ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 61 ಸಾವಿರ ಮಕ್ಕಳಲ್ಲಿ ಅಪೌಷ್ಟಿಕತೆ

Last Updated 5 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 61,564 ಮಕ್ಕಳು ಅಪೌಷ್ಟಿಕತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಈ ಸಮಸ್ಯೆ ತುಸು ಹೆಚ್ಚಿದ್ದರೆ, ದಕ್ಷಿಣದ ಜಿಲ್ಲೆಗಳಲ್ಲಿ ಕಡಿಮೆ ಇದೆ.

ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಅವರ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಿ.ಸಿ.ಪಾಟೀಲ ಅವರು ವಿಧಾನಸಭೆಯಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ಒದಗಿಸಿದ್ದಾರೆ. `ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ವಿವರ~ದ ಬಗ್ಗೆ ಖಾದರ್ ಪ್ರಶ್ನೆಯಲ್ಲಿ ಪ್ರಸ್ತಾಪಿಸಿದ್ದರು. ಆದರೆ, `ಕಡಿಮೆ ತೂಕ ಹೊಂದಿದ ಮಕ್ಕಳು~ ಎಂಬ ಶೀರ್ಷಿಕೆ ಅಡಿಯಲ್ಲಿ ಸಚಿವರು ಉತ್ತರ ಒದಗಿಸಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ಅತ್ಯಧಿಕ 8,810 ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ. ಬೆಳಗಾವಿಯಲ್ಲಿ 6,244, ಬಳ್ಳಾರಿಯಲ್ಲಿ 4,807, ವಿಜಾಪುರದಲ್ಲಿ 4,316, ಬಾಗಲಕೋಟೆಯಲ್ಲಿ 4,083, ಕೊಪ್ಪಳದಲ್ಲಿ 3,898, ಹಾವೇರಿಯಲ್ಲಿ 3,705, ಧಾರವಾಡದಲ್ಲಿ 3,027, ಗುಲ್ಬರ್ಗದಲ್ಲಿ 2,980, ಚಿತ್ರದುರ್ಗದಲ್ಲಿ 2,782, ದಾವಣಗೆರೆಯಲ್ಲಿ 2,286, ತುಮಕೂರಿನಲ್ಲಿ 1,390 ಮತ್ತು ಚಿಕ್ಕಬಳಾಪುರ ಜಿಲ್ಲೆಯಲ್ಲಿ 1,216 ಮಕ್ಕಳು ಕಡಿಮೆ ತೂಕದಿಂದ ಬಳಲುತ್ತಿದ್ದಾರೆ ಎಂಬ ವಿವರ ಈ ಉತ್ತರದಲ್ಲಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ 1,091, ಯಾದಗಿರಿಯಲ್ಲಿ 947, ದಕ್ಷಿಣ ಕನ್ನಡದಲ್ಲಿ 858, ಕೋಲಾರದಲ್ಲಿ 788, ಉತ್ತರ ಕನ್ನಡದಲ್ಲಿ 772, ಬೀದರ್‌ನಲ್ಲಿ 759, ಚಾಮರಾಜನಗರದಲ್ಲಿ 650, ಮಂಡ್ಯದಲ್ಲಿ 612, ಚಿಕ್ಕಮಗಳೂರಿನಲ್ಲಿ 585, ಹಾಸನದಲ್ಲಿ 416, ಬೆಂಗಳೂರು ನಗರದಲ್ಲಿ 402, ಬೆಂಗಳೂರು ಗ್ರಾಮಾಂತರದಲ್ಲಿ 356, ಉಡುಪಿಯಲ್ಲಿ 319, ರಾಮನಗರದಲ್ಲಿ 248 ಮತ್ತು ಕೊಡಗು ಜಿಲ್ಲೆಯಲ್ಲಿ 214 ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ.

ಅವಧಿಪೂರ್ವ ಜನನ, ಹುಟ್ಟುವಾಗಲೇ ಕಡಿಮೆ ತೂಕ ಹೊಂದಿರುವುದು, ರಕ್ತ ಸಂಬಂಧಿಗಳಲ್ಲಿ ವಿವಾಹ, ಬಾಲ್ಯವಿವಾಹ, ಅಜ್ಞಾನ, ಅನಕ್ಷರತೆ, ಮೂಢನಂಬಿಕೆ, ಹುಟ್ಟುವಾಗಲೇ ಕಾಯಿಲೆಗೆ ತುತ್ತಾಗಿರುವುದು ಮತ್ತಿತರ ಕಾರಣಗಳಿಂದ ಮಕ್ಕಳು ಅಪೌಷ್ಟಿಕತೆಗೆ ತುತ್ತಾಗುತ್ತಿದ್ದಾರೆ. ಈ ಸಮಸ್ಯೆ ಹೊಂದಿರುವ ಪ್ರತಿ ಮಗುವಿಗೆ ನಿತ್ಯವೂ ಆರು ರೂ. ಮೌಲ್ಯದ ಪೌಷ್ಟಿಕ ಆಹಾರ ಪೂರೈಸಲಾಗುತ್ತಿದೆ.

ವಾರ್ಷಿಕ ರೂ 750 ವೈದ್ಯಕೀಯ ವೆಚ್ಚ ನೀಡಲಾಗುತ್ತಿದೆ. ವಿಜಾಪುರ ಹಾಗೂ ಗುಲ್ಬರ್ಗ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಗ್ರಾಮೀಣ ಮಕ್ಕಳ ಅಭಿವೃದ್ಧಿ ಕೇಂದ್ರ ಆರಂಭಿಸಲಾಗಿದೆ. ಇಂತಹ ಮಕ್ಕಳಿಗೆ ಬಾಲ ಸಂಜೀವಿನಿ ಯೋಜನೆಯಡಿ ರಾಜ್ಯದ ಏಳು ಆಸ್ಪತ್ರೆಗಳಲ್ಲಿ 18 ಕಾಯಿಲೆಗಳಿಗೆ ಉಚಿತ ಚಿಕಿತ್ಸೆಯನ್ನೂ ಒದಗಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT