ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಚುನಾವಣೆ: ಯುಪಿಎ ನಿರಾಳ!

Last Updated 6 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಷ್ಟ್ರಪತಿ ಚುನಾವಣೆಗೆ ಒಮ್ಮತದ ಅಭ್ಯರ್ಥಿ ಆಯ್ಕೆ ಬಿಕ್ಕಟ್ಟಿನಿಂದ ಮುಕ್ತಿ ಪಡೆದಿರುವ ಕಾಂಗ್ರೆಸ್ ನೇತೃತ್ವದ ಆಡಳಿತಾರೂಢ ಯುಪಿಎ, ಸದ್ಯಕ್ಕೆ ನಿರಾಳವಾದಂತೆ ತೋರುತ್ತಿದೆ.

ಒಂದು ಹಂತದಲ್ಲಿ ಒಮ್ಮತದ ಅಭ್ಯರ್ಥಿ ಆಯ್ಕೆ ಕಸರತ್ತು ಕಗ್ಗಂಟಾದಾಗ ಕಾಂಗ್ರೆಸ್ ತೀವ್ರ ಒತ್ತಡ ಮತ್ತು ಗೊಂದಲಕ್ಕೆ ಸಿಲುಕಿತ್ತು. ಎಡಪಕ್ಷಗಳು ಸೇರಿದಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ), ಸಮಾಜವಾದಿ (ಎಸ್‌ಪಿ) ಪಕ್ಷಗಳಂತಹ ಪ್ರಾದೇಶಿಕ ಪಕ್ಷಗಳ ಮನವೊಲಿಕೆಗೆ ಕಸರತ್ತು ನಡೆಸಿತ್ತು. ಕಾಂಗ್ರೆಸ್ ಎಣಿಸಿದಷ್ಟು ಆ ಕೆಲಸ ಸುಲಭವಾಗಿರಲಿಲ್ಲ.

ಆದರೆ, ಯಾವಾಗ `ರಾಷ್ಟ್ರಪತಿ ಹುದ್ದೆಗೆ ಆಡಳಿತಾರೂಢ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ~ ಎಂಬ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಹೇಳಿಕೆ ಹೊರಬಿತ್ತೋ, ಏಕಾಏಕಿ ಸಂಪೂರ್ಣ ಚಿತ್ರಣವೇ ಬದಲಾಗಿ ಹೋಯಿತು. ಈ ಅನಿರೀಕ್ಷಿತ ಬೆಳವಣಿಗೆ ಎನ್‌ಡಿಎಯಲ್ಲಿ ತಳಮಳ ಹುಟ್ಟು ಹಾಕಿದರೆ, ಯುಪಿಎಗೆ ವರವಾಗಿ ಪರಿಣಮಿಸಿದೆ. ಎಡಪಕ್ಷ, ಎಸ್‌ಪಿ, ಬಿಎಸ್‌ಪಿ, ಸಂಯುಕ್ತ ಜನತಾದಳ (ಜೆಡಿಯು) ಹಾಗೂ ಟಿಎಂಸಿ ಒಟ್ಟಿಗೆ ಯುಪಿಎ ಅಭ್ಯರ್ಥಿಯನ್ನು ಬೆಂಬಲಿಸುವ ಸಾಧ್ಯತೆ ಇದೆ. ಹೀಗಾಗಿ ಕಾಂಗ್ರೆಸ್ ನಿರಾಳವಾಗಿದೆ.

ಕೊನೆಯ ಕ್ಷಣದಲ್ಲಿ ತೃತೀಯ ರಂಗ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಯೋಚಿಸುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಈ ವಿಷಯದಲ್ಲಿ ಸ್ಪಷ್ಟ ಹಾಗೂ ಅಧಿಕೃತ ನಿರ್ಧಾರಕ್ಕೆ ಬರಬೇಕಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿ ಒಡಕಿನ ಧ್ವನಿ ಕೇಳಿ ಬಂದಿದೆ. ಸುಷ್ಮಾ ಹೇಳಿಕೆಗೆ ಮೊದಲು ಪ್ರತಿರೋಧ ವ್ಯಕ್ತವಾದದ್ದೇ ಜೆಡಿಯು ಅಧ್ಯಕ್ಷ ಹಾಗೂ ಎನ್‌ಡಿಎ ಸಂಚಾಲಕ ಶರದ್ ಯಾದವ್ ಅವರಿಂದ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಬಿಜೆಪಿಯ ಮುಕ್ತಾರ್ ಅಬ್ಬಾಸ್ ನಕ್ವಿ ಕೂಡಾ ಸ್ವರಾಜ್ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆ ಮೂಲಕ `ರಾಷ್ಟ್ರಪತಿ ಅಭ್ಯರ್ಥಿ~ ಆಯ್ಕೆ ವಿಷಯದಲ್ಲಿ ಎನ್‌ಡಿಎಯಲ್ಲಿ ಭುಗಿಲೆದ್ದ ಭಿನ್ನಮತವನ್ನು ಹೊರಹಾಕಿದ್ದಾರೆ.

ಆರಂಭದಲ್ಲಿ ಗೊಂದಲಕ್ಕೆ ಸಿಲುಕಿದ್ದ ಯುಪಿಎ ಪರಿಸ್ಥಿತಿ ಇದಕ್ಕೆ ವಿಭಿನ್ನವಾಗಿದೆ. ಅಂಗ ಪಕ್ಷಗಳಾದ ಡಿಎಂಕೆ, ಎನ್‌ಸಿಪಿ, ಆರ್‌ಜೆಡಿ, ಆರ್‌ಎಲ್‌ಡಿ ಪಕ್ಷಗಳು ಕಾಂಗ್ರೆಸ್ ಆಯ್ಕೆ ಮಾಡುವ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಘೋಷಿಸಿವೆ. ಇನ್ನೂ ತಮ್ಮ ಆಯ್ಕೆ ಮುಕ್ತವಾಗಿದೆ ಎನ್ನುವ ಮೂಲಕ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಗುಟ್ಟು ಬಿಟ್ಟುಕೊಟ್ಟಿಲ್ಲ. ಹಾಗೆಂದು ತಮ್ಮದೇ ರಾಜ್ಯದ ಪ್ರಣವ್ ಮುಖರ್ಜಿ ಅಥವಾ ಮುಸ್ಲಿಮರಾಗಿರುವ ಹಮೀದ್ ಅನ್ಸಾರಿ ಅವರನ್ನು ವಿರೋಧಿಸುವ ಧೈರ್ಯವನ್ನೂ ಮಾಡಲಾರರು.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯನ್ನು ಘೋಷಿಸಿಲ್ಲ. ಕೆಲವು ದಿನಗಳಿಂದ ಮೌನಕ್ಕೆ ಶರಣಾಗಿರುವ ಅದು, ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದೆ. ಪ್ರಣವ್  ಅಥವಾ ಅನ್ಸಾರಿ ಅಭ್ಯರ್ಥಿಯಾಗುವುದನ್ನೂ ಅಲ್ಲಗಳೆದಿಲ್ಲ. `ನಾವು ಆಯ್ಕೆ ಮಾಡಬೇಕಿರುವುದು ಕೇವಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಲ್ಲ, ಯುಪಿಎ ಅಭ್ಯರ್ಥಿಯನ್ನು~ ಎನ್ನುವ ಮೂಲಕ ಕಾಂಗ್ರೆಸ್ ಎಲ್ಲರನ್ನೂ ತುದಿಗಾಲ ಮೇಲೆ ನಿಲ್ಲಿಸಿದೆ.

ಒಟ್ಟಾರೆ ಯುಪಿಎ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ ಎಂಬ ಸುಷ್ಮಾ  ಹೇಳಿಕೆ ಎನ್‌ಡಿಎಯಲ್ಲಿ ತಲ್ಲಣ ಸೃಷ್ಟಿಸಿದ್ದು, ಕಾಂಗ್ರೆಸ್ ಕೆಲಸವನ್ನು ಸುಲಭ ಮಾಡಿದೆ. ಈ ಬೆಳವಣಿಗೆಯ ಎಲ್ಲ ಲಾಭ ಪಡೆಯುವ ರಣತಂತ್ರವನ್ನು ಕಾಂಗ್ರೆಸ್ ರೂಪಿಸುತ್ತಿದೆ.
 

ಪ್ರಣವ್‌ಗೂ ಹೆಚ್ಚು ತಿಳಿದಿಲ್ಲ!
ಢಾಕಾ (ಪಿಟಿಐ): ರಾಷ್ಟ್ರಪತಿ ಚುನಾವಣೆಗೆ ಯುಪಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ತಮಗೇನೂ ಹೆಚ್ಚಿನ ಮಾಹಿತಿ ಇಲ್ಲ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಲು ನಿರಾಕರಿಸಿದ ಅವರು, `ಈ ವಿಷಯದಲ್ಲಿ ನಿಮಗೆ ಗೊತ್ತಿರುವಷ್ಟೇ ನನಗೂ ಗೊತ್ತು~ ಎನ್ನುವ ಮೂಲಕ ಭಾನುವಾರ ನುಣುಚಿಕೊಂಡರು.

ರವೀಂದ್ರನಾಥ ಟ್ಯಾಗೋರ್ ಅವರ 150ನೇ ಜನ್ಮದಿನೋತ್ಸವದಲ್ಲಿ ಪಾಲ್ಗೊಳ್ಳಲು ಬಾಂಗ್ಲಾ ದೇಶಕ್ಕೆ ಎರಡು ದಿನಗಳ ಭೇಟಿ ನೀಡಿರುವ ಅವರು, ಭಾನುವಾರ ಸಂಪಾದಕರ ಜತೆ ನಡೆಸಿದ ಸಂವಾದದ ವೇಳೆ ತೂರಿಬಂದ ಪ್ರಶ್ನೆಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT