ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಕ್ಟರ್ ಕೊಲೆ: ಸಿಬಿಐ ತನಿಖೆಗೆ ಹೈಕೋರ್ಟ್ ನಕಾರ

Last Updated 2 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮಲ್ಲೇಶ್ವರದ ಸೇಂಟ್ ಪೀಟರ್ಸ್ ಫೋಂಟಿಫಿಕಲ್ ಸೆಮಿನರಿಯ ರೆಕ್ಟರ್ ಕೆ.ಜೆ. ಥಾಮಸ್ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಕೊಲೆ ಪ್ರಕರಣದ ಆರೋಪಿ ಫಾ. ಪ್ಯಾಟ್ರಿಕ್ ಕ್ಸೇವಿಯರ್ ಸಂಬಂಧಿ ಮರಿಯಾ ದಾಸ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ಮಧ್ಯಂತರ ಕೋರಿಕೆ ಇದಾಗಿತ್ತು. ಇದರ ವಿಚಾರಣೆಯನ್ನು ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ನಡೆಸಿದರು.

`ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕು. ತನಿಖೆಯ ಪ್ರಗತಿ ಕುರಿತು ಸಿಬಿಐ ಕೋರ್ಟ್‌ಗೆ ವರದಿ ಸಲ್ಲಿಸಬೇಕು. ಅರ್ಜಿ ಇತ್ಯರ್ಥ ಆಗುವವರೆಗೆ, ವಿಧಿವಿಜ್ಞಾನಗಳ ಪ್ರಯೋಗಾಲಯದ ವರದಿ ಸರ್ಕಾರಕ್ಕೆ ಸಲ್ಲಿಕೆ ಆಗಬಾರದು' ಎಂಬುದು ಅರ್ಜಿಯಲ್ಲಿನ ಮಧ್ಯಂತರ ಕೋರಿಕೆಯಾಗಿತ್ತು.

ಫಾ. ಕ್ಸೇವಿಯರ್ ಅವರ ಒಪ್ಪಿಗೆ ಪಡೆಯದೆಯೇ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಗಿದೆ. ಇದು ಸುಪ್ರೀಂ ಕೋರ್ಟ್ ನಿರ್ದೇಶನಕ್ಕೆ ವಿರುದ್ಧ ಎಂದೂ ಅರ್ಜಿಯಲ್ಲಿ ದೂರಲಾಗಿದೆ. ವಿಚಾರಣೆ ಮುಂದೂಡಲಾಗಿದೆ.

ಅರ್ಜಿ ವಜಾ:`ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್'ನ (ನೈಸ್) `ಬೆಂಗಳೂರು - ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್' (ಬಿಎಂಐಸಿ) ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಲೋಕಾಯುಕ್ತಕ್ಕೆ ನೀಡಿದ್ದ ದೂರನ್ನು ರದ್ದು ಮಾಡಿದ ಆದೇಶ ಪುನರ್ ಪರಿಶೀಲನೆಗೆ ಹೈಕೋರ್ಟ್ ನಿರಾಕರಿಸಿದೆ.

ಬಿಎಂಐಸಿ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಇದನ್ನು ಆಧರಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಯೋಜನೆ ಕುರಿತು ತನಿಖೆಗೆ ಆದೇಶಿಸಿತ್ತು. ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ `ನೈಸ್' ಮುಖ್ಯಸ್ಥ ಅಶೋಕ್ ಖೇಣಿ ಹೈಕೋರ್ಟ್ ಮೆಟ್ಟಿಲೇರಿದರು. ಇದರ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ದೂರು ಮತ್ತು ತನಿಖೆಯನ್ನು ರದ್ದು ಮಾಡಿತ್ತು.
ಏಕಸದಸ್ಯ ಪೀಠ ಜೂನ್ 27ರಂದು ನೀಡಿದ ಆದೇಶವನ್ನು ಪುನರ್ ಪರಿಶೀಲಿಸಬೇಕು ಎಂದು ಅಬ್ರಹಾಂ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾ. ಆನಂದ ಬೈರಾರೆಡ್ಡಿ, ಅರ್ಜಿ ತಿರಸ್ಕರಿಸಿರುವುದಾಗಿ ಹೇಳಿದರು.

ವಿಚಾರಣೆ ಮುಂದಕ್ಕೆ: ಜಮೀನು ವಿವಾದವೊಂದರಲ್ಲಿ ಹಣ ನೀಡುವಂತೆ ಹೈಕೋರ್ಟ್‌ನ ನ್ಯಾಯಮೂರ್ತಿಯೊಬ್ಬರ ಪುತ್ರನ ಮೇಲೆ ಒತ್ತಡ ಹೇರಿದ ಆರೋಪ ಎದುರಿಸುತ್ತಿರುವ ವಕೀಲ ಕೆ.ಬಿ. ಶಿವಕುಮಾರ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.

ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ ಅವರು ನಡೆಸಿದರು.
`ಸೋಮವಾರದವರೆಗೆ ತಾಳ್ಮೆ ವಹಿಸುವಂತೆ' ಪೊಲೀಸರಿಗೆ ನಿರ್ದೇಶನ ನೀಡಿದರು.

`ವಕೀಲ ಶಿವಕುಮಾರ್ ಮತ್ತು ಅವರ ಗುಮಾಸ್ತ ಫೈರೋಜ್ ಖಾನ್ ಅವರು ಹಣಕ್ಕಾಗಿ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ' ಎಂದು ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಪುತ್ರ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT