ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಸಾಯನಿಕದಿಂದ ನೈಸರ್ಗಿಕದತ್ತ

Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಇವರು ಕೆಲಸದಲ್ಲಿದ್ದದ್ದು ರಾಸಾಯನಿಕ ಗೊಬ್ಬರ ಮಾರಾಟ ಮಾಡುವ ಇಲಾಖೆಯಲ್ಲಿ. ಆದರೆ ಅದರ ಕಷ್ಟ-ನಷ್ಟ ಕಂಡು ನೌಕರಿಯನ್ನೇ ತೊರೆದು ನೈಸರ್ಗಿಕ ಕೃಷಿಯಲ್ಲೇ ಬದುಕು ಕಂಡುಕೊಂಡರು.

ಕೃಷಿ ಇಲಾಖೆಯಲ್ಲಿ 25 ವರ್ಷ ಸೇವೆ ಸಲ್ಲಿಸಿ, ನೌಕರಿಯೇ ಬೇಡವೆಂದು ಕೃಷಿಯಲ್ಲಿಯೇ ಸಾಧನೆ ಮಾಡುತ್ತಾ ಬಂದಿದ್ದಾರೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ರೈತ ಅಶೋಕ ಶಾಂತಿನಾಥ ಖೆಮಲಾಪುರೆ.

ಆರೇಳು ವರ್ಷಗಳಿಂದ ನೈಸರ್ಗಿಕ ಕೃಷಿ ಮಾಡುತ್ತ ಭೂಮಿಯ ಸತ್ವ ಉಳಿಸಿದ್ದಾರೆ.  ಸೇವೆಯಲ್ಲಿದ್ದಾಗ ರಾಸಾಯನಿಕ ಕೃಷಿಯನ್ನು ಇವರು ನೆಚ್ಚಿಕೊಂಡಿದ್ದರು. ರಾಸಾಯನಿಕ ಗೊಬ್ಬರ ಮಾರಾಟ ಮಾಡುವಂತೆ ಮೇಲಧಿಕಾರಿಗಳ ಒತ್ತಡವೂ ಇತ್ತು. ಆದರೆ ಇದನ್ನು ಬಳಸಿದರೂ ವರ್ಷದಿಂದ ವರ್ಷಕ್ಕೆ ಇಳುವರಿ ಕಡಿಮೆ ಆಗುತ್ತಿರುವುದು, ಇದರಿಂದ ರೈತರು ಪೇಚಿಗೆ ಸಿಲುಕುತ್ತಿದ್ದುದು ಅಶೋಕ ಅವರ ಗಮನಕ್ಕೆ ಬಂತು.

ನೈಸರ್ಗಿಕ ಚಮತ್ಕಾರ
ರಾಸಾಯನಿಕದ ಸಹವಾಸವೇ ಬೇಡ ಎಂದು ಕೆಲಸಕ್ಕೆ ರಾಜೀನಾಮೆ ನೀಡಿದರು. ನೈಸರ್ಗಿಕ ಕೃಷಿಯತ್ತ ಮುಖ ಮಾಡಿದರು. ಇದಕ್ಕೆ ಅವರು ಮನಸ್ಸು ಮಾಡಿದ್ದು ನೈಸರ್ಗಿಕ ಕೃಷಿ ತಜ್ಞ ಸುಭಾಷ್ ಪಾಳೇಕರ ಅವರು ನಡೆಸಿದ ಕಾರ್ಯಾಗಾರದಲ್ಲಿ ಪಾಲ್ಗೊಂಡ ನಂತರ. ಮನೆಯ ವಿರೋಧದ ನಡುವೆಯೂ ಎಂಟು ಎಕರೆ ಜಮೀನಿನಲ್ಲಿ ನೈಸರ್ಗಿಕ ವಿಧಾನದಲ್ಲಿ ವಿವಿಧ ಬೆಳೆ ಬೆಳೆದರು. ನಿಸರ್ಗದಿಂದ ಸಿಗುವ ವಸ್ತುಗಳನ್ನೇ ಬಳಸಿಕೊಳ್ಳುವ ಮೂಲಕ ಬಂಡವಾಳವನ್ನು ಶೂನ್ಯಕ್ಕೆ ತಂದಿದ್ದಾರೆ. ದುಡಿಮೆಯಷ್ಟೇ ಭೂಮಿಗಾಗಿ ಬಳಸುತ್ತಿರುವ ಬಂಡವಾಳ ಇವರದ್ದು.

ತಮ್ಮ ಹೊಲದಲ್ಲಿ ಕಬ್ಬು ಅಥವಾ ಬೇರೆ ಯಾವುದೇ ಬೆಳೆ ಬೆಳೆದರೂ ನಾಲ್ಕು ಸಾಲಿನ ಅಂತರದ ನಡುವೆ ಉಪ ಬೆಳೆಗಳಾದ ಸೋಯಾಬೀನ್, ಕಡಲೆ, ಗೋಧಿ, ಜವೇಗೋಧಿ, ಉದ್ದು, ಶೇಂಗಾ, ಅಲಸಂದೆ, ತೊಗರಿ ಮತ್ತಿತರ ಅಲ್ಪಾವಧಿ ಬೆಳೆ ಬೆಳೆಯುತ್ತಾರೆ. ಮುಖ್ಯ ಬೆಳೆಯ ಆದಾಯದ ಜೊತೆಗೆ ಹೆಚ್ಚುವರಿ ಆದಾಯ ಪಡೆಯಲಾಗುವುದು ಎನ್ನುತ್ತಾರೆ ಅಶೋಕ.

ಔಷಧೋಪಚಾರ ಹೀಗಿದೆ
ಬೆಳೆಗಳಿಗೆ ರೋಗ ಬರದಂತೆ ಒಂದು ಎಕರೆ ಜಮೀನಿಗೆ 10 ಲೀಟರ್ ಗೋಮೂತ್ರ, 10 ಕೆ.ಜಿ ಜವಾರಿ ಆಕಳ ಸಗಣಿ, 2 ಕೆ.ಜಿ ಬೆಲ್ಲ ಮತ್ತು 2 ಕೆ.ಜಿ ದ್ವಿದಳ ಧಾನ್ಯ ಹಿಟ್ಟು (ಎಣ್ಣೆ ಅಂಶ ಹೊಂದಿರುವ ಸೋಯಾ ಮತ್ತು ಶೇಂಗಾ ಬಿಟ್ಟು) ಸೇರಿಸಿ 200 ಲೀಟರ್ ನೀರಿನ ಡ್ರಮ್‌ನಲ್ಲಿ ಹಾಕಿ ಅದೇ ಹೊಲದ (ಸಿಂಪಡಿಸುವ ಹೊಲ) ಮಣ್ಣನ್ನು ಮಿಶ್ರಣ ಮಾಡಿ ಸಿಂಪಡಿಸುವರು. ಯಾವ ಹೊಲದಲ್ಲಿ ಸಿಂಪಡಿಸುವರೋ ಅದೇ ರೀತಿಯ ಬ್ಯಾಕ್ಟೀರಿಯಾ ಬೆಳೆಯಲು ಅನುಕೂಲ ಆಗುವುದು ಎನ್ನುವುದು ಅಶೋಕ ಅವರ ಅಭಿಪ್ರಾಯ.

ತೊಗರಿ ಬೆಳೆ ಅಥವಾ ಬಾಳೆ ಬೆಳೆಯನ್ನು ರಾಸಾಯನಿಕ ಗೊಬ್ಬರ ಇಲ್ಲದೆಯೇ ಬೆಳೆಯುತ್ತಾರೆ. ಬಾಳೆಯ ಜೊತೆ ನುಗ್ಗೆ ಗಿಡ ನೆಟ್ಟಿದ್ದಾರೆ. ಇದರಿಂದ ಸುಮಾರು 10 ಸಾವಿರ ಆದಾಯ ಪಡೆದಿರುವುದು ಇವರ ವಿಶೇಷ. ಅದರಂತೆ ತೊಗರಿ ಬೆಳೆಯ ಜೊತೆ ಸೋಯಾ ಬೆಳೆದು ಆದಾಯ ಪಡೆಯುತ್ತಿದ್ದಾರೆ.

ನೈಸರ್ಗಿಕವಾಗಿ ಬೆಳೆದ ಬಾಳೆಯನ್ನು ತೂಕದಂತೆ ಕೊಡದೆ ಡಜನ್ ಆಧರಿಸಿ ಮಾರಾಟ ಮಾಡುವ ವ್ಯವಸ್ಥೆ ಇವರಲ್ಲಿದೆ. ‘ಮಾರುಕಟ್ಟೆಯ ಬೆಲೆಗಿಂತ ಕಡಿಮೆ ದರದಲ್ಲಿ ನಾವು ಹಣ್ಣು ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ ಅಶೋಕ. ಕಬ್ಬಿಗಿಂತ ಬಾಳೆ ಉತ್ತಮ ಎನ್ನುವ ಅವರು, ಕಬ್ಬು, ತೊಗರಿ ಮತ್ತು ಬಾಳೆಗೆ ಯಾವುದೇ ರೀತಿಯ ಹೊರಗಿನ (ರಾಸಾಯನಿಕ) ಗೊಬ್ಬರವನ್ನು ಹಾಕುವುದಿಲ್ಲ. ನಿರುಪಯುಕ್ತ ಎಲೆ, ರವದಿ, ಹಸಿರು ತಪ್ಪಲು, ಕಸ ಗೊಬ್ಬರವಾಗಿ ಬಳಸುವುದರಿಂದ ಭೂಮಿಯ ಸತ್ವ ಹೆಚ್ಚುತ್ತದೆ ಎನ್ನುತ್ತಾರೆ.

ಕಸವೇ ರಸ
‘ಹೊಲದಲ್ಲಿ ಬೆಳೆದ ಕಸವನ್ನು ಕಿತ್ತೆಸೆಯದೆ ಅದನ್ನು ಸಂಗ್ರಹಿಸಿ ನೆಲದಲ್ಲಿ ಹೂಳುತ್ತೇನೆ. ಏಕೆಂದರೆ ಅದು ಗೊಬ್ಬರವಾಗಿ ಪರಿವರ್ತನೆ ಹೊಂದುತ್ತದೆ. ಕಸದಿಂದ ರಸ ತೆಗೆಯಲು ನೈಸರ್ಗಿಕ ಕೃಷಿಯಿಂದ ಮಾತ್ರ ಸಾಧ್ಯ’ ಎನ್ನುತ್ತಾರೆ ಇವರು. ನೈಸರ್ಗಿಕವಾಗಿ ಬೆಳೆದ ಕಬ್ಬಿಗೆ ರಿಕವರಿ (ಸಕ್ಕರೆ ಅಂಶ) ಸರಾಸರಿ 15-16ರಷ್ಟು ಇರುವುದು. ಆದರೆ ಈ ಕಬ್ಬನ್ನು ಕಾರ್ಖಾನೆಗೆ ಕಳುಹಿಸಿದರೆ ದರ ಹೆಚ್ಚು ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸುವ ಅವರು ಬೆಲ್ಲ ತಯಾರಿಸಲು ಉತ್ಸುಕತೆ ತೋರುತ್ತಾರೆ. ‘ಇಂದಿನ ದಿನಗಳಲ್ಲಿ ಕಬ್ಬು ಕಡೆಯಲು ಬರುವವರು ಕಬ್ಬಿನ ಪಡದಲ್ಲಿ ಹುಳು-ಹುಪ್ಪಡಿ (ಹಾವು, ಚೇಳು ಮತ್ತಿತರ ಕ್ರಿಮಿ) ಇರುತ್ತವೆ ಎಂದು ಕಬ್ಬು ಕಡೆಯಲು ಹಿಂಜರಿಯುತ್ತಾರೆ. ಜೊತೆಗೆ ಕಬ್ಬಿನ ಗಾಣ ಮಾಡಲು ಕಾರ್ಮಿಕರು ಸಿಗುವುದಿಲ್ಲ. ಸಿಕ್ಕರೆ ಅವರ ಕೂಲಿ ದರ ಹೆಚ್ಚಳದಿಂದ ರೈತರು ತೊಂದರೆಗೆ ಸಿಲುಕಿದ್ದಾರೆ’ ಎನ್ನುವುದು ಅಶೋಕ ಅವರ ಅಭಿಮತ.

ರೈತರು ತಾವು ಬೆಳೆದ ಕಬ್ಬನ್ನು ಬೆಲ್ಲ ಮಾಡಿ ಹೆಚ್ಚಿನ ಆದಾಯ ಪಡೆಯಲು ಸರ್ಕಾರ ಊರಿಗೊಂದು ಆಲೆಮನೆ (ಬೆಲ್ಲ ತಯಾರಿಕಾ ಘಟಕ) ಸ್ಥಾಪಿಸಬೇಕು. ಇಲ್ಲವಾದರೆ ರೈತರಿಗೆ ಬೇಕಾದ ಸಾಮಗ್ರಿಗಳನ್ನು ಉಚಿತ ಅಥವಾ ಅತ್ಯಂತ ಕಡಿಮೆ ದರದಲ್ಲಿ ಪೂರೈಸಬೇಕು ಎಂದು ಅಶೋಕ ಒತ್ತಾಯಿಸುತ್ತಾರೆ. ಮಾಹಿತಿಗೆ: 9902129003.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT