ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಧ್ಯಾನದ ಗೆರೆಗಳು!

Last Updated 4 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬೆಲೆ ಏರಿಕೆ ಖಂಡಿಸಿ ಕೇಂದ್ರದ ವಿರೋಧ ಪಕ್ಷಗಳು ಪ್ರತಿಭಟನೆ ಮಾಡುತ್ತಿರುವುದರ ಕಡೆ ನೋಡುತ್ತಾ ಪ್ರಧಾನಿ ಮನಮೋಹನ್ ಸಿಂಗ್ ಅವರು `ನಿಲ್ಸಿ ಪದೇಪದೇ ಬಂದ್ ಮಾಡಿ ಜನರಿಗೆ ತೊಂದರೆ ಕೊಡಬೇಡಿ ಇವೆರಡರದ್ದೂ (ಪೆಟ್ರೋಲ್/ಅಡುಗೆ ಅನಿಲ) ಬೆಲೆ ಏರಿಸುವವರೆಗೂ ಕಾಯುವಷ್ಟು ಸೌಜನ್ಯ ಇರಲಿ' ಎಂದು ಹೇಳುವ ವಿನೋದದ ಮಾತುಗಳು, ಪ್ರತಿಕೃತಿ ಹಕ್ಕು ಆಯೋಗ ಸ್ಥಾಪಿಸಬೇಕೆಂದು ಪ್ರತಿಕೃತಿಗಳೇ ಪ್ರತಿಭಟನೆ ನಡೆಸುತ್ತಿರುವುದು, ಪೆಟ್ರೋಲ್ ಬೆಲೆ ಹೆಚ್ಚಾದಾಗ ದ್ವಿಚಕ್ರ ಸವಾರನೊಬ್ಬ ತನ್ನ ಬೈಕನ್ನು ಹೆಗಲಮೇಲಿಟ್ಟುಕೊಂಡು ಹೋಗುತ್ತಿರುವುದು. ಅದನ್ನು ನೋಡುತ್ತಿರುವ ಪ್ರಧಾನಿ `ಕಾರನ್ನೂ ಹೊತ್ಕೊಂಡು ಓಡಾಡಿದರೆ ಇನ್ನೂ ಉಳಿತಾಯ ಮಾಡಿದಂತೆ ಆಗುತ್ತದೆ' ಎಂದು ಸಾರ್ವಜನಿಕರಿಗೆ ಹೇಳುತ್ತಿರುವುದು... 

ಒಂದೆರಡು ಪಂಚಿಗ್ ಲೈನ್‌ಗಳಿಂದಲೇ ಗಮನ ಸೆಳೆಯುವ ಇಂಥ ವ್ಯಂಗ್ಯಚಿತ್ರಗಳು ನಗೆಗಡಲಲ್ಲಿ ಮುಳುಗಿಸುತ್ತವೆ. ಅರೆಕ್ಷಣ ಚಿಂತನೆಗೆ ಹಚ್ಚುವಂತೆ ಮಾಡುತ್ತವೆ. ಮತ್ತೊಂದೆಡೆ ಸಮಾಜದ ಅಂಕು ಡೊಂಕುಗಳನ್ನು ಸರಿಪಡಿಸುವಲ್ಲಿಯೂ ಪ್ರಮುಖ ಪಾತ್ರವಹಿಸುತ್ತವೆ. ಶಿವಮೊಗ್ಗದ ವ್ಯಂಗ್ಯಚಿತ್ರಕಾರ ರಾಮಧ್ಯಾನಿ ಅವರ ಕೆಲವು ಆಯ್ದ ಪ್ರಕಟಿತ ವ್ಯಂಗ್ಯಚಿತ್ರಗಳ `ರಾಮಬಾಣ' ಹೆಸರಿನ ಪ್ರದರ್ಶನ ನಗರದಲ್ಲಿ ನಡೆಯುತ್ತಿದೆ. ಐವತ್ತಕ್ಕೂ ಹೆಚ್ಚಿನ ವ್ಯಂಗ್ಯ ಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ.

ರಾಮಧ್ಯಾನಿ ಅವರ ವ್ಯಂಗ್ಯಚಿತ್ರಗಳು ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿರುವುದರಿಂದ ಅಪಾರ ಓದುಗ ವರ್ಗವನ್ನು ತಲುಪುತ್ತಿವೆ. ಪ್ರಚಲಿತ ವಿದ್ಯಮಾನಗಳ ಜೊತೆಗೆ ಸಾಮಾಜಿಕ ಕಾಳಜಿಯುಳ್ಳ ಕಾರ್ಟೂನ್‌ಗಳು ಇವರ ಮೂಸೆಯಲ್ಲಿ ಮೂಡುತ್ತಿವೆ. ಬಹುತೇಕ ಚಿತ್ರಗಳು ರಾಜಕೀಯ ವಿಡಂಬನೆಯನ್ನು ಒಳಗೊಂಡಿವೆ. ರೂಪಾಯಿ ಮೌಲ್ಯ ಡಾಲರ್ ಎದುರು ಸಾರ್ವಕಾಲಿಕ ದಾಖಲೆ ಕುಸಿತವಾದಾಗ ರೂಪಾಯಿ ಚಿಹ್ನೆಯೇ ಭಿಕ್ಷುಕನ ಜೊತೆ ಭಿಕ್ಷೆ ಬೇಡುವ, ಅದನ್ನು ದಯನೀಯ ಸ್ಥಿತಿಯಲ್ಲಿ ನೋಡುವ ಭಿಕ್ಷುಕ. ಆ ಒಂದು ಚಿತ್ರ ರೂಪಾಯಿ ಮೌಲ್ಯ ಕುಸಿತದ ಒಟ್ಟು ಚಿತ್ರಣವನ್ನೇ ಕಟ್ಟಿಕೊಡುತ್ತದೆ. ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಕೊಡುವ ಪುಕ್ಕಟೆ ಭರವಸೆಗಳಿಗೆ ಸುಪ್ರೀಂಕೋರ್ಟ್ ಕಡಿವಾಣ ಹಾಕಿದ ಸಂದರ್ಭ ವಿವರಿಸಲು ಒಂದು ವ್ಯಂಗ್ಯಚಿತ್ರ. ವ್ಯಕ್ತಿಗಳನ್ನು ಕೇಂದ್ರವಾಗಿಟ್ಟುಕೊಂಡು ಬಿಡಿಸಿದ ಕಾರ್ಟೂನ್‌ಗಳು ಹಾಸ್ಯದ ಜೊತೆಗೆ ವಿಷಯ ಸೂಕ್ಷ್ಮ ಬೆಸೆದು ಬಿಂಬಿಸುತ್ತಿವೆ.

ಶಿವಮೊಗ್ಗದ ಪತ್ರಿಕೆಯೊಂದರಲ್ಲಿ `ರಾಮಧ್ಯಾನಿ' ಎಂಬ ಅಂಕಣವೇ ಇದ್ದು, ಅಲ್ಲಿ ಅವರ ವ್ಯಂಗ್ಯಚಿತ್ರಗಳು ಪ್ರಕಟಗೊಳ್ಳುತ್ತವೆ. ರಾಮಧ್ಯಾನಿ ಅವರ ಮೂಲ ಹೆಸರು ಆರ್. ಕೃಷ್ಣಮೂರ್ತಿ. ಅಂಕಣದಿಂದಾಗಿ ಹೆಸರೂ ರಾಮಧ್ಯಾನಿಯಾಗಿ ಪ್ರಸಿದ್ಧಿ ಪಡೆದಿದೆ. ದಿನಬೆಳಗಾದರೆ ಒಂದೊಂದು ವಸ್ತುವಿಷಯವನ್ನು ಒಳಗೊಂಡ ವಿನೋದದ ವ್ಯಂಗ್ಯಚಿತ್ರಗಳನ್ನು ಪತ್ರಿಕೆಗೆ ಕಳುಹಿಸಬೇಕಾದ ಒತ್ತಡ ಇವರದ್ದು. ಪ್ರತಿದಿನವೂ ಒಂದು ಚಿತ್ರ ಬರೆದಾಗ ಅವರು ಮೊದಲು ತಮ್ಮ ಬಳಿ ಇರುವ ಒಬ್ಬರಿಗೆ ಆ ವ್ಯಂಗ್ಯ ಚಿತ್ರ ಏನು ಹೇಳುತ್ತಿದೆ, ಜನರನ್ನು ತಲುಪುತ್ತದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುತ್ತಾರೆ. ಆನಂತರವಷ್ಟೇ ಪತ್ರಿಕೆಗೆ ಚಿತ್ರ ಕಳುಹಿಸುವುದು.

ಪ್ರಾಥಮಿಕ ಶಾಲಾ ಮಟ್ಟದಿಂದಲೇ ವ್ಯಂಗ್ಯಚಿತ್ರಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ರಾಮಧ್ಯಾನಿ ಅವರು 1981ರಲ್ಲಿ ಬಿ.ಕಾಂ ಮುಗಿಸಿದರು. ನಂತರ ಅವರ ವ್ಯಂಗ್ಯಚಿತ್ರ ಬರೆಯುವ ಅಭ್ಯಾಸ ಆರಂಭವಾಯಿತು. ಬರೆದ ಬಹುತೇಕ ಚಿತ್ರಗಳನ್ನು ಪತ್ರಿಕೆಗಳಿಗೂ ಕಳುಹಿಸುತ್ತಿದ್ದರು. ತಕ್ಷಣ ಅವು ಪ್ರಕಟಗೊಳ್ಳುತ್ತಿದ್ದವು. ಆಸಕ್ತಿ ಹೆಚ್ಚಾದಂತೆ ಚಿತ್ರ ಬರವಣಿಗೆ ಮೇಲೆ ಹಿಡಿತ ಹೆಚ್ಚಿತು. ಸಾಮಾಜಿಕ ಆಯಾಮವುಳ್ಳ ಚಿತ್ರಗಳ ಜೊತೆಗೆ ರಾಜಕೀಯದತ್ತ ಒಲವು ಹೆಚ್ಚಿಸಿಕೊಂಡರು.

`ರಾಜಕೀಯ ವ್ಯಂಗ್ಯ ಚಿತ್ರಗಳನ್ನು ಜನರು ಹೆಚ್ಚು ಇಷ್ಟಪಡುತ್ತಾರೆ. ಹಾಗಾಗಿ ಆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚಿತ್ರಗಳನ್ನು ಬರೆಯುತ್ತೇನೆ. ದಿನವೂ ಒಂದಿಲ್ಲೊಂದು ವಿಷಯ ಕುರಿತು ಯೋಚಿಸಬೇಕು. ಒಮ್ಮಮ್ಮೆ ರಾತ್ರಿ 8ಗಂಟೆಯಾದರೂ ಯೋಚನೆಯೇ ಬಂದಿರುವುದಿಲ್ಲ. ಕೊನೆಕ್ಷಣದಲ್ಲಿ ಯಾವುದಾದರೂ ಕಲ್ಪನೆ ಮೂಡುತ್ತದೆ. ದಿನವೂ ಬರೆಯುವುದು ಸವಾಲಿನ ಕೆಲಸ. ಹಾಸ್ಯ, ವಿಡಂಬನೆಯನ್ನು ಚಿತ್ರದಲ್ಲಿ ಮೂಡಿಸಬೇಕು. ಎಲ್ಲಿಯವರೆಗೆ ಸಮಾಜದಲ್ಲಿ ಅವ್ಯವಸ್ಥೆ ಇರುತ್ತದೆಯೋ ಅಲ್ಲಿಯವರೆಗೆ ವ್ಯಂಗ್ಯಚಿತ್ರಗಳಿಗೆ ಆಹಾರ ಸಿಕ್ಕೇ ಸಿಗುತ್ತದೆ. ರಾಜಕೀಯ ಅಲ್ಲದೆ ಎಲ್ಲಾ ಕ್ಷೇತ್ರಗಳಲ್ಲೂ ವಸ್ತು ವಿಷಯವಿದೆ. ಒಳಗಣ್ಣು ತೆರೆದಿಟ್ಟುಕೊಂಡಿರಬೇಕಷ್ಟೆ' ಎಂದು ಹೇಳುತ್ತಾರೆ ರಾಮಧ್ಯಾನಿ.

ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾದ ಚಿತ್ರಗಳಾದರೂ ಕೆಲವು ಸಾರ್ವಕಾಲಿಕ ಕಾರ್ಟೂನ್‌ಗಳಾಗಿವೆ. ಒಂದು ವರ್ಷದಿಂದ ಪ್ರಕಟವಾದ ಆಯ್ದ ಚಿತ್ರಗಳು ಪ್ರದರ್ಶನದಲ್ಲಿವೆ. ಮತದಾನದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ, ಪರಿಸರ ಸಂರಕ್ಷಣೆ ಹಾಗೂ ಜನಸಂಖ್ಯೆ ಹೆಚ್ಚಳದಿಂದಾಗುವ ದುಷ್ಪರಿಣಾಮಗಳ ಬಗ್ಗೆಯೂ ಅವರು ಬೆಳಕು ಚೆಲ್ಲಿದ್ದಾರೆ. ಅಂದಹಾಗೆ `ರಾಮಬಾಣ' ವ್ಯಂಗ್ಯಚಿತ್ರಗಳ ಪ್ರದರ್ಶನ ಆಗಸ್ಟ್ 10ರವರೆಗೆ ನಡೆಯಲಿದೆ.

ಸ್ಥಳ: ಇಂಡಿಯನ್ ಕಾರ್ಟೂನ್ ಗ್ಯಾಲರಿ, ನಂ 1, ಮಿಡ್‌ಫೋರ್ಡ್ ಹೌಸ್, ಬಿಗ್ ಕಿಡ್ಸ್ ಕೆಂಪ್ ಸಮೀಪ, ಟ್ರಿನಿಟಿ ವೃತ್ತ. ಮಾಹಿತಿಗೆ: 98440 82408.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT