ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಜೈಲುಗಳಲ್ಲಿ ಬೇಕರಿ ಘಟಕ, ಮಳಿಗೆ

Last Updated 3 ಜೂನ್ 2013, 8:36 IST
ಅಕ್ಷರ ಗಾತ್ರ

ಮೈಸೂರು: ಕೈದಿಗಳೇ ಬೇಕರಿ ತಿನಿಸು ತಯಾರಿಸುವ ಘಟಕ ಹಾಗೂ ಮಾರಾಟ ಮಾಡುವ ಮಳಿಗೆಗಳು ಈಗಾಗಲೇ ಬೆಂಗಳೂರು ಹಾಗೂ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿದ್ದು, ಶೀಘ್ರದಲ್ಲೇ ರಾಜ್ಯದ ವಿವಿಧ ಕಾರಾಗೃಹಗಳಿಗೂ ಬೇಕರಿ ಘಟಕ ಹಾಗೂ ಮಾರಾಟ ಮಾಡುವ ಮಳಿಗೆಗಳನ್ನು ಆರಂಭಿಸುವ ಯೋಜನೆ ಕೇಂದ್ರ ಕಾರಾಗೃಹ ಇಲಾಖೆಯದು.

ಈಗಾಗಲೇ ಮಂಡ್ಯದಲ್ಲಿ ಬೇಕರಿ ಘಟಕಕ್ಕೆ ಬೇಕಾದ ಯಂತ್ರಗಳನ್ನು ಅಳವಡಿಸಲಾಗಿದೆ. ಚಿಕ್ಕಮಗಳೂರು,  ಹಾಸನ, ಮಡಿಕೇರಿ, ಗುಲ್ಬರ್ಗ, ಬೆಳಗಾವಿ, ಬಳ್ಳಾರಿ ಹಾಗೂ ವಿಜಾಪುರದ ಕಾರಾಗೃಹಗಳಿಗೆ ಬೇಕರಿ ಘಟಕಕ್ಕೆ ಅಗತ್ಯವಾದ ಯಂತ್ರಗಳನ್ನು ರವಾನಿಸಲಾಗಿದೆ. `ಆಯಾ ಕಾರಾಗೃಹ ನಿವಾಸಿಗಳು ಬೇಕರಿ ತಿನಿಸು ತಯಾರಿಸುವ ತರಬೇತಿ ಪಡೆದ ನಂತರ ಮಾರಾಟ ಮಳಿಗೆ ಆರಂಭಿಸಲಾ ಗುತ್ತದೆ' ಎಂದು  ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ಕರ್ನಾಟಕ ಕಾರಾಗೃಹಗಳ ಮಹಾನಿರೀಕ್ಷಕ ಕೆ.ವಿ. ಗಗನ್‌ದೀಪ್ `ಪ್ರಜಾವಾಣಿ'ಗೆ ತಿಳಿಸಿದರು.

`ಜೈಲಿನಿಂದ ಬಿಡುಗಡೆಗೊಂಡ ನಂತರ ಸ್ವಾವಲಂಬಿ ಜೀವನ ನಡೆಸಲು ಕೈದಿಗಳಿಗೆ ಬೇಕರಿ ಉದ್ಯೋಗ ನೆರವು ನೀಡುತ್ತದೆ ಎನ್ನುವ ಕಾರಣಕ್ಕೆ ಈಗಾಗಲೇ ಬೆಂಗಳೂರಿ ಪರಪ್ಪನ ಅಗ್ರಹಾರ ಹಾಗೂ ನಗರದ ಕೇಂದ್ರ ಕಾರಾಗೃಹದಲ್ಲಿ ಘಟಕಗಳು ಯಶಸ್ವಿಯಾಗಿ ನಡೆಯುತ್ತಿವೆ. ಹೀಗಾಗಿ ಉಳಿದ ಕಾರಾಗೃಹಗಳಿಗೂ ವಿಸ್ತರಿಸಲಾಗುತ್ತಿದೆ. ಇದರಿಂದ ವಿವಿಧ ಕಾರಾಗೃಹಗಳ ನಿವಾಸಿಗಳು ಬಿಡುಗಡೆ ಗೊಂಡ ನಂತರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ' ಎಂದು ಗಗನ್‌ದೀಪ್ ವಿಶ್ವಾಸ ವ್ಯಕ್ತಪಡಿಸಿದರು.

ಪರಿವರ್ತನಾ ಪ್ರಾಡಕ್ಟ್: ಕಳೆದ ವರ್ಷ ಆಗಸ್ಟ್ 6ರಂದು ಇಲ್ಲಿಯ ಕೇಂದ್ರ ಕಾರಾಗೃಹದ ಮುಂದೆ `ಪರಿವರ್ತನಾ ಪ್ರಾಡಕ್ಟ್' ಎಂಬ ಮಾರಾಟ ಮಳಿಗೆಯನ್ನು ಗಗನ್‌ದೀಪ್ ಉದ್ಘಾಟಿಸಿದರು. ಜನ್ಮದಿನದ ಕೇಕ್, ಬ್ರೆಡ್ಡು, ಪಫ್ಸ್, ದಿಲ್‌ಪಸಂದ್, ಬೆಣ್ಣೆ ಹಾಗೂ ಖಾರಾ ಬಿಸ್ಕಿಟ್ ಮೊದಲಾದವುಗಳನ್ನು ಕೈದಿಗಳೇ ಮಾರಾಟ ಮಾಡುತ್ತಾರೆ. ಮಾರುಕಟ್ಟೆಯ ದರಗಳಿಗಿಂತ ಕಡಿಮೆ ಹಾಗೂ ತಾಜಾ ಕೇಕ್ ಅಲ್ಲದೇ ಇತರ ತಿನಿಸುಗಳು ನಗರದ ಕೇಂದ್ರ ಕಾರಾಗೃಹದ ಮುಂದಿನ ಮಳಿಗೆಯಲ್ಲಿ ಲಭ್ಯ. ಈ ಮಳಿಗೆಯನ್ನು ಜೀವಾವಧಿ ಶಿಕ್ಷೆಗೆ ಒಳಗಾದ ಮಲ್ಲೇಶ್ ಹಾಗೂ ಸುರೇಶ್ ನಡೆಸುತ್ತಾರೆ.

ಇವರಿಗೆ ಬೇಕರಿ ತಿನಿಸುಗಳನ್ನು ಸಿದ್ಧಗೊಳಿಸುವವರು; ಹರೀಶ್, ಸುರೇಶ್, ನಟರಾಜು, ವಿರೂಪಾಕ್ಷ, ಸಂತೋಷ್, ರವಿ ಹಾಗೂ ವಾಸು. ಇವರೆಲ್ಲ ತರಬೇತಿ ಪಡೆದ ನಂತರ ರೂ 3.60 ಲಕ್ಷ ವೆಚ್ಚದಲ್ಲಿ ಯಂತ್ರ ಅಳವಡಿಸಿ ಬೇಕರಿ ಘಟಕ ಆರಂಭಿಸಲಾಯಿತು.
ಹಾಸನ ಜಿಲ್ಲೆಯ ಬೇಲೂರಿನ ಹರೀಶ್ ಕಾರಾಗೃಹಕ್ಕೆ ಬರುವ ಮುನ್ನ ಬೇಕರಿಯಲ್ಲಿಯೇ ಕೆಲಸ ಮಾಡುತ್ತಿದ್ದರು.

ಪಿರಿಯಾಪಟ್ಟಣದ ನಟರಾಜು ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದರು. ಇಲ್ಲಿಯ ಕಾರಾಗೃಹಕ್ಕೆ ಕಾಲಿಟ್ಟ ಮೇಲೆ ಬೇಕರಿ ಘಟಕದಲ್ಲಿ ದುಡಿಯುತ್ತಿದ್ದಾರೆ. ವಿದ್ಯುತ್ ಮಗ್ಗದಲ್ಲಿ ಜಮಖಾನಾ ನೇಯುತ್ತಿದ್ದ ಬೇಲೂರಿನ ರವಿ, ಕಾರ್ಪೆಂಟರ್ ಆಗಿದ್ದ ಇತರರು ಈಗ ಬೇಕರಿ ತಿನಿಸುಗಳ ತಯಾರಿಕೆಯಲ್ಲಿ ಸಿದ್ಧಹಸ್ತರು. ಈ ಘಟಕ ಆರಂಭಿಸಿದವರು ನಗರದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎನ್.ಜಯಸಿಂಹ.

`ಮೈಸೂರಿನಲ್ಲಿ ಆರಂಭವಾದ ಬೇಕರಿ ಘಟಕದಲ್ಲಿ ಇದುವರೆಗೆ ರೂ 5.24 ಲಕ್ಷ ವಹಿವಾಟು ನಡೆದಿದೆ. ಕೈದಿಗಳಿಗೆ ಕೂಲಿ ಕೊಟ್ಟು ಆದ ಲಾಭ ಒಂದೂವರೆ ಲಕ್ಷ ರೂಪಾಯಿ. ಇದನ್ನು ಸರ್ಕಾರಕ್ಕೆ ಜಮೆ ಮಾಡಿದ್ದೇವೆ' ಎಂದು ಜಯಸಿಂಹ ತಿಳಿಸಿದರು. `ಬೇಕರಿಯಿಂದಾಗಿ ಟೈಂಪಾಸ್ ಆಗುತ್ತದೆ. ಮನೆಯ ಚಿಂತೆ ಕಾಡುವುದಿಲ್ಲ. ಶುಚಿ ಹಾಗೂ ರುಚಿಯಾದ ಬ್ರೆಡ್, ಕೇಕ್ ತಯಾರಿಸುವಾಗ ಖುಷಿ ಆಗುತ್ತದೆ. ನಮ್ಮ ಕೈಗಳಿಂದ ಮಾಡಿದ ಉತ್ಪನ್ನ ಮಾರಾಟವಾಗುತ್ತಿರುವುದಕ್ಕೆ ಹೆಮ್ಮೆಯಿದೆ' ಎನ್ನುತ್ತಾರೆ ಹರೀಶ್.

`ಬೇಕರಿ ಘಟಕ ಆರಂಭಿಸುತ್ತೇವೆ ಎಂದಾಗ ಖುಷಿಯಾಗಿ ಸೇರಿಕೊಂಡೆ. ಬಿಡುಗಡೆಯಾದ ಮೇಲೆ ಬೇಕರಿ ಘಟಕ ಆರಂಭಿಸಿ ಸ್ವಾವಲಂಬಿ ಜೀವನ ನಡೆಸುವೆ' ಎಂದು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ ರವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT