ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತಸಂಘದ ವಿರುದ್ಧ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ

Last Updated 20 ಜನವರಿ 2011, 10:15 IST
ಅಕ್ಷರ ಗಾತ್ರ

ಮಂಡ್ಯ:  ಪಾಂಡವಪುರ ತಾಲ್ಲೂಕಿನಲ್ಲಿ ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲು ರೈತಸಂಘದ ಅಧ್ಯಕ್ಷ ಪುಟ್ಟಣ್ಣಯ್ಯ ತಮ್ಮ ಕಾರ್ಯಕರ್ತರಿಗೆ ಪ್ರಚೋದನೆ ನೀಡುತ್ತಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಜೆಡಿಎಸ್ ಆಗ್ರಹಪಡಿಸಿದೆ.ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್ ನೇತೃತ್ವದಲ್ಲಿ ಪುಟ್ಟಣ್ಣಯ್ಯ ಅವರ ವಿರುದ್ಧ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಮುಖಂಡರು ಪ್ರತಿಭಟನಾ ಮೆರವಣಿಗೆ, ರಸ್ತೆ ತಡೆ, ಧರಣಿ ನಡೆಸಿದರು.

ಪುಟ್ಟಣ್ಣಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮುಖಂಡರು, ಮಂಗಳವಾರವೂ ಅವರ ಪ್ರಚೋದನೆಯಿಂದಲೇ ಲಾರಿ ಚಾಲಕರೊಬ್ಬರ ಮೇಲೆ ಹಲ್ಲೆ ನಡೆದಿದೆ. ಅವರು ರೈತರ ಹೆಸರಿನಲ್ಲಿ ಸ್ವಾರ್ಥ ಸಾಧನೆಗೆ ಇಳಿದಿದ್ದಾರೆ ಎಂದು ಆರೋಪಿಸಿದರು.ಮೆರವಣಿಗೆಯಲ್ಲಿ ತೆರಳಿದ ಕಾರ್ಯಕರ್ತರು, ಸಂಜಯ ವೃತ್ತದಲ್ಲಿ ಕೆಲಕಾಲ ಧರಣಿ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದರು. ಅಲ್ಲಿಯೂ ಧರಣಿ ನಡಸಿ ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದರು. ನಗರಸಭೆ ಸದಸ್ಯರು,ಇತರರು ಇದ್ದರು.

ಮೇಲುಕೋಟೆ ವರದಿ: ರೈತ ಸಂಘದ ಕಾರ್ಯಕರ್ತರು ಲಾರಿ ಜಖಂ ಗೊಳಿಸಿ ಚಾಲಕನ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಲಾರಿ ಮಾಲೀಕರ ಸಂಘ ಮತ್ತು ಜೆಡಿಎಸ್ ಕಾರ್ಯಕರ್ತರು ಚಿನಕುರಳಿಯಲ್ಲಿ ಬುಧವಾರ ಬಂದ್ ನಡೆಸಿದರು. ಅಲ್ಲದೆ ಪಾಂಡವಪುರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಧರಣಿ ನಡೆಸಲಾಯಿತು.

100ಕ್ಕೂ ಹೆಚ್ಚು ಲಾರಿಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ ಲಾರಿ ಮಾಲೀಕರು ರಸ್ತೆಯಲ್ಲೆ ಕುಳಿತು ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.ನಂತರ ಲಾರಿಗಳೊಂದಿಗೆ ಮೆರವಣಿಗೆಯಲ್ಲಿ ತೆರಳಿ ಎಲೆಕೆರೆ ವೃತ್ತದಲ್ಲೂ ರಸ್ತೆ ತಡೆ ನಡೆಸಿದರು. ಪ್ರತಿಭಟನೆ ಬಳಿಕ ಮಿನಿ ವಿಧಾನಸೌಧಕ್ಕೆ ತೆರಳಿ ಉಪವಿಭಾಗಾಧಿಕಾರಿ ಜಿ.ಪ್ರಭು ಅವರಿಗೆ ಮನವಿ ಪತ್ರ ಸಲ್ಲಿಸಿದರು.

ತಾಲ್ಲೂಕು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಜಯರಾಂ, ರಮೇಶ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಧರ್ಮರಾಜು. ಚಿನಕುರಳಿ ಗ್ರಾಪಂ ಅಧ್ಯಕ್ಷೆ ದೇವಮ್ಮ, ಜೆಡಿಎಸ್‌ನ ಪ್ರಸಾದ್ ಅಶೋಕ್, ದಲಿತ ಮುಖಂಡ ಎಂ.ಬಿ. ಶ್ರೀನಿವಾಸ್, ತಾ.ಪಂ.ಸದಸ್ಯೆ ಶೈಲಜಾ ಗೋವಿಂದರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ವಿಜಯೇಂದ್ರ ರಾಮಲಿಂಗೇಗೌಡ ಇತರರು ಇದ್ದರು.

ಮದ್ದೂರು ವರದಿ: ಪಾಂಡವಪುರ ತಾಲ್ಲೂಕು ಚಿನಕುರಳಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಮೇಲೆ ರೈತ ಸಂಘದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪಟ್ಟಣದಲ್ಲಿ ಶಾಸಕಿ ಕಲ್ಪನ ಸಿದ್ದರಾಜು ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪಟ್ಟಣದ ಟಿಬಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಕಾರ್ಯಕರ್ತರು, ಅಲ್ಲಿಂದ ಮೆರವಣಿಯಲ್ಲಿ ತಾಲ್ಲೂಕು ಕಚೇರಿಗೆ ಆಗಮಿಸಿ ಕೆ.ಎಸ್. ಪುಟ್ಟಣ್ಣಯ್ಯ ವಿರುದ್ಧ ಘೋಷಣೆ ಕೂಗಿ, ತಹಶೀಲ್ದಾರ್ ಚಂದ್ರಶೇಖರಯ್ಯ ಅವರಿಗೆ ಮನವಿ ಸಲ್ಲಿಸಿದರು.

ಶಾಸಕಿ ಕಲ್ಪನ ಸಿದ್ದರಾಜು ಮಾತನಾಡಿ, ಹಲ್ಲೆಗೆ ಪ್ರಚೋದನೆ ನೀಡುವುದು ರೈತ ಹೋರಾಟಗಾರ ಪುಟ್ಟಣ್ಣಯ್ಯ ಅವರಿಗೆ ಶೋಭೆ ತರುವ ವಿಚಾರವಲ್ಲ ಎಂದು ಟೀಕಿಸಿದರು.
ಪುರಸಭಾಧ್ಯಕ್ಷ ಅಮರ್‌ಬಾಬು, ಜೆಡಿಎಸ್ ಅಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ ಮಾತನಾಡಿದರು. ಜಿಪಂ ಸದಸ್ಯರಾದ ರವಿ, ಕಂಠಿ ಸುರೇಶ್, ಜೆಡಿಎಸ್ ಕಾರ್ಯಾಧ್ಯಕ್ಷ ವೆಂಕಟೇಶ್, ತಾಪಂ ಸದಸ್ಯರಾದ ಬಿಳಿಯಪ್ಪ, ಧನಂಜಯ, ನಾಗರತ್ನ, ಸಿದ್ದಪ್ಪ, ಗ್ರಾಪಂ ಸದಸ್ಯರಾದ ಪ್ರಕಾಶ್, ಜಗದೀಶ್, ಚೆನ್ನಪ್ಪ, ಪುರಸಭಾ ಸದಸ್ಯರಾದ ಸಂಪಂಗಿರಾಮಯ್ಯ, ರಫೀಕ್, ಚಂದ್ರು, ಶಿವಾನಂದ, ಅನಸೂಯ ಶಿವಪ್ಪ, ಮುಖಂಡರಾದ ಪುಟ್ಟಸ್ವಾಮಿ ಶೆಟ್ಟಿ, ಆದಿಲ್, ಡಿ.ಪಿ. ಶಿವಪ್ಪ, ಫೈರೋಜ್, ಲಾರ ಪ್ರಸನ್ನ, ಶ್ರೀಧರ್, ಯರಗನಹಳ್ಳಿ ಮಹಾಲಿಂಗು ಇದ್ದರು.

ಶ್ರೀರಂಗಪಟ್ಟಣ ವರದಿ: ರೈತ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲೆಯಲ್ಲಿ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಶಾಸಕ ರಮೇಶ ಬಂಡಿಸಿದ್ದೇಗೌಡ ತಮ್ಮ ಬೆಂಬಲಿಗರ ಜತೆ ಗೂಡಿ ಬುಧವಾರ ಪಟ್ಟಣದಲ್ಲಿ ರಸ್ತೆ ತಡೆ ನಡೆಸಿದರು.ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದಲ್ಲಿ ಪ್ರತಿಭಟನೆ ಆರಂಭಿಸಿದ ಶಾಸಕ ಮತ್ತು ಜೆಡಿಎಸ್ ಕಾರ್ಯಕರ್ತರು ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಹಾಗೂ ರೈತಸಂಘದ ವಿರುದ್ಧ ಘೋಷಣೆ ಕೂಗಿದರು. ಕೆ.ಎಸ್.ಪುಟ್ಟಣ್ಣಯ್ಯ ಇತರರು ಕಲ್ಲು ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಸುಳ್ಳು ಆರೋಪ ಹೊರಿಸುತ್ತಿದ್ದಾರೆ ಶಾಸಕ ರಮೇಶ ಬಂಡಿಸಿದ್ದೇಗೌಡ ದೂರಿದರು.

ಚಿನಕುರಳಿಯಲ್ಲಿ ಅಕ್ರಮ ಶೆಡ್ ತೆರವು ಪ್ರಕರಣದಲ್ಲಿ ಹೊರ ಗ್ರಾಮಗ ಳಿಗೆ ಸೇರಿದ ರೈತ ಸಂಘ ಕಾರ್ಯಕರ್ತರು ಮೂಗು ತೂರಿಸಿ ಗಲಾಟೆ ಸೃಷ್ಟಿಸಿದ್ದಾರೆ. ಪೊಲೀಸರು ಲಾಠಿ ಬೀಸುವ ಸ್ಥಿತಿ ತಂದೊಡ್ಡಿದ್ದಾರೆ. ಪುಟ್ಟಣ್ಣಯ್ಯ ರೈತ ನಾಯಕರು ಎಂದು ಹೇಳಿಕೊಂಡು ರಾಜಕೀಯ ಲಾಭ ಪಡೆವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಪುರಸಭೆ ಅಧ್ಯಕ್ಷ ಎಲ್.ನಾಗರಾಜು, ಸದಸ್ಯರಾದ ಎಂ.ಎಲ್. ದಿನೇಶ್, ಅಣ್ಣಾಸ್ವಾಮಿ, ಜಯರಾಂ, ರಾಮೇಗೌಡ, ನಗುವನಹಳ್ಳಿ ಶಿವಸ್ವಾಮಿ,ಜಯಸಿಂಹ, ಅರಕೆರೆ ಪ್ರಕಾಶ್, ಅಪೆಕ್ಸ್ ಬ್ಯಾಂಕ್ ಮಾಜಿ ನಿರ್ದೇಶಕ ಶಿವಯ್ಯ, ಅಜೀಜ್‌ಖಾನ್, ಮುಕ್ತಾರ್ ಅಮಹಮದ್, ಸುಬ್ಬಣ್ಣ, ಸೋಮಸುಂದರ್, ಭಾಸ್ಕರ್ ಇತರರು ಇದ್ದರು.

ಕೃಷ್ಣರಾಜಪೇಟೆ ವರದಿ:
ರೈತ ಸಂಘದವರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿತಾಲ್ಲೂಕು ಜೆಡಿಎಸ್ ಘಟಕದ ವತಿಯಿಂದ ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ವಿಧಾನಸಭೆ ಮಾಜಿ ಅಧ್ಯಕ್ಷ ಕೃಷ್ಣ ಅವರ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು ಕೃಷ್ಣ, ಮಾಜಿ ಶಾಸಕ ಬಿ.ಪ್ರಕಾಶ್ ಮಾತನಾಡಿದರು. ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ, ಕೆ.ಎಸ್.ರಾಮೇಗೌಡ,  ಮಹದೇವ್, ಜಯರಂಗ, ನಾಸಿರ್‌ಪಾಷ, ಜಿ.ಪಂ ಮಾಜಿ ಸದಸ್ಯ ಅಘಲಯ ಮಂಜುನಾಥ್, ಕೆ.ಸಿ.ರೇವಣ್ಣ, ಶೀಳನೆರೆ ನಟರಾಜು, ತೆರ್ನೇನಹಳ್ಳಿ ಬಲದೇವಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT