ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಟ್ಟೆ ಬಲದ ರೊಟ್ಟಿ ಕೇಂದ್ರ

Last Updated 8 ಜೂನ್ 2012, 19:30 IST
ಅಕ್ಷರ ಗಾತ್ರ

ಈಗ ಸರಿಯಾಗಿ ಒಂದು ದಶಕದ ಹಿಂದಿನ ಮಾತು. ಧಾರವಾಡದ ಹಿಂದಿ ಪ್ರಚಾರ ಸಭೆಯ ಬಳಿ ಇಳಿಜಾರು ರಸ್ತೆಯ ಎಡಭಾಗದ ಅಂಗಡಿಯ `ಅನ್ನಪೂರ್ಣ ರೊಟ್ಟಿ-ಪಲ್ಯ ಕೇಂದ್ರ~ ಎಂಬ ಫಲಕ ಅಕ್ಕಪಕ್ಕದ ಅಂಗಡಿಯವರಿಗೆ, ದಾರಿಹೋಕರಿಗೆ ನಗುವ ಸಂಗತಿಯಾಗಿತ್ತು.

`ಏನಪ್ಪಾ ಪ್ರತಿ ಮನ್ಯಾಗೂ ಅವರಿಗೆ ಬೇಕಾದ ರೊಟ್ಟಿ ಪಲ್ಯ ಮಾಡ್ಕೋತಾರು, ಖಾನಾವಳಿ ಅದಾವು. ಇವರದ್ದೇನು ಕೇಂದ್ರ?~ಎಂದು ಟೀಕಿಸುವವರ ಮಧ್ಯೆ ತಮ್ಮ ಆತ್ಮವಿಶ್ವಾಸದೊಂದಿಗೆ ನಸುನಗುತ್ತಲೇ ದಿನಕ್ಕೆ ಒಂದೆರಡು ರೊಟ್ಟಿ ವ್ಯಾಪಾರ ಆದರೂ ಅಂಗಡಿ ಮುಚ್ಚದೇ ಮುನ್ನೆಡೆಸಿದವರು ಲಕ್ಷ್ಮೀ ಇರಕಲ್.

ಹುಬ್ಬಳ್ಳಿ ಮೂಲದ ಲಕ್ಷ್ಮೀ ಓದಿದ್ದು ಹತ್ತನೇ ತರಗತಿ. ಮದುವೆಯ ನಂತರ ಧಾರವಾಡದ ಅವಿಭಕ್ತ ಕುಟುಂಭವೊಂದಕ್ಕೆ ಸೇರಿದರು. ಇಬ್ಬರು ಮಕ್ಕಳು ದೊಡ್ಡವರಾದಂತೆ ಮನೆಯಲ್ಲಿ ಆರ್ಥಿಕ ಮುಗ್ಗಟ್ಟು.
 
ತಮ್ಮ ಪ್ರತಿ ಅಗತ್ಯಕ್ಕೂ ಬೇರೆಯವರ ಮುಂದೆ ಕೈಚಾಚುವುದು ಕಷ್ಟವೆನಿಸಿತು. ತಾನೂ ದುಡಿಯಬೇಕು. ತಮ್ಮಂಥ ಕೆಲವು ಹೆಣ್ಣುಮಕ್ಕಳಿಗೆ ದುಡಿಮೆಯ ದಾರಿ ತೋರಬೇಕು ಎಂಬ ಆಶಯದೊಂದಿಗೆ ಒಂದು ಅಂಗಡಿ ಬಾಡಿಗೆಗೆ ಹಿಡಿದು ಗಾರ್ಮೆಂಟ್ ಆರಂಭಿಸಿದರು.

 ಹೆಚ್ಚಿನ ಯಶಸ್ಸು ಕಾಣಲಿಲ್ಲ. ಪರಿಚಿತರೊಬ್ಬರು `ಧಾರವಾಡದ ಮಂದಿಗೆ ರೊಟ್ಟಿ ಇಲ್ಲದ ನಡಿಯಂಗಿಲ್ಲ. ರೊಟ್ಟಿ ಮಾಡಿ ಮಾರು~ ಎಂದು, ರೊಟ್ಟಿ ಪಲ್ಲೆ ಕೇಂದ್ರದ ಬ್ಯಾನರ್ ತಂದುಕೊಟ್ಟರು. ಲಕ್ಷ್ಮೀ ಹೊಸ ಸಾಹಸಕ್ಕೆ ಅಡಿ ಇಟ್ಟರು.
 

ತೆರೆದ ಭಾಗ್ಯದ ಬಾಗಿಲು
ಪ್ರಾರಂಭದಲ್ಲಿ ಮನೆಯಿಂದ ರೊಟ್ಟಿ, ಚಟ್ನಿ ಪುಡಿಗಳು, ಪಲ್ಯ ತಯಾರಿಸಿ ತಂದಿಟ್ಟು ಮಾರಿದರು. ಸುಮಾರು ಆರು ತಿಂಗಳಲ್ಲಿ ವ್ಯಾಪಾರ ಕುದುರಿತು. ಇಬ್ಬರು ಕೆಲಸದವರನ್ನು ತೆಗೆದುಕೊಂಡು ಕೇಂದ್ರದಲ್ಲಿಯೇ ರೊಟ್ಟಿ, ಚಪಾತಿ, ಪಲ್ಯ ಮಾಡಿಸಲಾರಂಭಿಸಿದರು.

ಖರೀದಿಸಿದ ಗಿರಾಕಿಗಳಿಗೆ `ರೊಟ್ಟಿ ಪಲ್ಯ ತಮ್ಮ ಮನೆಯದು ಎನಿಸಬೇಕು~ ಎಂಬ ಆಶಯದೊಂದಿಗೆ ತಯಾರಾಗುವ ಇವರ ರೊಟ್ಟಿಗಳು ಯಾವುದೇ ಬಗೆಯ ಪ್ರಿಸರ‌್ವೇಟಿವ್ ಬಳಸದೇ ತಯಾರಾಗುವ ತಿನಿಸು. ಬಿಸಿ ರೊಟ್ಟಿ ಚಪಾತಿಗಳಿಗೆ ಬಹು ಬೇಡಿಕೆ. ಸಮೀಪದ ಹೋಟೆಲ್, ಖಾನಾವಳಿಗಳಲ್ಲಿ ರೊಟ್ಟಿ ಬಡಿಯುವವರು ಸಿಗದಿದ್ದರೆ ಚಿಂತಿಸುವುದಿಲ್ಲ.
 
ಇವರ ಕೇಂದ್ರದಿಂದ ತಮ್ಮ ಅಗತ್ಯಕ್ಕೆ ಬೇಕಾದಷ್ಟು ರೊಟ್ಟಿಗಳನ್ನು ಒಯ್ದು ಅನ್ನ ಸಾರಿನೊಂದಿಗೆ ಊಟ ಹಾಕಿ ಜೀವನ ನಡೆಸುತ್ತಾರೆ. ಧಾರವಾಡದ ಹೈಕೋರ್ಟ್, ಹಲವು ತರಬೇತಿ ಸಂಸ್ಥೆಗಳು, ಬ್ಯಾಂಕುಗಳು,ಉದ್ಯೋಗಸ್ಥ ಮಹಿಳೆಯರೂ ಇವರ ಗ್ರಾಹಕರು.

ಲಕ್ಷ್ಮೀಯವರ ಪತಿ, ಕೇಂದ್ರ ಆರಂಭಿಸುವ ಮೊದಲು ವಾಚ್ ರಿಪೇರಿ ಕೆಲಸ ಮಾಡುತ್ತಿದ್ದರು. ನಂತರ ಪತ್ನಿಯ ಪ್ರಯತ್ನಗಳಿಗೆ ಕೈಜೋಡಿಸಿದರು. ಅಂಗಡಿಗೆ ಬೇಕಾದ ಜೋಳ, ತರಕಾರಿ, ಇನ್ನಿತರ ವಸ್ತುಗಳನ್ನು ತರುವುದು, ಅಲ್ಲಿ ತಯಾರಿಸಿದ ರೊಟ್ಟಿಗಳನ್ನು ವಿವಿಧೆಡೆ ಕೊಡುವುದು ಇಂತಹ ಕೆಲಸ ಮಾಡುತ್ತಾರೆ. ಈಗ ಎಂಟು ಮಹಿಳೆಯರು ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಲಕ್ಷ್ಮೀಯವರು ಇವರೊಂದಿಗೆ ಸೇರಿ ಪ್ರತಿದಿನ ಎರಡು ಸಾವಿರ ರೊಟ್ಟಿ, ಇನ್ನೂರು ಚಪಾತಿ ತಯಾರಿಸುತ್ತಾರೆ. `ಒಂದು ರೊಟ್ಟಿಯೂ ಉಳಿಯಂಗಿಲ್ಲ~ ಎನ್ನುವುದು ಇವರ ಹೆಮ್ಮೆ. ಸುಗ್ಗಿಯ ಸಮಯದಲ್ಲಿ ಜೋಳಕ್ಕೆ ಕಡಿಮೆ ಬೆಲೆ ಇರುವಾಗ ರೊಟ್ಟಿಗೂ ಕಡಿಮೆ ಬೆಲೆ. ಮಳೆಗಾಲದಲ್ಲಿ ಜೋಳದ ಬೆಲೆ ಹೆಚ್ಚಾದಾಗ ರೊಟ್ಟಿಯ ಬೆಲೆಯೂ ಹೆಚ್ಚು.

`ನಾವು ಕೊಡುವ ಉತ್ತಮ ಗುಣಮಟ್ಟದ ರೊಟ್ಟಿಗೆ ಹೊಂದಿಕೊಂಡ ಗ್ರಾಹಕರು ಬೆಲೆಯ ವಿಷಯದಲ್ಲಿ ಹೊಂದಿಕೊಳ್ಳುತ್ತಾರೆ. ಬೆಲೆ ಹೆಚ್ಚಾದಾಗಲೂ ಬೇರೆಕಡೆ ಹೋಗುವುದಿಲ್ಲ~ ಎನ್ನುತ್ತಾರೆ ಅವರು.

ಕೇಂದ್ರದಲ್ಲಿ ಖಡಕ್ ರೊಟ್ಟಿ ವ್ಯಾಪಾರವೂ ನಿರಂತರವಾಗಿ ನಡೆಯುತ್ತದೆ. ಮದುವೆ,ಮುಂಜಿ, ಸಮ್ಮೇಳನಗಳಲ್ಲಿ ಸಾವಿರಾರು ರೊಟ್ಟಿಗಳನ್ನು ಖರೀದಿಸುವವರಿದ್ದಾರೆ.

ಕೇವಲ ಜೋಳದ ಹಿಟ್ಟು ಉಪಯೋಗಿಸಿ ತೆಳ್ಳಗೆ ಬಡಿದು ಜಾಣ್ಮೆಯಿಂದ ಬೇಯಿಸಿ, ಒಣಗಿಸಿಕೊಡುವ ಇವರ ಅಂಗಡಿಯ ರೊಟ್ಟಿಗಳು ತಿಂಗಳಾದರೂ ಕೆಡುವುದಿಲ್ಲ. ಬೆಂಗಳೂರಿನವರು ವಾರಕ್ಕೊಮ್ಮೆ ಮೂರು ನಾಲ್ಕು ಸಾವಿರ ರೊಟ್ಟಿಗಳನ್ನು ಒಯ್ಯುತ್ತಾರೆ.

ಸಾರ್ಥಕ ಕ್ಷಣ
ಧಾರವಾಡ  ನಿವೃತ್ತರ ಸ್ವರ್ಗ ಎಂದೇ ಪ್ರಸಿದ್ಧವಾದ ಊರು. ಹೆತ್ತ ಮಕ್ಕಳು ದುಡಿಮೆಗಾಗಿ ದೂರದೂರಿಗೆ ತೆರಳಿದರೆ, ದೈನಂದಿನ ಊಟದ ತಯಾರಿಗೆ ಪರದಾಡುವ ಪಾಡು ವೃದ್ಧರದ್ದು. ಅಂತಹ ಅನೇಕರು ಕೇಂದ್ರದ ಗಿರಾಕಿಗಳು. ದಿನಕ್ಕೆ ಬೇಕಾದ ರೊಟ್ಟಿ ಪಲ್ಯ ಖರೀದಿಸಿ “ನೀನೇ ನಮ್ಮ ಪಾಲಿಗೆ `ಅನ್ನಪೂರ್ಣೆ~” ಎಂದು ಕೆಲವರು ಹೇಳುತ್ತಾರೆ.

`ಕೇಂದ್ರ ಯಾವುದೇ ಕಾರಣಕ್ಕೆ ಒಮ್ಮಮ್ಮೆ ಸೂಟಿ ಮಾಡಿದರೂ ವೃದ್ಧರಿಗೆ ಪಕ್ಕದ ಅಂಗಡಿಯಲ್ಲಿ ಪಾರ್ಸೆಲ್ ಕೊಟ್ಟಿರುತ್ತೇನೆ. ವ್ಯವಹಾರವನ್ನು ಮೀರಿದ ಇಂಥಹ ಕ್ಷಣಗಳು ಈ ವೃತ್ತಿಯ ಮೇಲಿನ ಪ್ರೀತಿ ಹೆಚ್ಚಿಸಿದೆ~ ಎನ್ನುತ್ತಾರೆ ಲಕ್ಷ್ಮೀ.

ಬಿಜಾಪುರದ ಬಿಳಿಜೋಳ, ಮುಷ್ಟಿ ಗಾತ್ರದ ಹಿಟ್ಟಿನಲ್ಲಿ ಹುಣ್ಣಿಮೆಯ ಚಂದ್ರನಾಕಾರದ ರೊಟ್ಟಿ ತಯಾರಿಸುವ ಧಾರವಾಡದ ಮಹಿಳೆಯರು, ಲಕ್ಷಾಂತರ ಬಿಕರಿಯಾಗುವ ರೊಟ್ಟಿಗಳು, ಸವಿದುಣ್ಣುವ ದೇಶ ವಿದೇಶದ ಜನರು!

ಕೇಂದ್ರದಲ್ಲಿ ಐದು ತಾಸಿಗೆ ಇನ್ನೂರು-ಇನ್ನೂರೈವತ್ತು ರೊಟ್ಟಿ ಬಡಿಯುವವರು ಗಿನ್ನಿಸ್ ದಾಖಲೆ ವಿಚಾರ ಮಾಡುವವರಲ್ಲ. ತಮ್ಮ ನಿರಂತರ ಶ್ರಮದಿಂದ ತೆರೆಮರೆಯ ಕಾಯಿಗಳಂತೆ ಇದ್ದು ಹಲವರ ಹೊಟ್ಟೆ ತಂಪು ಮಾಡುತ್ತಾರೆ. ತಮ್ಮ ಸಂಸಾರ ರಥ ಸುಲಭವಾಗಿ ಸಾಗಲು ಕಾರಣರಾಗುತ್ತಾರೆ.

ಪ್ರಸ್ತುತ ಧಾರವಾಡವೊಂದರಲ್ಲೇ ಹನ್ನೆರಡು ರೊಟ್ಟಿ ಕೇಂದ್ರಗಳಿವೆ. ಕೆಲವರು ಮನೆಯಲ್ಲಿಯೇ ರೊಟ್ಟಿ ಬಡಿದು ಮಾರುವವರಿದ್ದಾರೆ. ಅವರ ಮಧ್ಯೆ ಸ್ಪರ್ಧೆ ಇದೆ. ಬೆಲೆಯಲ್ಲಿ ವ್ಯತ್ಯಾಸವಿದೆ. ಎಲ್ಲರದ್ದೂ ಯಶೋಗಾಥೆಗಳಲ್ಲ. ಬೇಯಿಸಲು ಬೇಕಾದ ಇಂಧನವನ್ನು ಕಮರ್ಷಿಯಲ್‌ಬೆಲೆಗೆ ಕೊಳ್ಳಬೇಕು. ಜೋಳದ ಬೆಲೆಯೇರಿಕೆ, ಕುಶಲ ಕೆಲಸಗಾರರ ಕೊರತೆ ಇಂಥಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಧಾರವಾಡದ `ಸಿರಿಧಾನ್ಯ ಕ್ರಿಯಾ ಸಮಿತಿ~ ಸಮ್ಮೇಳನವೊಂದನ್ನು ಮಾರ್ಚ್ ತಿಂಗಳಿನಲ್ಲಿ ನಡೆಸಿತು.

`ಜನಮಾನಸದಿಂದ ಮರೆಯಾಗುತ್ತಿರುವ ರಾಗಿ, ಸಾವೆ, ನವಣೆ, ಸಜ್ಜೆ ಮೊದಲಾದ ಸಿರಿಧಾನ್ಯಗಳನ್ನು ಬೆಳೆಯುವ ಕೃಷಿಕರು ಹೆಚ್ಚಾಗುವಂತೆ ಮಾಡುವ ಪ್ರಯತ್ನ ಶ್ಲಾಘನೀಯ.

ಖಡಕ್ ರೊಟ್ಟಿ ಬಡಿದು ಜೀವನ ಕಟ್ಟಿಕೊಂಡವರು, ಅದರ ಜೊತೆ ಸಿರಿಧಾನ್ಯ ತಿನಿಸುಗಳನ್ನು ತಾವು ಕೊಡುವ ಉಚಿತ ತರಬೇತಿ ಪಡೆದು ತಯಾರಿಸುತ್ತಾರಾದರೆ ಅವರಿಗೆ ಮಾರುಕಟ್ಟೆ ಕಂಡುಕೊಳ್ಳಲು ಸಹಾಯ ಮಾಡುತ್ತೇವೆ~ ಎಂದು ಸಮಿತಿಯ ಸಂಚಾಲಕಿ ವಾಣಿ ಪುರೋಹಿತ್ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT