ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಪಕ್ಷಗಳೂ ಮಾಹಿತಿ ಹಕ್ಕು ಚೌಕಟ್ಟಿಗೆ

ಕೇಂದ್ರ ಮಾಹಿತಿ ಆಯೋಗದ ಮಹತ್ವದ ತೀರ್ಪು
Last Updated 3 ಜೂನ್ 2013, 20:05 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಜಕೀಯ ಪಕ್ಷಗಳು ಸಾರ್ವಜನಿಕ ಸಂಸ್ಥೆಗಳಾಗಿರುವುದರಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕರಿಗೆ ಉತ್ತರದಾಯತ್ವ ಹೊಂದಿರುತ್ತವೆ ಎಂಬ ಮಹತ್ವದ ತೀರ್ಪು ನೀಡುವ ಮೂಲಕ ಕೇಂದ್ರ ಮಾಹಿತಿ ಆಯೋಗವು ರಾಜಕೀಯ ಪಕ್ಷಗಳ ಕಾರ್ಯನಿರ್ವಹಣೆ ಪಾರದರ್ಶಕವಾಗಿರುವುದು ಅಗತ್ಯ ಎಂಬುದನ್ನು ಸ್ಪಷ್ಟಪಡಿಸಿದೆ.

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಎನ್‌ಸಿಪಿ, ಸಿಪಿಎಂ, ಸಿಪಿಐ ಮತ್ತು ಬಿಎಸ್‌ಪಿಗೆ ಪರೋಕ್ಷವಾಗಿ ಕೇಂದ್ರ ಸರ್ಕಾರದ ಹಣ ಹೋಗಿರುವುದರಿಂದ ಮತ್ತು ಈ ರಾಜಕೀಯ ಪಕ್ಷಗಳು ಸಾರ್ವಜನಿಕ ಕೆಲಸ ಮಾಡುವುದರಿಂದ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ ಎಂದು ಆಯೋಗದ ಪೂರ್ಣ ಪೀಠವು ತಿಳಿಸಿದೆ.

ರಾಜಕೀಯ ಪಕ್ಷಗಳು ಇನ್ನು ಮುಂದೆ ಆದಾಯದ ಮೂಲ, ವೆಚ್ಚಗಳ ವಿವರ, ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮಾನದಂಡ ಇವೇ ಮೊದಲಾದ ವಿಚಾರಗಳನ್ನು ಸಾರ್ವಜನಿಕರಿಗೆ ತಿಳಿಸಬೇಕಾಗುತ್ತದೆ.

ಎಲ್ಲಾ ರಾಜಕೀಯ ಪಕ್ಷಗಳೂ ಇನ್ನು ಆರು ವಾರಗಳ ಒಳಗಾಗಿ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ನೇಮಕ ಮಾಡಬೇಕು ಹಾಗೂ ಕಾನೂನು ಬದ್ಧವಾಗಿ ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕರು ಕೇಳುವ ಮಾಹಿತಿ ಒದಗಿಸಬೇಕು ಎಂದು ಆಯೋಗವು ಆದೇಶಿಸಿದೆ.

ರಾಜಕೀಯ ಪಕ್ಷಗಳು ಸಾರ್ವಜನಿಕ ಕೆಲಸಗಳನ್ನು ನಿರ್ವಹಿಸುವುದರಿಂದ ಮಾಹಿತಿ ಹಕ್ಕು ಕಾಯ್ದೆ ಕಲಂ 2(ಎಚ್) ಪ್ರಕಾರ ಸಾರ್ವಜನಿಕ ಸಂಸ್ಥೆಗಳು ಎಂದು ಪರಿಗಣಿಸಬೇಕಾಗುತ್ತದೆ ಎಂದು ಮುಖ್ಯ ಮಾಹಿತಿ ಆಯುಕ್ತ ಸತ್ಯಾನಂದ್ ಮಿಶ್ರಾ, ಮಾಹಿತಿ ಆಯುಕ್ತರಾದ ಅನ್ನಪೂರ್ಣಾ ದೀಕ್ಷಿತ್ ಮತ್ತು ಎಂ.ಎಲ್. ಶರ್ಮಾ ಅವರನ್ನು ಒಳಗೊಂಡ ಪೀಠವು ತಿಳಿಸಿದೆ.

ಆದಾಯ ತೆರಿಗೆ ವಿನಾಯ್ತಿ, ಚುನಾವಣೆ ಸಂದರ್ಭದಲ್ಲಿ ಬಾನುಲಿ ಮತ್ತು ದೂರದರ್ಶನ ಕೇಂದ್ರಗಳಲ್ಲಿ ಉಚಿತ ಸಮಯಾವಕಾಶಗಳನ್ನು ರಾಜಕೀಯ ಪಕ್ಷಗಳಿಗೆ ನೀಡಲಾಗಿರುವುದರಿಂದ ಕೇಂದ್ರ ಸರ್ಕಾರವು ಪರೋಕ್ಷವಾಗಿ ಪಕ್ಷಗಳಿಗೆ ಹಣಕಾಸು ನೆರವು ನೀಡುತ್ತದೆ. ಆದ್ದರಿಂದ ಈ ಪಕ್ಷಗಳು ಸಾರ್ವಜನಿಕ ಸಂಸ್ಥೆ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.

ಈ ತೀರ್ಪು ನೀಡುವ ಮೊದಲು ಆಯೋಗವು ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದು ರಾಜಕೀಯ ಪಕ್ಷಗಳಿಗೆ ದೇಶದ ರಾಜಧಾನಿಯಲ್ಲಿ ನೀಡಲಾಗಿರುವ ಕಟ್ಟಡ ಅಥವಾ ಭೂಮಿಯ ವಿವರಗಳನ್ನು ಪಡೆದಿತ್ತು. ಈ ವಿವರಗಳ ಪ್ರಕಾರ ಬಹುತೇಕ ರಾಜಕೀಯ ಪಕ್ಷಗಳಿಗೆ ರಿಯಾಯ್ತಿ ದರದಲ್ಲಿ ಕಟ್ಟಡ ಅಥವಾ ಜಮೀನು ನೀಡಿರುವುದು ತಿಳಿದುಬಂದಿದೆ.

ರಾಜಕೀಯ ಪಕ್ಷಗಳು ಕೇಂದ್ರ ಸರ್ಕಾರದಿಂದ ನೇರವಾಗಿ ಮತ್ತು ಪರೋಕ್ಷವಾಗಿ ಹಣಕಾಸು ಲಾಭ ಪಡೆದಿವೆ ಎಂಬುದು ಇದರಿಂದ ಸಾಬೀತಾಗುವುದರಿಂದ ಅವುಗಳನ್ನು ಸಾರ್ವಜನಿಕ ಸಂಸ್ಥೆ ಎಂದು ಪರಿಗಣಿಸಲೇಬೇಕಾಗುತ್ತದೆ ಎಂದು ಆಯೋಗವು ಸ್ಪಷ್ಟವಾಗಿ ಹೇಳಿದೆ. ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ 141.25 ಕೋಟಿ, ಕಾಂಗ್ರೆಸ್ 300.92 ಕೋಟಿ, ಸಿಪಿಎಂ 18.13 ಕೋಟಿ, ಬಿಎಸ್‌ಪಿ 39.84 ಕೋಟಿ, ಸಿಪಿಐ 24 ಲಕ್ಷ,  ಮತ್ತು ಎನ್‌ಸಿಪಿ 9.64 ಕೋಟಿ ರೂಪಾಯಿಗಳ ಆದಾಯ ಕರ ವಿನಾಯ್ತಿಯನ್ನು ಪಡೆಯುವ ಮೂಲಕ ಕೇಂದ್ರ ಸರ್ಕಾರದಿಂದ ಲಾಭ ಹೊಂದಿವೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT