ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ಜಿಲ್ಲೆಯ ನಾಲ್ಕು ಕಡೆ ಮೇವು ಬ್ಯಾಂಕ್

Last Updated 19 ಜುಲೈ 2012, 10:45 IST
ಅಕ್ಷರ ಗಾತ್ರ

ರಾಮನಗರ : ಜಿಲ್ಲೆಯ ನಾಲ್ಕು ಕಡೆಗಳಲ್ಲಿ `ಮೇವು ಬ್ಯಾಂಕ್~ ತೆರೆಯಲು ಹಾಗೂ ಹೊರ ಜಿಲ್ಲೆಯಿಂದ ಮೇವು ಖರೀದಿಸುವ ರೈತರಿಗೆ ಸಾಗಣೆ ವೆಚ್ಚ ನೀಡಲು ಜಿಲ್ಲಾ ಪಶು ಸಂಗೋಪನಾ ಇಲಾಖೆ ಮತ್ತು ಜಿಲ್ಲಾಡಳಿತ ಮುಂದಾಗಿದೆ.

ಕನಕಪುರ ತಾಲ್ಲೂಕಿನಲ್ಲಿ ಎರಡು ಕಡೆ, ರಾಮನಗರ-ಚನ್ನಪಟ್ಟಣಕ್ಕೆ ವಂದಾರಗುಪ್ಪೆಯಲ್ಲಿ ಹಾಗೂ ಮಾಗಡಿಯ ತಿಪ್ಪಸಂದ್ರ ಬಳಿಯ ಬಡನಿಗೆರೆಯ ತೋಟಗಾರಿಕಾ ಫಾರಂನಲ್ಲಿ ಮೇವು ಬ್ಯಾಂಕ್ ತೆರೆಯಲು ಜಿಲ್ಲಾಡಳಿತ ಉದ್ದೇಶಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಮೇವು ಸಮಸ್ಯೆಯ ತುರ್ತು ನಿರ್ವಹಣೆಗೆ ಸುಮಾರು 10 ಲಕ್ಷ ರೂಪಾಯಿ ವೆಚ್ಚದ ಯೋಜನೆಗಳ ಪ್ರಸ್ತಾವವನ್ನು ಪಶು ಸಂಗೋಪಲನಾ ಇಲಾಖೆ ಬುಧವಾರ ಸಲ್ಲಿಸಿದೆ.

`ಕನಕಪುರದ ಮರಳವಾಡಿ, ಕೋಡಿಹಳ್ಳಿ ಭಾಗದಲ್ಲಿ ಮೇವಿನ ಸಮಸ್ಯೆ ತೀವ್ರವಾಗಿದ್ದು, ಅಲ್ಲಿ ಕೆಲವರು ದನ-ಕರುಗಳನ್ನು ಕಸಾಯಿಖಾನೆಗೆ ಮಾರುತ್ತಿದ್ದಾರೆ. ಅಲ್ಲದೆ ರಾಮನಗರ, ಚನ್ನಪಟ್ಟಣ, ಮಾಗಡಿ ಭಾಗದಲ್ಲೂ ಕೆಲವರು ತಮ್ಮ ಜಾನುವಾರುಗಳನ್ನು ಮಾರುತ್ತಿದ್ದಾರೆ. ಆದರೂ ಇಲ್ಲಿಯವರೆಗೂ ಜಿಲ್ಲಾಡಳಿತ ಗೋಶಾಲೆ ತೆರೆಯದೆ  ನಿರ್ಲಕ್ಷಿಸಿದೆ~ ಎಂಬ ಆರೋಪ ರೈತರಿಂದ ಬರುತ್ತಿತ್ತು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಇದೀಗ `ಮೇವು ಬ್ಯಾಂಕ್~ ಮತ್ತು ಹುಲ್ಲು ಖರೀದಿಯ ಸಾಗಾಣೆ ವೆಚ್ಚ ನೀಡಲು ಮುಂದಾಗಿದೆ.

ಜಿಲ್ಲೆಯಲ್ಲಿ ಒಟ್ಟು 3,06,496 ಜಾನುವಾರುಗಳಿದ್ದು, ವಾರಕ್ಕೆ 10,726 ಮೆಟ್ರಿಕ್ ಟನ್ ಮೇವಿನ ಅಗತ್ಯ ಇದೆ. ಈಗಾಗಲೇ ಜಿಲ್ಲೆಯಲ್ಲಿ ಮೇವಿನ ಕೊರತೆ ತೀವ್ರವಾಗಿದ್ದು, ರೈತರು ಮಂಡ್ಯ, ಮಳವಳ್ಳಿ, ಕೊಳ್ಳೇಗಾಲ ಮೊದಲಾದ ಭಾಗಗಳಿಂದ ಒಣ ಹುಲ್ಲು ಖರೀದಿಸುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಟನ್ ಒಣ ಹುಲ್ಲಿಗೆ 3 ರಿಂದ 4 ಸಾವಿರ ರೂಪಾಯಿ ಇದ್ದ ಬೆಲೆ ಈಗ ಏಕಾಏಕಿ 6 ರಿಂದ ಎಂಟು ಸಾವಿರ ರೂಪಾಯಿಗೆ ಹೆಚ್ಚಳವಾಗಿದೆ.

ಒಂದು ಲಾರಿ ಲೋಡ್ ಒಣ ಹುಲ್ಲಿನ ಬೆಲೆ ರೂ 26 ರಿಂದ 30 ಸಾವಿರ ಆಗಿದೆ. ಭೂಮಿ ಇಲ್ಲದ ಹಾಗೂ ಸಣ್ಣ ಹಿಡುವಳಿಯ ರೈತರಂತೂ ಹುಲ್ಲಿಗಾಗಿ ಪರಿತಪಿಸುವ ಸ್ಥಿತಿ ಎದುರಾಗಿದ್ದು ಇದೇ ಹಿನ್ನೆಲೆಯಲ್ಲಿ  ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದರು. ಆದಷ್ಟು ಬೇಗ ಮೇವಿನ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶಿಸಿದ್ದರು. ಅದರಂತೆ ಹೊರ ಜಿಲ್ಲೆಯಿಂದ ಮೇವು ಖರೀದಿಸುವ ರೈತರು ಅರ್ಜಿ ಸಲ್ಲಿಸಿ ಸಾಗಾಣೆ ವೆಚ್ಚವನ್ನು ಸರ್ಕಾರದಿಂದ ಪಡೆಯ ಬಹುದು ಎಂದು ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಬುಧವಾರ ಆದೇಶಿಸಿದ್ದಾರೆ.

ಸಾಗಣೆ ವೆಚ್ಚ ಪಡೆಯುವುದು ಹೇಗೆ ?:
`ರೈತರು ಹೊರಗಡೆಯಿಂದ ಖರೀದಿಸುವ ಮೇವಿಗೆ ಸಾಗಣೆ ವೆಚ್ಚ ನೀಡಲಾಗುತ್ತದೆ. ಗರಿಷ್ಠ 300 ಕಿ.ಮೀ ವರೆಗೆ, ಪ್ರತಿ ಕಿ.ಮೀಗೆ (ಪ್ರತಿ ಟನ್‌ಗೆ) 1.40 ರೂಪಾಯಿ ನೀಡಲು ನಿರ್ಧರಿಸಲಾಗಿದೆ. ಒಂದು ಲಾರಿಯಲ್ಲಿ ಅಂದಾಜು 5 ಟನ್ ಒಣ ಹುಲ್ಲು ಇದ್ದರೆ ಒಂದು ಕಿ.ಮೀ ಏಳು ರೂಪಾಯಿ ಸಾಗಣೆ ವೆಚ್ಚ ದೊರೆಯುತ್ತದೆ. ಹಾಗಾದರೆ ಗರಿಷ್ಠ 300 ಕಿ.ಮೀಗೆ ಸಾಗಣೆ ವೆಚ್ಚ 2,100 ರೂಪಾಯಿ ಆಗುತ್ತದೆ~ ಎಂದು ಪಶುಸಂಗೋಪನಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಡಾ.ಎಸ್.ಟಿ.ರಾಥೋಡ್ `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.

`ಸಾಗಣೆ ವೆಚ್ಚ ಪಡೆಯ ಬಯಸುವ ರೈತರು ಖರೀದಿದಾರರಿಂದ ರಸೀದಿ ಪಡೆಯಬೇಕು. ನಂತರ ಖರೀದಿ ಮಾಡಿದ ಪ್ರದೇಶಕ್ಕೆ ಹತ್ತಿರದಲ್ಲಿನ ಗಣಕೀಕೃತ `ವೇ ಬ್ರಿಡ್ಜ್~ನಲ್ಲಿ ಹುಲ್ಲು ಹೊತ್ತ ವಾಹನದ ತೂಕ ಮಾಡಿಸಿ, ವಾಹನದ ಸಂಖ್ಯೆಯನ್ನು ದಾಖಲಿಸಿ ರಸೀದಿ ಪಡೆಯಬೇಕು. ನಂತರ ತಮ್ಮ ಗ್ರಾಮದ ಕಂದಾಯ ಅಧಿಕಾರಿ ಅಥವಾ ಸ್ಥಳೀಯ ಪಶು ವೈದ್ಯ ಸಂಸ್ಥೆಯ ಮುಖ್ಯಸ್ಥರಿಗೆ ಅರ್ಜಿ ಜತೆ ಸಲ್ಲಿಸಬೇಕು. ಅವರು ಅದನ್ನು ಪರಿಶೀಲಿಸಿ ದೃಢೀಕರಿಸುತ್ತಾರೆ. ಆ ನಂತರ ಅದನ್ನು ತಹಸೀಲ್ದಾರ್ ಕಚೇರಿಗೆ ನೀಡಿದರೆ ಆದಷ್ಟು ಬೇಗ ರೈತರಿಗೆ ಸಾಗಣೆ ವೆಚ್ಚ ಪಾವತಿಯಾಗುತ್ತದೆ~ ಎಂದು ವಿವರಿಸಿದರು.

ಮೇವು ಮಾರಾಟ ಮಾಡುವ ಮಧ್ಯವರ್ತಿಗಳ ಕಾಟ ತಪ್ಪಿಸಲು ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಹಾಗಾಗಿಯೇ ಗ್ರಾಮದ ಕಂದಾಯ ಅಧಿಕಾರಿ ಮತ್ತು ಸ್ಥಳೀಯ ಪಶುವೈದ್ಯ ಸಂಸ್ಥೆಯ ಮುಖ್ಯಸ್ಥರು ರೈತರು ಖರೀದಿಸಿರುವ ಮೇವು ಮತ್ತು ಅವರ ಜಾನುವಾರುಗಳನ್ನು ಪರಿಶೀಲಿಸಿ ದಾಖಲೆಯನ್ನು ದೃಢೀಕರಿಸುತ್ತಾರೆ ಎಂದು ಅವರು ಪ್ರತಿಕ್ರಿಯಿಸಿದರು.

ಮೇವು ಬ್ಯಾಂಕ್: ರಾಜ್ಯದ ವಿವಿಧೆಡೆ ಆರಂಭಿಸಲಾಗಿರುವ ಗೋಶಾಲೆಗಳು ಅಷ್ಟಾಗಿ ಯಶಸ್ವಿಯಾಗದ ಕಾರಣ ಜಿಲ್ಲೆಯಲ್ಲಿ ಶೀಘ್ರದಲ್ಲಿಯೇ ನಾಲ್ಕು ಕಡೆ ಮೇವು ಬ್ಯಾಂಕ್ ಆರಂಭಿಸಲು ನಿರ್ಧರಿಸಲಾಗಿದೆ.

ತೋಟಗಾರಿಕಾ ಇಲಾಖೆಯ ಫಾರಂಗಳಲ್ಲಿ ಇವುಗಳನ್ನು ಆರಂಭಿಸಲು ಚಿಂತಿಸಲಾಗಿದ್ದು, ಜಿಲ್ಲಾಧಿಕಾರಿ ಅನುಮತಿ ನೀಡಿದ ಕೂಡಲೇ ಅರಂಭಿಸಲಾಗುವುದು. ಮುಖ್ಯಮಂತ್ರಿ ಅವರ ಸೂಚನೆಯಂತೆ ಮೇವು ಬ್ಯಾಂಕ್‌ಗಳಲ್ಲಿ ಶೇ 50ರಷ್ಟು ರಿಯಾಯಿತಿ ದರದಲ್ಲಿ ಮೇವು ಮಾರಾಟ ನಡೆಯಲಿದೆ ಎಂದು ರಾಥೋಡ್ ತಿಳಿಸಿದರು.

ಒಂದು ರಾಸುವಿಗೆ ದಿನಕ್ಕೆ 5 ಕೆ.ಜಿ ಹುಲ್ಲಿನಂತೆ 10 ದಿನಕ್ಕೆ ಆಗುವಷ್ಟು (50 ಕೆ.ಜಿ) ಮೇವನ್ನು ಇಲ್ಲಿ ನೀಡಲಾಗುವುದು. ಇಲ್ಲಿ ಮೇವು ಪಡೆಯಬೇಕು ಎಂದರೆ ಜಾನುವಾರು ಮಾಲೀಕರು ಸ್ಥಳೀಯ ಪಶು ವೈದ್ಯಾಧಿಕಾರಿಯವರಿಂದ ನಿಗದಿತ ಅರ್ಜಿ ಪಡೆದು, ಗ್ರಾಮ ಲೆಕ್ಕಿಗರು ಅಥವಾ ಕಂದಾಯ ಅಧಿಕಾರಿಯಿಂದ ತಮ್ಮ ಬಳಿಯ ರಾಸುಗಳ ಸಂಖ್ಯೆಯನ್ನು ದೃಢೀಕರಿಸಿ ಅರ್ಜಿಯ ಜತೆ ಲಗ್ಗತ್ತಿಸಬೇಕು. ಜಿಲ್ಲಾಧಿಕಾರಿ ನಿಗದಿಪಡಿಸಿದ ಬೆಲೆಯ ಆಧಾರದ ಮೇಲೆ ರೈತರು ಹಣ ಪಾವತಿಸಿ, ತಮಗೆ ಅಗತ್ಯ ಇರುವಷ್ಟು ಮೇವನ್ನು ಇಲ್ಲಿ ರಿಯಾಯಿತಿ ದರದಲ್ಲಿ ಖರೀದಿಸಲು ಅವಕಾಶ ಇರುತ್ತದೆ ಎಂದು ಅವರು ಅವರು ಮಾಹಿತಿ ನೀಡಿದರು.

ಮಿನಿ ಕಿಟ್‌ಗಳು: ಜಿಲ್ಲೆಯಲ್ಲಿ ಮೇವು ಉತ್ಪಾದನೆಗೆ ಪ್ರೋತ್ಸಾಹ ನೀಡಲು `ಮಿನಿಕಿಟ್~ಗಳನ್ನು ನೀಡಲಾಗುವುದು. ನೀರಾವರಿ ಸೌಲಭ್ಯ ಇರುವ ರೈತರು ತಮ್ಮ ಭೂಮಿಯಲ್ಲಿ ಅಗತ್ಯವಾದಷ್ಟು ಮೇವು ಉತ್ಪಾದಿಸಿಕೊಳ್ಳಬಹುದು. ಒಮ್ಮೆ ಇದನ್ನು ಬಿತ್ತಿದರೆ ಐದರಿಂದ ಆರು ಬಾರಿ ಮೇವು ದೊರೆಯುತ್ತದೆ.

ಇದರಿಂದ ಭವಿಷ್ಯದಲ್ಲಿ ಮೇವಿನ ಸಮಸ್ಯೆ ನಿವಾರಣೆ ಸಾಧ್ಯವಾಗುತ್ತದೆ ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT