ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಧನಿಗೆ ಲಭಿಸದ ಸೌಲಭ್ಯ

Last Updated 25 ಜನವರಿ 2011, 19:30 IST
ಅಕ್ಷರ ಗಾತ್ರ

ಮೈಸೂರು: ‘ನಾನು ನಿವೃತ್ತ, ಮಗ ನಿವೃತ್ತ, ಮನಸ್ಸೂ ನಿವೃತ್ತ’....ಆ ಹಿರಿಯ ಜೀವದ ಮಾತಿನಲ್ಲಿ ಮಾರ್ಮಿಕತೆ ಇತ್ತು. ನೋವಿತ್ತು. ನಗರದ ಕಲ್ಯಾಣಗಿರಿ ಬಡಾವಣೆಯ ಹಳೆ ಮನೆಯಲ್ಲಿನ ತನ್ನ ಕಾಲದ ಖುರ್ಚಿಯಲ್ಲಿ ಕುಳಿತು ಮಾತಿನ ಮಂಟಪಕ್ಕೆ ಬಂದ ಅವರು ಅಂಚೆ ಇಲಾಖೆಯ ಆತ್ಮಕಥನ ಹೇಳುವ ಗೋಜಿಗೆ ಹೋಗಲಿಲ್ಲ. ಬದಲಿಗೆ ಮಗನ ಸಾಹಸದ ಕಥೆ ಬಿಚ್ಚಿಡುತ್ತಲೇ ಗಟ್ಟಿಯಾದರು.

ಈ ಹಿರಿಯ ಜೀವದ ಹೆಸರು ಬಿ.ಎನ್. ನೀಲ ಕಂಠನ್. ನಿವೃತ್ತ ಅಂಚೆ ಇಲಾಖೆ ಇನ್ಸ್‌ಪೆಕ್ಟರ್. ಮಗನ ಹೆಸರು ಬಿ.ಎನ್.ನಂಜುಂಡರಾವ್.ಹಿರಿಯರು ವಯಸ್ಸಾದಂತೆ ತಮ್ಮ ಕಷ್ಟ ಹೇಳಿಕೊಂಡು ಅಲವತ್ತುಕೊಳ್ಳುವುದು ಉಂಟು. ಆದರೆ, ಈ ಜೀವಕ್ಕೆ ‘ತನ್ನ ಮಗನಿಗೆ ನೆಲೆ ಸಿಗಲಿಲ್ಲ’ ಎಂಬ ಕೊರಗು. ಆದರೆ, ಇವರ ಮಗ ಯೋಧ. ಬರೀ ಯೋಧನಲ್ಲ ವೀರಚಕ್ರ ಪಡೆದ ಕನ್ನಡದ ಕಲಿ. ಅವರಿಗೆ ಸಿಕ್ಕಿದ್ದು  ಬಿಡಿಗಾಸು. ಶ್ರೀಲಂಕಾದಲ್ಲಿ ನಡೆದ ಕದನದಲ್ಲಿ ಗಾಯಗೊಂಡು, ವೀರಚಕ್ರ ಪಡೆದರೂ ಅವರಿಗೆ ಕನ್ನಡದ  ಮಣ್ಣಲ್ಲಿ ಗೌರವವೂ ಸಿಕ್ಕಿಲ್ಲ.

‘ದೇಶಕ್ಕಾಗಿ ಪ್ರಾಣದ ಹಂಗು ತೊರೆದು ಹೋರಾಡಿ ನನ್ನ ಮಗನಿಗೆ ಸರ್ಕಾರ ಸವಲತ್ತು ನೀಡಬೇಡವೇ? ವೀರಚಕ್ರ ಪಡೆದ ಯೋಧನಿಗೆ ರಾಜ್ಯ ಸರ್ಕಾರ ಕೇವಲ 50 ಸಾವಿರ ರೂಪಾಯಿ ನೀಡಿ ಕೈ ತೊಳೆದುಕೊಂಡಿದೆ. ಪಂಜಾಬ್, ರಾಜಾಸ್ಥಾನ, ಹರಿಯಾಣ, ಉತ್ತರಪ್ರದೇಶ ರಾಜ್ಯಗಳಲ್ಲಿ ವೀರಚಕ್ರ ಪಡೆದ ಯೋಧರಿಗೆ ಸರ್ಕಾರ ನಗದು, ನಿವೇಶನ ಹಾಗೂ ಇತರೆ ಸೌಲಭ್ಯ ನೀಡಿ ಗೌರವಿಸಿದೆ. ಆದರೆ ರಾಜ್ಯ ಸರ್ಕಾರ ಕೇವಲ ನಗದು ಹಣ ನೀಡಿ ಸುಮ್ಮನಾಗಿದೆ. ನಿವೇಶನ ಅಥವಾ ಮನೆ ನೀಡುವಂತೆ ರಾಜ್ಯಪಾಲರು ಹಾಗೂ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’

‘ನಾವು ಅನಾರೋಗ್ಯದಿಂದ ಬಳಲುತ್ತಿದ್ದೇವೆ. ಈಗ ನನ್ನ ಮಗ ಬಿ.ಎನ್.ನಂಜುಂಡರಾವ್, ಸದ್ಯ ಹೈದರಾಬಾದ್‌ನಲ್ಲಿ ಸಿವಿಲ್ ಕನ್ಸ್‌ಟ್ಟ್ರಕ್ಷನ್‌ನಲ್ಲಿ ತೊಡಗಿಸಿಕೊಂಡಿದ್ದಾನೆ. ಯೋಧನೊಬ್ಬ ಸರ್ಕಾರಿ ಸವಲತ್ತಿನ ಆಸೆ ಬಿಟ್ಟು ಹೋಗುವುದು ಎಂದರೆ ಈ ರಾಜ್ಯದ ಅಭಿಮಾನ ಏನಾಗಬೇಕು’.

1983ರಲ್ಲಿ ಸೇನೆಗೆ ಸೇರ್ಪಡೆಯಾದ. 1987ರಲ್ಲಿ ಶ್ರೀಲಂಕಾಕ್ಕೆ ನಿಯೋಜಿಸಲಾಯಿತು. ಯುದ್ಧದ ಸಂದರ್ಭದಲ್ಲಿ ನೆಲ ಬಾಂಬ್ ಸ್ಫೋಟಗೊಂಡು ಬಲ ತೊಡೆಗೆ ತೀವ್ರ ಗಾಯವಾಯಿತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಈತನನ್ನು ಜಾಫ್ನ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಆಸ್ಪತ್ರೆ ಭರ್ತಿಯಾದ್ದರಿಂದ ವಿಮಾನದ ಮೂಲಕ ಬೆಂಗಳೂರಿನ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ಬಳಿಕ ಗುಣಮುಖನಾದ’.ಸಿಟ್ಟಿನಿಂದ ನಿಟ್ಟುಸಿರು ಬಿಟ್ಟರು ನೀಲಕಂಠನ್. ಮುಖದಲ್ಲಿ ಆಕ್ರೋಶದ ಛಾ. ಸರ್ಕಾರದ ಸೌಲಭ್ಯಕ್ಕಾಗಿ ಅವರು ಅಲೆಯುವುದು ತಪ್ಪಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT