ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಿತ್, ಪ್ರಶಾಂತ್‌ಗೆ ಗೆಲುವಿನ ಸಿಂಚನ

ಧಾರವಾಡ ಓಪನ್ ಐಟಿಎಫ್ ಟೆನಿಸ್ ಟೂರ್ನಿ
Last Updated 10 ಡಿಸೆಂಬರ್ 2012, 21:01 IST
ಅಕ್ಷರ ಗಾತ್ರ

ಧಾರವಾಡ: ಮೂರನೇ ಶ್ರೇಯಾಂಕಿತ ಆಟಗಾರ ವಿ.ಎಂ. ರಂಜಿತ್ ಹಾಗೂ ಐದನೇ ಶ್ರೇಯಾಂಕಿತ ಎನ್. ಪ್ರಶಾಂತ್ ಸೋಮವಾರ ಇಲ್ಲಿನ ರಾಜಾಧ್ಯಕ್ಷ ಟೆನಿಸ್ ಅಂಕಣದಲ್ಲಿ ಆರಂಭವಾದ ಧಾರವಾಡ ಓಪನ್ ಪುರುಷರ ಐಟಿಎಫ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಜಯಗಳಿಸುವ ಮೂಲಕ ಮುನ್ನಡೆದಿದ್ದಾರೆ.

ಬೆಳಿಗ್ಗೆ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ತಮಿಳುನಾಡಿನ ರಂಜಿತ್ 6-4, 7-5 ಅಂತರದಿಂದ ಮೋಹಿತ್ ಮಯೂರ್ ಅವರನ್ನು ಮಣಿಸಿದರು. ಮೊದಲ ಸೆಟ್‌ನ ಆರಂಭದಲ್ಲಿ ಬಲವಾದ ಹೊಡೆತಗಳಿಂದ ಎದುರಾಳಿಯನ್ನು ಮಣಿಸುವ ಮೋಹಿತ್ ಯತ್ನಕ್ಕೆ ಫಲ ಸಿಗಲಿಲ್ಲ. ಏಳನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್  ಮುರಿಯುವ ಮೂಲಕ ಮುನ್ನಡೆ ಕಾಯ್ದುಕೊಂಡ ರಂಜಿತ್ ಸೆಟ್ ತಮ್ಮದಾಗಿಸಿಕೊಂಡರು.

ಎರಡನೇ ಸೆಟ್‌ನಲ್ಲಿ ಸಮಬಲದ ಸ್ಪರ್ಧೆ ನಡೆಯಿತು. 5-5ರಲ್ಲಿ ಸೆಟ್ ಸಮವಾಗಿದ್ದ ಸಂದರ್ಭ ಸರ್ವ್‌ನಲ್ಲಿ     ಎಡವಿದ ಮೋಹಿತ್ ಮುನ್ನಡೆ ಬಿಟ್ಟುಕೊಟ್ಟರು. ಸೆಟ್‌ನ 12ನೇ ಗೇಮ್ ತಮ್ಮದಾಗಿಸಿಕೊಳ್ಳುವ ಮೂಲಕ ರಂಜಿತ್ ಪಂದ್ಯ ಗೆದ್ದರು.

ಮತ್ತೊಂದು ಪಂದ್ಯದಲ್ಲಿ ಐದನೇ ಶ್ರೇಯಾಂಕಿತ ಪ್ರಶಾಂತ್ 5-7, 6-4, 6-1ರಿಂದ ವಿವೇಕ್ ಶೋಕಿನ್ ಎದುರು ಗೆಲುವು ಸಾಧಿಸಿದರು. ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ ಪ್ರಶಾಂತ್ ಉಳಿದೆರಡು ಸೆಟ್‌ನಲ್ಲಿ ಮೇಲುಗೈ ಸಾಧಿಸಿದರು.

`ವೈಲ್ಡ್‌ಕಾರ್ಡ್' ಪ್ರವೇಶ ಗಿಟ್ಟಿಸಿದ್ದ ಮೈಸೂರಿನ ಸೂರಜ್ ಪ್ರಭೋದ್ 2-6, 2-6ರಿಂದ ವಿನಾಯಕ ಶರ್ಮ ಎದುರು ಮಂಡಿಯೂರಿದರು. ಮತ್ತೊಂದು ಪಂದ್ಯದಲ್ಲಿ ಹಾಲೆಂಡ್‌ನ ಪ್ರತಿಭೆ ಕೊಲಿನ್ ವ್ಯಾನ್‌ಬೀಮ್ 6-3, 6-1 ಅಂತರದಿಂದ ರೋಹನ್ ಜಿಡೆ ವಿರುದ್ಧ ಸುಲಭ ಜಯ ದಾಖಲಿಸಿದರು.

ಡಬಲ್ಸ್‌ನಲ್ಲಿ ಆಘಾತ: ಡಬಲ್ಸ್ ವಿಭಾಗದಲ್ಲಿ ಅಚ್ಚರಿಯ ಫಲಿತಾಂಶ ಹೊರಹೊಮ್ಮಿತು. ಮೂರನೇ ಶ್ರೇಯಾಂಕಿತ ಜೋಡಿ ಹಾಲೆಂಡ್‌ನ ಜೋರಿನ್ ಬೆನಾರ್ಡ್ ಮತ್ತು ಕೊಲಿನ್ ವ್ಯಾನ್‌ಬೀಮ್ 3-6, 6-3 (10-5) ರಿಂದ ಭಾರತದ ಅಜಯ್ ಸೆಲ್ವರಾಜ್ ಹಾಗೂ ಅಶ್ವಿನ್ ವಿಜಯರಾಘವನ್ ಎದುರು ಪರಾಭವಗೊಂಡರು.

ಮತ್ತೊಂದು ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕಿತ ವಿಜಯಂತ್ ಮಲಿಕ್ ಮತ್ತು ವಿವೇಕ್ ಶೋಕಿನ್ ಜೋಡಿ 7-6 (4), 4-6 (10-5) ರಿಂದ ಅರ್ಜುನ್ ಖಾಡೆ ಹಾಗೂ ಕಾಜಾ ವಿನಾಯಕ್ ಶರ್ಮಾ ವಿರುದ್ಧ ಸೋಲುಂಡರು.

ಮಂಗಳವಾರ ನಡೆಯಲಿರುವ ಸಿಂಗಲ್ಸ್ ಪಂದ್ಯಗಳಲ್ಲಿ ಟೂರ್ನಿಯ ಅಗ್ರ ಶ್ರೇಯಾಂಕಿತ ಶ್ರೀರಾಮ್ ಬಾಲಾಜಿ ಹಾಗೂ ಎರಡನೇ ಶ್ರೇಯಾಂಕಿತ ಸನಮ್ ಸಿಂಗ್ ಕಣಕ್ಕಿಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT