ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಗೊಬ್ಬರ ಕೊರತೆ: ನೂಕುನುಗ್ಗಲು

Last Updated 23 ಆಗಸ್ಟ್ 2011, 8:55 IST
ಅಕ್ಷರ ಗಾತ್ರ

ರಾಯಚೂರು: ನಾಲ್ಕಾರು ದಿನದಿಂದ ರಾಯಚೂರು ತಾಲ್ಲೂಕಿನ ಮಳೆ ಉತ್ತಮವಾಗಿದ್ದು, ಈಗ ರಸಗೊಬ್ಬರಕ್ಕಾಗಿ ರೈತ ಸಮುದಾಯ ಧಾವಿಸುತ್ತಿದೆ. ಬತ್ತ, ಹತ್ತಿ, ತೊಗರಿ ಬೆಳೆಗೆ ಮಳೆ ಮತ್ತು ರಸಗೊಬ್ಬರದ ಅಗತ್ಯತೆ ಈಗ ಇತ್ತು. ಮಳೆ ಆಗಿದೆ. ರಸಗೊಬ್ಬರಕ್ಕೆ ಇಲ್ಲಿನ ಎಪಿಎಂಸಿ ಗಂಜ್ ಆವರಣದಲ್ಲಿರುವ ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಎದುರು ನೂರಾರು ರೈತರು ಸೋಮವಾರ ಮುಗಿಬಿದ್ದಿದ್ದರಿಂದ ನೂಕುನುಗ್ಗಲು ಉಂಟಾಯಿತು.

ಕೇವಲ ಯೂರಿಯಾ ಮತ್ತು ಕಾಂಪ್ಲೆಕ್ಸ್ ಮಾತ್ರ ವಿತರಣೆ ಮಾಡಲಾಗುತ್ತಿದೆ. ಡಿಎಪಿ ದಾಸ್ತಾನಿಲ್ಲ. ಯೂರಿಯಾ ಮತ್ತು ಕಾಂಪ್ಲೆಕ್ಸ್ ವಿತರಿಸಿದರೂ ರೈತರ ಜಮೀನಿಗೆ ತಕ್ಕಷ್ಟು ಕೊಡುತ್ತಿಲ್ಲ. ಎಕರೆಗೆ 2 ಚೀಲ ಕಾಂಪ್ಲೆಕ್ಸ್ ಮತ್ತು ಯೂರಿಯಾ ವಿತರಿಸಬೇಕು. ಡಿಎಪಿ ಕೂಡಾ ಕೊಡಬೇಕು. ಆದರೆ ಆರ್‌ಎಪಿಎಂಸಿಯಲ್ಲಿ ಎಷ್ಟೇ ಎಕರೆ ಜಮೀನಿದ್ದರೂ ಒಬ್ಬ ರೈತರಿಗೆ 3 ಚೀಲ ಕಾಂಪ್ಲೆಕ್ಸ್ ಮತ್ತು 3 ಚೀಲ ಯೂರಿಯಾ ಮಾತ್ರ ಕೊಡಲಾಗುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

ಮೊದಲೇ ಮಳೆ ಇರಲಿಲ್ಲ. ಈಗ ಮಳೆ ಬಿದ್ದಿರುವುದರಿಂದ ಪಹಣಿ ಹಿಡಿದು ರಸಗೊಬ್ಬರಕ್ಕೆ ಧಾವಿಸಿದರೆ ರಸಗೊಬ್ಬರೂ ಸಿಗುವ ಲಕ್ಷಣಗಳಿಲ್ಲ ಎಂದು ಸಮಸ್ಯೆ ವಿವರಿಸಿದರು.

ಪ್ರತಿ ಎಕರೆಗೆ ಕೃಷಿ ಇಲಾಖೆಯೇ ಮೊದಲು ನಿಗದಿಪಡಿಸಿದ ಪ್ರಕಾರ ರಸಗೊಬ್ಬರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸದ್ಯ 3 ಚೀಲ ಕಾಂಪ್ಲೆಕ್ಸ್ ಮತ್ತು 3 ಚೀಲ ಯೂರಿಯಾ ವಿತರಣೆ ಮಾಡಲಾಗುವುದು. ಮುಂಬರುವ ದಿನಗಳಲ್ಲಿ ಮತ್ತೆ ಪೂರೈಸುವ ವ್ಯವಸ್ಥೆ ಮಾಡುವ ಆರ್‌ಎಪಿಎಂಸಿ ಅಧಿಕಾರಿಗಳ ಭರವಸೆಗೆ ರೈತರು ಕೇಳಲಿಲ್ಲ. ಬದಲಾಗಿ ಕೂಡಲೇ ಸಮರ್ಪಕ ರೀತಿಯಲ್ಲಿ ರಸಗೊಬ್ಬರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಅಧ್ಯಕ್ಷ: ಎಕರೆಗೆ 2 ಚೀಲ ಕಾಂಪ್ಲೆಕ್ಸ್ ಮತ್ತು ಯೂರಿಯಾ, ಡಿಎಪಿ ವಿತರಣೆಗೆ ಜಿಲ್ಲಾ ಆಡಳಿತ ಮತ್ತು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತುರ್ತು ಕ್ರಮ ಕೈಗೊಳ್ಳಬೇಕು. ಮೊದಲಿನಿಂದಲೂ ರಸಗೊಬ್ಬರ ದಾಸ್ತಾನಿಗೆ ಒತ್ತಾಯಿಸುತ್ತ ಬರಲಾಗಿದೆ. ಈಗ ಮಳೆಯಾಗಿದ್ದು ರಸಗೊಬ್ಬರ ಸಮಸ್ಯೆ ಸೃಷ್ಟಿಯಾಗುತ್ತಿದೆ. ಕೂಡಲೇ ಅಧಿಕಾರಿಗಳು ಇದನ್ನು ಹೋಗಲಾಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ ಒತ್ತಾಯಿಸಿದರು.

ಜಂಟಿ ಕೃಷಿ ನಿರ್ದೇಶಕರ ಹೇಳಿಕೆ: ರಸಗೊಬ್ಬರ ಕೊರತೆ ಇಲ್ಲ. ಅಗತ್ಯಕ್ಕೆ ತಕ್ಕಷ್ಟು ರಸಗೊಬ್ಬರ ಪೂರೈಕೆಗೆ ಇಲಾಖೆ ಗಮನಹರಿಸಿದೆ. ಒಂದೇ ಬಾರಿಗೆ 10-20 ಚೀಲ ರೈತರು ಬೇಡಿಕೆ ಇಷ್ಟರೆ ಕಷ್ಟ. ಹಂತ ಹಂತವಾಗಿ ಪೂರೈಸಲಾಗುವ ವ್ಯವಸ್ಥೆ ಮಾಡಲಾಗಿದೆ. ಒಂದು ರಸಗೊಬ್ಬರ ತುಂಬಿದ ರೇಕ್ ಬರುತ್ತಿವೆ.

ಈ ದಿನ ಒಂದಿಷ್ಟು ಚೀಲ ತೆಗೆದುಕೊಂಡು ಹೋಗಿ ಮತ್ತೆ 2 ದಿನ ಬಿಟ್ಟು ಬಂದು ರೈತರು ಖರೀದಿಸಿದರೆ ಎಲ್ಲರಿಗೂ ರಸಗೊಬ್ಬರ ಪೂರೈಸಲು ಆಗುತ್ತದೆ. ಮಳೆ ಬಿದ್ದಿದ್ದರಿಂದ ಎಲ್ಲರೂ ಒಟ್ಟಿಗೆ ಬಂದು ಬಹಳಷ್ಟು ಚೀಲ ರಸಗೊಬ್ಬರ ಬೇಡಿಕೆ ಇಟ್ಟಿರುವುದು ಗೊಂದಲಕ್ಕೆ ಕಾರಣವಾಗಿದೆ. ರೈತರೇ ಸಮಸ್ಯೆ ಅರಿತು ಸಮಾಧಾನದಿಂದ ರಸಗೊಬ್ಬರ ಪಡೆಯಲು ಮುಂದಾದರೆ ಸಮಸ್ಯೆ ಇಲ್ಲ ಎಂದು `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT