ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರು ಪಡೆದಿರುವ ಸಾಲ ಮನ್ನಾ ಮಾಡಲು ಒತ್ತಾಯ

Last Updated 2 ಅಕ್ಟೋಬರ್ 2011, 14:55 IST
ಅಕ್ಷರ ಗಾತ್ರ

ಹಿರಿಯೂರು: ಈ ಬಾರಿ ತಾಲ್ಲೂಕಿನಲ್ಲಿ ಮುಂಗಾರು ಸಂಪೂರ್ಣವಾಗಿ ವಿಫಲವಾಗಿರುವ ಹಿನ್ನೆಲೆಯಲ್ಲಿ ರೈತರು ಪಡೆದಿರುವ ಎಲ್ಲಾ ರೀತಿಯ ಸಾಲಗಳನ್ನು ಅಸಲು-ಬಡ್ಡಿ ಸಮೇತ ಮನ್ನಾ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುವ ತೀರ್ಮಾನವನ್ನು ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ರೈತ ಸಂಘದ ಸಭೆಯಲ್ಲಿ ಕೈಗೊಳ್ಳಲಾಯಿತು.

ಮೇವು ವಿತರಣೆ ಕುರಿತಂತೆ ತಾಲ್ಲೂಕು ಆಡಳಿತ ಕೈಗೊಂಡ ಕ್ರಮ ಸರಿಯಿಲ್ಲ. ಎರಡು ಪಂಚಾಯ್ತಿಗಳಿಗೆ ಒಂದರಂತೆ ಮೇವು ವಿತರಣಾ ಕೇಂದ್ರ ಹಾಗೂ ಗೋಶಾಲೆ ತೆರೆಯಬೇಕು. ಭೂಮಾಪನ ಕೇಂದ್ರಗಳಲ್ಲಿ ರೈತರಿಗೆ ಅಗತ್ಯವಿರುವ ದಾಖಲೆಗಳು ಸಕಾಲದಲ್ಲಿ ದೊರೆಯುವಂತೆ ಮಾಡಬೇಕು. ರಂಗನಾಥಪುರ ಆರೋಗ್ಯ ಕೇಂದ್ರದಲ್ಲಿ ಎರಡು ವೈದ್ಯ ಹುದ್ದೆಗಳು ಖಾಲಿ ಇದ್ದು ಅವನ್ನು ತಕ್ಷಣ ಭರ್ತಿ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಲಾಯಿತು.

ಅ.3 ರಂದು ರೈತರ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸಲು ಬರುತ್ತಿರುವ ಕೆ.ಎಸ್. ಪುಟ್ಟಣ್ಣಯ್ಯ ಅವರ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬರುವಂತೆ ಮಾಡಬೇಕು. ನಗರದ ಕೆಲವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರನ್ನು ತಾತ್ಸಾರದಿಂದ ಕಾಣಲಾಗುತ್ತಿದ್ದು, ಇಂತಹ ಪ್ರವೃತ್ತಿಯನ್ನು ಬ್ಯಾಂಕುಗಳ ಅಧಿಕಾರಿಗಳು ಬದಲಾಯಿಸಿಕೊಳ್ಳಬೇಕು ಎಂದು ಒತ್ತಾಯಿಸುವ ತೀರ್ಮಾನ ಕೈಗೊಳ್ಳಲಾಯಿತು.

ಎ. ಕೃಷ್ಣಸ್ವಾಮಿ, ಸಿ. ಸಿದ್ದರಾಮಣ್ಣ, ತುಳಸೀದಾಸ್, ಪುಟ್ಟಲಿಂಗಪ್ಪ,ಪಿ.ಜೆ. ತಿಪ್ಪೇಸ್ವಾಮಿ, ವೀರಣ್ಣ, ಹೊರಕೇರಪ್ಪ, ನರೇಂದ್ರ, ಪುಟ್ಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT