗವನ್ನು 2007ರಲ್ಲಿ ಅಶೋಕ ಹಾಗೂ ಇತರ 12 ಮಂದಿ ಮೂಲ ಮಾಲೀಕರಿಂದ ಖರೀದಿ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಒಮ್ಮೆ ಸ್ವಾಧೀನ ಪಡಿಸಿಕೊಳ್ಳಲಾದ ಜಮೀನನ್ನು ಖರೀದಿ ಮಾಡುವ ಮೂಲಕ ಇವರು ಕಾನೂನನ್ನು ಗಾಳಿಗೆ ತೂರಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇಷ್ಟೇ ಅಲ್ಲದೇ, ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಮೇಲೆ 2009ರಲ್ಲಿ ಸಾರಿಗೆ ಸಚಿವರಾಗಿದ್ದ ಅಶೋಕ ಅವರು ಈ ಜಮೀನಿನ ಮೂಲ ಮಾಲೀಕರಿಂದ ಅರ್ಜಿ ಕೊಡಿಸಿ ಸಂಪೂರ್ಣ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಿಸಿಕೊಳ್ಳುವಲ್ಲಿ (ಡಿನೋಟಿಫೈ) ಯಶಸ್ವಿಯಾಗಿದ್ದಾರೆ ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆಯ 420 (ವಂಚನೆ), 406 ನಂಬಿಕೆ ದ್ರೋಹ ಸೇರಿದಂತೆ ಭ್ರಷ್ಟಾಚಾರ ನಿರ್ಮೂಲನ ಕಾಯ್ದೆಯ ವಿವಿಧ ಕಲಂಗಳ ಅಡಿ ದೂರು ದಾಖಲು ಮಾಡಿಕೊಳ್ಳಲಾಗಿದೆ.

ರಾಜ್ಯಪಾಲರ ಅನುಮತಿ ಅಗತ್ಯ
ಮುಖ್ಯಮಂತ್ರಿ ಅಥವಾ ಸಚಿವರ ವಿರುದ್ಧ ಖಾಸಗಿ ದೂರು ದಾಖಲು ಮಾಡಲು ರಾಜ್ಯಪಾಲರ ಅನುಮತಿ ಅಗತ್ಯವಿದೆ. ಯಡಿಯೂರಪ್ಪನವರ ವಿರುದ್ಧ ದೂರು ದಾಖಲಿಸಲು ರಾಜ್ಯಪಾಲರು ವಕೀಲ ಬಾಷಾ ಅವರಿಗೆ  ಅನುಮತಿ ನೀಡಿದ್ದಾರೆ. ಆದರೆ ಅಶೋಕ ವಿರುದ್ಧ ದೂರು ದಾಖಲಿಸಲು ಮಂಜುನಾಥ ಅವರಿಗೆ ರಾಜ್ಯಪಾಲರಿಂದ ಅನುಮತಿ ದೊರಕಿಲ್ಲ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT