ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಗೊಬ್ಬರ ಪೂರೈಕೆ, ಟಿ.ಸಿ ದುರಸ್ತಿಗೆ ಆಗ್ರಹ

Last Updated 7 ಸೆಪ್ಟೆಂಬರ್ 2011, 10:05 IST
ಅಕ್ಷರ ಗಾತ್ರ

ಬಾಗಲಕೋಟೆ: ಸಮರ್ಪಕ ರಸಗೊಬ್ಬರ ಪೂರೈಕೆ, ಸುಟ್ಟು ಹೋದ ವಿದ್ಯುತ್ ಟಿ.ಸಿ. ದುರಸ್ತಿಗೆ ಕ್ರಮ ಮತ್ತು ಜಿಲ್ಲೆಯ ಗ್ರಾಮೀಣ ಭಾಗಕ್ಕೆ ವ್ಯವಸ್ಥಿತ ಸಾರಿಗೆ ಸಂಪರ್ಕ ಕಲ್ಪಿಸುವ ಕುರಿತಂತೆ ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಯಿತು.

ಜಿಲ್ಲೆಗೆ ಅಗತ್ಯವಿರುವ ರಸಗೊಬ್ಬರ ಪೂರೈಕೆಯಾಗದೇ ಇರುವುದರಿಂದ ರೈತರಿಗೆ ಸಮಸ್ಯೆಯಾಗಿದ್ದು, ಸಕಾಲಕ್ಕೆ ಸರಿಯಾಗಿ ಗೊಬ್ಬರ ಪೂರೈಕೆಗೆ ಕ್ರಮಕೈಗೊಳ್ಳಬೇಕು, ಕಾಳಸಂತೆಯಲ್ಲಿ ಅಧಿಕ ಬೆಲೆಗೆ ರಸಗೊಬ್ಬರ ಮಾರಾಟವಾಗುತ್ತಿರುವುದಕ್ಕೆ ಕಡಿವಾಣ ಹಾಕುವಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಜಿ.ಪಂ. ಸದ್ಯಸರಾದ ವಿಠಲಚೌರಿ, ಬಿ. ಎಚ್. ಮೇಟಿ, ಎಚ್.ಆರ್. ನಿರಾಣಿ ಮತ್ತಿತರರು ಆರೋಪಿಸಿದರು.

ಆರೋಪಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಗುರುಮೂರ್ತಿ, ಜಿಲ್ಲೆಯಲ್ಲಿ 5 ಸಾವಿರ ಟನ್ ರಸಗೊಬ್ಬರ ಕೊರತೆ ಇದೆ. ಈ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.
ಮುಂಗಾರು ಹಂಗಾಮಿಗೆ ಅಗತ್ಯವಿರುವ ಯೂರಿಯಾ 40530 ಕ್ವಿಂಟಾಲ್, ಡಿಎಪಿ 2849ಕ್ವಿಂಟಾಲ್, ಎಂಒಪಿ 16070, ಕಾಂಪ್ಲೆಕ್ಸ್ 8170 ಕ್ವಿಂಟಾಲ್ ಸೇರಿದಂತೆ ಒಟ್ಟು 93260 ಕಿಂಟ್ವಾಲ್ ರಸಗೊಬ್ಬರಕ್ಕೆ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಅಧಿಕ ಬೆಲೆಗೆ ಗೊಬ್ಬರ ಮಾರಾಟ ಮಾಡುವುದನ್ನು ತಡೆಯಲು ಈಗಾಗಲೇ ವಿಚಕ್ಷಣ ತಂಡವನ್ನು ರಚಿಸಲಾಗಿದ್ದು, ತಂಡವು ಎಲ್ಲಾ ಅಂಗಡಿಗಳನ್ನು ಪರಿಶೀಲನೆ ಮಾಡಿದ್ದು, ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದ  ನಾಲ್ಕು ಅಂಗಡಿಗಳ ಪರವಾನಗಿಯನ್ನು ಅಮಾನತಗೊಳಿಸಲಾಗಿದೆ, ಕೀಟನಾಶಕ, ರಸಗೊಬ್ಬರ ಮತ್ತು ಬೀಜದ ಗುಣಮಟ್ಟ ತಿಳಿಯಲಾಗುತ್ತಿದೆ  ಎಂದರು.

ಕೃಷಿ ಸಲಕರಣೆಗಳು ಸರಿಯಾಗಿ ವಿತರಣೆಯಾಗುತ್ತಿಲ್ಲ ಎಂಬ ಸದಸ್ಯರೊಬ್ಬರ ಪ್ರಶ್ನಿಗೆ ಪ್ರತಿಕ್ರಿಯಿಸದ ಕೃಷಿ ಇಲಾಖಾ ಜಂಟಿ ನಿರ್ದೇಶಕರು, ಕೃಷಿ ಸಲಕರಣೆ ವಿತರಣೆ ಬಗ್ಗೆ ಸರ್ಕಾರದಿಂದ ಇನ್ನೂ ಯಾವುದೇ ಮಾರ್ಗದರ್ಶನ ಬಂದಿಲ್ಲ,  ರೈತರು ಯಾವುದೇ ಕಂಪೆನಿಯ ಉಪಕರಣಗಳನ್ನು ಖರೀಸಿದರೂ ಸಹಾಯಧನ ನೀಡಲಾಗುತ್ತದೆ ಎಂದು ತಿಳಿಸಿದರು.

ಟಿ.ಸಿ. ದುರಸ್ತಿ: ಜಿಲ್ಲೆಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಟಿ.ಸಿ.ಗಳು ಹಾಳಾಗಿದ್ದು, ಕೃಷಿ ಚಟುವಟಿಕೆಗೆ ಮತ್ತು ಕುಡಿಯುವ ನೀರು ಪೂರೈಕೆಗೆ ಸಮಸ್ಯೆಯಾಗಿದೆ. ನಿಗದಿತ ಅವಧಿಯೊಳಗೆ ದುರಸ್ತಿಗೊಳಿಸಬೇಕು ಎಂದು ಜಿ.ಪಂ. ಸದಸ್ಯರಾದ ವಿಠಲಚೌರಿ, ಬಿ. ಎಚ್. ಮೇಟಿ ಆಗ್ರಹಿಸಿದರು.

ಸದಸ್ಯರ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಸ್ಕಾಂ ಅಧಿಕಾರಿ 20 ದಿನಗಳ ಕಾಲಾವಕಾಶ ಕೇಳಿದರು. ಆದರೆ ಇದಕ್ಕೆ ಒಪ್ಪದ ಸದಸ್ಯರು ವಾರದೊಳಗೆ ಸರಿಪಡಿಸುವ ಭರವಸೆ ನೀಡದಿದ್ದರೆ ಸಭೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.

ಬಳಿಕ ಮಧ್ಯ ಪ್ರವೇಶಿಸಿದ ಜಿ.ಪಂ. ಉಪಾಧ್ಯಕ್ಷ ಹೂವಪ್ಪ ರಾಠೋಡ, ಮೂರು ದಿನದೊಳಗೆ ಕುಡಿಯುವ ನೀರನ ಪೂರೈಕೆಗೆ ಅನುಕೂಲವಾಗುವಂತೆ ಮೂರು ದಿನದೊಳಗೆ ಟಿ.ಸಿ. ದುರಸ್ತಿಗೊಳಿಸಬೇಕು, ವಾರದೊಳಗೆ ರೈತರ ಅನುಕೂಲವಾಗುವಂತೆ ಟಿ.ಸಿ.ಯನ್ನು ದುರಸ್ತಿಗೊಳಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಶುಲ್ಕ ಪಾವತಿಸದ ಭಾಗ್ಯ ಜ್ಯೋತಿ ಬಳಕೆದಾರರ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿರುವುದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಯಾವುದೇ ವಿದ್ಯುತ್ ಸಂಪರ್ಕ ಕಡಿತಮಾಡದೇ ಕಂತುಕಂತಾಗಿ ಹಣ ಪಾವತಿಸಲು ವ್ಯವಸ್ಥೆ ಮಾಡಲು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಯಿತು.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ರಸ್ತೆ ಸಾರಿಗೆ ಬಸ್‌ಗಳು ಸಮಯಕ್ಕೆ ಸರಿಯಾಗಿ ಸಂಚರಿಸದಿರುವುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಸದಸ್ಯರು ಸೂಕ್ತ ಸಂಚಾರಕ್ಕೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.  ಜಿ.ಪಂ.ಅಧ್ಯಕ್ಷೆ ಕವಿತಾ ದಡ್ಡೇನವರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಹೂವಪ್ಪ ರಾಠೋಡ, ಸಿಇಒ ಡಾ. ಜೆ.ಸಿ.ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT