ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 3,174 ಶಾಲೆಗಳಿಗೆ ಕಂಟಕ

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹತ್ತಕ್ಕಿಂತ ಕಡಿಮೆ ಇರುವ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ನೆರೆಹೊರೆಯ ಶಾಲೆಗಳೊಂದಿಗೆ ವಿಲೀನಗೊಳಿಸುವ ನಿರ್ಧಾರವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಕೈಗೊಂಡಿದ್ದು, ಒಟ್ಟು 3,174 ಶಾಲೆಗಳು ಮುಚ್ಚಲಿವೆ.

ಇಲಾಖೆಯು 2001ರಲ್ಲಿ ಸಂಗ್ರಹಿಸಿದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಸುಮಾರು 2,483 ಕಿರಿಯ ಪ್ರಾಥಮಿಕ ಹಾಗೂ 74 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 10ಕ್ಕಿಂತ ಮತ್ತು 590 ಕಿರಿಯ ಪ್ರಾಥಮಿಕ ಹಾಗೂ 27 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 5ಕ್ಕಿಂತ ಕಡಿಮೆ ಇದೆ.

ಹೀಗಾಗಿ, ಗುಣಾತ್ಮಕ ಶಿಕ್ಷಣ ನೀಡುವ ದೃಷ್ಟಿಯಿಂದ ಈ ಶಾಲೆಗಳಲ್ಲಿರುವ ವಿದ್ಯಾರ್ಥಿಗಳನ್ನು ನೆರೆಹೊರೆಯಲ್ಲಿರುವ ಹೆಚ್ಚು ಸಂಪನ್ಮೂಲ ಹೊಂದಿರುವ ಶಾಲೆಗಳಿಗೆ ವಿಲೀನಗೊಳಿಸಲು ನಿರ್ಧರಿಸಲಾಗಿದೆ.

ಶಾಲೆಗಳಲ್ಲಿ ಸಮರ್ಪಕ ಕಲಿಕಾ ವಾತಾವರಣವನ್ನು ಹಾಗೂ ಅರ್ಥಪೂರ್ಣ ಸಹಪಠ್ಯ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಆಯಾ ಜಿಲ್ಲೆಯ ಶಾಲೆಗಳ ವಿವರವನ್ನು ಕಳುಹಿಸಿಕೊಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಈಚೆಗೆ ಆದೇಶ ಹೊರಡಿಸಿ ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರಿಗೆ ಕಳುಹಿಸಿದ್ದಾರೆ.

ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು, ವಿದ್ಯಾರ್ಥಿಗಳ, ಪೋಷಕರ ಹಾಗೂ ಶಿಕ್ಷಕರ ಸಲಹೆ ಪಡೆದು ಆಯಾ ಪ್ರದೇಶದ ಭೌತಿಕ ಲಕ್ಷಣಗಳನ್ನು ಗಮನದಲ್ಲಿರಿಸಿಕೊಂಡು ಯಾವ ಶಾಲೆಗೆ ವಿಲೀನಗೊಳಿಸಬೇಕು ಎಂಬ ಬಗ್ಗೆ ಯೋಜನೆ ತಯಾರಿಸಬೇಕು. ಈ ಯೋಜನೆಯನ್ನು ತಾಲ್ಲೂಕು ಮಟ್ಟದ ಪ್ರಾಥಮಿಕಶಾಲಾ ವಿಲೀನ ಸಮಿತಿ ಮುಂದೆ ಮಂಡಿಸಿ ಅಭಿಪ್ರಾಯ ಪಡೆಯಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನಂತರ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಸಮಾಲೋಚಿಸಿ ಮಕ್ಕಳಿಗೆ ಅನುಕೂಲವಾಗುವಂತೆ ಕ್ರಿಯಾಯೋಜನೆಯನ್ನು ಅನುಮೋದಿಸಿ, ಅದರಂತೆ ಮುಂದಿನ ಶೈಕ್ಷಣಿಕ ವರ್ಷದಿಂದ ಇಂತಹ ವಿದ್ಯಾರ್ಥಿಗಳನ್ನು ಆಯ್ಕೆಯಾಗಿರುವ, ಸಂಪನ್ಮೂಲ ಹೊಂದಿರುವ ಶಾಲೆಗಳಿಗೆ ಮರು ದಾಖಲಿಸಲು ವ್ಯವಸ್ಥೆ ಮಾಡಬೇಕು. ಈ ಪ್ರಕ್ರಿಯೆಯನ್ನು ನವೆಂಬರ್‌ನಲ್ಲಿ ಪ್ರಾರಂಭ ಮಾಡಿ 2012ರ ಫೆ. 15ರ ಒಳಗೆ ವಿಲೀನಗೊಳಿಸುವ ಸಂಬಂಧ ವಿವರವನ್ನು ಆಯಾ ಜಿಲ್ಲೆ, ಗ್ರಾಮದಲ್ಲಿ ಪ್ರಕಟಣೆ ಮಾಡಬೇಕು. ಹೆಚ್ಚುವರಿ ಶಿಕ್ಷಕರ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ಸೂಚಿಸಲಾಗಿದೆ ಎಂದು ಮೂಲಗಳು `ಪ್ರಜಾವಾಣಿ~ಗೆ ಮಾಹಿತಿ ನೀಡಿವೆ.

5ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಆ ಪ್ರದೇಶದ 3 ಕಿ.ಮೀ. ವ್ಯಾಪ್ತಿಯಲ್ಲಿ ಉತ್ತಮ ಸಾರಿಗೆ ಸಂಪರ್ಕವಿರುವ ಜನವಸತಿಯ ಶಾಲೆಗಳಿಗೆ ವಿಲೀನಗೊಳಿಸಬೇಕು. ಈ ವ್ಯವಸ್ಥೆಯನ್ನು 28ನೇ ಅಕ್ಟೋಬರ್‌ನಿಂದ ಜಾರಿಯಾಗಲಿರುವ ಸೆಮಿಸ್ಟರ್‌ನಿಂದಲೇ ಪ್ರಾರಂಭಿಸಬೇಕು. ವಿಲೀನಗೊಳ್ಳುತ್ತಿರುವ ಶಾಲೆಗಳಲ್ಲಿರುವ ಅಡುಗೆ ಸಹಾಯಕರನ್ನು ಕರ್ತವ್ಯದಿಂದ ಬಿಡುಗಡೆ ಮಾಡಬೇಕು.

ವಿಲೀನ ಪಡೆಯುತ್ತಿರುವ ಶಾಲೆಗಳಲ್ಲಿ ಹೆಚ್ಚುವರಿ ಮಕ್ಕಳಿಗೆ ಅನುಗುಣವಾಗಿ ಅಡುಗೆ ತಯಾರಿಸಬೇಕು ಎಂದು ಆಯುಕ್ತರು ಆದೇಶದಲ್ಲಿ ಸೂಚಿಸಿದ್ದಾರೆ.

ಸರ್ಕಾರದ ಈ ಕ್ರಮವನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಖಂಡಿಸಿದೆ. ರಾಜ್ಯದಲ್ಲಿ 3,174 ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಆದೇಶಿಸಿ, ಶಿಕ್ಷಣದ ಹಕ್ಕು ಜಾರಿಗೊಂಡಿರುವ ಸಂದರ್ಭದಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ.
 
ಇರುವ ಶಾಲೆಗಳಲ್ಲಿ ಸೌಲಭ್ಯಗಳಿಲ್ಲ. 3,800 ಶಿಕ್ಷಕರ ಹುದ್ದೆ ಖಾಲಿ ಇದೆ. ಈ ಕಾರ್ಯದ ಬದಲಿಗೆ ಶಾಲೆಗಳನ್ನೇ ಮುಚ್ಚುವುದಕ್ಕೆ ಮುಂದಾಗಿರುವುದು ಆತಂಕದ ಬೆಳವಣಿಗೆ ಎಂದು ಫೆಡರೇಷನ್‌ನ ರಾಜ್ಯ ಕಾರ್ಯದರ್ಶಿ ಅನಂತ್ ನಾಯ್ಕ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT