ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತಹೀನತೆ ಪ್ರಮಾಣ ಹೆಚ್ಚಳ: ಆತಂಕ

Last Updated 9 ಜನವರಿ 2012, 9:30 IST
ಅಕ್ಷರ ಗಾತ್ರ

ಮೊಳಕಾಲ್ಮುರು:  ಗಡಿ ತಾಲ್ಲೂಕು ಮೊಳಕಾಲ್ಮುರು ವಿವಿಧ ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಪ್ರಮುಖವಾಗಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿದ್ದು, ಇದಕ್ಕೆ ರಕ್ತಹೀನತೆ ಪ್ರಕರಣಗಳು ಹೆಚ್ಚಾಗಿ ಕಂಡುಬರುವ ಮೂಲಕ ರಾಜ್ಯಮಟ್ಟದಲ್ಲಿ ಗಮನ ಸೆಳೆದಿರುವುದು ಒತ್ತು ನೀಡಿದೆ.

ತಾಲ್ಲೂಕಿನಲ್ಲಿ ಗರ್ಭಿಣಿಯರಲ್ಲಿ, ಮಕ್ಕಳಲ್ಲಿ ಹಾಗೂ ಹದಿಹರೆಯರಲ್ಲಿ ಹೆಚ್ಚಿನ ರಕ್ತಹೀನತೆ ಪ್ರಕರಣಗಳು ಕಂಡುಬಂದಿರುವ ಮೂಲಕ ಆತಂಕ ಮೂಡಿಸಿದೆ. ಮುಂದಿನ ದಿನಗಳಲ್ಲಿ ಇದನ್ನು ತಡೆಯಲು ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವ ತುರ್ತು ಇದೆ ಎಂದು ಈಗಾಗಲೇ ನಡೆಸಲಾಗಿರುವ ಸಮೀಕ್ಷೆ ವರದಿಗಳು ಸ್ಪಷ್ಟಪಡಿಸಿವೆ.

ಈ ಸಂಬಂಧ ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೈರಾಡ ಸಂಸ್ಥೆ ಮುಖ್ಯಸ್ಥ ವಿಶ್ವನಾಥ್ ನೀಡಿರುವ ಮಾಹಿತಿ ಪ್ರಕಾರ, `ರಾಜ್ಯದಲ್ಲಿ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕು, ಕೋಲಾರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕು ಮತ್ತು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನಲ್ಲಿ ರಕ್ತಹೀನತೆ ಪ್ರಕರಣಗಳ ಸಮೀಕ್ಷೆ ಹಾಗೂ ಚಿಕಿತ್ಸೆ ಕಾರ್ಯ ಆರಂಭಿಸಲಾಗಿದೆ. ಸೆಂಟ್ಸ್‌ಜಾನ್ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮೈರಾಡ ಸಂಸ್ಥೆ ಕಾರ್ಯಕ್ರಮದ ಹೊಣೆ ಹೊತ್ತಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ತಾಲ್ಲೂಕಿನ 109 ಗ್ರಾಮಗಳಲ್ಲಿ ರಕ್ತಹೀನತೆ ಗುರುತಿಸುವ ಸಲುವಾಗಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. 2,500 ಗರ್ಭಿಣಿಯರಿಗೆ, 11 ಸಾವಿರ ಹದಿಹರೆಯದ ವಿದ್ಯಾರ್ಥಿಗಳಿಗೆ ಹಾಗೂ 10 ಸಾವಿರ ಮಕ್ಕಳು ಸೇರಿದಂತೆ ಸುಮಾರು 25 ಸಾವಿರ ಮಂದಿಗೆ ರಕ್ತಪರೀಕ್ಷೆ ಮಾಡಲಾಗಿದೆ. ಈ ಪೈಕಿ ಗರ್ಭಿಣಿಯರಲ್ಲಿ ಶೇ. 60-65ರಷ್ಟು, ಹದಿಹರೆಯ ವಿದ್ಯಾರ್ಥಿಗಳಲ್ಲಿ ಶೇ. 35-40ರಷ್ಟು ಮತ್ತು ಮಕ್ಕಳಲ್ಲಿ ಶೇ. 50-60ರಷ್ಟು ಮಂದಿಗೆ ರಕ್ತಹೀನತೆ ಇರುವುದು ಕಂಡುಬಂದಿದೆ ಎಂದು ವಿಶ್ವನಾಥ್ ಹೇಳುತ್ತಾರೆ.

ಸಂಸ್ಥೆ ಆರೋಗ್ಯ ಇಲಾಖೆ ಜತೆಗೂಡಿ ಕಬ್ಬಿಣ ಅಂಶವುಳ್ಳ ಮಾತ್ರೆ ಹಾಗೂ ಜಂತುಹುಳು ನಿವಾರಣೆ ಮಾತ್ರೆಗಳನ್ನು ಉಚಿತವಾಗಿ ನೀಡುತ್ತಿರುವ ಜತೆಗೆ ಸ್ಥಳೀಯ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದುಕೊಂಡು ಯಾವ ರೀತಿ ಪೌಷ್ಟಿಕ ಆಹಾರ ಸೇವನೆ ಸಾಧ್ಯವಿದೆ ಎಂಬ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಜ. 9ರಂದು ತಾಲ್ಲೂಕಿನಾದ್ಯಂತ `ಜಂತುಹುಳು ನಿವಾರಣೆ ದಿನಾಚರಣೆ~ ಸಹ ಹಮ್ಮಿಕೊಳ್ಳಲಾಗಿದೆ ಎಂದರು.

ಸ್ಥಳೀಯವಾಗಿ ಸಿಗುವ ಸೊಪ್ಪು, ತರಕಾರಿ, ಹಣ್ಣು, ಶೇಂಗಾ, ದವಸಗಳನ್ನು ಕಡಿಮೆ ವೆಚ್ಚದಲ್ಲಿ ಬಳಕೆ ಮಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದರೂ ಸಹ ಯೋಜನೆ ಕೇವಲ ಮೂರು ವರ್ಷಕ್ಕೆ ಸೀಮಿತವಾಗಿದೆ. ಅವಧಿ ಮುಗಿದ ನಂತರ ಮತ್ತೆ ಸಮಸ್ಯೆ ಮುಂದುವರಿಯುವ ಸಾಧ್ಯತೆಗಳು ದಟ್ಟವಾಗಿದೆ. ಆದ್ದರಿಂದ ಮೂರು ವರ್ಷದ ನಂತರವೂ ಆರೋಗ್ಯ, ಶಿಕ್ಷಣ, ಶಿಶು ಅಭಿವೃದ್ಧಿ ಇಲಾಖೆಗಳು ಜಾಗೃತಿ ಮೂಡಿಸುವುದನ್ನು ಮುಂದುವರಿಸಿದಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಿದೆ ಎಂಬುದು ಸಾರ್ವಜನಿಕರ ಸಲಹೆ.               
                
ಇಂದು ಜಂತುಹುಳು ನಾಶಕ ವಿತರಣೆ ಕಾರ್ಯಕ್ರಮ
ತಾಲ್ಲೂಕಿನಾದ್ಯಂತ ಜ. 9ರಂದು ರಕ್ತಹೀನತೆ ತಡೆಗಟ್ಟಲು ಜಂತು ಹುಳು ನಿವಾರಣಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತವಾಗಿ ಜಂತು ಹುಳುನಾಶಕ ಮಾತ್ರೆ ವಿತರಿಸಲಾಗುವುದು ಎಂದು ಮೈರಾಡ ಸಂಸ್ಥೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT