ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತಸಂಘ ಬಣಗಳ ವಿಲೀನ

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಹತ್ವದ ಬೆಳವಣಿಗೆಯೊಂದರಲ್ಲಿ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರ ಸಮ್ಮುಖದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಎರಡು ಬಣಗಳ ಮುಖಂಡರು ಇಲ್ಲಿ ಗುರುವಾರ ಒಗ್ಗೂಡಿದರು.

ಹಲವು ದಿನಗಳಿಂದ ಕೆ.ಎಸ್. ಪುಟ್ಟಣ್ಣಯ್ಯ, ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಪ್ರಮುಖ ಮುಖಂಡರ ಜತೆ ಸಮಾಲೋಚಿಸಿ ಗುರುವಾರ ಅಂತಿಮ ನಿರ್ಧಾರ ಕೈಗೊಂಡು ನೂತನ ಪದಾಧಿಕಾರಿಗಳ ಹೆಸರನ್ನು ಪ್ರಕಟಿಸಲಾಯಿತು.

ಪುಟ್ಟಣ್ಣಯ್ಯ ಅವರನ್ನು ಗೌರವಾಧ್ಯಕ್ಷರನ್ನಾಗಿ, ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಅಧ್ಯಕ್ಷರನ್ನಾಗಿ, ಚಾಮರಸ ವಾಲಿ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ, ಎಚ್.ಆರ್. ಬಸವರಾಜಪ್ಪ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಹಾಗೂ ಡಾ.ವೆಂಕಟರೆಡ್ಡಿ ಅವರನ್ನು ರಾಜ್ಯ ಉನ್ನತ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವಮೂರ್ತಿ ಮುರುಘಾ ಶರಣರು, ಕಳೆದ 30 ವರ್ಷಗಳಿಂದ ರೈತಸಂಘ ರೈತರ ದನಿಯಾಗಿ ಹೋರಾಟ ಮಾಡುತ್ತಿದೆ. ನಂಜುಂಡಸ್ವಾಮಿ ಅವರು ಈ ಸಂಘಟನೆಗೆ ಶಕ್ತಿ ತುಂಬಿದ್ದರು. ಇತ್ತೀಚೆಗೆ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಬಹಿರಂಗವಾಗಿ ಎರಡು ಸಂಘಟನೆಗಳನ್ನು ಸೇರಿಸಲು ಚಾಲನೆ ನೀಡಲಾಯಿತು. ಇದುವರೆಗೆ ಅಂತರಂಗದಿಂದ ದೂರ ಉಳಿದಿದ್ದ ಮುಖಂಡರನ್ನು ಒಗ್ಗೂಡಿಸಲಾಗಿದೆ. ಈಗ ಸಂಪೂರ್ಣವಾಗಿ ಅಂತರಂಗ ಮತ್ತು ಬಹಿರಂಗವಾಗಿ ಒಗ್ಗೂಡಿದ್ದಾರೆ. ಈ ಕೆಲಸ ಮಾಡಿರುವುದಕ್ಕೆ ತಮಗೆ ಹೆಮ್ಮೆ ಮತ್ತು ಸಂತೋಷವಾಗಿದೆ ಎಂದು ನುಡಿದರು.

ಪುಟ್ಟಣ್ಣಯ್ಯ ಮಾತನಾಡಿ, ನಾವೆಲ್ಲ ಒಂದಾಗಿದ್ದೇವೆ. ಗಂಭೀರವಾಗಿ ದುಡಿಯುವ ಕ್ಷೇತ್ರದ ಹಿತಾಸಕ್ತಿಗೆ ಶ್ರಮಿಸುತ್ತೇವೆ ಎಂದು ನುಡಿದರು.

ರೈತಸಂಘದಿಂದ ಅಯೋಗ್ಯರನ್ನು ಹೊರ ಹಾಕುತ್ತೇವೆ. ಪ್ರಮುಖ ಪದಾಧಿಕಾರಿಗಳು ಆಸ್ತಿ ಮತ್ತು ಆದಾಯವನ್ನು ಸಂಪೂರ್ಣ ಘೋಷಣೆ ಮಾಡಿಕೊಳ್ಳಬೇಕು. ಆಸ್ತಿ ಘೋಷಿಸಿಕೊಳ್ಳದಿದ್ದರೆ ಅಥವಾ ಸುಳ್ಳು ಮಾಹಿತಿ ನೀಡಿದರೆ ಸಂಘದಿಂದ ಹೊರ ಹಾಕುತ್ತೇವೆ ಎಂದು ಪುಟ್ಟಣ್ಣಯ್ಯ ಸ್ಪಷ್ಟಪಡಿಸಿದರು.

ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಮುಂದಿನ ದಿನಗಳಲ್ಲಿ ರೈತ ಸಂಘದ ಸಂಪೂರ್ಣ ಸಮಿತಿ ಸಭೆ ಕರೆದು ಜವಾಬ್ದಾರಿ ಸ್ಥಾನಗಳನ್ನು ಮುಖಂಡರಿಗೆ ನೀಡಲಾಗುವುದು. ಯುವಕರನ್ನು ಸಂಘಟಿಸಲು ಹಸಿರು ಸೇನೆಯನ್ನು ಮತ್ತಷ್ಟು ಬಲಪಡಿಸಲಾಗುವುದು. ಅದೇ ರೀತಿ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಮಹಿಳಾ ವಿಭಾಗವನ್ನು ಸಂಘಟಿಸಲಾಗುವುದು ಎಂದು ವಿವರಿಸಿದರು.

ರೈತಸಂಘ ಚುನಾವಣೆಯಿಂದ ಹೊರತಲ್ಲ. ತಕ್ಷಣಕ್ಕೆ ಈ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ಆದರೆ ಪ್ರಸ್ತುತ ನಡೆಯುತ್ತಿರುವ ಅನಾಚಾರಗಳಿಗೆ ಇತಿಶ್ರೀ ಹಾಡಬೇಕಾಗಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ರಾಜಕಾರಣದ ಹೆಜ್ಜೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದೆಂದು ಪ್ರಶ್ನೆಗೆ ಉತ್ತರಿಸಿದರು.

ಪಚ್ಚೆ ನಂಜುಂಡಸ್ವಾಮಿ ಸೇರಿದಂತೆ ಹಲವು ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT