ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆ ಸಂರಕ್ಷಣೆಗೆ ಕೋರ್ಟ್

Last Updated 17 ಜುಲೈ 2013, 20:45 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಜೆ.ಪಿ. ನಗರ ಸಮೀಪದ ಕಾಳೇನ ಅಗ್ರಹಾರದ ರಾಜ ಕಾಲುವೆಗಳ ಸಂರಕ್ಷಣೆಗೆ ಹೈಕೋರ್ಟ್ ಮುಂದಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಅಗ್ರಹಾರ ಪ್ರದೇಶಕ್ಕೆ ಇದೇ 21ಕ್ಕೆ ಭೇಟಿ ನೀಡಿ, ಅಲ್ಲಿನ ರಾಜ ಕಾಲುವೆಗೆ ಕೊಳಚೆ ನೀರು ಸೇರದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪರಿಶೀಲಿಸಲು ನಿರ್ದೇಶನ ನೀಡಿದೆ.

ಕರ್ನಾಟಕ ಜೆಸ್ಯೂಟ್ ಶಿಕ್ಷಣ ಸಂಸ್ಥೆ ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್, `ಅಗ್ರಹಾರದ ರಾಜಕಾಲುವೆ ಸಮೀಪ ವಾಸಿಸುತ್ತಿರುವ ಇತರರೂ ಸಂರಕ್ಷಣೆ ಕುರಿತು ಸಲಹೆ ನೀಡಬಹುದು' ಎಂದು ಬುಧವಾರ ನೀಡಿರುವ ಆದೇಶದಲ್ಲಿ ಹೇಳಿದ್ದಾರೆ.

ಅಲ್ಲಿನ ರಾಜಕಾಲುವೆಗೆ ಯಾವುದೇ ಕೈಗಾರಿಕೆಯಿಂದ ಕಲುಷಿತ ನೀರು ಸೇರುತ್ತಿದ್ದರೆ, ಅಂಥ ಕೈಗಾರಿಕೆಗಳ ವಿರುದ್ಧ ನೋಟಿಸ್ ಜಾರಿ ಮಾಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಬಹುದು. 21ರಂದು ನಡೆಯುವ ಸಭೆಗೆ ಕೈಗಾರಿಕೆಗಳ ಪ್ರತಿನಿಧಿಗಳನ್ನೂ ಆಹ್ವಾನಿಸಿ ಅವರಿಗೆ ಸೂಕ್ತ ನಿರ್ದೇಶನ ನೀಡಬಹುದು. ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಕುರಿತು ಕೋರ್ಟ್‌ಗೆ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದ್ದಾರೆ.

ರಾಜಕಾಲುವೆ ಮೂಲಕ ಹರಿಯುವ ನೀರು ಕೆರೆ ಸೇರುತ್ತದೆ. ಅಭಿವೃದ್ಧಿ ಚಟುವಟಿಕೆಗಳಿಂದಾಗಿ ರಾಜಕಾಲುವೆಗೆ ಕಲುಷಿತ ನೀರು ಸೇರಿಕೊಂಡರೆ, ಅದರಿಂದ ಮನುಷ್ಯರ ಆರೋಗ್ಯ ಮೇಲೆ ಕೂಡ ದುಷ್ಪರಿಣಾಮ ಉಂಟಾಗುತ್ತದೆ. ಕಲುಷಿತ ನೀರು ರಾಜಕಾಲುವೆ ಸೇರದಂತೆ ಒಳಚರಂಡಿ ಮಂಡಳಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿಗಳು ತಾಕೀತು ಮಾಡಿದ್ದಾರೆ. ವಿಚಾರಣೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT