ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರಕ್ಕೆ ದೇವೇಗೌಡ ತರಾಟೆ

Last Updated 18 ಜೂನ್ 2011, 6:40 IST
ಅಕ್ಷರ ಗಾತ್ರ

ಬೆಳಗಾವಿ: `ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ರಾಜ್ಯ ಸರ್ಕಾರ ಮನಬಂದಂತೆ ಬಳಸಿಕೊಳ್ಳುತ್ತಿದೆ. ಇದರಿಂದಾಗಿ ಎಷ್ಟೋ ರೈತರಿಗೆ ತಮ್ಮ ಜಮೀನು ಸ್ವಾಧೀನಗೊಂಡಿರುವುದು ಇದುವರೆಗೂ ತಿಳಿದಿಲ್ಲ~ ಎಂದು ಮಾಜಿ ಪ್ರಧಾನಿ, ಜಾತ್ಯತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ನಾನು ಮುಖ್ಯಮಂತ್ರಿಯಾಗಿದ್ದಾಗ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಲು ಅಗತ್ಯ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಅನುಕೂಲ ಆಗುವಂತೆ ಕಾಯ್ದೆಯಲ್ಲಿ ತಿದ್ದುಪಡಿ ತರಲಾಯಿತು. ಅಗತ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅಧಿಕಾರವನ್ನು ಉನ್ನತಾಧಿಕಾರ ಸಮಿತಿಗೆ ನೀಡುವ ಅವಕಾಶವನ್ನು ಕಲ್ಪಿಸಲಾಯಿತು.

ಆದರೆ, ಈಗ ಈ ಕಾಯ್ದೆಯನ್ನು ಬಳಸಿಕೊಂಡು ರಾಜ್ಯ ಸರ್ಕಾರ ಅಗತ್ಯಕ್ಕಿಂತ ಹೆಚ್ಚಿನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ. ನಾವು ಜಾರಿಗೆ ತಂದ ಏಕಗವಾಕ್ಷಿ ವ್ಯವಸ್ಥೆಯೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ~ ಎಂದು ಆರೋಪಿಸಿದರು.

`ರೈತರ ಭೂಮಿ ಸ್ವಾಧೀನ ಸೇರಿದಂತೆ ಜನರ ಹಲವು ಸಮಸ್ಯೆಗಳನ್ನು ಆಲಿಸಲು ರಾಜ್ಯದ 30 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. ಮೂರು ತಿಂಗಳಲ್ಲಿ ಎಲ್ಲ ಜಿಲ್ಲೆಗಳಲ್ಲೂ ಸಂಚರಿಸಿ ಜನರ ಸಮಸ್ಯೆಗಳನ್ನು ಪಟ್ಟಿ ಮಾಡಿ ಅದಕ್ಕೆ ತಕ್ಕಂತೆ ಪಕ್ಷ ಕಾರ್ಯತಂತ್ರ ರೂಪಿಸಲಿದೆ~ ಎಂದು ದೇವೇಗೌಡ ತಿಳಿಸಿದರು.

`ಬ್ರಿಟಿಷರ ಕಾಲದಲ್ಲಿ ಜಾರಿಗೆ ಬಂದ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಲು ಸಂಸತ್ತಿನಲ್ಲಿ ಮಸೂದೆ ಮಂಡನೆ ಆಗಬೇಕಿತ್ತು. ಆದರೆ, ಬಿಜೆಪಿ ಹಾಗೂ ಕಾಂಗ್ರೆಸ್‌ನ ಅಸಹಕಾರದಿಂದಾಗಿ ಅದು ನಡೆಯಲಿಲ್ಲ~ ಎಂದು ಅವರು ಹೇಳಿದರು.

`ಶಾಸಕತ್ವ ಅನರ್ಹತೆ ವಿಷಯದಲ್ಲಿ ಸುಪ್ರೀಂ ಕೋರ್ಟ್ ವಿಧಾನಸಭೆ ಸ್ಪೀಕರ್‌ಗೆ ಛೀಮಾರಿ ಹಾಕಿದೆ. ಅವರಿಗೆ ಆತ್ಮಗೌರವ ಇದ್ದರೆ ರಾಜೀನಾಮೆ ನೀಡಬೇಕಿತ್ತು. ಎರಡನೇ ಬಾರಿಗೆ ಬಹುಮತವನ್ನು ಪ್ರದರ್ಶಿಸಬೇಕಾದ ಸ್ಥಿತಿಯನ್ನು ಯಾವ ರಾಜ್ಯದಲ್ಲೂ ನೋಡಿಲ್ಲ~ ಎಂದು ಹೇಳಿದರು.

ಭ್ರಷ್ಟಾಚಾರ, ಕಪ್ಪು ಹಣದ ವಿರುದ್ಧ ಹೋರಾಟ ನಡೆಸುತ್ತಿರುವ ಬಿಜೆಪಿ ರಾಷ್ಟ್ರೀಯ ನಾಯಕರು ಕರ್ನಾಟಕದ ವಿಷಯ ಬಂದಾಗ ಮೌನ ವಹಿಸುತ್ತಾರೆ ಎಂದ ಅವರು. `ನಮ್ಮ ಕುಟುಂಬದವರ ಮೇಲೆ ಭ್ರಷ್ಟಾಚಾರ ಆರೋಪಿಸುತ್ತಿರುವ ರಾಜ್ಯ ಸರ್ಕಾರ ಮುಕ್ತವಾಗಿ ತನಿಖೆ ನಡೆಸಬಹುದು~ ಎಂದರು.

`ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲೆಂದು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದಲ್ಲಿ ಜಾರಿಗೆ ತಂದ ಲೋಕಾಯುಕ್ತ ದೇಶಕ್ಕೇ ಮಾದರಿಯಾಗಿತ್ತು. ಇದರ ವ್ಯಾಪ್ತಿಗೆ ಸಚಿವರನ್ನೂ ತರಲಾಗಿತ್ತು. ಆದರೆ, ಈಗ ಬಿಜೆಪಿ ಸರ್ಕಾರ ಸಚಿವರ ವಿರುದ್ಧ ತನಿಖೆ ನಡೆಸುವಾಗ ಸರ್ಕಾರದ ಅನುಮತಿ ಪಡೆಯಬೇಕು ಎಂಬುದನ್ನು ತಿದ್ದುಪಡಿಯಲ್ಲಿ ಸೇರಿಸಲಾಗಿದೆ~ ಎಂದು ಅವರು ಹೇಳಿದರು.

`ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್‌ನವರು ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿ ಪ್ರಚಾರ ಗಿಟ್ಟಿಸಿದರು. ಕೇಂದ್ರ ಸಚಿವರೂ ಇದರಲ್ಲಿ ಪಾಲ್ಗೊಂಡಿದ್ದರು. ಆದರೆ ಈ ಪಾದಯಾತ್ರೆಯ ಫಲಿತಾಂಶ ಏನಾಯಿತು ಎಂಬುದು ಮಾತ್ರ ತಿಳಿದಿಲ್ಲ. ಇದೀಗ `ಕಾಂಗ್ರೆಸ್ ನಡಿಗೆ ಹಳ್ಳಿ ಕಡೆಗೆ~ ನಡೆಯುತ್ತಿದೆ. ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು~ ಎಂದು ಲೇವಡಿ ಮಾಡಿದರು.

ಜಾತ್ಯತೀತ ಜನತಾದಳದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಮಟಗಾರ, ಮಾಜಿ ಶಾಸಕ ಮೋಹನ ಷಾ, ಎನ್.ವಿ. ಪಾಟೀಲ, ಎನ್.ಎಚ್. ಕೋನರಡ್ಡಿ, ಅರವಿಂದ ದಳವಾಯಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT