ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನ ಪರಿಹಾರ ವಕೀಲರ ಖಾತೆಗೆ!?

Last Updated 24 ಸೆಪ್ಟೆಂಬರ್ 2011, 7:30 IST
ಅಕ್ಷರ ಗಾತ್ರ

ಕುಷ್ಟಗಿ: ತಾಲ್ಲೂಕಿನ ಮದಲಗಟ್ಟಿ ಗ್ರಾಮದ ಬಳಿ ನಿರ್ಮಿಸಿರುವ ನಿಡಶೇಸಿ ಕೆರೆ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ನೀಡಿರುವ ಪರಿಹಾರಧನವನ್ನು ಸಂತ್ರಸ್ತ ಕುಟುಂಬಗಳಿಗೆ ನೀಡದೇ ವಕೀಲರು ಸತಾಯಿಸುತ್ತಿದ್ದಾರೆ ಎಂದು ರೈತ ಅಮರೇಶ ನಿಂಗಪ್ಪ ಹೂಗಾರ ಎಂಬುವವರು ದೂರಿದ್ದಾರೆ.

ಶುಕ್ರವಾರ ಇಲ್ಲಿ ದಾಖಲೆ ಸಹಿತ ಸುದ್ದಿಗಾರರಿಗೆ ಮಾಹಿತಿ ನೀಡಿದ ಈ ರೈತ, ಹೆಚ್ಚಿನ ಪರಿಹಾರಕ್ಕಾಗಿ ತಮ್ಮ ಪರವಾಗಿ ವಕಾಲತು ವಹಿಸಿರುವ ವಕೀಲ ಬಸವರಾಜ ದಂಡಿನ ಎಂಬುವರು ತಮ್ಮ ಹಾಗೂ ತಮ್ಮ ತಾಯಿಯ ಹೆಸರಿನಲ್ಲಿ ಕೊಪ್ಪಳ ಎಸ್‌ಬಿಎಚ್ ಶಾಖೆಯಲ್ಲಿರುವ ಸ್ವಂತ ಖಾತೆಗೆ ರೂ ರೂ 14.55 ಲಕ್ಷ ಪರಿಹಾರಧನ ವರ್ಗಾಯಿಸಿಕೊಂಡಿದ್ದಾರೆ ಎಂದು ಗೋಳು ತೋಡಿಕೊಂಡರು.

ವಿವರ: ಇನ್ನೂ ಹೆಚ್ಚಿನ ಪರಿಹಾರಧನಕ್ಕಾಗಿ ನಿಂಗಪ್ಪ ಹೂಗಾರ ಎಂಬ ರೈತ ದೀವಾಣಿ ನ್ಯಾಯಾಧೀಶರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿದಾರರ ಪರವಾಗಿ ಭೂಸ್ವಾಧೀನ ಪ್ರಕರಣ (ಎಲ್‌ಎಸಿ)ದಲ್ಲಿ ವಕೀಲ ಬಿ.ಎಂ.ದಂಡಿನ ಎಂಬುವವರು ವಕಾಲತು ವಹಿಸಿಕೊಂಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೂ 29,88,292 ಲಕ್ಷ ಪರಿಹಾರವನ್ನು ನಿಂಗಪ್ಪ ಹೂಗಾರ ನಿಧನದ ನಂತರ ಅವರ ಪತ್ನಿ ಪುತ್ರ ಸೇರಿದಂತೆ ನಾಲ್ವರ ಜಂಟಿ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಕೊಪ್ಪಳ ಜಿಲ್ಲಾ ಆಡಳಿತ ಭವನ ಎಸ್.ಬಿ.ಎಚ್ ಶಾಖೆಯಲ್ಲಿ ಅರ್ಜಿದಾರರು ತೆರೆದಿರುವ ( 62180705332) ಖಾತೆಗೆ ಈ ಚೆಕ್‌ಗಳನ್ನು ನೀಡಿ ಹಣ ಜಮೆ ಮಾಡಿಸಲು ವಕೀಲ ಬಸವರಾಜ ದಂಡಿನ ಇತರೆ ಕೆಲ ವಕೀಲರು 2011ರ ಫೆ.18ರಂದು ಕರೆದೊಯ್ದು ಸ್ವತಃ ಜಮಾ ಮಾಡಿಸಿದ್ದರು.

ಆಘಾತ: ಸದರಿ ಮೊತ್ತದಲ್ಲಿ ರೈತರಿಗೆ ಮುಂಗಡವಾಗಿ ತಾವೇ ನೀಡಿದ ರೂ 7 ಲಕ್ಷ ಸಾಲ ಹಾಗೂ ವಕೀಲರ ಶುಲ್ಕ ಸೇರಿ ಒಟ್ಟು ರೂ 14.50 ಲಕ್ಷ ಹಣವನ್ನು ಅದೇ ದಿನ ಪಡೆದಿದ್ದ ವಕೀಲರು ಉಳಿದ ರೂ 14.50 ಲಕ್ಷ ಹಣವನ್ನು ಒಂದೇಬಾರಿ ತೆಗೆದುಕೊಳ್ಳಲಿಕ್ಕೆ ಬರುವುದಿಲ್ಲ ಎಂದು ಹೇಳಿದ್ದರು. ಕೆಲದಿನಗಳ ನಂತರ ಉಳಿದ ಹಣ ಪಡೆಯುವುದಕ್ಕೆಂದು ಬ್ಯಾಂಕಿಗೆ ಹೋದಾಗ ನಿಮ್ಮ ಖಾತೆಯಲ್ಲಿನ ಎಲ್ಲ ಮೊತ್ತ ಖಾಲಿಯಾಗಿದೆ ಎಂಬುದನ್ನು ತಿಳಿದು ಆಘಾತವಾಯಿತು ಎಂದು ಅಮರೇಶ್ ವಿವರಿಸಿದರು.

ಮಾಹಿತಿ: ನಂತರ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಬ್ಯಾಂಕ್‌ನಿಂದ ದಾಖಲೆಗಳನ್ನು ಪಡೆದಾಗ ತಮ್ಮ ಖಾತೆಯಿಂದ ವಕೀಲ ಬಸವರಾಜ ದಂಡಿನ, ಅವರ ತಾಯಿ ನೀಲವ್ವ ಅವರ ಹೆಸರಿನಲ್ಲಿ ಅದೇ ಬ್ಯಾಂಕಿನಲ್ಲಿರುವ ವೈಯಕ್ತಿಕ ಖಾತೆ (52175924652)ಗೆ ರೂ ವರ್ಗಾವಣೆಗೊಂಡಿರುವುದು ಗೊತ್ತಾಯಿತು.
ಆದರೆ ತಮ್ಮ ಮುಗ್ಧರಾದ ತಮ್ಮ ಗಮನಕ್ಕೆ ಬಾರದ ರೀತಿಯಲ್ಲಿ ವಕೀಲರು ತಾವೇ ಭರ್ತಿ ಮಾಡಿದ್ದ ಬ್ಯಾಂಕ್ ಜಮೆ ಚಲನ್‌ಗೆ ತಮ್ಮೆಲ್ಲರಿಂದ ಸಹಿ ಮಾಡಿಸಿಕೊಂಡಿದ್ದರು ಎಂದು ಅಮರೇಶ್ ವಿವರಿಸಿದರು.

ಆದರೆ ನಂತರ ಹಣ ಮರಳಿಸುವಂತೆ ಕೇಳಿದರೆ ನೀವೇ ಇನ್ನೂ ರೂ 7 ಲಕ್ಷ ಶುಲ್ಕ ಕೊಡಬೇಕು ಎಂದು ಹೇಳುತ್ತಿದ್ದಾರೆ, ನಾವು ಭೂಮಿ ಕಳೆದುಕೊಂಡರೂ ಪರಿಹಾರಧನ ಮಾತ್ರ ವಕೀಲರ ಪಾಲಾಗುತ್ತಿದೆ ಈ ಬಗ್ಗೆ ತಮಗೆ ಯಾರೂ ನೆರವು ನೀಡುತ್ತಿಲ್ಲ ಎಂದೆ ಅಮರೇಶ್ ಅಳಲು ತೋಡಿಕೊಂಡರು.

ವಕೀಲರ ವಿವರಣೆ: ಈ ಕುರಿತು ಸುದ್ದಿಗಾರರು ವಕೀಲ ಬಸವರಾಜ ದಂಡಿನ ಅವರನ್ನು ಸಂಪರ್ಕಿಸಿದಾಗ, ಅಮರೇಶ ಹೂಗಾರ ಮತ್ತು ತಮ್ಮ ಮಧ್ಯೆ ಹಣಕಾಸಿನ ವ್ಯವಹಾರ ಇತ್ತು, ವೃತ್ತಿ ಶುಲ್ಕ ಮತ್ತು ಮುಂಗಡ ಸಾಲ ಹೊರತುಪಡಿಸಿ ಉಳಿದ ಎಲ್ಲ ಮೊತ್ತವನ್ನೂ ಮರಳಿಸಿದ್ದೇನೆ, ಈ ಆರೋಪದಲ್ಲಿ ಹುರುಳಿಲ್ಲ ಎಂದರು. ಆದರೆ ಸ್ವಂತ ಖಾತೆಗೆ ಹಣ ವರ್ಗಾವಣೆಯಾದ್ದ್ದದೇಕೆ ಎಂಬುದಕ್ಕೆ ಸ್ಪಷ್ಟ ಉತ್ತರ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT