ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ. 50 ಸಾವಿರ ಗಡಿ ದಾಟಿದ ಕಾಳುಮೆಣಸು

Last Updated 3 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹಳದಿ ಬಂಗಾರಕ್ಕೆ ಮಾತ್ರ ಬೆಲೆ ಬಂದಿದ್ದಲ್ಲ, ಕರಿ ಬಂಗಾರಕ್ಕೂ ಈಗ ಭಾರಿ ಬೆಲೆ ಬಂದಿದೆ. ರೈತರ ಆಪತ್‌ಧನ ಎನಿಸಿಕೊಂಡಿರುವ ಕಾಳುಮೆಣಸು ಗರಿಷ್ಠ ರೂ.53,000 ಮಟ್ಟಕ್ಕೇರಿ ಇತಿಹಾಸ ನಿರ್ಮಿಸಿದೆ.

ಇತಿಹಾಸದ ಪುಟ ತೆರೆದು ನೋಡಿದರೆ ಉತ್ತರ ಕನ್ನಡ ಜಿಲ್ಲೆ ಕಾಳುಮೆಣಸಿನ ತವರು. 15ನೇ ಶತಮಾನದಲ್ಲಿ ಗೇರುಸೊಪ್ಪದ ರಾಣಿ, 16–17ನೇ ಶತಮಾನದಲ್ಲಿ ಸೋದೆ ಅರಸರು ಕಾಳುಮೆಣಸಿನ ವ್ಯಾಪಾರದಿಂದಲೇ ಪ್ರಸಿದ್ಧಿ ಪಡೆದಿದ್ದರು. ಪ್ರಸ್ತುತ ಜಿಲ್ಲೆಯಲ್ಲಿ ಕಾಳುಮೆಣಸು ಮುಖ್ಯ ಬೆಳೆಯಲ್ಲ. ತೋಟದಲ್ಲಿ ಅಡಿಕೆ ಮರಕ್ಕೆ ಕಾಳುಮೆಣಸು ಬಳ್ಳಿಯನ್ನು ಹಬ್ಬಿಸಿ ಉಪಬೆಳೆಯಾಗಿ ಕೃಷಿಕರು ಬೆಳೆಯುತ್ತಾ ಬಂದಿದ್ದಾರೆ.

ಪಶ್ಚಿಮಘಟ್ಟದ ಹವಾಮಾನ ಕಾಳುಮೆಣಸು ಕೃಷಿಗೆ ಪೂರಕವಾಗಿದ್ದರೂ ಜಿಲ್ಲೆಯ ಕರಾವಳಿ ತಾಲ್ಲೂಕುಗಳಲ್ಲಿ ಕಾಳುಮೆಣಸು ಕೃಷಿ ಕಡಿಮೆ. ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲ್ಲೂಕುಗಳಲ್ಲಿ ಕಾಳುಮೆಣಸು ಅಡಿಕೆ ತೋಟಿಗರ ಉಪ ಬೆಳೆಯ ದೊಡ್ಡ ಆದಾಯ. ಅದಕ್ಕಾಗಿ ಕೃಷಿಕರು ವಾರ್ಷಿಕ ಬೆಳೆಯ ಕಾಳುಮೆಣಸನ್ನು ಆಯಾ ವರ್ಷವೇ ವಿಕ್ರಯ ಮಾಡುವುದಿಲ್ಲ. ವ್ಯವಸ್ಥಿತವಾಗಿ ಸಂಗ್ರಹಿಸಿದರೆ ಕಾಳುಮೆಣಸು 10 ವರ್ಷ ಇಟ್ಟರೂ ಕೆಡುವುದಿಲ್ಲ. ಹೀಗಾಗಿ ಆಪತ್‌ಧನವೆಂದು ಸಂಗ್ರಹಿಸಿಡುವ ಕಾಳುಮೆಣಸನ್ನು ರೈತರು ಉತ್ತಮ ಬೆಲೆ ಬಂದಾಗ ಮಾರಾಟ ಮಾಡುತ್ತಾರೆ.

ಪ್ರಸ್ತುತ ವರ್ಷ ಕಾಳುಮೆಣಸಿಗೆ ಉತ್ತಮ ಧಾರಣೆ ಬಂದಿದೆ. ಸಾಮಾನ್ಯವಾಗಿ ಮಾರ್ಚ್‌ ಹೊತ್ತಿಗೆ ಹೊಸ ಮಾಲು ಮಾರುಕಟ್ಟೆಗೆ ಬರುತ್ತದೆ. ಪ್ರಮುಖ ಮಾರುಕಟ್ಟೆಯಾಗಿರುವ ಶಿರಸಿಯಲ್ಲಿ ಈ ವರ್ಷದ ಆರಂಭದಿಂದ ಪ್ರತಿ ಕ್ವಿಂಟಲ್‌ ಕಾಳುಮೆಣಸಿಗೆ ಸರಾಸರಿ ರೂ.30,000 ಇದ್ದ ದರ, ಅಕ್ಟೋಬರ್‌ನಿಂದ ಏರುಮುಖವಾಗಿದೆ. ಪ್ರಸ್ತುತ 50 ಸಾವಿರದ ಗಡಿ ದಾಟಿ ಹೊಸ ದಾಖಲೆ ಮಾಡಿದೆ.

ಅಕ್ಟೋಬರ್‌ನಲ್ಲಿ ಒಂದು ಕ್ವಿಂಟಲ್‌ ಕಾಳುಮೆಣಸಿನ ದರ ರೂ.43,000 ದಾಟಿದಾಗ ಉತ್ತಮ ಧಾರಣೆ ಕಂಡು ಬಹಳಷ್ಟು ರೈತರು ಮಾಲನ್ನು ವಿಕ್ರಯ ಮಾಡಿದರು. ಆದರೆ ನವೆಂಬರ್‌ನಲ್ಲಿ ಕಾಳುಮೆಣಸಿನ ದರ ಮತ್ತೆ ಚಂಗನೆ ಜಿಗಿದಿದೆ. ನವೆಂಬರ್‌ ಎರಡನೇ ವಾರದಿಂದ ರೂ.50,000 ದಾಟಿದ ಬೆಲೆ ಮಾರುಕಟ್ಟೆಯಲ್ಲಿ ಬಹುತೇಕ ಸ್ಥಿರವಾಗಿದೆ.

ಶೇ 60ರಷ್ಟು ರೈತರು ತಮ್ಮ ಬಳಿ ಇದ್ದ ಮಾಲನ್ನು ಮಾರಾಟ ಮಾಡಿದ್ದಾರೆ. ಇನ್ನಷ್ಟು ಮಂದಿ ಕಾಳುಮೆಣಸು ಧಾರಣೆ  ರೂ.60,000ದವರೆಗೂ ತಲುಪಬಹುದೆಂಬ ನಿರೀಕ್ಷೆಯಲ್ಲಿ  ಮಾರುಕಟ್ಟೆಯತ್ತ ಕಡೆಗಣ್ಣಿಟ್ಟಿದ್ದಾರೆ.

ತೋಟಗಾರಿಕಾ ಇಲಾಖೆಯ ದಾಖಲೆ ಪ್ರಕಾರ ಜಿಲ್ಲೆಯಲ್ಲಿ 431 ಹೆಕ್ಟೇರ್‌ ಪ್ರದೇಶದಲ್ಲಿ ಕಾಳುಮೆಣಸು ಕೃಷಿ ಇದೆ. 214 ಹೆಕ್ಟೇರ್ ಪ್ರದೇಶ ಶಿರಸಿ ತಾಲ್ಲೂಕು ಒಂದರಲ್ಲೇ ಇದೆ. ವಾರ್ಷಿಕ 181 ಟನ್‌ ಕಾಳುಮೆಣಸು ಉತ್ಪಾದನೆಯ ಲೆಕ್ಕಾಚಾರ ಇಲಾಖೆಯದು. ಆದರೆ ಕಾಳುಮೆಣಸು ಸಂಗ್ರಹದ ಬೆಳೆಯಾದ್ದರಿಂದ ಯಾವ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿದೆ ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ. ದೊಡ್ಡ ಹಿಡುವಳಿದಾರರು ದರ ಬಂದಾಗ ಮಾರಾಟ ಮಾಡಿದರೆ, ಸಣ್ಣ ಹಿಡುವಳಿದಾರರು ಹಣಕಾಸಿನ ಅಗತ್ಯವಿದ್ದಾಗ ವಿಕ್ರಯ ಮಾಡುತ್ತಾರೆ.

ಕಾಳುಮೆಣಸು ಕೃಷಿಯನ್ನು ರೈತರು ಎಂದಿಗೂ ನಿರ್ಲಕ್ಷಿಸಿಲ್ಲ. ಅಡಿಕೆ ಮರಕ್ಕೆ ಮಾಡುವಷ್ಟೇ ಆರೈಕೆಯನ್ನು ಕಾಳುಮೆಣಸು ಬಳ್ಳಿಗೂ ಮಾಡುತ್ತಾರೆ, ಆದರೆ ಸೊರಗು ರೋಗ (quick wilt) ರೈತರನ್ನು ಹೈರಾಣಾಗಿಸಿದೆ. ಪೈಟೋಪ್‌ಥೋರಾ ಕ್ಯಾಪ್ಸಿಸಿ (phytophthora capsici) ಎಂಬ ಶಿಲೀಂಧ್ರದ ಬಾಧೆಯು ರೈತರು ಕಾಳುಮೆಣಸು ಕೃಷಿಯಿಂದ ವಿಮುಖರಾಗುವಂತೆ ಮಾಡುತ್ತಿದೆ. ಅನುಭವಿ ರೈತರು ಹೇಳುವಂತೆ ದಶಕದ ಹಿಂದೆ ಜಿಲ್ಲೆಯಲ್ಲಿ ಕಾಳುಮೆಣಸು ಕೃಷಿ ದೊಡ್ಡ ಪ್ರಮಾಣದಲ್ಲಿತ್ತು, ಸೊರಗು ರೋಗದಿಂದಾಗಿ ಕಾಳುಮೆಣಸು ಕೃಷಿ ಗಣನೀಯವಾಗಿ ಇಳಿಮುಖವಾಗಿದೆ. ಕೃಷಿ ಕೂಲಿ ಕಾರ್ಮಿಕರ ಬರ, ವೃದ್ಧಾಶ್ರಮಗಳಾಗುತ್ತಿರುವ ಹಳ್ಳಿಗಳಲ್ಲಿ ವಯಸ್ಸಾದ ರೈತರು ಏಣಿ ಏರಿ ಕರೆ ಕೊಯ್ಲು ಮಾಡಲು ಸಾಧ್ಯವಿಲ್ಲ ಎಂದು ಕಾಳುಮೆಣಸು ಕೃಷಿ ಕೈಬಿಟ್ಟಿರುವ ಉದಾಹರಣೆಗಳು ಅನೇಕ ಹಳ್ಳಿಗಳಲ್ಲಿವೆ.

‘ಅಡಿಕೆ ತೋಟದಲ್ಲಿ ಗಾಳಿ, ಬೆಳಕು ಉತ್ತಮವಾಗಿದ್ದರೆ, ಬಳ್ಳಿಗಳ ನಿರ್ವಹಣೆ ಸಮರ್ಪಕವಾಗಿದ್ದರೆ ಕಾಳುಮೆಣಸಿಗೆ ಬರುವ ರೋಗಗಳನ್ನು ಬಹುತೇಕ  ತಡೆಗಟ್ಟಬಹುದು. ಕೃಷಿಕ ಸುಧೀರ ಬಲ್ಸೆ ತಮ್ಮ ಐದು ಎಕರೆ ತೋಟದಲ್ಲಿ ವಾರ್ಷಿಕವಾಗಿ 35–40 ಕ್ವಿಂಟಲ್‌ ಕಾಳುಮೆಣಸು ಇಳುವರಿ ಪಡೆಯುತ್ತಿದ್ದಾರೆ. ಒಂದು ಎಕರೆ ತೋಟದಲ್ಲಿ 450 ಬಳ್ಳಿ ನೆಟ್ಟರೆ ಕನಿಷ್ಠ ನಾಲ್ಕು ಕ್ವಿಂಟಲ್‌ನಿಂದ ಗರಿಷ್ಠ ಎಂಟು ಕ್ವಿಂಟಲ್‌ ಇಳುವರಿ ತೆಗೆಯಬಹುದು. ಜಿಲ್ಲೆಯಲ್ಲಿ ಕಾಳುಮೆಣಸು ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯುವ ರೈತರು ಸಾಕಷ್ಟಿದ್ದಾರೆ’ ಎನ್ನುತ್ತಾರೆ ಶಿರಸಿಯ ಹಾರ್ಟಿ ಕ್ಲಿನಿಕ್‌ನ ವಿಷಯ ತಜ್ಞ ವಿಜಯೇಂದ್ರ ಹೆಗಡೆ.

‘1971ರಲ್ಲಿ ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸಿದ ಫಣಿಯೂರು ಜಾತಿಯ ಕಾಳುಮೆಣಸು ಬಳ್ಳಿ ಉತ್ತಮ ಇಳುವರಿ ಕೊಡುತ್ತಿದೆ. ಶೇ 80ರಷ್ಟು ರೈತರು ಫಣಿಯೂರು ಬೆಳೆಸಿದ್ದಾರೆ. ಮಲ್ಲೀಸರ, ಸ್ಥಳೀಯ ತಳಿಗಳಾದ ದೊಡಗ್ಯ, ಕರಿಮುಂಡ, ಬೊಮ್ಮನಳ್ಳಿ, ತಿರುಪುಕರೆಗಳು ಅಲ್ಲಲ್ಲಿ ಇವೆ’ ಎನ್ನುತ್ತಾರೆ ಅವರು.
‘ಅರ್ಧ ಎಕರೆ ಅಡಿಕೆ ತೋಟದಲ್ಲಿರುವ 200 ಬಳ್ಳಿಗಳಲ್ಲಿ 3 ಕ್ವಿಂಟಲ್‌ ಕಾಳುಮೆಣಸು ಬೆಳೆದಿರುವೆ. ಪ್ರಸ್ತುತ ಬಂದಿರುವ ದರ ಸಾಕೆಂದು ಎಲ್ಲ ಮಾಲನ್ನು ಮಾರಾಟ ಮಾಡಿದೆ’ ಎಂದು ಹೆಮ್ಮಾಡಿಯ ಶಿವಾನಂದ ಬಂಡಿವಡ್ಡರ ಹೇಳಿದರೆ, ‘ಬೇಸಿಗೆ ಹೊತ್ತಿಗೆ ಒಂದು ಕ್ವಿಂಟಲ್‌ ಕಾಳುಮೆಣಸನ್ನು ರೂ. 43,000 ದರದಲ್ಲಿ ವಿಕ್ರಯ ಮಾಡಿದೆ’ ಎಂದು ಜಿ.ಎಂ.ಭಟ್ಟ ಶೇಲೂರು ತಮ್ಮ ಅನುಭವವನ್ನು ಮಾರುಕಟ್ಟೆಯಲ್ಲಿ ರೈತರೊಂದಿಗೆ ಹಂಚಿಕೊಳ್ಳುತ್ತಿದ್ದರು.

‘ಕಾಳುಮೆಣಸು ಅತಿ ಹೆಚ್ಚು ಬೆಳೆಯುವ ವಿಯಟ್ನಾಂನಲ್ಲಿ ಇಳುವರಿ ಕುಂಠಿತವಾಗಿದೆ. ಹೀಗಾಗಿ ಸಾಂಬಾರ ಪದಾರ್ಥವಾಗಿ ಬಳಕೆಯಾಗುವ ಕಾಳುಮೆಣಸಿಗೆ ಭಾರತದ ಮಾರುಕಟ್ಟೆಯಲ್ಲಿ ಅದೃಷ್ಟ ಖುಲಾಯಿಸಿದೆ. ರೋಗದಿಂದ ಕಾಳುಮೆಣಸು ಉತ್ಪಾದನೆ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಾಗಿದೆ. ಇದು ಸಹ ಧಾರಣೆ ಅಧಿಕವಾಗಲು ಕಾರಣವಾಗಿದೆ. ಅಲ್ಲದೆ ಈಗ ಕಾಳುಮೆಣಸು ಮಾರುಕಟ್ಟೆಗೆ ಬರುವ ಹಂಗಾಮು ಅಲ್ಲ. ಹೊಸ ಬೆಳೆ ಮಾರುಕಟ್ಟೆಗೆ ಬರುವ ಮಾರ್ಚ್‌ ತಿಂಗಳ ವರೆಗೆ ಇದೇ ದರ ಸ್ಥಿರವಾಗಿರಬಹುದು’ ಎನ್ನುವ ಅಭಿಪ್ರಾಯ ಶಿರಸಿಯ ಪ್ರಮುಖ ಮಾರುಕಟ್ಟೆಯಾಗಿರುವ ತೋಟಗಾರ್ಸ್‌ ಕೋ–ಆಪರೇಟಿವ್‌ ಸೇಲ್ಸ್‌ ಸೊಸೈಟಿ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT