ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂಸುಫ್ ಆಟಕ್ಕೆ ದೋನಿ ಮೆಚ್ಚುಗೆ

Last Updated 19 ಜನವರಿ 2011, 19:30 IST
ಅಕ್ಷರ ಗಾತ್ರ

ಕೇಪ್‌ಟೌನ್: ದಕ್ಷಿಣ ಆಫ್ರಿಕಾದ ವೇಗಿಗಳ ದಾಳಿಯನ್ನು ಸಹಿಸಿಕೊಂಡು ಗೆಲುವು ಪಡೆಯುವುದು ಕಷ್ಟವೆಂದುಕೊಂಡವರಿಗೆ ಅಚ್ಚರಿ! ಭಾರತ ತಂಡದವರು ಇನ್ನೂ ಹತ್ತು ಎಸೆತಗಳು ಬಾಕಿ ಇರುವಾಗಲೇ ಎರಡು ವಿಕೆಟ್‌ಗಳ ಅಂತರದ ವಿಜಯ ಸಾಧಿಸಿತು. ಇದಕ್ಕೆ ಕಾರಣ ಯೂಸುಫ್ ಪಠಾಣ್ ಆಲ್‌ರೌಂಡ್ ಆಟ.ಪ್ರವಾಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದ್ದೇ ಈ ಆಕ್ರಮಣಕಾರಿ ಆಟಗಾರ. ಆದರೂ ಗೆಲುವಿನ ಚಿತ್ತವು ಅತ್ತ-ಇತ್ತ ಎನ್ನುವ ಸ್ಥಿತಿಯಂತೂ ಇತ್ತು. ಆದರೆ ಗುರಿ ಮುಟ್ಟಲು ಅಗತ್ಯವಿದ್ದ ಮೊತ್ತವನ್ನು ಹರಭಜನ್ ಸಿಂಗ್, ಜಹೀರ್ ಖಾನ್ ಹಾಗೂ ಆಶಿಶ್ ನೆಹ್ರಾ ಕಲೆಹಾಕಿದರು.

ಚೆಂಡು ಅಪಾಯಕಾರಿಯಾಗಿ ಬೌನ್ಸ್ ಆಗುತ್ತಿದ್ದ ಅಂಗಳದಲ್ಲಿ ದಕ್ಷಿಣ ಆಫ್ರಿಕಾ ತಂಡದವರು ಪೇರಿಸಿಟ್ಟ 220 ರನ್ ದೊಡ್ಡ ಸವಾಲು ಎನಿಸಿದ್ದು ಸಹಜ. ಆದರೆ ಯೋಜಿಸಿಕೊಂಡು ಗುರಿ ಮುಟ್ಟುವ ಹಾದಿಯಲ್ಲಿ ಭಾರತ ಮುನ್ನುಗ್ಗಿತು. ಸರದಿಯ ಆರಂಭದ ಕ್ರಮಾಂಕದಲ್ಲಿನ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ ಕೈಕೊಟ್ಟರು. ಇಂಥ ಸ್ಥಿತಿಯಲ್ಲಿ ಯೂಸುಫ್ ಗಟ್ಟಿಯಾಗಿ ಕ್ರೀಸ್‌ನಲ್ಲಿ ನಿಂತರು. ಆದ್ದರಿಂದಲೇ 48.2 ಓವರುಗಳಲ್ಲಿ ಎಂಟು ವಿಕೆಟ್‌ಗಳ ನಷ್ಟಕ್ಕೆ 223 ರನ್ ಗಳಿಸಿ ವಿಜಯೋತ್ಸವ ಆಚರಿಸಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಭಾರತಕ್ಕೆ 2-1ರಲ್ಲಿ ಮುನ್ನಡೆ.

ತಂಡಕ್ಕೆ ಸರಣಿಯಲ್ಲಿ ಮುನ್ನಡೆ ದೊರಕಿಸಿಕೊಟ್ಟ ಶ್ರೇಯವನ್ನೆಲ್ಲಾ ನಾಯಕ ಮಹೇಂದ್ರ ಸಿಂಗ್ ದೋನಿ ಅವರು ‘ಪಂದ್ಯ ಶ್ರೇಷ್ಠ’ ಯೂಸುಫ್ ನೀಡಿದ್ದಾರೆ. ‘ಅನುಭವದ ಬಲದೊಂದಿಗೆ ಬೆಳೆಯುತ್ತಿರುವ ಪಠಾಣ್ ಪಂದ್ಯ ಗೆಲ್ಲಿಸಿಕೊಡುವ ಬ್ಯಾಟ್ಸ್‌ಮನ್’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.ಮಂಗಳವಾರ ರಾತ್ರಿ ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೋನಿ ‘ಈ ಪಂದ್ಯದಲ್ಲಿ ಯೂಸುಫ್ ತಮ್ಮ ನೈಜ ಬ್ಯಾಟಿಂಗ್ ಪ್ರದರ್ಶಿಸಿದರು. ಭವಿಷ್ಯದಲ್ಲಿಯೂ ಹೀಗೆಯೇ ಆಡುತ್ತಾ ಸಾಗಲೆಂದು ಹಾರೈಸುತ್ತೇನೆ. ಅನುಭವ ಹೆಚ್ಚಿದಂತೆ ತಂಡದ ಯಶಸ್ಸಿಗೆ ಅವರು ಕಾರಣವಾಗುವ ಸಾಧ್ಯತೆ ಇನ್ನಷ್ಟು ಹೆಚ್ಚುತ್ತದೆ’ ಎಂದರು.

‘ಕೆಳ ಮಧ್ಯಮ ಕ್ರಮಾಂಕದ ಆಟಗಾರರು ಇನಿಂಗ್ಸ್‌ಗೆ ಬಲ ನೀಡಿದ್ದು ಸಂತಸ. ಹೆಚ್ಚು ಸಂಭ್ರಮಕ್ಕೆ ಕಾರಣವಾಗಿದ್ದು ಯೂಸುಫ್ ಆಟ. ಅವರು ತಂಡವನ್ನು ಜಯದ ಹತ್ತಿರ ತಂದು ನಿಲ್ಲಿಸಿದರು ಎನ್ನುವುದನ್ನು ಮರೆಯುವಂತಿಲ್ಲ’ ಎಂದ ‘ಮಹಿ’ ತಮ್ಮ ತಂಡದ ಆರಂಭದ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ತಂಡಕ್ಕೆ ನಿರೀಕ್ಷಿಸಿದಷ್ಟು ರನ್‌ಗಳು ಬರಲಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಯೂಸುಫ್ ಪ್ರತಿಕ್ರಿಯಿಸಿ ‘ಇದೊಂದು ಮೆಚ್ಚುವಂಥ ಗೆಲುವು. ಸರಣಿಯಲ್ಲಿಯೂ ಮುನ್ನಡೆ ದೊರೆಯಿತು. ತಂಡದ ಯಶಸ್ಸಿಗೆ ನನ್ನ ಬ್ಯಾಟಿಂಗ್ ಪ್ರಯೋಜನಕ್ಕೆ ಬಂದಿತು ಎನ್ನುವುದು ಸಂತಸಗೊಳ್ಳುವಂತೆ ಮಾಡಿದೆ’ ಎಂದರು.‘ಎದುರಾಳಿ ಬೌಲರ್‌ಗಳ ಮನದಲ್ಲಿ ನಾನು ಎಂಥ ಎಸೆತವನ್ನೂ ದಂಡಿಸುತ್ತೇನೆ ಎನ್ನುವ ಸಂದೇಶವನ್ನು ಬ್ಯಾಟ್ ಬೀಸುವ ಮೂಲಕವೇ ರವಾನಿಸಬೇಕು. ನಾನು ಹಾಗೆಯೇ ಮಾಡುತ್ತೇನೆ. ಆಗ ಬೌಲರ್‌ಗಳು ಎಷ್ಟೇ ಒತ್ತಡ ಹೇರುವ ಪ್ರಯತ್ನ ಮಾಡಿದರೂ, ನಿರ್ಭಯವಾಗಿ ಆಡುವುದು ಸಾಧ್ಯವಾಗುತ್ತದೆ. ಪ್ರತಿಯೊಂದು ಪಂದ್ಯದಲ್ಲಿ ನಾನು ಇಂಥದೇ ಪ್ರಯತ್ನ ಮಾಡುತ್ತೇನೆ’ ಎಂದು ಅವರು ವಿವರಿಸಿದರು.

ಆರು ಬೌಂಡರಿ ಹಾಗೂ ಮೂರು ಸಿಕ್ಸರ್ ಸಿಡಿಸಿ 59 ರನ್ ಗಳಿಸಿದ ಪಠಾಣ್ ಪಿಚ್ ಸ್ವರೂಪ ಹೇಗೆ ಇದ್ದರೂ ದಿಟ್ಟತನದಿಂದ ಆಡುವ ಛಲ ತಮ್ಮಲ್ಲಿದೆ ಎಂದು ವಿಶ್ವಾಸದಿಂದ ನುಡಿದರು. ‘ಇಲ್ಲಿನ ಅಂಗಳದಲ್ಲಿ ಚೆಂಡು ಅಪಾಯಕಾರಿಯಾಗಿ ಪುಟಿದೇಳುತಿತ್ತು. ಆದರೆ ಕೆಲವು ಎಸೆತಗಳನ್ನು ಎದುರಿಸಿದ ನಂತರ ಚೆಂಡು ಯಾವ ಕೋನದಲ್ಲಿ ಹಾಗೂ ಎಷ್ಟು ಎತ್ತರಕ್ಕೆ ಬರುತ್ತದೆಂದು ನಿರ್ಧರಿಸುವುದು ಸುಲಭ. ಒಂದಿಷ್ಟು ಬಿರುಸಿನ ಹೊಡೆತಗಳನ್ನು ಪ್ರಯೋಗಿಸಿದರೆ ಎದುರಾಳಿ ತಂಡದ ನಾಯಕ ಕ್ಷೇತ್ರ ರಕ್ಷಣೆಯ ಯೋಜನೆಯನ್ನೇ ಬದಲಿಸುವಂತೆ ಮಾಡಬಹುದು. ಅದಕ್ಕೆ ಈ ಪಂದ್ಯದಲ್ಲಿನ ನನ್ನ ಆಟವೇ ಸಾಕ್ಷಿಯಾಗಿದೆ’ ಎಂದರು.

ಸ್ಕೋರ್ ವಿವರ
ದಕ್ಷಿಣ ಆಫ್ರಿಕಾ: 49.2  ಓವರುಗಳಲ್ಲಿ 220
ಗ್ರೇಮ್ ಸ್ಮಿತ್ ಸಿ ವಿರಾಟ್ ಕೊಹ್ಲಿ ಬಿ ಹರಭಜನ್ ಸಿಂಗ್  43
ಹಾಶೀಮ್ ಆಮ್ಲಾ ಬಿ ಜಹೀರ್ ಖಾನ್  16
ಕಾಲಿನ್ ಇನ್‌ಗ್ರಾಮ್ ಸಿ  ಕೊಹ್ಲಿ ಬಿ ಹರಭಜನ್ ಸಿಂಗ್  10
ಎಬಿ ಡಿವಿಲಿಯರ್ಸ್ ಸಿ ಜಹೀರ್ ಬಿ ಯೂಸುಫ್ ಪಠಾಣ್  16
ಜೆನ್ ಪಾಲ್ ಡುಮಿನಿ ಬಿ ಜಹೀರ್ ಖಾನ್  52
ಫಾಫ್ ಡು ಪ್ಲೆಸ್ಸಿಸ್ ಸಿ ಕೊಹ್ಲಿ ಬಿ ಮುನಾಫ್ ಪಟೇಲ್  60
ಜಾನ್ ಬೋಥಾ ಬಿ ಜಹೀರ್ ಖಾನ್  09
ವಯ್ನೆ ಪರ್ನೆಲ್ ರನ್‌ಔಟ್   05
ಡೆಲ್ ಸ್ಟೇನ್ ಸಿ ಸುರೇಶ್ ರೈನಾ ಬಿ ಮುನಾಫ್ ಪಟೇಲ್  05
ಮಾರ್ನ್ ಮಾರ್ಕೆಲ್ ಔಟಾಗದೆ  00
ಲಾನ್‌ವಾಬೊ ತ್ಸೊತ್ಸೊಬೆ ರನ್‌ಔಟ್   00
ಇತರೆ: (ವೈಡ್-4)  04
ವಿಕೆಟ್ ಪತನ: 1-31 (ಆಮ್ಲಾ; 6.5), 2-49 (ಇನ್‌ಗ್ರಾಮ್; 13.1), 3-83 (ವಿಲಿಯರ್ಸ್; 20.3), 4-90 (ಗ್ರೇಮ್ ಸ್ಮಿತ್; 23.2), 5-200 (ಪ್ಲೆಸ್ಸಿಸ್; 44.5), 6-202 (ಡುಮಿನಿ; 45.2), 7-207 (ಪರ್ನೆಲ್; 45.5), 8-216 ( ಸ್ಟೇನ್; 48.1), 9-219 (ಬೋಥಾ; 49.1), 10-220 (ತ್ಸೊತ್ಸೊಬೆ; 49.2).
ಬೌಲಿಂಗ್: ಜಹೀರ್ ಖಾನ್ 9.2-0-43-3, ಮುನಾಫ್ ಪಟೇಲ್ 10-1-42-2, ಆಶಿಶ್ ನೆಹ್ರಾ 7-0-42-0, ಹರಭಜನ್ ಸಿಂಗ್ 9-1-23-2, ಯೂಸುಫ್ ಪಠಾಣ್ 6-0-27-1, ಯುವರಾಜ್ ಸಿಂಗ್ 6-0-30-0, ರೋಹಿತ್ ಶರ್ಮ 1-0-5-0, ಸುರೇಶ್ ರೈನಾ 1-0-8-0
ಭಾರತ: 48.2 ಓವರ್‌ಗಳಲ್ಲಿ 8 ವಿಕೆಟ್‌ಗೆ 223
ರೋಹಿತ್ ಶರ್ಮ ಬಿ ಮಾರ್ನ್ ಮಾರ್ಕೆಲ್  23
ಮುರಳಿ ವಿಜಯ್ ಸಿ ಮತ್ತು ಬಿ ಡೆಲ್ ಸ್ಟೇನ್  01
ವಿರಾಟ್ ಕೊಹ್ಲಿ ಸಿ ವಿಲಿಯರ್ಸ್ ಬಿ ಮಾರ್ನ್ ಮಾರ್ಕೆಲ್  28
ಯುವರಾಜ್ ಸಿಂಗ್ ಎಲ್‌ಬಿಡಬ್ಲ್ಯು ಬಿ ಡುಮಿನಿ  16
ಮಹೇಂದ್ರ ಸಿಂಗ್ ದೋನಿ ಸಿ ವಿಲಿಯರ್ಸ್ ಬಿ ಬೋಥಾ 05
ಸುರೇಶ್ ರೈನಾ ಸಿ ಡಿವಿಲಿಯರ್ಸ್ ಬಿ ಮಾರ್ನ್ ಮಾರ್ಕೆಲ್  37
ಯೂಸುಫ್ ಪಠಾಣ್ ಸಿ ಮಾರ್ಕೆಲ್ ಬಿ ಡೆಲ್ ಸ್ಟೇನ್  59
ಹರಭಜನ್ ಸಿಂಗ್ ಔಟಾಗದೆ  23
ಜಹೀರ್ ಖಾನ್ ಸಿ ಸ್ಮಿತ್ ಬಿ ಲಾನ್‌ವಾಬೊ ತ್ಸೊತ್ಸೊಬೆ  14
ಆಶೀಶ್ ನೆಹ್ರಾ ಔಟಾಗದೆ  06
ಇತರೆ: (ಲೆಗ್ ಬೈ-5, ವೈಡ್-6)  11
ವಿಕೆಟ್ ಪತನ: 1-4 (ವಿಜಯ್; 2.2), 2-56 (ಕೊಹ್ಲಿ; 14.6), 3-61 (ರೋಹಿತ್; 16.3), 4-69 (ದೋನಿ; 19.5), 5-93 (ಯುವರಾಜ್; 24.3), 6-168 (ರೈನಾ; 36.4), 7-182 (ಪಠಾಣ್; 39.5), 8-208 (ಜಹೀರ್; 45.5).
ಬೌಲಿಂಗ್: ಡೆಲ್ ಸ್ಟೇನ್ 10-1-31-2, ಲಾನ್‌ವಾಬೊ ತ್ಸೊತ್ಸೊಬೆ 10-0-41-1, ವಯ್ನೆ ಪರ್ನೆಲ್ 8-0-53-0, ಮಾರ್ನ್ ಮಾರ್ಕೆಲ್ 10-0-28-3, ಜಾನ್ ಬೋಥಾ 7.2-1-48-1, ಜೆಪಿ ಡುಮಿನಿ 2-0-9-1, ಫಾಫ್ ಡು ಪ್ಲೆಸ್ಸಿಸ್ 1-0-8-0
ಫಲಿತಾಂಶ: ಭಾರತಕ್ಕೆ 2 ವಿಕೆಟ್ ಜಯ; ಸರಣಿಯಲ್ಲಿ 2-1ರ ಮುನ್ನಡೆ: ಪಂದ್ಯಶ್ರೇಷ್ಠ: ಯೂಸುಫ್ ಪಠಾಣ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT