ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಕ್ಕೆ ಆಹ್ವಾನ ನಾಗೂರ (ಬಿ)

ಗ್ರಾಮಾಯಣ
Last Updated 3 ಸೆಪ್ಟೆಂಬರ್ 2013, 6:32 IST
ಅಕ್ಷರ ಗಾತ್ರ

ಔರಾದ್: ಕಳೆದ ಎರಡು ವಾರದ ಹಿಂದೆ ವಾಂತಿಭೇದಿಯಿಂದ ತಾಲ್ಲೂಕಿನಾದ್ಯಂತ ಸುದ್ದಿ ಮಾಡಿರುವ ನಾಗೂರ (ಬಿ) ಗ್ರಾಮದಲ್ಲಿ ಸುಲಭವಾಗಿ ರೋಗ ಹರಡುವ ಸಾಧ್ಯತೆಗಳಿವೆ.

ಹೆಡಗಾಪುರ ಗ್ರಾಮ ಪಂಚಾಯ್ತಿಯಲ್ಲಿ ಬರುವ ಈ ಗ್ರಾಮಕ್ಕೆ ಪ್ರತಿವರ್ಷ ಮಳೆಗಾಲ ಬಂದರೆ ವಾಂತಿಬೇದಿ ಸಮಸ್ಯೆ. ದಶಕದ ಹಿಂದೆ ಹಾಕಲಾದ ನೀರು ಪೂರೈಕೆ ಪೈಪ್‌ಗಳು ಹಾನಿಯಾಗಿವೆ. ಪೈಪ್‌ಗಳ ಸುತ್ತ ನಾಲೆ ಮತ್ತು ತಿಪ್ಪೆಗುಂಡಿಗಳಿರುವ ಕಾರಣ ಇಂತಹ ನೀರು ಕುಡಿದರೆ ವಾಂತಿಭೇದಿಯಾಗುವುದಿಲ್ಲವೇ ಎಂದು ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ.

ಈಚೆಗೆ ಗ್ರಾಮದ ವ್ಯಕ್ತಿಯೊಬ್ಬರು ವಾಂತಿಭೇದಿಯಿಂದ ಮೃತಪಟ್ಟು ಆ ಕುಟುಂಬದವರು ಅನಾಥರಾಗಿದ್ದಾರೆ. ಹತ್ತಾರು ಜನ ವಾರಗಟ್ಟಲೇ ಹಾಸಿಗೆ ಹಿಡಿದು ಚೇತರಿಕೆ ಹಂತದಲ್ಲಿದ್ದಾರೆ. ಕಲುಷಿತ ನೀರಿನಿಂದಲೇ ಜನರಲ್ಲಿ ವಾಂತಿಭೇದಿ ಕಾಣಿಸಿಕೊಂಡಿದೆ ಎಂದು ವೈದ್ಯರು ಹೇಳಿದ್ದಾರೆ. ಗ್ರಾಮ ಪಂಚಾಯ್ತಿಯವರು ಕೂಡ ನಲ್ಲಿ ನೀರು ಕುಡಿಯಬಾರದು ಎಂದು ಡಂಗುರ ಸಾರಿದ್ದಾರೆ. ಆದರೆ ಕುಡಿಯುವ ನೀರಿಗಾಗಿ ಪರ್ಯಾಯ ವ್ಯವಸ್ಥೆ ಮಾಡದ ಕಾರಣ ಮಳೆ ಮತ್ತು ಕೆಸರಲ್ಲಿ ಕೊಳವೆ ಬಾವಿ ಹುಡುಕಿಕೊಂಡು ನೀರು ತರಬೇಕಾದ ಸಂಕಷ್ಟ ಎದುರಾಗಿದೆ ಎಂದು ಜನ ಹೇಳುತ್ತಾರೆ.

ಗ್ರಾಮದ ತುಂಬ ಬೇಕಾಬಿಟ್ಟಿಯಾಗಿ ತಿಪ್ಪೆಗುಂಡಿಗಳು ನಿರ್ಮಾಣವಾಗಿವೆ. ಇದರಿಂದ ಸೊಳ್ಳೆಗಳ ಕಾಟ ಜಾಸ್ತಿಯಾಗಿ ಜನರ ನಿದ್ದೆ ಕೆಡಿಸಿದೆ. ಗ್ರಾಮದ ನಡುವೆ ಹಳೆ ಮನೆಯೊಂದಿದ್ದು ಸುತ್ತಲಿನ ಜನ ಅದರಲ್ಲಿ ಕಸ ಮತ್ತು ಹೊಲಸು ಹಾಕಿ ಗ್ರಾಮದ ಪರಿಸರ ಮಲಿನವಾಗಿದೆ. ಚರಂಡಿಯಲ್ಲಿ ಹೂಳು ತುಂಬಿದೆ. ಕೆಲ ಕಡೆ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ ಅಪೂರ್ಣವಾಗಿದೆ ಎಂಬ ದೂರುಗಳಿವೆ.

ಗ್ರಾಮದ ಸರ್ಕಾರಿ ಜಾಗದಲ್ಲಿನ ತಿಪ್ಪೆಗುಂಡಿಗಳು ತೆರವುಗೊಳಿಸಬೇಕು. 1991ರಲ್ಲಿ ಹಾಕಲಾದ ಕುಡಿಯುವ ನೀರು ಪೂರೈಕೆ ಪೈಪ್‌ಗಳು ತೆಗೆದು ಹೊಸದಾಗಿ ಅಳವಡಿಸಬೇಕು. ನೀರು ಸಂಗ್ರಹಿಸುವ ಟ್ಯಾಂಕ್ ಆಗಾಗ ಸ್ವಚ್ಛ ಮಾಡುವುದರ ಜೊತೆಗೆ ಬ್ಲೀಚಿಂಗ್ ಪೌಡರ್ ಹಾಕಬೇಕು.

ಸರ್ಕಾರ ಮಂಜೂರು ಮಾಡಿದ ಸುವರ್ಣ ಗ್ರಾಮೋದಯ ಕಾಮಗಾರಿ ಪಾರದರ್ಶಕ ಆಗುವಂತೆ ನೋಡಿಕೊಳ್ಳಬೇಕು. ಗ್ರಾಮದ ಸಮಸ್ಯೆ ನಿರ್ಲಕ್ಷ್ಯ ಮಾಡುವ ಸಂಬಂಧಿತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ದಂಡಾಧಿಕಾರಿ, ತಾಲ್ಲೂಕು ಪಂಚಾಯ್ತಿ ಮುಖ್ಯಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ಈಚೆಗೆ ಗ್ರಾಮಕ್ಕೆ ಭೇಟಿ ನೀಡಿದ ಶಾಸಕರಿಗೂ ಮನವಿ ಮಾಡಿಕೊಳ್ಳಲಾಗಿದೆ. ದಾಗ್ಯೂ ನಮ್ಮ ಬೇಡಿಕೆಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ನಾಗೂರ (ಬಿ) ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

`ಮನವಿಗೆ ಸ್ಪಂದಿಸಿಲ್ಲ'
ಚರಂಡಿಯಲ್ಲಿ ಹೂಳು ತುಂಬಿಕೊಂಡಿದೆ. ತಿಪ್ಪೆಗುಂಡಿ ತೆರವುಗೊಳಿಸುವುದು ಮತ್ತು ಹಳೆ ಪೈಪ್ ಬದಲಾಯಿಸುವುದು ಸೇರಿದಂತೆ ಗ್ರಾಮದ ಸುರಕ್ಷತೆ ಬಗ್ಗೆ ಶಾಸಕರಿಗೂ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ.
-ಸಂತೋಷ ಮಸ್ಕಲೆ, ನಾಗೂರ (ಬಿ) ಗ್ರಾಮದ ಯುವಕ

`ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ'
ನಾಗೂರ ಗ್ರಾಮದಲ್ಲಿ ವಾಂತಿಭೇದಿ ಕಾಣಿಸಿಕೊಂಡ ನಂತರ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಚರಂಡಿ ಹೂಳು ಮತ್ತು ಕೆಲ ತಿಪ್ಪೆಗುಂಡಿ ತೆರವುಗೊಳಿಸಲಾಗಿದೆ. ಗ್ರಾಮದಲ್ಲಿ ಸದ್ಯಕ್ಕೆ ಅಂತಹ ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ವರದಿ ನೀಡಿದ್ದಾರೆ.
-ಗದಗೆಪ್ಪ ಕುರಿಕೋಟೆ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಔರಾದ್ (ಬಾ).
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT