ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಕುಂಜ: ಮನೆಯಿಂದ ರೂ. 6.90 ಲಕ್ಷ ಕಳವು

Last Updated 21 ಜನವರಿ 2011, 9:30 IST
ಅಕ್ಷರ ಗಾತ್ರ

ಕಡಬ(ಉಪ್ಪಿನಂಗಡಿ): ಪುತ್ತೂರು ತಾಲ್ಲೂಕಿನ ಕಡಬ ಸಮೀಪ ರಾಮಕುಂಜದ ಕುಂಡಾಜೆ ಗ್ರಾಮದ ಝಕರಿಯಾ ಎಂಬವರ ಮನೆಯಲ್ಲಿ ಗುರುವಾರ ನಸುಕಿನ ವೇಳೆ ರೂ. 6.90 ಲಕ್ಷ ಕಳವಾಗಿದೆ. ಹಣವಿದ್ದ ಸೂಟ್‌ಕೇಸ್ ಪೂರ್ಣ ಖಾಲಿಯಾಗಿ ಮನೆ ಹಿಂದಿನ ಬಾಗಿಲ ಬಳಿ ಬಿದ್ದಿದ್ದು, ಕಳವು ನಡೆದಿರುವ ರೀತಿಯೇ ಸಂಶಯಾಸ್ಪದ ಎನಿಸಿದೆ.

‘ನಸುಕಿನ 4.30ರ ವೇಳೆಗೆ ಎಚ್ಚರವಾಯಿತು. ನೋಡಿದರೆ ಕೊಠಡಿ ಮತ್ತು ವರಾಂಡದ ಬಾಗಿಲು ತೆರೆದುಕೊಂಡಿದ್ದವು. ಒಳಬಂದು ಮಂಚದಡಿ ನೋಡಿದರೆ ಸೂಟ್‌ಕೇಸ್ ಕಾಣೆಯಾಗಿತ್ತು. ವಾರದ ಹಿಂದೆ ನಿವೇಶನವನ್ನು ರೂ. 46 ಲಕ್ಷಕ್ಕೆ ಮಾರಿದ್ದು, ಅದರ ಮುಂಗಡ ಹಣ ಹಾಗೂ ಟಿಪ್ಪರ್ ಲಾರಿ ಮಾರಿದ್ದರಿಂದ ಬಂದಿದ್ದ ಹಣವನ್ನು ಸೂಟ್‌ಕೇಸ್‌ನಲ್ಲಿಟ್ಟಿದ್ದೆ’ ಎಂದು ಝಕರಿಯಾ ಪೊಲೀಸರಿಗೆ ದೂರು ನೀಡಿದ್ದಾರೆ.

ಝಕರಿಯಾ ಅವರ ಎರಡನೇ ಪತ್ನಿ ಸಾಜಿದಾ ಮತ್ತು ಮೂರು ಮಕ್ಕಳು ಸೇರಿದಂತೆ 5 ಮಂದಿ ಮನೆಯಲ್ಲಿದ್ದರು. ಚಿಲಕ ಹಾಕಿದ ಬಾಗಿಲು ತೆಗೆದು ಕಳ್ಳರು ಹೇಗೆ ಒಳಬಂದರೋ ಸ್ಪಷ್ಟವಾಗುತ್ತಿಲ್ಲ. ಜತೆಗೆ ಸೂಟ್‌ಕೇಸ್‌ನಲ್ಲಿದ್ದ ಹಣ ಬಿಟ್ಟರೆ ಬೇರಾವುದೇ ವಸ್ತು ಕಳುವಾಗಿಲ್ಲ ಎಂದಿರುವ ಪೊಲೀಸರು, ಕಳುವಾಗಿರುವ ರೀತಿ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು ತನಿಖೆ ಮುಂದುವರಿಸಿದ್ದಾರೆ. ಸ್ಥಳಕ್ಕೆ ಪುತ್ತೂರು ಎಎಸ್.ಪಿ ಅಮಿತ್ ಸಿಂಗ್, ಗ್ರಾಮಾಂತರ ಇನ್‌ಸ್ಪೆಕ್ಟರ್ ಮಂಜಯ್ಯ, ಕಡಬ ಸಬ್ ಇನ್‌ಸ್ಪೆಕ್ಟರ್ ಪ್ರಿಯಾ ಪೌಲ್ ಡಿಸೋಜಾ ಭೇಟಿ ನೀಡಿದ್ದರು. ಶ್ವಾನದಳ, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು.

7 ವರ್ಷದ ಹಿಂದೆ ನಿಗೂಢ ಕೊಲೆ ಮನೆಯಲ್ಲಿ 7 ಲಕ್ಷ ಕಳವು
ಕಡಬ(ಉಪ್ಪಿನಂಗಡಿ):
ಪುತ್ತೂರು ತಾಲ್ಲೂಕಿನ ಕಡಬ ಸಮೀಪ ರಾಮಕುಂಜದ ಕುಂಡಾಜೆ ಗ್ರಾಮದ ಝಕರಿಯಾ ಎಂಬವರ ಮನೆಯಲ್ಲಿ ಗುರುವಾರ ನಸುಕಿನ ವೇಳೆ ರೂ. 6.90 ಲಕ್ಷ ಕಳವಾಗಿದ್ದು, ಇದೇ ಮನೆಯಲ್ಲಿ 2003ರ ನ. 1ರ ನಸುಕಿನ ವೇಳೆ ಮನೆಯೊಡತಿ ಸಮೀಮ ಅವರ ಕೊಲೆಯಾಗಿತ್ತು.  ಆಗ ಝಕರಿಯಾ ವಿದೇಶದಲ್ಲಿದ್ದರು. ಮನೆ ಯಲ್ಲಿ ಸಮೀಮ, ಮೂವರು ಪುಟ್ಟ ಮಕ್ಕಳು ಮತ್ತು ಝಕರಿಯಾ ಅವರ ತಮ್ಮನ ಮಗ ಸಮೀರ್ ಇದ್ದರು.

ಅಂದು ಇದೇ ರೀತಿ ಒಳಗಿನಿಂದಲೇ ಮನೆ ಬಾಗಿಲ ಚಿಲಕ ಹಾಕಿದ್ದರೂ ಸಮೀಮ ಅವರ ಕೊಲೆ ನಡೆದಿತ್ತು. ನಸುಕಿನ 4 ಗಂಟೆಗೆ ಸಮೀರ್ ಸಂಬಂಧಿಕರಿಗೆ ದೂರವಾಣಿ ಮಾಡಿ ಚಿಕ್ಕಮ್ಮನ ಕೊಲೆ ಆಗಿದೆ ಎಂದು ವಿಷಯ ತಿಳಿಸಿದ್ದ.

ಕೊಲೆ ಪ್ರಕರಣ ಬಹಳ ನಿಗೂಢ ಎನಿಸಿತ್ತು. ಸಮೀಮ ಸರಳ ಮತ್ತು ಸಜ್ಜನ ಮಹಿಳೆ ಎಂದು ಸಾರ್ವಜನಿಕವಾಗಿ ಗುರುತಿಸಿಕೊಂಡಿದ್ದರಿಂದ ಕೊಲೆ ಆರೋಪಿಯನ್ನು ತಕ್ಷಣ ಬಂಧಿಸಬೇಕು ಎಂದು ಅಂದಿನ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ನೇತೃತ್ವದಲ್ಲಿ ಪೇಟೆಯಲ್ಲಿ ಬಂದ್ ನಡೆಸಲಾಗಿದ್ದಿತು. ಪುತ್ತೂರು ತಾಲ್ಲೂಕಿನಾದ್ಯಂತ ಹೋರಾಟವೂ ನಡೆದಿತ್ತು. ಬಳಿಕ ಪ್ರಕರಣವನ್ನು ಸಿಒಡಿ ತನಿಖೆಗೆ ಒಳಪಡಿಸಲಾಗಿತ್ತು.

ಕೊಲೆ ಪ್ರಕರಣದಲ್ಲಿ ಹಲವರ ಕೈವಾಡವಿದೆ ಎಂಬ ಮಾತು ದಟ್ಟವಾಗಿ ಕೇಳಿಬಂದಿದ್ದರಿಂದ ಸಿಒಡಿ ಪೊಲೀಸರು ಝಕರಿಯಾ ಮತ್ತು ಆತನ ಗೆಳೆಯರನ್ನೂ ವಿಚಾರಣೆಗೆ ಒಳಪಡಿಸಿದ್ದರು. ಕಡೆಗೆ ಸಮೀರ್‌ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೊಳಪಡಿಸಿದಾಗ ಸತ್ಯ ಹೊರಬಿದ್ದಿತ್ತು.

ಸಮೀರ್ ‘ಲೈಂಗಿಕ ಸಂಪರ್ಕಕ್ಕೆ ಯತ್ನಿಸಿದಾಗ ಸಮೀಮ ಅವರು ಬಲವಾಗಿ ಪ್ರತಿರೋಧ ಒಡ್ಡಿದರು. ಹಾಗಾಗಿ ಕೊಲೆ ಮಾಡಿದೆ’ ಎಂದು ಒಪ್ಪಿಕೊಂಡಿದ್ದ. ಈಗಿನ ಕಳವು ಪ್ರಕರಣದ ಬಗ್ಗೆಯೂ ಸಂಶಯ ವ್ಯಕ್ತಪಡಿಸುತ್ತಿರುವ ಸಾರ್ವಜನಿಕರು ’ಕಳ್ಳ ಮನೆ ಒಳಗಿನವನೇ ಆಗಿದ್ದಾನೆ’ ಎಂದೇ ಪ್ರತಿಪಾದಿಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT