ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಯೋಜನೆ ವಿಳಂಬಕ್ಕೆ ರಾಜ್ಯ ಸರ್ಕಾರ ಕಾರಣ

Last Updated 27 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ


ಬೆಂಗಳೂರು:
ರೈಲ್ವೆ ಯೋಜನೆಗಳಿಗೆ ಅಗತ್ಯವಿರುವ ಭೂಮಿಯನ್ನು ರಾಜ್ಯ ಸರ್ಕಾರ ತ್ವರಿತವಾಗಿ ಸ್ವಾಧೀನಪಡಿಸಿಕೊಡುತ್ತಿಲ್ಲ, ಹೀಗಾಗಿ ಕಳೆದ ವರ್ಷ ಪ್ರಕಟಿಸಿದ್ದ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಶನಿವಾರ ಇಲ್ಲಿ ತಿಳಿಸಿದರು.

ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ 914 ಕೋಟಿ ರೂಪಾಯಿ ವೆಚ್ಚದ ಕುಡುಚಿ- ಬಾಗಲಕೋಟೆ ಯೋಜನೆಗೆ ಬೇಕಾಗಿರುವ ಭೂಮಿಯನ್ನು ರಾಜ್ಯ ಸರ್ಕಾರ ಇನ್ನೂ ಭೂಸ್ವಾಧೀನಪಡಿಸಿಕೊಟ್ಟಿಲ್ಲ. ಇದೇ ರೀತಿ ಭೂ ಸ್ವಾಧೀನ ಸಮಸ್ಯೆಯಿಂದಾಗಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯದ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡಿರುವ ಯೋಜನೆಗೆ ರಾಜ್ಯವು ತನ್ನ ಪಾಲಿನ ಶೇ 50ರಷ್ಟು ಹಣವನ್ನು ನೀಡುತ್ತಿದ್ದು, ಸದ್ಯ ಹಣದ ಸಮಸ್ಯೆ ಇಲ್ಲ, ಆದರೆ ಭೂಮಿಯ ಸಮಸ್ಯೆ ಇದೆ. ಇದನ್ನು ಬಗೆಹರಿಸಿದರೆ ಯಾವುದೇ ರೈಲ್ವೆ ಯೋಜನೆ ಆಗಲಿ, ಭೂಮಿ ನೀಡಿದ ಐದು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಕಳೆದ ವರ್ಷ ರಾಜ್ಯದ ರೈಲ್ವೆ ಯೋಜನೆಗಳಿಗೆ ್ಙ532 ಕೋಟಿ ನೀಡಿದ್ದರೆ, ಈ ವರ್ಷ ರೂ. 873 ಕೋಟಿ ನೀಡಲಾಗಿದೆ. ಇಷ್ಟೇ ಮೊತ್ತದ ಹಣವನ್ನು ರಾಜ್ಯ ಸರ್ಕಾರ ಕೊಟ್ಟರೆ ಆದಷ್ಟು ಬೇಗ ಕಾಮಗಾರಿಗಳನ್ನು ಶುರು ಮಾಡಲು ಸಾಧ್ಯವಾಗಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 1 ಸಾವಿರ ಕೋಟಿ ರೂಪಾಯಿ ನೀಡುವ ಚಿಂತನೆ ನಡೆಸಿರುವುದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಳೆದ ವರ್ಷ ರಾಜ್ಯ ಸರ್ಕಾರ ರೂ. 600 ಕೋಟಿ  ನೀಡಿದೆ, ಆದರೆ ಭೂಮಿ ನೀಡಿಲ್ಲ. ಗುಲ್ಬರ್ಗ- ಬೀದರ್ ಮಾರ್ಗದ ಕಾಮಗಾರಿ ಭೂ ಸ್ವಾಧೀನ ಸಮಸ್ಯೆಯಿಂದಾಗಿ ವಿಳಂಬವಾಗಿತ್ತು. ಈಗ ಆ ಸಮಸ್ಯೆ ಬಗೆಹರಿದಿದೆ. ಬೀದರ್- ಸಿಕಂದರಾಬಾದ್, ಬೆಂಗಳೂರು- ಸೊಲ್ಲಾಪುರ ಮಾರ್ಗವಾಗಿ ರೈಲು ಸಂಚಾರ ಆರಂಭಿಸಬೇಕು ಎಂದು ಕೇಂದ್ರದ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಂಸದ ಧರ್ಮಸಿಂಗ್ ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದ್ದು, ಮುಂದಿನ ದಿನಗಳಲ್ಲಿ ಕಾರ್ಯಗತವಾಗುವ ವಿಶ್ವಾಸವಿದೆ ಎಂದರು.‘ಯಾವ ಭಾಗವನ್ನೂ ನಿರ್ಲಕ್ಷ್ಯ ಮಾಡಲ್ಲ, ರಾಜ್ಯದ ಸಂಸದರು ಮಾಡಿದ ಮನವಿಗೆ ಸ್ಪಂದಿಸಿದ್ದೇನೆ. ಏನಾದರೂ ಅನ್ಯಾಯ ಆಗಿದ್ದರೆ ನನ್ನ ಗಮನಕ್ಕೆ ತರಲಿ, ಸರಿಪಡಿಸುತ್ತೇನೆ’ ಎಂದು ಭರವಸೆ ನೀಡಿದರು. ಪ್ರಧಾನಮಂತ್ರಿ ರೈಲು ವಿಕಾಸ ಯೋಜನೆಯಡಿ 198 ಯೋಜನೆಗಳ ಸಮೀಕ್ಷೆ ಪೂರ್ಣಗೊಳ್ಳುವ ಹಂತದಲ್ಲಿದೆ. ಬೆಂಗಳೂರು- ಚೆನ್ನೈ ಮಾರ್ಗದಲ್ಲಿ 160ರಿಂದ 200 ಕಿ.ಮೀ. ವೇಗದಲ್ಲಿ ಸಂಚರಿಸುವ ರೈಲು ಯೋಜನೆಯ ಸರ್ವೇಗೆ ಆದೇಶಿಸಲಾಗಿದೆ ಎಂದರು.

ಈ ಬಾರಿಯ ಬಜೆಟ್‌ನಲ್ಲಿ ಪ್ರಕಟಿಸಿರುವ ಹೊಸ ರೈಲುಗಳು ಜೂನ್ ವೇಳೆಗೆ ಸಂಚಾರ ಆರಂಭಿಸಲಿವೆ. ಮಂಗಳೂರು- ಕಾರವಾರ ನಡುವೆ ಹಗಲು ವೇಳೆ ರೈಲು ಸಂಚಾರ ವ್ಯವಸ್ಥೆ ಮಾಡಲಾಗುವುದು. ಸದ್ಯ ಬೆಂಗಳೂರಿನಿಂದ ಕಣ್ಣೂರುವರೆಗೆ ಇರುವ ರಾತ್ರಿ ರೈಲನ್ನು ಕಾರವಾರಕ್ಕೆ ಸೀಮಿತಗೊಳಿಸುವ ಬಗ್ಗೆಯೂ ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು ಎಂದು ಉತ್ತರಿಸಿದರು. ಮೂರು ತಿಂಗಳಲ್ಲಿ ನೀತಿ: ಮಂಗಳೂರು, ಬೈಯಪ್ಪನಹಳ್ಳಿ ಮತ್ತು ಸಿಟಿ ರೈಲು ನಿಲ್ದಾಣಗಳನ್ನು ವಿಶ್ವದರ್ಜೆ ನಿಲ್ದಾಣಗಳನ್ನಾಗಿ ಮೇಲ್ದರ್ಜೆಗೆ ಏರಿಸುವ ಸಂಬಂಧ ಹೊಸ ನೀತಿಯೊಂದನ್ನು ರೂಪಿಸಬೇಕಾಗಿದ್ದು, ಮೂರು ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳುವ ವಿಶ್ವಾಸವಿದೆ. ಹೂಡಿದ ಬಂಡವಾಳ ವಾಪಸ್ ಬರುವ ಬಗ್ಗೆಯೂ ಯೋಚಿಸುತ್ತಿರುವುದರಿಂದ ರಾಷ್ಟ್ರಮಟ್ಟದಲ್ಲಿ ಈ ಸಂಬಂಧ ಸ್ಪಷ್ಟವಾದ ನೀತಿಯೊಂದನ್ನು ರೂಪಿಸುವ ಅಗತ್ಯವಿದೆ ಎಂದು ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ ಎಂದರು.ರೈಲ್ವೆ ಇಲಾಖೆ, ಮೂಲಸೌಕರ್ಯ ಹಾಗೂ ಕೆಐಎಡಿಬಿ ಅಧಿಕಾರಿಗಳ ಸಭೆ ಕರೆದು ಭೂ ಸ್ವಾಧೀನ ಸಮಸ್ಯೆಗಳನ್ನು ಬಗೆಹರಿಸಿ ಎಂದು ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು. ಪ್ರಗತಿಯಲ್ಲಿರುವ ಯೋಜನೆಗಳಿಗೆ ಹೆಚ್ಚಿನ ಹಣ ನೀಡುವಂತೆ ಮನವಿ ಮಾಡಲು ಯಡಿಯೂರಪ್ಪ ಅವರು, ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡುವುದಾದರೆ ಸ್ವಾಗತ ಮಾಡುತ್ತೇವೆ ಎಂಬುದಾಗಿ ಹೇಳಿದರು.

ಸನ್ಮಾನ: ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಮುನಿಯಪ್ಪ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರದ ಮಾಜಿ ರೈಲ್ವೆ ಸಚಿವ ಸಿ.ಕೆ.ಜಾಪರ್ ಷರೀಫ್, ‘ನಾನು ಅಧಿಕಾರದಲ್ಲಿ ಇದ್ದಾಗ ಹಣ ಕೊಡುವುದೇ ಕಷ್ಟಕರವಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಮುನಿಯಪ್ಪ ಪುಣ್ಯವಂತರು. ಯೋಜನೆಗಳಿಗೆ ಹೆಚ್ಚಿನ ಹಣ ತರಲು ಪ್ರಯತ್ನಿಸಬೇಕು’ ಎಂದು ಸಲಹೆ ಮಾಡಿದರು.

ಗೂಡ್ಸ್ ವ್ಯಾಗನ್ ಕಾರ್ಖಾನೆ
ಬೆಂಗಳೂರು:ಕೋಲಾರದಲ್ಲಿ ಗೂಡ್ಸ್ ವ್ಯಾಗನ್ ಕಾರ್ಖಾನೆ ಆರಂಭಿಸಲಾಗುತ್ತಿದ್ದು, ಇದಕ್ಕೆ ಬೇಕಾದ 100 ಎಕರೆ ಭೂಮಿ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಒಪ್ಪಿದ್ದಾರೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು. ಇದರ ಯೋಜನಾ ವೆಚ್ಚ ಎಷ್ಟು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಖಾಸಗಿ-ಸರ್ಕಾರದ ಸಹಭಾಗಿತ್ವದಲ್ಲಿ ಇದನ್ನು ಆರಂಭಿಸಲಾಗುತ್ತಿದ್ದು, ಖಾಸಗಿ ಸಂಸ್ಥೆಗಳು ಮುಂದೆ ಬಂದ ನಂತರ, ರೂಪುರೇಷೆಗಳನ್ನು ಅಂತಿಮಗೊಳಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT