ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್: ಸಂಕಷ್ಟದ ಸುಳಿಯಲ್ಲಿ ಕರ್ನಾಟಕ

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೊದಲ ದಿನದಾಟದಲ್ಲಿ ತನ್ನ ಮೇಲೆ ಆವರಿಸಿದ್ದ ಆತಂಕದ ಕರಿನೆರಳಿನಿಂದ ಹೊರಬರಲು ಯಶಸ್ವಿಯಾಗಿರುವ ಕರ್ನಾಟಕ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶದ ಸಾಧ್ಯತೆಯನ್ನು ಜೀವಂತವಾಗಿ ಉಳಿಸಿಕೊಂಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಮವಾರ ಪೂರ್ಣ ವೈಫಲ್ಯ ಅನುಭವಿಸಿದ್ದ ಗಣೇಶ್ ಸತೀಶ್ ಬಳಗ ಎರಡನೇ ದಿನ ಕೆಚ್ಚೆದೆಯ ಪ್ರದರ್ಶನ ನೀಡಿತು. ಹೋರಾಟ, ಮರುಹೋರಾಟದ ಕಾರಣ ಜೀವಂತಿಕೆ ಪಡೆದುಕೊಂಡ ಮಂಗಳವಾರದ ಆಟದ ಅಂತ್ಯಕ್ಕೆ ಕರ್ನಾಟಕ ಒಂದು ರನ್ ಮುನ್ನಡೆ ತನ್ನದಾಗಿಸಿಕೊಂಡಿದೆ. ಕರ್ನಾಟಕದ ಅಲ್ಪ ಮೊತ್ತಕ್ಕೆ (151) ಉತ್ತರವಾಗಿ ಹರಿಯಾಣ ಮೊದಲ ಇನಿಂಗ್ಸ್‌ನಲ್ಲಿ 272 ರನ್ ಗಳಿಸಿತು. 121 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಆತಿಥೇಯ ತಂಡ ದಿನದಾಟದ ಅಂತ್ಯಕ್ಕೆ 32 ಓವರ್‌ಗಳಲ್ಲಿ 3 ವಿಕೆಟ್‌ಗೆ 122 ರನ್ ಕಲೆಹಾಕಿದೆ.

ಮೊದಲ ದಿನದಾಟದ ಬಳಿಕ `ಕರ್ನಾಟಕದ ಕಥೆ ಮುಗಿಯಿತು~ ಎಂದು ಭಾವಿಸಿದವರೇ ಹೆಚ್ಚು. ಸದ್ಯಕ್ಕಂತೂ ಅದು ಸುಳ್ಳಾಗಿದೆ. ರಾಹುಲ್ ದೆವಾನ್ (101, 195 ಎಸೆತ, 13 ಬೌಂ) ಗಳಿಸಿದ ಆಕರ್ಷಕ ಶತಕ ಹರಿಯಾಣ ಇನಿಂಗ್ಸ್‌ನ `ಹೈಲೈಟ್~. ಒಂದು ಹಂತದಲ್ಲಿ ಪ್ರವಾಸಿ ತಂಡ 188 ರನ್‌ಗಳಿಗೆ ಏಳು ವಿಕೆಟ್ ಕಳೆದುಕೊಂಡಿತ್ತು. ಆದರೆ ಅಮಿತ್ ಮಿಶ್ರಾ (49, 92 ಎಸೆತ, 5 ಬೌಂ) ಮತ್ತು ಮೋಹಿತ್ ಶರ್ಮ (32, 68 ಎಸೆತ, 6 ಬೌಂ) ಎಂಟನೇ ವಿಕೆಟ್‌ಗೆ 74 ರನ್ ಸೇರಿಸಿದ್ದು ಕರ್ನಾಟಕಕ್ಕೆ ಮುಳುವಾಗಿ ಪರಿಣಮಿಸಿತು.

ಸ್ಟುವರ್ಟ್ ಬಿನ್ನಿ (54ಕ್ಕೆ 4) ಹಾಗೂ ಎನ್.ಸಿ. ಅಯ್ಯಪ್ಪ (70ಕ್ಕೆ 3) ನಡೆಸಿದ ಪ್ರಭಾವಿ ಬೌಲಿಂಗ್ ರಾಜ್ಯ ತಂಡದ ಮರುಹೋರಾಟಕ್ಕೆ ಬುನಾದಿ ಹಾಕಿಕೊಟ್ಟಿತು. ಸತೀಶ್ ಬಳಗ ಎರಡನೇ ಇನಿಂಗ್ಸ್‌ನಲ್ಲಿ ಆಕ್ರಮಣಕಾರಿ ಆಟ ತೋರಿದೆ. ಆದರೆ ಮೂರು ಪ್ರಮುಖ ವಿಕೆಟ್‌ಗಳು ಬಿದ್ದಿರುವುದು ಅಲ್ಪ ಹಿನ್ನಡೆ ಎನಿಸಿದೆ. ಕೆ.ಬಿ. ಪವನ್ (7) ಬೇಗನೇ ಔಟಾದರೂ ರಾಬಿನ್ ಉತ್ತಪ್ಪ (53, 46 ಎಸೆತ, 6 ಬೌಂ, 1 ಸಿಕ್ಸರ್) ಮತ್ತು ಸತೀಶ್ ಎರಡನೇ ವಿಕೆಟ್‌ಗೆ 51 ರನ್ ಕಲೆಹಾಕಿದರು. ಸನ್ನಿ ಸಿಂಗ್ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿ ಅರ್ಧಶತಕ ಪೂರೈಸಿದ ರಾಬಿನ್ ದೊಡ್ಡ ಮೊತ್ತದ ಸೂಚನೆ ನೀಡಿದ್ದರು. ಆದರೆ ಸಚಿನ್ ರಾಣಾ (18ಕ್ಕೆ 2) ಎಸೆತವನ್ನು ಅಂದಾಜಿಸುವಲ್ಲಿ ವಿಫಲರಾಗಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಆಟ ಕೊನೆಗೊಳ್ಳಲು ಕೆಲವೇ ನಿಮಿಷಗಳಿದ್ದಾಗ ಭರತ್ ಚಿಪ್ಲಿ (26, 45 ಎಸೆತ, 5 ಬೌಂ) ರನೌಟ್ ಆದದ್ದೂ ನಿರಾಸೆಗೆ ಕಾರಣವಾಗಿದೆ. ಗಣೇಶ್ ಸತೀಶ್ (33) ಮತ್ತು ಅಮಿತ್ ವರ್ಮಾ (1) ಬುಧವಾರ ಆಟ ಆರಂಭಿಸಲಿದ್ದಾರೆ. ಆಕ್ರಮಣಕಾರಿ ಆಟವಾಡಬಲ್ಲ ರಾಬಿನ್ ಮತ್ತು ಭರತ್ ವಿಕೆಟ್ ಪಡೆಯುವ ಮೂಲಕ ಹರಿಯಾಣ ಕೊನೆಯಲ್ಲಿ ತಿರುಗೇಟು ನೀಡಿದೆ.

ಮೂರನೇ ದಿನ ಅಸಾಮಾನ್ಯ ಪ್ರದರ್ಶನ ನೀಡುವ ಜವಾಬ್ದಾರಿ ಕರ್ನಾಟಕದ ಬ್ಯಾಟ್ಸ್‌ಮನ್‌ಗಳ ಮೇಲಿದೆ. ಎದುರಾಳಿ ತಂಡಕ್ಕೆ ಕನಿಷ್ಠ 250 ರನ್‌ಗಳ ಗುರಿ ನೀಡಿದರೆ ಗೆಲುವಿನ ಕನಸು ಕಾಣಬಹುದು. ಇದು  ಕಷ್ಟ. ಆದರೆ ಅಸಾಧ್ಯವಂತೂ ಅಲ್ಲ. ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿರುವ ಕಾರಣ ಕರ್ನಾಟಕದ ಮುಂದಿರುವ ಏಕೈಕ ಮಾರ್ಗ `ಗೆಲುವು~ ಮಾತ್ರ.

ಬಿನ್ನಿ, ಅಯ್ಯಪ್ಪ ಮಿಂಚು: ಹರಿಯಾಣ ವಿಕೆಟ್ ನಷ್ಟವಿಲ್ಲದೆ 120 ರನ್‌ಗಳಿಂದ ಬೆಳಿಗ್ಗೆ ಆಟ ಆರಂಭಿಸಿತ್ತು. ನಿತಿನ್ ಸೈನಿ ಮತ್ತು ರಾಹುಲ್ ದೆವಾನ್ ಮೊದಲ ವಿಕೆಟ್ ಜೊತೆಯಾಟದಲ್ಲೇ (152 ರನ್) ಕರ್ನಾಟಕದ ಮೊತ್ತವನ್ನು ಮೀರಿ ನಿಂತರು. 

ಆತಿಥೇಯರಿಗೆ ಮೊದಲ ಯಶಸ್ಸು ತಂದಿತ್ತದ್ದು ಸ್ಟುವರ್ಟ್ ಬಿನ್ನಿ. ನಿತಿನ್ ಸೈನಿ (69, 148 ಎಸೆತ, 13 ಬೌಂ) ಅವರನ್ನು ರಾಬಿನ್ ಉತ್ತಪ್ಪ ನೆರವಿನಿಂದ ಪೆವಿಲಿಯನ್‌ಗೆ ಅಟ್ಟಿದಾಗ ಕರ್ನಾಟಕ ತಂಡ ನಿಟ್ಟುಸಿರು ಬಿಟ್ಟಿತು. ಸನ್ನಿ ಸಿಂಗ್ (03) ಅವರನ್ನೂ ಬಿನ್ನಿ ಔಟ್ ಮಾಡಿದಾಗ ಆಟಗಾರರ ಸಂತಸ ಇಮ್ಮಡಿಯಾಯಿತು. ಎಲ್ಲರ `ಬಾಡಿ ಲ್ಯಾಂಗ್ವೇಜ್~ ಇದ್ದಕ್ಕಿದ್ದಂತೆ ಬದಲಾಯಿತು. ಅದರ ಪರಿಣಾಮ ಒಂದರ ಮೇಲೊಂದರಂತೆ ವಿಕೆಟ್‌ಗಳು ಬೀಳತೊಡಗಿದವು.

ಕೊಡಗಿನ ಬೌಲರ್‌ಗಳಾದ ಎನ್.ಸಿ. ಅಯ್ಯಪ್ಪ ಮತ್ತು ಕೆ.ಪಿ. ಅಪ್ಪಣ್ಣ ಅವರ `ಮ್ಯಾಜಿಕ್~ ಸ್ಪೆಲ್‌ಗೆ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಯಿತು. ಪ್ರತೀಕ್ ಪವಾರ್ ಹಾಗೂ ಸಚಿನ್ ರಾಣಾ ಅವರನ್ನು ಸತತ ಎರಡು ಎಸೆತಗಳಲ್ಲಿ ಪೆವಿಲಿಯನ್‌ಗಟ್ಟಿದ ಅಯ್ಯಪ್ಪ, ಮುಂದಿನ ಓವರ್‌ನಲ್ಲಿ ಪ್ರಿಯಾಂಕ್ ತೆಹ್ಲಾನ್‌ಗೂ ಇದೇ ಗತಿ ಕಾಣಿಸಿದರು. ಈ  ಮೂವರೂ ವಿಕೆಟ್ ಕೀಪರ್ ಸಿ.ಎಂ. ಗೌತಮ್‌ಗೆ ಕ್ಯಾಚ್ ನೀಡಿ ಔಟಾದರು.

ಪಟಪಟನೆ ವಿಕೆಟ್ ಬಿದ್ದರೂ ಮತ್ತೊಂದೆಡೆ ರಾಹುಲ್ ಒಂದೇ ಲಯದಲ್ಲಿ ಬ್ಯಾಟ್ ಬೀಸುತ್ತಿದ್ದರು. ಅಯ್ಯಪ್ಪ ಎಸೆತದಲ್ಲಿ ಬೌಂಡರಿ ಸಿಡಿಸಿ ಮೂರಂಕಿಯ ಗಡಿ ದಾಟುವಲ್ಲೂ ಯಶಸ್ವಿಯಾದರು. ಆ ಬಳಿಕ ಹೆಚ್ಚುಹೊತ್ತು ನಿಲ್ಲಲಿಲ್ಲ. `ಜಾದೂ~ ತೋರಿದ ಅಪ್ಪಣ್ಣ ಶತಕವೀರ ದೆವಾನ್ ಮತ್ತು ಜಯಂತ್ ಅವರನ್ನು ಸತತ ಎರಡು ಎಸೆತಗಳಲ್ಲಿ ಔಟ್ ಮಾಡಿದರು.

ವಿಕೆಟ್ ನಷ್ಟವಿಲ್ಲದೆ 152 ರನ್ ಗಳಿಸಿದ್ದ ಹರಿಯಾಣ 188 ರನ್‌ಗಳಿಗೆ ಏಳು ವಿಕೆಟ್ ಕಳೆದುಕೊಂಡಿತು. 36 ರನ್ ಅಂತರದಲ್ಲಿ ಏಳು ವಿಕೆಟ್‌ಗಳು ಬಿದ್ದವು! ಕರ್ನಾಟಕ ಪಂದ್ಯದ ಮೇಲೆ ಸ್ಪಷ್ಟ ಮೇಲುಗೈ ಸಾಧಿಸಿದ್ದ ಕ್ಷಣ ಅದಾಗಿತ್ತು. ಆದರೆ ನಾಯಕ ಮಿಶ್ರಾ ಮತ್ತು ಮೋಹಿತ್ ಶರ್ಮ ಅದಕ್ಕೆ ಅವಕಾಶ ನೀಡಲಿಲ್ಲ.

ಸ್ಕೋರ್ ವಿವರ ;
ಕರ್ನಾಟಕ: ಮೊದಲ ಇನಿಂಗ್ಸ್ 49.5 ಓವರ್‌ಗಳಲ್ಲಿ 151
ಹರಿಯಾಣ: ಮೊದಲ ಇನಿಂಗ್ಸ್ 93.1 ಓವರ್‌ಗಳಲ್ಲಿ 272
(ಸೋಮವಾರ 38 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 120)
ನಿತಿನ್ ಸೈನಿ ಸಿ ರಾಬಿನ್ ಉತ್ತಪ್ಪ ಬಿ ಸ್ಟುವರ್ಟ್ ಬಿನ್ನಿ  69
ರಾಹುಲ್ ದೆವಾನ್ ಸಿ ಗೌತಮ್ ಬಿ ಕೆ.ಪಿ. ಅಪ್ಪಣ್ಣ  101
ಸನ್ನಿ ಸಿಂಗ್ ಸಿ ಗೌತಮ್ ಬಿ ಸ್ಟುವರ್ಟ್ ಬಿನ್ನಿ  03
ಪ್ರತೀಕ್ ಪವಾರ್ ಸಿ ಗೌತಮ್ ಬಿ ಎನ್.ಸಿ. ಅಯ್ಯಪ್ಪ  02
ಸಚಿನ್ ರಾಣಾ ಸಿ ಗೌತಮ್ ಬಿ ಎನ್.ಸಿ. ಅಯ್ಯಪ್ಪ  00
ಪ್ರಿಯಾಂಕ್ ತೆಹ್ಲಾನ್ ಸಿ ಗೌತಮ್ ಬಿ ಎನ್.ಸಿ. ಅಯ್ಯಪ್ಪ  00
ಅಮಿತ್ ಮಿಶ್ರಾ ಎಲ್‌ಬಿಡಬ್ಲ್ಯು ಬಿ ಸ್ಟುವರ್ಟ್ ಬಿನ್ನಿ  49
ಜಯಂತ್ ಯಾದವ್ ಎಲ್‌ಬಿಡಬ್ಲ್ಯು ಬಿ ಕೆ.ಪಿ. ಅಪ್ಪಣ್ಣ  00
ಮೋಹಿತ್ ಶರ್ಮ ಸಿ ಅಯ್ಯಪ್ಪ ಬಿ ಸುನಿಲ್ ರಾಜು  32
ಹರ್ಷಲ್ ಪಟೇಲ್ ಔಟಾಗದೆ  08
ಆಶೀಶ್ ಹೂಡಾ ಬಿ ಸ್ಟುವರ್ಟ್ ಬಿನ್ನಿ  00
ಇತರೆ: (ಬೈ-6, ಲೆಗ್‌ಬೈ-1, ವೈಡ್-1)  08
ವಿಕೆಟ್ ಪತನ: 1-152 (ಸೈನಿ; 49.1), 2-160 (ಸನ್ನಿ ಸಿಂಗ್; 53.5), 3-164 (ಪ್ರತೀಕ್; 57.4), 4-164 (ಸಚಿನ್; 57.5), 5-166 (ತೆಹ್ಲಾನ್; 59.3), 6-188 (ದೆವಾನ್; 66.2), 7-188 (ಜಯಂತ್; 66.3), 8-262 (ಮೋಹಿತ್; 88.3), 9-264 (ಮಿಶ್ರಾ; 91.1), 10-272 (ಹೂಡಾ; 93.1)
ಬೌಲಿಂಗ್: ಎಸ್.ಎಲ್. ಅಕ್ಷಯ್ 16-2-62-0, ಎನ್.ಸಿ. ಅಯ್ಯಪ್ಪ 17-3-70-3, ಸ್ಟುವರ್ಟ್ ಬಿನ್ನಿ 23.1-7-54-4, ಕೆ.ಪಿ. ಅಪ್ಪಣ್ಣ 18-4-49-2, ಸುನಿಲ್ ರಾಜು 19-6-30-1

ಕರ್ನಾಟಕ: ಎರಡನೇ ಇನಿಂಗ್ಸ್ 32 ಓವರ್‌ಗಳಲ್ಲಿ 3 ವಿಕೆಟ್‌ಗೆ 122
ರಾಬಿನ್ ಉತ್ತಪ್ಪ ಎಲ್‌ಬಿಡಬ್ಲ್ಯು ಬಿ ಸಚಿನ್ ರಾಣಾ  53
ಕೆ.ಬಿ. ಪವನ್ ಎಲ್‌ಬಿಡಬ್ಲ್ಯು ಬಿ ಸಚಿನ್ ರಾಣಾ  07
ಗಣೇಶ್ ಸತೀಶ್ ಬ್ಯಾಟಿಂಗ್  33
ಭರತ್ ಚಿಪ್ಲಿ ರನೌಟ್  26
ಅಮಿತ್ ವರ್ಮಾ ಬ್ಯಾಟಿಂಗ್  01
ಇತರೆ: (ಲೆಗ್‌ಬೈ-2)  02
ವಿಕೆಟ್ ಪತನ: 1-22 (ಪವನ್; 5.1), 2-73 (ರಾಬಿನ್; 15.2), 3-110 (ಭರತ್; 27.6)
ಬೌಲಿಂಗ್: ಆಶೀಶ್ ಹೂಡಾ 2-0-11-0, ಹರ್ಷಲ್ ಪಟೇಲ್ 8-1-34-0, ಸಚಿನ್ ರಾಣಾ 10-1-18-2, ಮೋಹಿತ್ ಶರ್ಮ 5-0-32-0, ಸನ್ನಿ ಸಿಂಗ್ 1-0-12-0, ಅಮಿತ್ ಮಿಶ್ರಾ 5-2-12-0, ಜಯಂತ್ ಯಾದವ್ 1-0-1-0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT