ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ದುರಸ್ತಿಗೆ ಒತ್ತಾಯ: ಪ್ರತಿಭಟನೆ

Last Updated 18 ಸೆಪ್ಟೆಂಬರ್ 2013, 6:13 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ರಸ್ತೆಗಳು ಹದಗೆಟ್ಟಿರುವ ಮತ್ತು ಎಲ್ಲಿ ಬೇಕೆಂದಲ್ಲಿ ತೆಗ್ಗುದಿಣ್ಣೆ, ಗುಂಡಿಗಳು ಇರುವ ಕಾರಣ ಆಕ್ರೋಶಗೊಂಡ ವಿವಿಧ ಬಡಾವಣೆಗಳ ನಿವಾಸಿಗಳು, ಸಾರ್ವಜನಿಕರು ಮತ್ತು ಸಂಘಟನೆಗಳ ಪ್ರತಿನಿಧಿಗಳು ಪ್ರತಿಭಟನೆ ಕೈಗೊಂಡು ದೀರ್ಘ ಕಾಲದವರೆಗೆ ರಸ್ತೆ ತಡೆ ನಡೆಸಿದ ಘಟನೆ ನಗರದ ಸರ್ಕಾರಿ ಜೂನಿಯರ್‌ ಕಾಲೇಜು ಬಳಿ ಮಂಗಳವಾರ ನಡೆಯಿತು.

ರಸ್ತೆ ದುರಸ್ತಿಗೆ ಜಿಲ್ಲಾಡಳಿತ ಮತ್ತು ನಗರಸಭೆಯು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು ರಸ್ತೆಯಲ್ಲಿ ಪೈರು ನಾಟಿ ಮಾಡಲು ಮುಂದಾದರು.  ಬೇಡಿಕೆ ಈಡೇರುವವರೆಗೆ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಅವರು ಒತ್ತಾಯಿಸಿದರು.

ಬಿ.ಬಿ.ರಸ್ತೆಯಿಂದ ಕೆಳಗಿನತೋಟ ಬಡಾವಣೆ ಮತ್ತು ಜಿಲ್ಲಾ ಕ್ರೀಡಾಂಗಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯು ಹದಗೆಟ್ಟು ವರ್ಷಗಳೇ ಕಳೆದರೂ ಇದುವರೆಗೆ ದುರಸ್ತಿ ಕೈಗೊಳ್ಳಲಾಗಿಲ್ಲ. ಜನರಿಗೆ ತೊಂದರೆಯಾಗುತ್ತಿದ್ದರೂ ಸಂಬಂಧಪಟ್ಟವರು ದುರಸ್ತಿ ಕಾಮಗಾರಿಗೆ ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು ಕೆಸರಿನಿಲ್ಲಿ ಪೈರು ನಾಟಿ ಮಾಡಲು ಮುಂದಾದರು. ಇದರ ಪರಿಣಾಮ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿದ್ದಲ್ಲದೇ ಕೆಲ ರಸ್ತೆಯುದ್ದಕ್ಕೂ ವಾಹನಗಳು ಸಾಲಾಗಿ ನಿಂತವು.

ಸ್ಥಳಕ್ಕೆ ಬಂದ ಸರ್ಕಲ್‌ ಇನ್ಸ್‌ಪೆಕ್ಟರ್‌ ಎಸ್‌.ಮಹೇಶ್‌ ಕುಮಾರ್‌ ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದರು. ಸಮಾಧಾನಪಡಿಸಲು ಯತ್ನಿಸಿದರೂ ಪ್ರತಿಭಟನಾಕಾರರು ಒಪ್ಪಲಿಲ್ಲ. ನಗರಸಭೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ನಾಗೇಶ್‌ ಅವರಿಗೆ ಘೇರಾವ್‌ ಮಾಡಲು ಪ್ರತಿಭಟನಾಕಾರರು ಮುಂದಾದರು. 

ಪ್ರತಿಭಟನೆ ಸಮಯಕ್ಕೆ ಇದೇ ರಸ್ತೆಯಲ್ಲಿ ಆಗಮಸಿದ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ವೈ.ಈರಣ್ಣನವರ್ ಅವರು ಪ್ರತಿಭಟನಾಕಾರರ ಮನವಿ ಆಲಿಸಿದರು. ‘ನಗರದ ರಸ್ತೆಗಳು ಹದಗೆಟ್ಟಿರುವುದು ಗಮನಕ್ಕೆ ಬಂದಿದೆ. ದುರಸ್ತಿ ಮತ್ತು ಸುಧಾರಣೆಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸು ತ್ತೇನೆ’ ಎಂದು ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ರೈತ ಮುಖಂಡ ಅಗಲಗುರ್ಕಿ ಚಂದ್ರಶೇಖರ್‌ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಗಮನದ ಹಿನ್ನೆಲೆಯಲ್ಲಿ ನಗರದಲ್ಲಿ ಸ್ವಚ್ಛತಾ ಕಾರ್ಯ ಮತ್ತು ಕಾಮಗಾರಿ ಕೈಗೊಳ್ಳಲಾಗುತ್ತಿದೆ.  ತಾತ್ಕಾಲಿಕ ಕಾಮಗಾರಿಯನ್ನು ಕೈಗೊಂಡು ನಂತರ ಕೈಬಿಡುವುದರ ಬದಲು ದೀರ್ಘ ಕಾಲದವರೆಗೆ ಜನರಿಗೆ ಉಪಯುಕ್ತವಾಗಬಲ್ಲ ಕಾಮಗಾರಿ ಕೈಗೆತ್ತಿಕೊಳ್ಳಬೇಕು’ ಎಂದು ಒತ್ತಾಯಿಸಿದರು. ಕೆಲ ಹೊತ್ತಿನ ನಂತರ ನಗರಸಭೆ ವತಿಯಿಂದ ಜೆಸಿಬಿ ವಾಹನವನ್ನು ತರಿಸಿ, ತೆಗ್ಗುದಿಣ್ಣೆಗಳನ್ನು ಮುಚ್ಚಿ ರಸ್ತೆ ಸಮತಟ್ಟುಗೊಳಿಸಲು ಪ್ರಯತ್ನಿಸಲಾಯಿತು. 

   ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಮುಖಂಡ ಶಿವು ಮತ್ತು ಇತರ ಸಂಘಟನೆಗಳ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT