ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮಾಗೆ ಗದ್ದುಗೆ ನಿರಾಯಾಸ

Last Updated 22 ಫೆಬ್ರುವರಿ 2011, 6:45 IST
ಅಕ್ಷರ ಗಾತ್ರ

ಕೋಲಾರ: ಇಲ್ಲಿನ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ಫೆ.22ರಂದು ಬೆಳಿಗ್ಗೆ 10ಕ್ಕೆ ತಾಪಂ ಸಭಾಂಗಣದಲ್ಲಿ ನಡೆಯಲಿದೆ. ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿರುವ ಅಧ್ಯಕ್ಷ ಹುದ್ದೆಗೆ ಏಕೈಕ ಅರ್ಹ ಅಭ್ಯರ್ಥಿ ವಕ್ಕಲೇರಿ ಕ್ಷೇತ್ರದ ಎನ್.ರಮಾದೇವಿ. ಹೀಗಾಗಿ ಅವರೇ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಆ ಮೂಲಕ ತಾಲ್ಲೂಕಿನ ರಾಜಕಾರಣದಲ್ಲಿ ಶಾಸಕ ವರ್ತೂರು ಪ್ರಕಾಶರ ಬಾವುಟ ಹಾರುವುದೂ ಖಚಿತವಾಗಿದೆ.

ತಾಪಂನ 23 ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡದ ಏಕೈಕ ಸದಸ್ಯೆ ವಕ್ಕಲೇರಿ ಕ್ಷೇತ್ರದ ಎನ್.ರಮಾದೇವಿ. ಸದ್ಯಕ್ಕೆ ಅವರೊಬ್ಬರೇ ಅಧ್ಯಕ್ಷ ಸ್ಥಾನಕ್ಕೆ ಅರ್ಹತೆಯುಳ್ಳ ಅಭ್ಯರ್ಥಿ.
ಮೀಸಲಾತಿಯ ಲಾಭ ದೊರಕಲಿರುವುದು ಅವರೊಬ್ಬರಿಗೇ. ಇನ್ನೊಬ್ಬ ಪರಶಿಷ್ಟ ಪಂಗಡದ ಮಹಿಳಾ ಸದಸ್ಯೆ ಇಲ್ಲದಿರುವ ಕಾರಣ ಅವರು ಯಾವುದೇ ವಿರೋಧವಿಲ್ಲದೆ ಆಯ್ಕೆಯಾಗುವುದು ಖಚಿತವಾಗಿದೆ. ಅವರು ಶಾಸಕರ ಬಣಕ್ಕೆ ಸೇರಿದವರು ಎಂಬುದು ಗಮನಾರ್ಹ. ಸಾಮಾನ್ಯ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಹುದ್ದೆಗೆ ಆಕಾಂಕ್ಷಿಗಳು ಹೆಚ್ಚಿದ್ದು, ಪೈಪೋಟಿ ತೀವ್ರವಾಗಿದೆ.

ಪ್ರಸ್ತುತ ತಾಪಂನಲ್ಲಿ ಜೆಡಿಎಸ್‌ನ 8, ಕಾಂಗ್ರೆಸ್‌ನ 4, ಬಿಜೆಪಿಯ ಒಬ್ಬರು ಮತ್ತು ಶಾಸಕರ ಬಣದ 10 ಪಕ್ಷೇತರ ಸದಸ್ಯರಿದ್ದಾರೆ. ಪಕ್ಷೇತರರ ಗುಂಪಿನಲ್ಲಿರುವ ರಮಾದೇವಿ ಒಬ್ಬರೇ ಅಧ್ಯಕ್ಷ ಹುದ್ದೆಗೆ ಅರ್ಹರಿರುವರಿಂದ ‘ಚುನಾವಣೆ  ಪ್ರಕ್ರಿಯೆ ವಾಡಿಕೆಯಂತೆ ನಡೆಯುತ್ತದೇ ಹೊರತು, ರಾಜಕೀಯ ಬಲಾಬಲದ ಕಾವು ಕಾಣಿಸುವುದು ಅಸಾಧ್ಯವೆಂಬ ವಾತಾವರಣ ನಿರ್ಮಾಣವಾಗಿದೆ.

ಪೈಪೋಟಿ: ಹೆಚ್ಚು ಅಧಿಕಾರವನ್ನು ಹೊಂದಿರದ ಉಪಾಧ್ಯಕ್ಷ ಹುದ್ದೆ ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿದೆ. ಅದೇ ಕಾರಣದಿಂದ ಆ ಸ್ಥಾನಕ್ಕೆ ಪೈಪೋಟಿಯೂ ಹೆಚ್ಚಿದೆ. ಅಧ್ಯಕ್ಷ ಸ್ಥಾನವನ್ನು ತಮ್ಮ ಬಣದ ಅಭ್ಯರ್ಥಿಯ ವಶಕ್ಕೆ ನೀಡುವ ಜೊತೆಗೆ ಉಪಾಧ್ಯಕ್ಷ ಸ್ಥಾನವನ್ನೂ ತಮ್ಮದೇ ಬಣಕ್ಕೆ ಪಡೆಯುವ ಆಕಾಂಕ್ಷೆಯೂ ಶಾಸಕರಿಗಿದೆ.

ಈ ನಿಟ್ಟಿನಲ್ಲಿ ಅವರ ಬೆಂಬಲಿಗರಾದ ಬೆಗ್ಲಿಹೊಸಳ್ಳಿ ಕ್ಷೇತ್ರದ ನಂದಿನಿ, ಗದ್ದೆಕಣ್ಣೂರು ಕ್ಷೇತ್ರದ ವಿ.ಕೃಷ್ಣಮೂರ್ತಿಯವರ ನಡುವೆ ಪೈಪೋಟಿ ಇದೆ ಎನ್ನಲಾಗಿದೆ. ಉಳಿದಂತೆ ಕಾಂಗ್ರೆಸ್, ಜೆಡಿಎಸ್‌ನಲ್ಲೂ ಉಪಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಿದ್ದಾರೆ. ಉಪಾಧ್ಯಕ್ಷ ಸ್ಥಾನದ ಸ್ಪರ್ಧಿಗಳು ಕನಿಷ್ಠ 12 ಮತಗಳನ್ನು ಪಡೆಯಬೇಕು. ಶಾಸಕರ ಬಣದಲ್ಲಿ 10 ಮತ್ತು ಬಿಜೆಪಿಯ ಒಬ್ಬರು ಸೇರಿದರೆ 11 ಮತಗಳಾಗುತ್ತವೆ. ಶಾಸಕರ ಬಣಕ್ಕೆ ಉಪಾಧ್ಯಕ್ಷ ಪಟ್ಟ ದೊರಕಬೇಕೆಂದರೆ ಮತ್ತೊಂದು ಮತ ಬೇಕು. ಅದನ್ನು ಶಾಸಕರು ಹೇಗೆ ಗಳಿಸುತ್ತಾರೆ ಎಂಬುದು ಕುತೂಹಲಕರ ವಿಷಯ. ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾದರೆ ಸುಲಭವಾಗಿ ಉಪಾಧ್ಯಕ್ಷ ಪಟ್ಟವನ್ನು ಪಡೆಯಲು ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT