ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ್ಯಾಂಕ್ ಪಟ್ಟಿಯಲ್ಲಿ ವ್ಯತ್ಯಾಸವಿಲ್ಲ

Last Updated 21 ಫೆಬ್ರುವರಿ 2011, 17:20 IST
ಅಕ್ಷರ ಗಾತ್ರ

ಬೆಂಗಳೂರು: ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಇತ್ತೀಚೆಗೆ ನಡೆಸಿದ ಸ್ನಾತಕೋತ್ತರ ಪರೀಕ್ಷೆಯನ್ನು ಅಭ್ಯರ್ಥಿಯೊಬ್ಬರು ಕಾರಿನಲ್ಲಿ ಕುಳಿತು ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಇದರಿಂದ ರ್ಯಾಂಕ್ ಪಟ್ಟಿಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ ಎಂದು ಹೇಳಿದೆ.

ಈ ಹಿನ್ನೆಲೆಯಲ್ಲಿ ತಡೆ ಹಿಡಿದಿದ್ದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಸೋಮವಾರವೇ ಪ್ರಕಟಿಸಲಾಯಿತು ಎಂದು ಸಚಿವ ರಾಮದಾಸ್ ತಿಳಿಸಿದರು.

ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ಎಸ್.ಆರ್.ಹಿರೇಮಠ ನೇತೃತ್ವದ ಸಮಿತಿ ಸೋಮವಾರ ಸಚಿವ ರಾಮದಾಸ್ ಅವರಿಗೆ ವರದಿ ನೀಡಿದ್ದು, ವಿ.ವಿ.ಗೆ ಸೇರಿದ ಉತ್ತರ ಪತ್ರಿಕೆ (ಓಎಂಆರ್) ಪರೀಕ್ಷಾ ಕೇಂದ್ರದಿಂದ ಹೊರಗೆ ಹೇಗೆ ಹೋಯಿತು ಎನ್ನುವುದರ ಬಗ್ಗೆ ಏನನ್ನೂ ಹೇಳಿಲ್ಲ. ಅಭ್ಯರ್ಥಿ ಬಳಿ ಇದ್ದ ಓಎಂಆರ್ ಶೀಟ್, ಮೂಲ ಓಎಂಆರ್ ಪ್ರತಿಗಳೊಂದಿಗೆ ಸೇರ್ಪಡೆಯಾಗಿಲ್ಲ. ಅಲ್ಲದೆ, ಪರೀಕ್ಷೆ ಮುಗಿದ 48 ಗಂಟೆಯಲ್ಲಿ ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ನಡೆದಿದೆ. ಹೀಗಾಗಿ ಅದನ್ನು ಮೂಲ ಪ್ರತಿಗಳೊಂದಿಗೆ ಸೇರಿಸಿಲ್ಲ. ಇದರಿಂದ ಫಲಿತಾಂಶ ಮತ್ತು ರ್ಯಾಂಕ್ ಪಟ್ಟಿಯಲ್ಲೂ ಬದಲಾವಣೆಯಾಗುವ ಸಾಧ್ಯತೆ ಕಡಿಮೆ ಎಂದು ಹೇಳಿದರು.

ವಿ.ವಿ.ಯಲ್ಲಿ ಉತ್ತರ ಪತ್ರಿಕೆಗಳ ಲೆಕ್ಕಪತ್ರವೇ ಇಲ್ಲ. ಈ ಕುರಿತ ದೋಷಗಳನ್ನು ಮುಂದಿನ ಪರೀಕ್ಷೆ ವೇಳೆಗೆ ಸರಿಪಡಿಸಲು ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರದ ಮೇಲೆ ನಿಗಾ ಇಡಲು ಕ್ಯಾಮರಾಗಳನ್ನು ಬಳಸಬೇಕು ಎಂದು ಸಚಿವರು ಸೂಚಿಸಿದರು.

ಈ ಪ್ರಕರಣ ಕುರಿತು ಇನ್ನೂ ಬಹಳಷ್ಟು ಗೊಂದಲಗಳಿದ್ದು, ಅದರ ತನಿಖೆಯನ್ನು ಪೊಲೀಸರಿಗೆ ವಹಿಸಲಾಗುವುದು. ಯಾವ ರೀತಿಯ ತನಿಖೆ ಮಾಡಬೇಕು ಎನ್ನುವುದನ್ನು ಮುಖ್ಯಮಂತ್ರಿ ಜತೆ ಚರ್ಚಿಸಿದ ನಂತರ ನಿರ್ಧರಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT