ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆ: ಮುಗಿಯದ ಹೂಳೆತ್ತುವ ಕರ್ಮಕಾಂಡ

Last Updated 8 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೇರಳಕ್ಕೆ ಮುಂಗಾರು ಆಗಮನವಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿಯೂ ಕಾರ್ಮೋಡಗಳು ಆವರಿಸಿ ಮಳೆ ಹನಿಗಳ ಸಿಂಚನವಾಗುತ್ತಿದೆ. ಆದರೆ, ತುಂತುರು ಮಳೆ ಸುರಿದರೂ ತಗ್ಗು ಪ್ರದೇಶಗಳ ಜನತೆಯ `ನೆಮ್ಮದಿ~ ದೂರವಾಗುತ್ತದೆ.

ಪ್ರತಿ ವರ್ಷ ಮಳೆಗಾಲದಲ್ಲಿ ರಸ್ತೆ ಹಾಗೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುವುದನ್ನು ತಪ್ಪಿಸಲು ಬಿಬಿಎಂಪಿ ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ಕೇಂದ್ರದ `ನರ್ಮ್~ ಯೋಜನೆಯಡಿ ಕೋಟ್ಯಂತರ ರೂಪಾಯಿಗಳನ್ನು ನೀರಿನಂತೆ ಖರ್ಚು ಮಾಡಿದರೂ ರಾಜಕಾಲುವೆಗಳಲ್ಲಿ ಹೂಳೆತ್ತಿ ಅಥವಾ ಮಳೆ ನೀರಿನ ಕಾಲುವೆಗಳನ್ನು ಪುನರ್ ನಿರ್ಮಾಣ ಮಾಡುವ ಮೂಲಕ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಲ್ಲಿ ಪಾಲಿಕೆ ಸಂಪೂರ್ಣ ಸೋತಿದೆ.

ಪ್ರತಿ ವರ್ಷ ಏಪ್ರಿಲ್- ಮೇ ತಿಂಗಳಲ್ಲಿ ಒಂದೆರಡು ಬಾರಿ ಅಕಾಲಿಕ ಮಳೆ ಸುರಿದರೂ `ಉದ್ಯಾನ ನಗರಿ~ ಅನೇಕ ಅವಾಂತರಗಳನ್ನು ಎದುರಿಸುತ್ತದೆ. ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗುವುದು, ಮರ ಉರುಳುವುದು, ದೇವಸ್ಥಾನದ ಗರ್ಭಗುಡಿಯೊಳಗೆ ನೀರು ನುಗ್ಗುವುದು... ಇಂತಹ ಘಟನೆಗಳೆಲ್ಲಾ ಸಾಮಾನ್ಯ ಸಂಗತಿ ಅನಿಸುತ್ತದೆ.

ಈ ವರ್ಷವೂ ಪರಿಸ್ಥಿತಿ ಭಿನ್ನವಾಗಿಲ್ಲ. ಬಿಬಿಎಂಪಿಯು ಹೆಚ್ಚುವರಿ ನಿಯಂತ್ರಣ ಕೊಠಡಿಗಳನ್ನು ತೆರೆದು, ಸಿಬ್ಬಂದಿಗೆ ಅಗತ್ಯ ಉಪಕರಣಗಳನ್ನು ಒದಗಿಸುವ ಮೂಲಕ ಮಳೆಗಾಲ ಎದುರಿಸಲು ಸಜ್ಜುಗೊಳ್ಳುತ್ತಿದೆ. ಮಳೆಗಾಲದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾದರೂ ಶಾಶ್ವತ ಯೋಜನೆಗಳ ಬಗ್ಗೆ ಅದು ಅಷ್ಟು ಗಂಭೀರವಾಗಿ ತಲೆಕೆಡಿಸಿಕೊಳ್ಳದಿರುವುದು ಇದುವರೆಗೆ ಯೋಜನೆಗಳ ಬಗ್ಗೆ ಬೆಳಕು ಚೆಲ್ಲಿದಾಗ ಸ್ಪಷ್ಟವಾಗುತ್ತದೆ.

ಈ ಮೊದಲು ಕೇವಲ 250 ಚದರ ಕಿ.ಮೀ.ಗಳಷ್ಟಿದ್ದ ಪಾಲಿಕೆ ವ್ಯಾಪ್ತಿಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ ಮಾರ್ಪಟ್ಟ ನಂತರ 850 ಚದರ ಕಿ.ಮೀ.ನಷ್ಟು ಹಿಗ್ಗಿದೆ. ನಗರದ ಹೊರವಲಯದಲ್ಲಿನ ನಗರಸಭೆ- ಪುರಸಭೆಗಳು ಹಾಗೂ ಸುತ್ತಮುತ್ತಲಿನ 110 ಹಳ್ಳಿಗಳು ಸೇರ್ಪಡೆಗೊಂಡ ನಂತರ ಪಾಲಿಕೆಯ ಮೇಲೆ ಇನ್ನಷ್ಟು ಜವಾಬ್ದಾರಿ ಹೆಚ್ಚಿದೆ. ಇದರಿಂದ ಮಳೆಗಾಲವನ್ನು ಎದುರಿಸುವುದು ಕೂಡ ಪಾಲಿಕೆಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

`ನರ್ಮ್~ ನೆರವು ಸದ್ಬಳಕೆಯಲ್ಲಿ ವಿಫಲ: ನಗರದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ `ನರ್ಮ್~ ಯೋಜನೆಯಡಿ 2004-05ರಿಂದ 2011-12 ರವರೆಗೆ ಪಾಲಿಕೆಗೆ 925 ಕೋಟಿ ರೂಪಾಯಿ ಅನುದಾನ ಪಡೆಯಲು ಅವಕಾಶವಿತ್ತು. ಆದರೆ, ಸಕಾಲಕ್ಕೆ ಯೋಜನಾ ವರದಿಗಳನ್ನು ಕೇಂದ್ರಕ್ಕೆ ಸಲ್ಲಿಸಿ ಹೆಚ್ಚಿನ ಅನುದಾನ ಪಡೆಯುವಲ್ಲಿ ಪಾಲಿಕೆ ವಿಫಲವಾಯಿತು.

ಈ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಕೇವಲ 429ರಿಂದ 430 ಕೋಟಿ ರೂಪಾಯಿಗಳಷ್ಟೇ ಬಿಡುಗಡೆಯಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.`ಸಕಾಲಕ್ಕೆ ಯೋಜನಾ ವರದಿಗಳನ್ನು ಕೇಂದ್ರಕ್ಕೆ ಸಲ್ಲಿಸಿ ಹೆಚ್ಚಿನ ಅನುದಾನ ಪಡೆಯುವಲ್ಲಿ ಪಾಲಿಕೆ ವಿಫಲವಾಯಿತು. ಅಲ್ಲದೆ, ಮಳೆ ನೀರಿನ ಕಾಲುವೆಗಳ ಪುನರ್ ವಿನ್ಯಾಸಕ್ಕೆ ರೂಪಿಸಿದ್ದ ಯೋಜನೆಯನ್ನು ಅಧಿಕಾರಿಗಳು ಮಾರ್ಪಡಿಸಿ ಹೂಳೆತ್ತುವುದರ ಮೂಲಕ ಸಾಕಷ್ಟು ಅವ್ಯವಹಾರ ನಡೆಸಲಾಗಿದೆ~ ಎಂದು ಮಾಜಿ ಮೇಯರ್ ಪಿ.ಆರ್. ರಮೇಶ್ ಆರೋಪಿಸಿದ್ದಾರೆ.

ಒತ್ತುವರಿ ತೆರವು: ಹೈಕೋರ್ಟ್ ಆದೇಶಕ್ಕೂ ಬೆಲೆಯಿಲ್ಲ: ಇನ್ನು, ನಗರ ಬೆಳೆದಂತೆಲ್ಲ ಕೆರೆ-ಕುಂಟೆ, ರಾಜಕಾಲುವೆಗಳು ಕೂಡ ಒತ್ತುವರಿಯಾಗಿವೆ. ನಗರದ ಅನೇಕ ಕಡೆಗಳಲ್ಲಿ ಮಳೆ ನೀರಿನ ಚರಂಡಿಗಳು ಭೂಗಳ್ಳರ ಪಾಲಾಗಿವೆ.

ಇಂತಹ ಮಳೆ ನೀರಿನ ಚರಂಡಿ ಹಾಗೂ ರಾಜಕಾಲುವೆಗಳ ಒತ್ತುವರಿ ಜಾಗಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ ಎರಡು ಬಾರಿ ಸ್ಪಷ್ಟ ನಿರ್ದೇಶನ ನೀಡಿದ್ದರೂ ಅದನ್ನು ಪಾಲಿಕೆ ಗಂಭೀರವಾಗಿ ಪರಿಗಣಿಸಿದಂತಿಲ್ಲ.

ನಗರದ ಪ್ರಮುಖ ರಾಜಕಾಲುವೆಗಳ ವ್ಯಾಪ್ತಿ, ವಿಸ್ತೀರ್ಣವನ್ನು ಪಾಲಿಕೆಯ ಸಿಡಿಪಿ (ಸಮಗ್ರ ಯೋಜನಾ ವರದಿ)ಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಇದರಿಂದ ರಾಜಕಾಲುವೆಗಳ ಅಭಿವೃದ್ಧಿಗೆ ಸ್ಪಷ್ಟ ಕಾರ್ಯಯೋಜನೆ ರೂಪಿಸಲು ಪಾಲಿಕೆಗೆ ಅನುಕೂಲವಾಗಲಿದೆ. ಆದರೆ, ಇದುವರೆಗೆ ಪಾಲಿಕೆಯು ಅಂತಹ ಕಾರ್ಯಯೋಜನೆ ರೂಪಿಸಿ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯಲು ಸಾಧ್ಯವಾಗಿಲ್ಲ ಎಂದು ಹೆಸರೇಳಲಿಚ್ಛಿಸದ ಮಾಜಿ ಶಾಸಕರೊಬ್ಬರು ದೂರಿದರು.

ಹಣಕಾಸಿನ ಕೊರತೆ: ಇನ್ನು, ಬೃಹತ್ ಮಳೆನೀರಿನ ಕಾಲುವೆ ಅಥವಾ ರಾಜಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಪಾಲಿಕೆ ಹಣಕಾಸಿನ ಕೊರತೆ ಎದುರಿಸುತ್ತಿದೆ. ಹೀಗಾಗಿ, 2011-12ನೇ ಸಾಲಿನಲ್ಲಿ ಪ್ರಕಟಿಸಿದ ಯೋಜನೆಗಳನ್ನೂ ಇದುವರೆಗೆ ಸರಿಯಾಗಿ ಜಾರಿಗೊಳಿಸಲು ಪಾಲಿಕೆಗೆ ಸಾಧ್ಯವಾಗಿಲ್ಲ.
ಈ ವರ್ಷ ಮಳೆಗಾಲ ಸಮೀಪಿಸಿದರೂ ಕಳೆದ ವರ್ಷದ ಕಾರ್ಯಕ್ರಮಗಳಿಗೆ ಬಿಡಿಗಾಸೂ ಹಣ ಬಿಡುಗಡೆಯಾಗಿಲ್ಲ ಎಂಬುದು ಅವರ ಆರೋಪ.ಸುಮಾರು ಮೂರ‌್ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾದ ಹಲವು ಮಳೆನೀರಿನ ಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳು ಕೂಡ ಅರ್ಧಕ್ಕೆ ನಿಂತಿವೆ. ಹಣಕಾಸಿನ ಕೊರತೆಯಿಂದ ನೆನೆಗುದಿಗೆ ಬೀಳುವಂತಹ ಕಾಮಗಾರಿಗಳನ್ನು ಮುಂದುವರಿದ ಕಾಮಗಾರಿಗಳ ಪಟ್ಟಿಗೆ ಸೇರಿಸುವುದು ಪಾಲಿಕೆ ಕಾರ್ಯಕ್ರಮಗಳಲ್ಲಿ ಒಂದಾಗಿ ಪರಿಣಮಿಸಿದೆ.
 
ಸಕಾಲದಲ್ಲಿ ಹಣ ಬಿಡುಗಡೆಯಾಗದಿರುವುದರಿಂದ ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿದ್ದಾರೆ. ಹೀಗೆ ಮುಂದುವರಿದ ಕಾಮಗಾರಿಗಳ ಪಟ್ಟಿಗೆ ಸೇರ್ಪಡೆಗೊಂಡಂತಹ ಅನೇಕ ಗುತ್ತಿಗೆದಾರರಿಗೆ ಪಾಲಿಕೆ ಹಣ ಬಿಡುಗಡೆ ಮಾಡದೆ ಬಾಕಿ ಉಳಿಸಿಕೊಂಡಿದೆ.ಇಂತಹ ಕಾಮಗಾರಿಗಳನ್ನು ನಿರ್ವಹಿಸಿದ ಗುತ್ತಿಗೆದಾರರ ಸುಮಾರು 50ರಿಂದ 60 ಕಡತಗಳನ್ನು ಪಾಲಿಕೆ ಪುನರ್ ಪರಿಶೀಲಿಸಿ ಹಣ ಬಿಡುಗಡೆಗೆ ಮಂಜೂರಾತಿ ನೀಡಬೇಕಾಗಿದೆ. ಇದರಿಂದ ಗುತ್ತಿಗೆದಾರರಿಗೆ ಕೋಟ್ಯಂತರ ರೂಪಾಯಿ ಪಾವತಿಸುವುದು ಬಾಕಿ ಉಳಿದುಕೊಂಡಿದೆ ಎಂಬುದು ಗುತ್ತಿಗೆದಾರರ ಆರೋಪ.

2012-13ನೇ ಸಾಲಿನ ಬಜೆಟ್ ನಂತರ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ ಮಾಡುವುದಾಗಿ ಪಾಲಿಕೆ ಅಧಿಕಾರಿಗಳು ಸಬೂಬು ನೀಡುತ್ತಿದ್ದಾರೆ. ಆದರೆ, ಪಾಲಿಕೆಯು ಈ ಸಾಲಿನ ಬಜೆಟ್ ಮಂಡಿಸಿ, ಅದಕ್ಕೆ ಸರ್ಕಾರದ ಅನುಮೋದನೆ ಸಿಗಲು ಇನ್ನೂ ಮೂರ‌್ನಾಲ್ಕು ತಿಂಗಳು ಬೇಕಾಗಬಹುದು ಎಂದು ಗುತ್ತಿಗೆದಾರರೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಅಪೂರ್ಣ ಕಾಮಗಾರಿಗಳ ಟೆಂಡರ್ ರದ್ದು

“ `ನರ್ಮ್~ ಯೋಜನೆಯ ಮೊದಲ ಹಂತದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸದ ಎಲ್ಲ ಟೆಂಡರ್‌ಗಳನ್ನು ರದ್ದುಪಡಿಸಲಾಗಿದೆ. ಮತ್ತೆ ಅದನ್ನು ಮುಂದುವರಿಸುವ ಪ್ರಶ್ನೆಯೇ ಇಲ್ಲ” ಎಂದು ಪಾಲಿಕೆ ಆಯುಕ್ತ ಎಂ.ಕೆ. ಶಂಕಲಿಂಗೇಗೌಡ ಪ್ರತಿಕ್ರಿಯಿಸಿದ್ದಾರೆ.

`ನರ್ಮ್~ ಯೋಜನೆಯ ಎರಡನೇ ಹಂತದಲ್ಲಿ ಸುಮಾರು 521 ಕೋಟಿ ರೂಪಾಯಿ ನೆರವು ಪಡೆಯಲು ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಅನುದಾನವನ್ನು ಮಳೆ ನೀರು ಕಾಲುವೆಗಳ ಪುನರ್ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದರು.

`ಸುಮಾರು 140 ಕೋಟಿ ರೂಪಾಯಿ ವೆಚ್ಚದಲ್ಲಿ ಮಳೆ ನೀರು ಕಾಲುವೆಗಳಲ್ಲಿ ಹೂಳೆತ್ತಲು 65 ಪ್ಯಾಕೇಜ್‌ಗಳಿಗೆ ಟೆಂಡರ್ ಕರೆಯಲಾಗಿತ್ತು. ಆದರೆ, ಟೆಂಡರ್‌ಗೆ ಗುತ್ತಿಗೆದಾರರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಹೀಗಾಗಿ, ಮತ್ತೊಮ್ಮೆ ಟೆಂಡರ್ ಕರೆಯಲಾಗುವುದು~ ಎಂದು ಅವರು ತಿಳಿಸಿದರು.

ರೂ 13 ಕೋಟಿ ಬಿಡುಗಡೆ:  `ಮಳೆ ನೀರಿನ ಕಾಲುವೆಗಳ ಅಭಿವೃದ್ಧಿ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಇತ್ತೀಚೆಗೆ 13 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಮುಗಿಸಿದ ಹಾಗೆ ಉಳಿದ ಹಣ ಬಿಡುಗಡೆ ಮಾಡಲಾಗುವುದು~ ಎಂದು ಅವರು ತಿಳಿಸಿದರು.

                      ಲೋಕಾಯುಕ್ತ ತನಿಖೆ ಏನಾಯಿತು?
ನಗರದ ಕೋರಮಂಗಲ, ಚಲ್ಲಘಟ್ಟ, ಹೆಬ್ಬಾಳ, ವೃಷಭಾವತಿ ರಾಜಕಾಲುವೆಗಳಲ್ಲಿ 15 ಲಕ್ಷ ಘನ ಮೀಟರ್ ಹೂಳೆತ್ತಿರುವ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿಗಳ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ವಿರೋಧ ಪಕ್ಷವಾದ ಕಾಂಗ್ರೆಸ್ 2008ರಲ್ಲಿಯೇ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿತು.

ಅಲ್ಲದೆ, ಮಾಜಿ ಮೇಯರ್ ಪಿ.ಆರ್. ರಮೇಶ್ ಕೂಡ ತನಿಖೆ ನಡೆಸುವಂತೆ ಆಗ್ರಹಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರು. ಆದರೆ, ಇದುವರೆಗೆ ಲೋಕಾಯುಕ್ತ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ.

15 ಲಕ್ಷ ಕ್ಯುಬಿಕ್ ಮೀಟರ್ (1.4 ಲಕ್ಷ ಟ್ರಕ್ ಲೋಡ್) ಹೂಳು ಎಲ್ಲಿಗೆ ಹೋಯಿತು ಎಂಬುದರ ಬಗ್ಗೆಯೂ ಇದುವರೆಗೆ ಪಾಲಿಕೆ ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ಇಲ್ಲ!
`2011ರ ಅಕ್ಟೋಬರ್‌ನಲ್ಲಿಯೇ ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ನಿರ್ಧರಿಸಿದ್ದೇವೆ. ಆದರೆ, ಇದಕ್ಕೆ ಸಂಬಂಧಿಸಿದ ಕಡತ ಲೋಕಾಯುಕ್ತರ ಬಳಿ ಇರುವುದರಿಂದ ಹೊಸ ಲೋಕಾಯುಕ್ತರು ನೇಮಕವಾಗುವವರೆಗೆ ತನಿಖೆ ಕೈಗೆತ್ತಿಕೊಳ್ಳಲು ಸಾಧ್ಯವಾಗದು~ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ದಾಖಲೆ ಒದಗಿಸಲು ಸಿದ್ಧ:  ಈ ಮಧ್ಯೆ, ` `ನರ್ಮ್~ ಯೋಜನೆಯಡಿ ಹೂಳೆತ್ತಿರುವ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಲೋಕಾಯುಕ್ತ ಕೇಳುವ ಯಾವುದೇ ದಾಖಲೆಗಳನ್ನು ಒದಗಿಸಲು ಸಿದ್ಧ~ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT