ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಉದ್ದೇಶಕ್ಕೆ ಪೊಲೀಸರ ದೂಷಣೆ ಸಲ್ಲ

Last Updated 22 ಅಕ್ಟೋಬರ್ 2012, 4:10 IST
ಅಕ್ಷರ ಗಾತ್ರ

ದಾವಣಗೆರೆ: ರಾಜಕೀಯ ಉದ್ದೇಶಕ್ಕಾಗಿ ಪೊಲೀಸರನ್ನು ದೂಷಿಸುವುದು ತಪ್ಪಬೇಕು ಎಂದು ಪ್ರಭಾರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಈಶಪ್ಪ ಕೆ. ಭೂತೆ ಇಲ್ಲಿ ಹೇಳಿದರು.

ಜಿಲ್ಲಾ ಪೊಲೀಸ್ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ `ಪೊಲೀಸ್ ಹುತಾತ್ಮರ ದಿನಾಚರಣೆ~ಯಲ್ಲಿ ಅವರು ಮಾತನಾಡಿದರು.

ಹುತಾತ್ಮ ಪೊಲೀಸರನ್ನು ಸ್ಮರಿಸುವುದು ಕೇವಲ ಪೊಲೀಸ್ ಇಲಾಖೆಯ ಕೆಲಸವಲ್ಲ. ಇಡೀ ಸಮಾಜ ಸ್ಮರಿಸಬೇಕು. ದೇಶ ರಕ್ಷಣೆಗಾಗಿ ಬಲಿಯಾದವರನ್ನು ಸಮಾಜದ ಎಲ್ಲರೂ ಸೇರಿ ಸ್ಮರಿಸುವ ಮೂಲಕ ಹುತಾತ್ಮರ ದಿನ ಆಚರಿಸಬೇಕು ಎಂದು ಆಶಿಸಿದರು.

ಇಂದಿನ ಪರಿಸ್ಥಿತಿಯಲ್ಲಿ ಗಡಿಯಲ್ಲಿ ಕಾಯಲು ಯೋಧರು ಬೇಕು. ಆಂತರಿಕ ಭದ್ರತೆಗೆ ಪೊಲೀಸರು ಬೇಕು. ಯಾವುದೇ ಕೆಲಸ ಕಾರ್ಯ ಸುಗಮವಾಗಿ ನಡೆಯಲು ಪೊಲೀಸರು ಬೇಕು. ಸಣ್ಣ ಹಬ್ಬವನ್ನೂ ಸಹ ಪೊಲೀಸರ ರಕ್ಷಣೆಯಲ್ಲಿ ಆಚರಿಸುವ ಸ್ಥಿತಿಯಲ್ಲಿ ನಾವಿದ್ದೇವೆ. ಕಾನೂನು ಸುವ್ಯವಸ್ಥೆ ಕಾಪಾಡಲು, ಒತ್ತಡದ ಸಂದರ್ಭಗಳಲ್ಲಿ ಪೊಲೀಸರು ಅನಿವಾರ್ಯವಾಗಿ ಕ್ರಮ ವಹಿಸುತ್ತಾರೆ. ಆಗ, ಪೊಲೀಸರು ಲಾಠಿ ಪ್ರಹಾರ ನಡೆಸಿದರು; ದೌರ್ಜನ್ಯ ಎಸಗಿದರು ಎಂದು ನಾವು ದೂಷಿಸುತ್ತೇವೆ. ಪೊಲೀಸರು ಲಾಠಿಪ್ರಹಾರ ನಡೆಸಲು ಯಾರು ಕಾರಣ ಎನ್ನುವುದನ್ನು ಯೋಚಿಸಬೇಕು. ರಾಜಕೀಯ ಕಾರಣಗಳಿಗೆ ಪೊಲೀಸರನ್ನು ದೂಷಿಸಬಾರದು ಎಂದರು.

ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಅಂತೆಯೇ, ಇಲಾಖೆಯ ಕೆಳಹಂತದ ಸಿಬ್ಬಂದಿಗೆ ಸಿಗಬೇಕಾದ ಸೌಲಭ್ಯಗಳು ಹೆಚ್ಚಬೇಕು. ಇಂದಿಗೂ ನಮ್ಮಲ್ಲಿ ಹಳೇಕಾಲದ ನೇಮಕಾತಿ ಮತ್ತು ಸಿಬ್ಬಂದಿ ರಚನೆ ಇದೆ. ಜನಸಂಖ್ಯೆ ಹೆಚ್ಚಿದೆ. ಆದರೂ, ಸಿಬ್ಬಂದಿ ಪ್ರಮಾಣ ಹಿಂದಿನಷ್ಟೇ ಇದೆ. ಇದರಿಂದ ಇರುವವರೇ ಒತ್ತಡದಲ್ಲಿ ಕೆಲಸ ಮಾಡುವ ಸ್ಥಿತಿ ಇದೆ. ವಾರದ ರಜೆಯೂ ಸಿಗುತ್ತಿಲ್ಲ. ಹೀಗೆ ಮನೆಮಂದಿಯೊಂದಿಗೆ ಕಾಲ ಕಳೆಯಲು ಇರುವ ವಾರದ ರಜೆ ತ್ಯಾಗ ಮಾಡಿ ಕಾರ್ಯ ನಿರ್ವಹಿಸುವವರಿಗೆ ಕೇವಲ ರೂ. 100 ಕೊಡುವುದು ವಿಷಾದದ ಸಂಗತಿ.

ಕೂಲಿ ಮಾಡುವವರಿಗೇ ಇಂದು ರೂ. 155 ಸಿಗುತ್ತಿದೆ. ವಾರದ ರಜೆಯಲ್ಲೂ ಕೆಲಸ ಮಾಡುವವರಿಗೆ ಕನಿಷ್ಠ ಒಂದು ದಿನದ ವೇತನವಾದರೂ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಎ.ಬಿ. ಹೇಮಚಂದ್ರ ಮಾತನಾಡಿ, ಪ್ರತಿ ಹಂತದಲ್ಲೂ ದೇಶ, ಆಸ್ತಿ, ನಾಗರಿಕರ ರಕ್ಷಣೆಗಾಗಿ ಯೋಧರು, ಪೊಲೀಸರು ಹುತಾತ್ಮರಾಗುತ್ತಿದ್ದಾರೆ. ನಾವು ನೆಮ್ಮದಿಯಾಗಿ ಇದ್ದೇವೆ ಎಂದರೆ, ಯಾರೋ ಕಾಯುತ್ತಿದ್ದಾರೆ ಎಂದರ್ಥ. ಅಂಥವರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು.

ಪೂರ್ವ ವಲಯ ಐಜಿಪಿ ಸಂಜಯ್ ಸಹಾಯ್ ಮಾತನಾಡಿ, ಪೊಲೀಸರು ಅವರಿಗಾಗಿ ದುಡಿಯುತ್ತಿಲ್ಲ; ನಮಗಾಗಿ, ದೇಶ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಭಾವನೆ ಜನರಲ್ಲಿ ಬರಬೇಕು ಎಂದರು.

ಕರ್ತವ್ಯದ ವೇಳೆ ಹುತಾತ್ಮರಾದ ಪೊಲೀಸರ ಕುಟುಂಬದವರಿಗೆ ಸರ್ಕಾರದಿಂದ ಬರಬೇಕಾದ ಸೌಲಭ್ಯ ಎಷ್ಟು ಸಾಧ್ಯವೋ ಅಷ್ಟು ಬೇಗ ಕಲ್ಪಿಸಿಕೊಡಬೇಕು. ಈ ನಿಟ್ಟಿನಲ್ಲಿ ತಾವು ಯತ್ನಿಸುವುದಾಗಿ ಅವರು ಹೇಳಿದರು.
ಇಂದು ಪ್ರತಿ ಜಿಲ್ಲೆಯಲ್ಲಿಯೂ ಸುಸಜ್ಜಿತ, ಅತ್ಯಾಧುನಿಕ ಶಸ್ತ್ರಾಸ್ತ್ರ ಕೊಡಲಾಗಿದೆ. ಅವುಗಳನ್ನು ಸಮರ್ಥವಾಗಿ ಬಳಸುವ ಮೂಲಕ ಪರಿಸ್ಥಿತಿ ನಿಯಂತ್ರಿಸಬೇಕು. ಶಸ್ತ್ರಗಳ ಬಳಕೆಯಲ್ಲಿ ಎಚ್ಚರವಹಿಸಬೇಕು. ತರಬೇತಿ ಹಾಗೂ ಶಸ್ತ್ರ ಬಳಸುವಲ್ಲಿ ತರಬೇತಿಯ ಕೊರತೆ ಕಂಡುಬಾರದಂತೆ; ಇದರಿಂದ ಅನಾಹುತ ಆಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪೊಲೀಸರು ಮಾಡುವ ಉತ್ತಮ ಕಾರ್ಯಕ್ಕಿಂತ, ಋಣಾತ್ಮಕ ಅಂಶಗಳಿಗೆ ಹೆಚ್ಚಿನ ಪ್ರಚಾರ ದೊರೆಯುತ್ತಿದೆ ಎಂದು ವಿಷಾದಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾಭೂರಾಂ ಹುತಾತ್ಮ ಯೋಧರ ಹೆಸರುಗಳನ್ನು ಓದಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ. ಚವಾಣ್ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ, ಗಣ್ಯರು ಹುತಾತ್ಮ ಸ್ಮಾರಕಕ್ಕೆ ಹೂಗುಚ್ಛವಿರಿಸಿ ಗೌರವ ಸಲ್ಲಿಸಿದರು. ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಹುತಾತ್ಮರಿಗೆ ಗೌರವ ಸಲ್ಲಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT