ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಖಾಸಗಿ ವಿವಿ ಸ್ಥಾಪನೆಗೆ 7 ಅರ್ಜಿ

Last Updated 10 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಒಪ್ಪಿಗೆ ನೀಡುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಬುಧವಾರ ಇಲ್ಲಿ ತಿಳಿಸಿದರು.

ಖಾಸಗಿ ವಿಶ್ವವಿದ್ಯಾಲಯಗಳಿಗೆ ಒಪ್ಪಿಗೆ ನೀಡುವ ಸಂಬಂಧ ವಿಶ್ರಾಂತ ಕುಲಪತಿಗಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಏಳು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಈಗಾಗಲೇ ಅರ್ಜಿಗಳು ಬಂದಿದ್ದು, ಆ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ ಎಂದರು.

ಉನ್ನತ ಶಿಕ್ಷಣ ವ್ಯಾಸಂಗ ಮಾಡುವವರ ಸಂಖ್ಯೆಯನ್ನು ಶೇ 30ಕ್ಕೆ ಹೆಚ್ಚಿಸುವ ಉದ್ದೇಶದಿಂದ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅವಕಾಶ ನೀಡಬೇಕು ಎಂಬ ಬೇಡಿಕೆ ಇದೆ. ಇದರ ಬೆನ್ನಿಗೇ, ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಸಾಮಾಜಿಕ ನ್ಯಾಯಕ್ಕೂ ಒತ್ತು ನೀಡಬೇಕು. ಶಿಕ್ಷಣ ವ್ಯಾಪಾರೀಕರಣ ಆಗಬಾರದು. ಹಣ ಇದ್ದವರಿಗೆ ಮಾತ್ರ ಶಿಕ್ಷಣ ಸಿಗುವಂತಾಗಬಾರದು ಎಂಬ ಮಾತುಗಳು ಕೇಳಿ ಬರುತ್ತಿವೆ ಎಂದು ಹೇಳಿದರು.

ಈ ಎಲ್ಲ ಅಂಶಗಳ ಬಗ್ಗೆ ತಜ್ಞರಿಂದ ಸಲಹೆ ಸೂಚನೆಗಳನ್ನು ಪಡೆಯಲಾಗುತ್ತಿದೆ. ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಶೇ 50ರಷ್ಟು ಸೀಟುಗಳನ್ನು ಸರ್ಕಾರಿ ಕೋಟಾದಡಿ ತುಂಬಲು ಅವಕಾಶ ಇರಬೇಕು. ಶುಲ್ಕ ನಿಗದಿಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು. ಸರ್ಕಾರದ ಹಸ್ತಕ್ಷೇಪ ತಡೆಯಲು ಸ್ವತಂತ್ರ ಪ್ರಾಧಿಕಾರ ರಚಿಸಬೇಕು. ಖಾಸಗಿ ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ಏಕರೂಪ ಪ್ರವೇಶ ಪರೀಕ್ಷೆ ನಡೆಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಹೇಳಿದರು.

ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದೆ ಬರುವ ಸಂಸ್ಥೆಗಳು 25 ಕೋಟಿ ರೂಪಾಯಿ ಠೇವಣಿ ಇಡಬೇಕು ಎಂಬ ಪ್ರಸ್ತಾವ ಸರಿಯಲ್ಲ. ಇದನ್ನು ಐದು ಕೋಟಿ ರೂಪಾಯಿಗೆ ಇಳಿಸಬೇಕು. 100 ಎಕರೆ ಜಾಗ ಇರಬೇಕು ಎಂಬ ಷರತ್ತು ಸಡಿಲಿಸಬೇಕು. 40 ಎಕರೆ ಜಾಗ ಇದ್ದರೂ ವಿ.ವಿ. ಸ್ಥಾಪನೆಗೆ ಅವಕಾಶ ನೀಡಬೇಕು ಎಂಬ ಬೇಡಿಕೆ ಇದೆ. ಈ ಎಲ್ಲ ವಿಚಾರಗಳ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಖಾಸಗಿ ವಿ.ವಿ.ಗಳ ವಿವರ: ಅರ್ಕ ವಿ.ವಿ, ಮಣಿಪಾಲ್ ವಿ.ವಿ, ಎಂ.ಎಸ್.ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿ.ವಿ, ವೆಲ್ಲೂರು ತಾಂತ್ರಿಕ ವಿಶ್ವವಿದ್ಯಾಲಯ, ದಯಾನಂದ ಸಾಗರ ವಿಶ್ವವಿದ್ಯಾಲಯ, ದೇವರಾಜ ಅರಸು ವಿಶ್ವವಿದ್ಯಾಲಯ, ಶರಣಬಸವೇಶ್ವರ ವಿಶ್ವವಿದ್ಯಾಲಯ ಸ್ಥಾಪನೆಗೆ ಅರ್ಜಿಗಳು ಬಂದಿವೆ.

ರಾಜ್ಯದಲ್ಲಿ ವಿಶ್ವವಿದ್ಯಾಲಯಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಹಣಕಾಸು ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಆದಷ್ಟು ಬೇಗ ಕುಲಪತಿಗಳು, ಕುಲಸಚಿವರ ಸಭೆ ಕರೆಯಲಾಗುವುದು. ಸರ್ಕಾರಿ ಪದವಿ ಕಾಲೇಜುಗಳಿಗೆ 276 ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಸಂಬಂಧ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದು ಅವರು ತಿಳಿಸಿದರು.

ಎಂಜಿನಿಯರಿಂಗ್ ಸಿಇಟಿ ಮುಂದುವರಿಕೆ
ಎಂಜಿನಿಯರಿಂಗ್ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಈ ಬಾರಿಯೂ (2012-13) ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಬುಧವಾರ ಇಲ್ಲಿ ತಿಳಿಸಿದರು.

`ಪ್ರತಿ ವರ್ಷದಂತೆ ಈ ವರ್ಷವೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ನಡೆಸಲಿದೆ. ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ 2013ರಿಂದ ರಾಷ್ಟ್ರಮಟ್ಟದಲ್ಲಿ ನಡೆಯುವ ಏಕರೂಪ ಪ್ರವೇಶ ಪರೀಕ್ಷೆಯಲ್ಲಿ ಕರ್ನಾಟಕ ಭಾಗಿಯಾಗುವುದಿಲ್ಲ. ಆ ಪರೀಕ್ಷೆಯ ಸಾಧಕ-ಬಾಧಕಗಳ ಬಗ್ಗೆ 2015ರವರೆಗೂ ಕಾದು ನೋಡುತ್ತೇವೆ~ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎರಡು ದಿನ ಕಾದು ನೋಡಿ: `ಕರ್ನಾಟಕ ರಾಜ್ಯ ಆರೋಗ್ಯ ವ್ಯವಸ್ಥೆಗಳ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿರುವ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್.ಪ್ರಭುದೇವ್ ಅವರು, ಕುಲಪತಿ ಹುದ್ದೆಗೆ ಇನ್ನೂ ರಾಜೀನಾಮೆ ನೀಡದೆ ಇರುವ ವಿಚಾರದ ಬಗ್ಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರೊಂದಿಗೆ ಚರ್ಚಿಸಿದ್ದೇನೆ. ಎರಡು ದಿನ ಕಾದು ನೋಡಿ~ ಎಂದು ಅವರು ಹೇಳಿದರು.

ಉನ್ನತ ಶಿಕ್ಷಣ ಸಚಿವ ಈಗ ಪಿಎಚ್.ಡಿ ವಿದ್ಯಾರ್ಥಿ!
ಶಾಸಕರಾದ ಬಳಿಕ ಸ್ನಾತಕೋತ್ತರ ಪದವಿ ಪಡೆದ ಸಿ.ಟಿ.ರವಿ, ಉನ್ನತ ಶಿಕ್ಷಣ ಸಚಿವರಾದ ನಂತರ `ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳು: ಒಂದು ತೌಲನಿಕ ಅಧ್ಯಯನ~ ವಿಷಯ ಕುರಿತ ಸಂಶೋಧನಾ ಪ್ರಬಂಧವನ್ನು ಅವರು ಸಿದ್ಧಪಡಿಸುತ್ತಿದ್ದಾರೆ. ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಕೆ.ಜೆ.ಸುರೇಶ್ ಮಾರ್ಗದರ್ಶನದಲ್ಲಿ ಶಿವಮೊಗ್ಗ ವಿಶ್ವವಿದ್ಯಾಲಯದಿಂದ ಪಿಎಚ್.ಡಿಗೆ ಸಿದ್ಧತೆ ನಡೆಸಿರುವುದಾಗಿ ರವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT