ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ಗಾಂಧಿ ಬಹಿರಂಗ ಪ್ರಚಾರ ಇಂದು

Last Updated 26 ಏಪ್ರಿಲ್ 2013, 8:39 IST
ಅಕ್ಷರ ಗಾತ್ರ

ಮೈಸೂರು: ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಏಪ್ರಿಲ್ 26 ರಂದು ಮೈಸೂರಿಗೆ ಆಗಮಿಸಲಿದ್ದಾರೆ ಎಂದು ಸಂಸದ ಎಚ್.ವಿಶ್ವನಾಥ್ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಜ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಬೃಹತ್ ಪ್ರಚಾರ ಸಭೆ ಏರ್ಪಡಿಸಲಾಗಿದೆ. ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ  ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಪಡೆಯಲಿದ್ದು, ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸ ಹೆಚ್ಚಾಗುತ್ತಿದೆ ಎಂದರು.

ರಾಹುಲ್ ಗಾಂಧಿ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು. ಅವರ ವಿರುದ್ಧ ಬಿಜೆಪಿ ಲಘುವಾಗಿ ಮಾತನಾಡುವುದನ್ನು ಕಾಂಗ್ರೆಸ್ ಸಹಿಸುವುದಿಲ್ಲ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಾಂಗ್ರೆಸ್ ಕುರಿತು ಮಾಡಿದ ಟೀಕೆ ಆರೋಗ್ಯಕರವಾಗಿಲ್ಲ.

ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದಲ್ಲಿ ಇರುವ ವರೆಗೂ ಬಿಜೆಪಿ ಸಾಮೂಹಿಕ ನಾಯಕತ್ವದ ಮಂತ್ರ ಜಪಿಸುತಿತ್ತು. ಅವರು ಪಕ್ಷದಿಂದ ಹೊರನಡೆದ ಬಳಿಕ ಶೆಟ್ಟರ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ. ಶೆಟ್ಟರ್ ಯಾವ ಪರಿಸ್ಥಿತಿಯಲ್ಲಿ ಬಿಜೆಪಿಯ ನಾಯಕರಾದರು ಎಂಬುದು ರಾಜ್ಯದ ಜನತೆಗೆ ತಿಳಿದಿರುವ ವಿಚಾರ. ಹೀಗಾಗಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆಯ ಪಾಠವನ್ನು ಬಿಜೆಪಿಯಿಂದ ಕಲಿಯಬೇಕಾಗಿಲ್ಲ ಎಂದು ತಿರುಗೇಟು ನೀಡಿದರು.

ಹಲ್ಲೆಗೆ ಖಂಡನೆ: ಹಾಸನ ಜಿಲ್ಲೆಯ ಹೊಳೆನರಸೀಪುರದ ಕಾಂಗ್ರೆಸ್ ಅಭ್ಯರ್ಥಿ ಅನುಪಮಾ ಅವರ ಕಾರಿನ ಮೇಲೆ ನಡೆದ ದಾಳಿಯನ್ನು ಸಂಸದರು ಖಂಡಿಸಿದರು.

ಹೊಳೆನರಸೀಪುರದಲ್ಲಿ ಗೂಂಡಾಗಿರಿ ಹೆಚ್ಚಾಗಿದೆ. ಕಾಂಗ್ರೆಸ್ ಅಭ್ಯರ್ಥಿಯ ಕಾರಿನ ಮೇಲೆ ದಾಳಿ ನಡೆಸಿದ ಜೆಡಿಎಸ್ ಕಾರ್ಯಕರ್ತರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ಅಶಾಂತಿ ನಿರ್ಮಾಣ ವಾಗಿದ್ದು, ಜನತೆ ಆತಂಕಗೊಂಡಿದ್ದಾರೆ. ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಯುವುದು ಜೆಡಿಎಸ್‌ಗೆ ಬೇಕಾಗಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಅವರ ಕುರಿತು ಗೌರವವಿದೆ. ದೇಶದ ಪ್ರಮುಖ ರಾಜ ಕಾರಣಿಯ ಕುರಿತು ಕೆಜೆಪಿ ವಕ್ತಾರ ಧನಂಜಯಕುಮಾರ್ ಮಾಡಿರುವ ಟೀಕೆ ಸರಿಯಲ್ಲ. ಅವರ ಆರೋಪವನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಹಾಗಂತ ಬಾಯಿಗೆ ಬಂದಂತೆ ಮಾತನಾಡಬಾರದು. ಪಕ್ಷದ ವಕ್ತಾರರು ಸೃಷ್ಟಿಸುವ ಇಂತಹ ಮುಜುಗರದ ಪ್ರಸಂಗಗಳಿಗೆ ನಾಯಕರು ತೆರೆ ಎಳೆಯಬೇಕು. ಈ ಉದ್ದೇಶದಿಂದ ಯಡಿಯೂರಪ್ಪ ಅವರು ಅಡ್ವಾಣಿಯ ಕ್ಷಮೆಯಾಚಿಸಿರುವುದು ಸೂಕ್ತವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ನಗರ (ಜಿಲ್ಲಾ) ಘಟಕದ ಅಧ್ಯಕ್ಷ ಸಿ.ದಾಸೇಗೌಡ, ಗ್ರಾಮಾಂತರ ಘಟಕದ ಅಧ್ಯಕ್ಷ ಧರ್ಮಸೇನ, ಕೆಪಿಸಿಸಿ ಸದಸ್ಯ ನಾರಾಯಣಸ್ವಾಮಿ, ಮುಖಂಡರಾದ ಸಿ.ಬಸವೇಗೌಡ, ಶಿವಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT