ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದ ಹೊನ್ನಾರು ಉಳುಮೆ ಆರಂಭ

Last Updated 6 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಕುಶಾಲನಗರ: ರೈತರ ಪಾಲಿಗೆ ಹೊಸ ವರ್ಷದ ಆರಂಭ ಮತ್ತು ವಿಶಿಷ್ಟ ದಿನವಾದ ಯುಗಾದಿ ಹಬ್ಬದ ಅಂಗವಾಗಿ ಬುಧವಾರ ಹೋಬಳಿಯ ವಿವಿಧ ಹಳ್ಳಿಗಳಲ್ಲಿ ‘ಹೊನ್ನಾರು’ (ಚಿನ್ನದ ಉಳುಮೆ) ಉತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಹೊಸ ಪಂಚಾಂಗದಂತೆ ಬುಧವಾರ ತೊರೆನೂರು, ಶಿರಂಗಾಲ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ರೈತರು, ಬಸವೇಶ್ವರ ದೇವಸ್ಥಾನದ ಬಳಿ ಸೇರಿ ಹೊನ್ನಾರು ಉತ್ಸವ ಆಚರಿಸಿದರು. ದೇವಸ್ಥಾನಕ್ಕೆ ಈಡುಗಾಯಿ ಹಾಕಿ ದೇವರ ಜಮೀನಿಗೆ ಪೂಜೆ ಸಲ್ಲಿಸಿ ಹೊನ್ನಾರು ಹೂಡಿ ಉಳುಮೆ ಆರಂಭಿಸಿದರು.

ತೊರೆನೂರಿನಲ್ಲಿ ಮೊದಲಿಗೆ ರೈತ ಟಿ.ಜಿ.ನಟರಾಜ್ ಎಂಬುವರು ದೇವರ ಜಮೀನಿನಲ್ಲಿ ನೇಗಿಲನ್ನು ಹೂಡಿ ವರ್ಷಧಾರೆ ಉಳುಮೆ ಆರಂಭಿಸಿದರು. ಬಳಿಕ ರೈತರು ತಮ್ಮ ತಮ್ಮ ಜಮೀನಿಗೆ ತೆರಳಿ ಹೊನ್ನಾರು ಉಳುಮೆ (ಚಿನ್ನದ ಉಳುಮೆ)ಗೆ ಚಾಲನೆ ನೀಡಿದರು.

ಉತ್ತರ ಕೊಡಗಿನ ಬಯಲು ಸೀಮೆಯ ಪ್ರದೇಶವಾದ ಶಿರಂಗಾಲ, ತೊರೆನೂರು, ಮಣಜೂರು, ಹೆಬ್ಬಾಲೆ, ಕೂಡಿಗೆ, ಕೂಡ್ಲೂರು, ಹುಲುಸೆ ಮುಂತಾದ ಗ್ರಾಮಗಳಲ್ಲಿ ಜನಪದ ಸಂಸ್ಕೃತಿಯ ಪ್ರತೀಕವಾದ ‘ಹೊನ್ನಾರು’ ಉತ್ಸವವನ್ನು ಮೊದಲಿನಿಂದಲೂ ಚಾಚು ತಪ್ಪದೇ ನಡೆಸಿಕೊಂಡು ಬರಲಾಗುತ್ತಿದೆ.

ಜನಪದರು ಬಹಳ ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿರುವ ಗ್ರಾಮೀಣ ಸಂಸ್ಕೃತಿಯ ಪ್ರತೀಕವಾದ ಹೊನ್ನಾರು ಉತ್ಸವವು ಇಂದಿನ ಆಧುನಿಕತೆ ಹಾಗೂ ಜಾಗತೀಕರಣದ ಎಷ್ಟೇ ಪ್ರಭಾವವಿದ್ದರೂ ಜನಪದ ಸೊಗಡಾಗಿಯೇ ಉಳಿದಿರುವುದು ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿದೆ.

ತೊರೆನೂರಿನಲ್ಲಿ ಹೊನ್ನಾರು ಉತ್ಸವವು ದೇವಾಲಯ ಸಮಿತಿ ಅಧ್ಯಕ್ಷ ಟಿ.ಡಿ.ಈಶ್ವರ್, ಕಾರ್ಯದರ್ಶಿ ಟಿ.ಎ. ರಾಮಚಂದ್ರ, ಉಪಾಧ್ಯಕ್ಷ ಟಿ.ಡಿ. ಚನ್ನರಾಜ್, ಡಿ.ಪಿ.ಪುಟ್ಟಸ್ವಾಮಿ, ಟಿ.ವಿ. ವಿಶ್ವೇಶ್ವರಯ್ಯ, ಗ್ರಾ.ಪಂ. ಅಧ್ಯಕ್ಷ ಟಿ.ಕೆ.ವಸಂತ್, ಸದಸ್ಯ ಟಿ.ಎಸ್.ರಾಜಶೇಖರ್ ಇತರರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT