ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಿಗಳ ಹಿಡಿತ ತಪ್ಪಿಸಿದ ಆದೇಶ

Last Updated 8 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಡಿವೈಎಸ್ಪಿ ಮತ್ತು ಅವರ ಕೆಳಹಂತದ ಪೊಲೀಸ್ ಅಧಿಕಾರಿಗಳ ವರ್ಗಾವಣೆ, ನೇಮಕಾತಿ, ಬಡ್ತಿ ಮತ್ತಿತರ ಸೇವಾ ವಿಷಯಗಳ ಕುರಿತು ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಪೊಲೀಸ್ ಮಾಹಾನಿರ್ದೇಶಕರ ನೇತೃತ್ವದಲ್ಲಿ ಹೊಸದಾಗಿ ಸೃಷ್ಟಿಸಿರುವ `ಪೊಲೀಸ್ ಸಿಬ್ಬಂದಿ ಮಂಡಳಿ~ಗೆ ನೀಡಲಾಗಿದೆ.

ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ತಪ್ಪಿಸುವುದು ಮತ್ತು ಅವರ ಕಾರ್ಯದಕ್ಷತೆ ಹೆಚ್ಚಿಸುವ ಉದ್ದೇಶದಿಂದ ಇಂತಹದೊಂದು ಮಂಡಳಿ ರಚಿಸುವುದು ಅಗತ್ಯ ಎಂದು ಸುಪ್ರೀಂಕೋರ್ಟ್, ಪ್ರಕಾಶ್ ಸಿಂಗ್ ಪ್ರಕರಣದಲ್ಲಿ ಸೂಚಿಸಿದೆ. ಇದನ್ನು ಎಲ್ಲ ರಾಜ್ಯಗಳು ಪಾಲಿಸಬೇಕು ಎಂದೂ ಹೇಳಿದೆ.

ಈ ಆದೇಶ ಜನಪ್ರತಿನಿಧಿಗಳಿಗೆ ನುಂಗಲಾರದ ತುತ್ತಾಯಿತು. ಇದನ್ನು ಜಾರಿಗೊಳಿಸಿದರೆ ಪೊಲೀಸ್ ವರ್ಗಾವಣೆಯಲ್ಲಿ ತಮ್ಮ ಹಿಡಿತ ತಪ್ಪುತ್ತದೆ ಎಂದು ಅವರು ಸಿಡಿಮಿಡಿಗೊಂಡರು. ಇದೇ ಕಾರಣಕ್ಕೆ ಸುಪ್ರೀಂ ಕೋರ್ಟ್ ಸೂಚನೆಗೆ ಆರಂಭದಲ್ಲಿ ಸರ್ಕಾರವೇ ವಿರೋಧ ವ್ಯಕ್ತಪಡಿಸಿತು. ಸಿಬ್ಬಂದಿ ಮಂಡಳಿಯ ಸ್ಥಾಪನೆಗೆ ಸರ್ಕಾರಿ ಆದೇಶ ಹೊರಬೀಳುವುದು ಇದೇ ಕಾರಣದಿಂದ ತಡವಾಯಿತು.

`ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಾದರೆ ವರ್ಗಾವಣೆ ಮತ್ತು ಬಡ್ತಿ ವಿಷಯದಲ್ಲಿ ಕಠಿಣವಾದ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ಪದೇ ಪದೇ ವರ್ಗಾವಣೆ ಮಾಡುವುದಕ್ಕೆ ಕಡಿವಾಣ ಹಾಕಬೇಕು. ಒಬ್ಬ ಅಧಿಕಾರಿ ಕನಿಷ್ಠ ಎರಡು ವರ್ಷ ಒಂದೇ ಕಡೆ ಇರಬೇಕು. ಇದರಿಂದ ಕಾರ್ಯದಕ್ಷತೆ ಹೆಚ್ಚುತ್ತದೆ. ತಕ್ಷಣ ಅದನ್ನು ಜಾರಿ ಮಾಡಬೇಕು~ ಎಂದೂ 2006ರಲ್ಲಿ ಸುಪ್ರೀಂಕೋರ್ಟ್ ಹೇಳಿತು.

ರಾಜ್ಯ ಸರ್ಕಾರ ವಿಧಿ ಇಲ್ಲದೆ ಇದನ್ನು ಪಾಲಿಸಬೇಕಾಯಿತು. 2009ರ ಆಗಸ್ಟ್ 28ರಂದು ಸರ್ಕಾರ ಆದೇಶ ಹೊರಡಿಸಿ, ಡಿಜಿಪಿ ನೇತೃತ್ವದಲ್ಲಿ ನಾಲ್ಕು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ಪೊಲೀಸ್ ಸಿಬ್ಬಂದಿ ಮಂಡಳಿಯನ್ನು ರಚಿಸಿತು. ಇದಕ್ಕೆ ಶಾಸನದ ರೂಪ ನೀಡುವ ಉದ್ದೇಶದಿಂದ ಜೂನ್ 1ರಂದು ಸುಗ್ರೀವಾಜ್ಞೆ ಹೊರಡಿಸಿದೆ. ಜೂನ್ 23ರಂದು ಮಂಡಳಿ ರಚನೆಗೆ ಅಧಿಸೂಚನೆ ಕೂಡ ಹೊರಡಿಸಿತು. ರಚನೆ ನಂತರ ಈ ಮಂಡಳಿ ಒಮ್ಮೆಯೂ ಸಭೆ ಸೇರಿಲ್ಲ. ಹೀಗಾಗಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ ವಿಳಂಬವಾಗಿದೆ.

ನಿಯಮಗಳಲ್ಲಿ ಡಿವೈಎಸ್ಪಿ ಮತ್ತು ಅವರ ಕೆಳಹಂತದ ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವ ಪೂರ್ಣ ಜವಾಬ್ದಾರಿ ಮಂಡಳಿಗೇ ಇದ್ದರೂ ವಿಶೇಷ ಸಂದರ್ಭದಲ್ಲಿ ಅದನ್ನು ಬದಲಿಸುವ ಅಧಿಕಾರವನ್ನು ಸರ್ಕಾರವೇ ಇಟ್ಟುಕೊಂಡಿದೆ. ಒಂದು ವೇಳೆ ಮಂಡಳಿಯ ಅಣತಿಯಂತೆ ವರ್ಗಾವಣೆ ಮಾಡಲು ಸಾಧ್ಯವಾಗದಿದ್ದಲ್ಲಿ ಅದಕ್ಕೆ ನಿಖರವಾದ ಕಾರಣ ದಾಖಲಿಸಬೇಕು. ಹಾಗೆ ಮಾಡಿದ ನಂತರ ಸರ್ಕಾರ, ಮಂಡಳಿಯ ಗಮನಕ್ಕೆ ತಂದು ವರ್ಗಾವಣೆ ಮಾಡಲು ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

ರಾಜ್ಯ ಸರ್ಕಾರ ನಿಗದಿಪಡಿಸಿದ ಅವಧಿಯಲ್ಲೇ ವರ್ಗಾವಣೆ ಪ್ರಕ್ರಿಯೆ ನಡೆಸಬೇಕು. ಇಷ್ಟ ಬಂದಾಗ ಸಭೆ ಸೇರಿ ವರ್ಗಾವಣೆ ಮಾಡುವುದಕ್ಕೂ ಸುಗ್ರೀವಾಜ್ಞೆಯಲ್ಲಿ ಕಡಿವಾಣ ಹಾಕಲಾಗಿದೆ. ಈ ಮಂಡಳಿ ವರ್ಗಾವಣೆ ಜತೆಗೆ ಡಿವೈಎಸ್ಪಿವರೆಗಿನ ಅಧಿಕಾರಿಗಳಿಗೆ ಬಡ್ತಿ ನೀಡುವ ವಿಷಯದಲ್ಲೂ ಕ್ರಮ ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿದೆ. ಬಡ್ತಿ ನೀಡುವಾಗ ಮೀಸಲಾತಿ ನಿಯಮಗಳನ್ನು ಪಾಲಿಸಲಾಗಿದೆಯೇ, ಸೇವಾ ದಾಖಲೆಗಳು ಸರಿ ಇವೆಯೇ ಎಂಬುದನ್ನೂ ಮಂಡಳಿಯೇ ಪರಿಶೀಲಿಸುತ್ತದೆ. ಬಳಿಕ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ.

ವರ್ಷಕ್ಕೆ ಇಳಿಕೆ: ಒಬ್ಬ ಅಧಿಕಾರಿಯನ್ನು ಕನಿಷ್ಠ ಎರಡು ವರ್ಷ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸಲು ಬಿಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದ್ದನ್ನು ರಾಜ್ಯ ಸರ್ಕಾರ ಪಾಲಿಸಿಲ್ಲ. ಕನಿಷ್ಠ ಒಂದು ವರ್ಷದವರೆಗೆ ಅಧಿಕಾರಿಯನ್ನು ವರ್ಗಾವಣೆ ಮಾಡುವಂತಿಲ್ಲ ಎಂದು ನಿಯಮಗಳಲ್ಲಿ ಹೇಳಲಾಗಿದೆ. ರಾಜ್ಯ ಸರ್ಕಾರ ಇಚ್ಛೆಪಟ್ಟಲ್ಲಿ ನಿಗದಿತ ಅವಧಿಗೆ ಮೊದಲೇ ವರ್ಗಾವಣೆ ಮಾಡಲು ಅವಕಾಶ ಇದೆ. ಈ ರೀತಿಯ ಹಲ್ಲಿಲ್ಲದ ಸುಗ್ರೀವಾಜ್ಞೆ ಸರಿಯಲ್ಲ. ವರ್ಗಾವಣೆ ಭೀತಿ ಇದ್ದರೆ ಅಧಿಕಾರಿಗಳು ನಿರ್ಭೀತಿಯಿಂದ ಕೆಲಸ ಮಾಡುವುದು ಕಷ್ಟ~ ಎಂದೂ ಹಿರಿಯ ಅಧಿಕಾರಿಯೊಬ್ಬರು`ಪ್ರಜಾವಾಣಿ~ ಜತೆ ತಮ್ಮ ಅನಿಸಿಕೆ ಹಂಚಿಕೊಂಡರು.
(ಮುಂದುವರಿಯುವುದು)

ಎಲ್ಲಿಯ ಪಾರದರ್ಶಕತೆ?
`ವರ್ಗಾವಣೆ ಮತ್ತು ಬಡ್ತಿಗೆ ಸಂಬಂಧಿಸಿದಂತೆ ನಿರ್ದಿಷ್ಟ ನಿಯಮಗಳನ್ನು ರೂಪಿಸಿದ ನಂತರ ಆ ಪ್ರಕಾರವೇ ಎಲ್ಲವೂ ನಡೆಯಬೇಕು. ಇಲ್ಲದಿದ್ದರೆ ಅದನ್ನು ಸಿಬ್ಬಂದಿ ಮಂಡಳಿ ಒಪ್ಪುವುದಿಲ್ಲ. ಹೀಗಾಗಿ ಕಾನೂನಿನ ಚೌಕಟ್ಟಿನೊಳಗೇ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದಕ್ಕೆ ಪೊಲೀಸ್ ಅಧಿಕಾರಿಗಳು ಕೂಡ ಸಹಕರಿಸುತ್ತಾರೆ. ಇಂತಹ ಅನೇಕ ಸನ್ನಿವೇಶನಗಳು ನಮ್ಮ ಮುಂದಿವೆ~ ಎನ್ನುತ್ತಾರೆ ಗೃಹ ಇಲಾಖೆಯ ನಿವೃತ್ತ ಕಾರ್ಯದರ್ಶಿಯೊಬ್ಬರು.

“ಸುಪ್ರೀಂಕೋರ್ಟ್ ಸದುದ್ದೇಶದಿಂದ ಪೊಲೀಸ್ ಸಿಬ್ಬಂದಿ ಮಂಡಳಿ ರಚನೆಗೆ ಸೂಚಿಸಿದೆ. ಆದರೆ, ರಾಜಕಾರಣಿಗಳು ಮತ್ತು ಪೊಲೀಸ್ ಅಧಿಕಾರಿಗಳ `ಸಂಬಂಧ~ ಮೂಲ ಉದ್ದೇಶವನ್ನೇ ಬುಡಮೇಲು ಮಾಡುತ್ತಿದೆ. ವರ್ಗಾವಣೆ ವಿಷಯದಲ್ಲಿ ಸಿಬ್ಬಂದಿ ಮಂಡಳಿ ಕೂಡ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ. ರಾಜಕಾರಣಿಗಳು ನೀಡುವ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಕೆಲಸವೇ ಹೆಚ್ಚಾಗಿ ನಡೆಯುತ್ತಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

`ಉದ್ದೇಶವೇ ದುರ್ಬಲ~
ಬೆಂಗಳೂರು: `ಕನಿಷ್ಠ ಎರಡು ವರ್ಷ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಬಾರದು ಎಂದು ಸುಪ್ರೀಂಕೋರ್ಟ್ ಹೇಳಿದ್ದನ್ನು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಒಂದು ವರ್ಷಕ್ಕೆ ಇಳಿಸಿದೆ. ಇದು ಸುಪ್ರೀಂಕೋರ್ಟ್‌ನ ಆಶಯವನ್ನೇ ದುರ್ಬಲಗೊಳಿಸಿದೆ~ ಎಂದು ದೆಹಲಿ ಮೂಲದ `ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಷಿಯೇಟಿವ್~ನ ನಿರ್ದೇಶಕಿ ಮಾಜಾ ದಾರುವಾಲಾ ದೂರಿದ್ದಾರೆ.

`ಕನಿಷ್ಠ ಎರಡು ವರ್ಷವಾದರೂ ಒಂದೇ ಕಡೆ ಇದ್ದರೆ, ಅಂತಹ ಅಧಿಕಾರಿಗಳಿಂದ ಕಾರ್ಯದಕ್ಷತೆ ನಿರೀಕ್ಷೆ ಮಾಡಬಹುದು. ದೂರದೃಷ್ಟಿಯ ಯೋಜನೆಗಳನ್ನು ಹಮ್ಮಿಕೊಳ್ಳುವುದಕ್ಕೂ ಅನುಕೂಲ. ಅದನ್ನು ಬಿಟ್ಟು ಒಂದೇ ವರ್ಷಕ್ಕೆ ವರ್ಗಾವಣೆಗೆ ಅವಕಾಶ ಕಲ್ಪಿಸಿರುವುದು ಪ್ರಭಾವಿಗಳಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ~ ಎಂದು ಅವರು ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

`ದುರ್ನಡತೆಯ ಅಧಿಕಾರಿಗಳನ್ನು ಅವಧಿಗೂ ಮುನ್ನವೇ ಬೇರೊಂದು ಸ್ಥಳಕ್ಕೆ ವರ್ಗಾವಣೆ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಈ ಕ್ರಮದಿಂದ ಸಮಸ್ಯೆಯನ್ನೂ ವರ್ಗಾವಣೆ ಮಾಡಿದಂತೆ ಆಗುತ್ತದೆ. ಅದರ ಬದಲಿಗೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಈ ಅಂಶ ಕೂಡ ಸುಗ್ರೀವಾಜ್ಞೆಯಲ್ಲಿ ಇರಬೇಕಿತ್ತು~ ಎಂದೂ ಅವರು ಹೇಳಿದ್ದಾರೆ.

`ಪ್ರತಿಕ್ರಿಯೆ ನೀಡಲ್ಲ~
ಬೆಂಗಳೂರು: `ಪೊಲೀಸ್ ವರ್ಗಾವಣೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ~ ಎಂದು ಪೊಲೀಸ್ ಮಹಾನಿರ್ದೇಶಕ ಲಾಲ್ ರೊಕುಮಾ ಪಚಾವೊ ಹೇಳಿದರು.

`ಪೊಲೀಸ್ ಅಧಿಕಾರಿಗಳ ವರ್ಗಾವಣೆ ಸ್ವಲ್ಪ ತಡವಾಗಿರುವುದು ಸತ್ಯ. ಇನ್ನೊಂದು ವಾರದಲ್ಲಿ ಸಿಬ್ಬಂದಿ ಮಂಡಳಿ ಸಭೆ ಸೇರಿ ಎಲ್ಲವನ್ನೂ ಅಂತಿಮಗೊಳಿಸಲಿದೆ~ ಎಂದು ಹೇಳಿದ ಅವರು, `ವಿವಾದ ಸೃಷ್ಟಿಸುವಂತಹ ಹೇಳಿಕೆ ನೀಡುವುದು ನನಗೆ ಇಷ್ಟ ಇಲ್ಲ. ಆ ಬಗ್ಗೆ ಏನನ್ನೂ ಕೇಳಬೇಡಿ~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT